ಬೆಂಗಳೂರು: “ಸನಾತನ ಧರ್ಮ”ದ ವಿವಾದ ಕಿಡಿ ತಮಿಳುನಾಡಿನಲ್ಲಿ ಹುಟ್ಟಿಕೊಂಡು ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ಈಗಲೂ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈಗ ಕರ್ನಾಟಕ ಸರ್ಕಾರವು “ಸನಾತನ ಧರ್ಮ”ದ ಬಗ್ಗೆ ಹೊಸ ಹೇಳಿಕೆಯೊಂದನ್ನು ನೀಡಿದೆ. ಶಿಕ್ಷಣ ಇಲಾಖೆಯು (Education Department) 6ರಿಂದ 10ನೇ ತರಗತಿವರೆಗೆ ಪಠ್ಯಪುಸ್ತಕ ಪರಿಷ್ಕರಣೆ (Text book Revision) ಮಾಡಿದ್ದು, ಇಲ್ಲಿ ಸನಾತನ ಧರ್ಮಕ್ಕೆ (Sanatana Dharma) ಸೂಕ್ತ ವಿವರಣೆಯನ್ನು ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
“ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂಬ ತಮಿಳುನಾಡು ಸಚಿವ (Tamilnadu Minister) ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಹೇಳಿಕೆ ಈಗಾಗಲೇ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿತ್ತು. ಈ ಹೇಳಿಕೆ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತಪರಾಕಿಯನ್ನೂ ನೀಡಿತ್ತು.. ಸಚಿವರಾಗಿ ಅವರು ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಹಾಗೂ ಹೇಳಿಕೆಗಳ ಪರಿಣಾಮಗಳ ಬಗ್ಗೆಯೂ ಅವರು ತಿಳಿದಿರಬೇಕು ಎಂದು ಹೇಳಿತ್ತು. ಈ ಹೊತ್ತಿಗೆ ಈಗ ಕರ್ನಾಟಕದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸನಾತನ ಧರ್ಮದ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಅದರಲ್ಲಿ ಸೂಕ್ತ ವಿವರಣೆಯನ್ನು ನೀಡಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕರ್ನಾಟಕ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಇಲ್ಲಿ “ಸನಾತನ ಧರ್ಮ”ಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆಯನ್ನು ನೀಡಲಾಗಿದೆ ಎಂದು ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 8ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಸನಾತನ ಧರ್ಮಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡಲಾಗಿದೆ ಎಂಬ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ ರಚಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಕೈಬಿಡಲಾಗಿದ್ದ ಪ್ರಗತಿಪರ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಪೆರಿಯಾರ್ ಮತ್ತು ದೇವನೂರು ಮಹಾದೇವ್ ಅವರ ಕೃತಿಗಳನ್ನು ಸರ್ಕಾರ ವಾಪಸ್ ತಂದಿದೆ. ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾದ ಎಲ್ಲ ತಿದ್ದುಪಡಿಗಳನ್ನು ಸಮಿತಿಯು ಉಳಿಸಿಕೊಂಡಿದೆ.
ಇದನ್ನೂ ಓದಿ: Blast in Bengaluru : ಬಾಂಬ್ ಸ್ಫೋಟ ನಡೆದ ರಾಮೇಶ್ವರಂ ಕೆಫೆ ಮಾ. 9ಕ್ಕೆ ರಿಓಪನ್
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಏನೇನು ಬದಲಾವಣೆ?
2024-25ನೇ ಸಾಲಿನ ಆರರಿಂದ 10ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು (Text books) ಪರಿಷ್ಕರಣೆ ಮಾಡಲಾಗಿದೆ. ಎಲ್ಲಾ ಪಠ್ಯಗಳನ್ನು ಎರಡು ಸಂಪುಟಗಳಾಗಿ (Two Parts book) ವಿಭಾಗಿಸಿರುವುದು ಈ ಬಾರಿಯ ಪರಿಷ್ಕರಣೆಯ ವಿಶೇಷವಾಗಿದೆ.
ಡಾ ಮಂಜುನಾಥ್ ಹೆಗಡೆ (Dr. Manjunath Hegade) ನೇತೃತ್ವದಲ್ಲಿ ರಚಿಸಲಾಗಿದ್ದ ಪಠ್ಯ ಪರಿಷ್ಕರಣೆ ಸಮಿತಿಯು ಪಠ್ಯಪುಸ್ತಕ ಪರಿಷ್ಕರಿಸಿ ವರದಿ ನೀಡಿದೆ. ಪಠ್ಯಪುಸ್ತಕದ ಪರಿಷ್ಕರಣೆ ಮಾಡಿರುವ ತಜ್ಞರು ತಾವು ಯಾವ ಅಂಶಗಳನ್ನು ಆಧರಿಸಿ, ಆದ್ಯತೆಯನ್ನು ನೀಡಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವುದಾಗಿಯೂ ವರದಿಯಲ್ಲಿ ತಿಳಿಸಿದ್ದಾರೆ.
*ಸನಾತನ ಧರ್ಮ/ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ, ವ್ಯವಸ್ಥಿತವಾದ ನಿರೂಪಣೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ, ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರೂಪಿಸಲಾಗಿದೆ.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆದ್ಯತೆ ನೀಡಿದ ಅಂಶಗಳು ಯಾವುದು?
1.ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗದಂತೆ, ಪರಿಷ್ಕರಣೆಗೆ ಒಳಪಟ್ಟ ಪಠ್ಯಪುಸ್ತಕಗಳ ಮೂಲ ಸ್ವರೂಪ ಬದಲಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ಈ ಪರಿಷ್ಕರಣೆಯನ್ನು ನಡೆಸಲಾಗಿದೆ ಎಂದು ಪಠ್ಯ ಪುಸ್ತಕ ಸಮಿತಿ ಹೇಳಿದೆ.
2. ಪ್ರಸ್ತುತ ಪರಿಷ್ಕರಣ ಸಮಿತಿಗೆ ಪೂರ್ವದಲ್ಲಿಯೇ ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿದ್ದ 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ” ಯ ಅಂಶಗಳನ್ನು ಸಮಿತಿಯು ಅಳವಡಿಸಿಕೊಂಡಿದೆ.
3. ವಿವಿಧ ಸಂಘಟನೆಗಳು, ವ್ಯಕ್ತಿಗಳು ಹಾಗೂ ಸರ್ಕಾರದ ಇಲಾಖೆಗಳು ಪಠ್ಯಪುಸ್ತಕದಲ್ಲಿ ನಿರ್ದಿಷ್ಟ ವಿಷಯಾಂಶವನ್ನು ಅಳವಡಿಸುವ/ಕೈಬಿಡುವ/ಪರಿಷ್ಕರಿಸುವ ಕುರಿತು ಮಾಡಿದ ಎಲ್ಲ ಮನವಿಗಳನ್ನು ಪರಿಶೀಲಿಸಿ ಸೂಕ್ತವೆನಿಸಿದ ಸಲಹೆಗಳನ್ನು ಪರಿಷ್ಕರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.
4. ವಿಷಯಾಂಶಗಳಿಗೆ ಸಂಬಂಧಿಸಿದಂತೆ, ಪಠ್ಯಪುಸ್ತಕದಲ್ಲಿರುವ ಅಂಕಿ ಅಂಶಗಳನ್ನೂ ಮಾಹಿತಿಗಳನ್ನು, ನಕ್ಷೆಗಳನ್ನು, ಚಿತ್ರಗಳು ಮತ್ತು ವ್ಯಾಕಾರಣಾಂಶಗಳನ್ನು ಅಗತ್ಯವಿರುವ ಕಡೆ ಪರಿಷ್ಕರಿಸಲಾಗಿದೆ.
5. ಮಕ್ಕಳ ಪಠ್ಯಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪಠ್ಯಪುಸ್ತಕಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎರಡು ಸಂಪುಟಗಳಾಗಿ ವಿಭಾಗಿಸುವ ಸರ್ಕಾರದ ನಿರ್ಣಯಕ್ಕೆ ಅನುಸಾರವಾಗಿ, ಎರಡೂ ಸಂಪುಟಗಳಲ್ಲಿನ ಕಲಿಕಾಂಶಗಳು/ಪಾತಗಳು ಸರಳತೆಯಿಂದ ಸಂಕೀರ್ಣತೆಯೆಡೆಗೆ ಸಾಗುವಂತೆ ವ್ಯವಸ್ಥಿತವಾಗಿ ಅಳವಡಿಸಲಾಗಿದೆ.
6. ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಪ್ರಮುಖ ಸಾಹಿತಿಗಳಿಗೆ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಿಗೂ ಪ್ರಾಶಸ್ತ್ಯ ನೀಡಲಾಗಿರುತ್ತದೆ.
7. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಮಕ್ಕಳ ಕಲಿಕೆಗೆ ಹೊರೆಯಾಗದಂತೆ ಕೆಲವು ಹೊಸ ಅಧ್ಯಾಯಗಳು, ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.
ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪರಿಷ್ಕರಿಸಿರುವ ಪ್ರಮುಖ ಅಂಶಗಳು
ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕಗಳು ಸಂವಿಧಾನದ ಪ್ರಸ್ತಾವನೆ, ಲಿಂಗ ಸೂಕ್ಷ್ಮತೆ, ಮಕ್ಕಳ ಹಕ್ಕುಗಳ ಕುರಿತ ಮಾಹಿತಿ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳು ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಕಂಡಂತೆ ಪರಿಷ್ಕರಿಸಲಾಗಿದೆ
6ನೇ ತರಗತಿ ಪಠ್ಯ ಪುಸ್ತಕದಲ್ಲಿ ಏನೇನು ಬದಲಾವಣೆ?
- ಇತಿಹಾಸದ ಪರಿಚಯ ಮತ್ತು ಆರಂಭಿಕ ಸಮಾಜದ ಕುರಿತ ಮಾಹಿತಿ ಇರುವ ಅಧ್ಯಾಯವನ್ನು ಹೊಸದಾಗಿ ಸೇರಿಸಲಾಗಿದೆ.
- ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಅಧ್ಯಾಯದಲ್ಲಿ ಎಲ್ಲ ಮಾಹಿತಿಗಳನ್ನು ನವೀಕರಿಸಲಾಗಿದೆ ಹಾಗೂ ಹೊಸ ಚಿತ್ರಗಳು ಮತ್ತು ವಿವರಣೆಗಳನ್ನು ಸೇರಿಸಲಾಗಿದೆ.
- ಚಂದ್ರಶೇಖರ್ ಕಂಬಾರ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ಎಲ್. ನಾಗೇಗೌಡ, ಡಾ. ಸಿದ್ದಲಿಂಗಯ್ಯ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಶಾಂತವೇರಿ ಗೋಪಾಲಗೌಡರ ಹಾಗೂ ಕೊಪ್ಪಳದ ಗವಿಮತದ ಭಾವಚಿತ್ರಗಳನ್ನು ವಿವರಗಳೊಂದಿಗೆ ಸೇರಿಸಲಾಗಿದೆ.
- ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು ಮತ್ತು ಉತ್ತರ ಭಾರತದ ರಾಜ ಮನೆತನಗಳನ್ನು ಕ್ರಮವಾಗಿ ಒಂದೆಡೆ ತಂದು ಚರ್ಚಿಸಿ, ರಾಜಮನೆತನಗಳ ಪಟ್ಟಿಯನ್ನು ಸೇರಿಸಲಾಗಿದೆ.
- ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು’ ಅಧ್ಯಾಯದಲ್ಲಿ ‘ಗುಳ್ಳಕಾಯಜ್ಜಿಯ ಕಥೆ’ ಎಂಬ ಜಾನಪದ ಕಥೆ ಪಠ್ಯಕ್ಕೆ ಪೂರಕವಾಗದ ಕಾರಣಕ್ಕೆ ಕೈಬಿಡಲಾಗಿದೆ.
- ತಿದ್ದೋಲೆಯ ಪ್ರಕಾರ ವೇದ ಕಾಲದ ಸಂಸ್ಕೃತಿ’ ಮತ್ತು ‘ಹೊಸ ಧರ್ಮಗಳ ಉದಯ’ ಪಾಠಗಳನ್ನು ಸೇರಿಸಲಾಗಿದೆ.
- ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ. ನಮ್ಮ ಸಂವಿಧಾನ ಪಾಠದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದ ಮಹಿಳಾ ಸದಸ್ಯರ ವಿವರ ಮತ್ತು ಭಾವಚಿತ್ರವನ್ನು ಸೇರಿಸಲಾಗಿದೆ.
- ಸಮಾನತೆಯ ಹಕ್ಕನ್ನು ಚರ್ಚಿಸುವಾಗ ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಅವಕಾಶಗಳನ್ನು ಸೇರಿಸಲಾಗಿದೆ.
- ಸ್ಥಳೀಯ ಆಡಳಿತ’ ದ ಬದಲಿಗೆ ಹೆಚ್ಚು ವಿಸ್ತಾರವಾದ ಹಿನ್ನೆಲೆಯನ್ನು ಒದಗಿಸುವ ‘ಪ್ರಭುತ್ವದ ಪ್ರಕಾರಗಳು’ ಅಧ್ಯಾಯವನ್ನು ಸೇರಿಸಲಾಗಿದೆ.
- ಸ್ಥಳೀಯ ಆಡಳಿತ’ವು 8ನೇ ತರಗತಿಯ ‘ಸ್ಥಳೀಯ ಸ್ವಯಂ ಸರ್ಕಾರ’ ಅಧ್ಯಾಯದ ಪುನರಾವರ್ತನೆ ಆಗಿರುವುದರಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
- ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕು-ಕರ್ತವ್ಯಗಳು’ ಅಧ್ಯಾಯವನ್ನು ತಿದ್ದುಪಡಿ ಮಾಡಿ, ಮಕ್ಕಳ ಹಕ್ಕುಗಳನ್ನು ಸೇರಿಸಲಾಗಿದೆ.
- ಅಧ್ಯಾಯಗಳು ಹಾಗೂ ವಿವರಣೆಗಳನ್ನು ವಿಷಯಾನುಕ್ರಮದಲ್ಲಿ ಮರುಜೋಡಣೆ ಮಾಡಲಾಗಿದೆ.
- ಭೂಪಟಗಳನ್ನು ನವೀಕರಿಸಲಾಗಿದೆ. ಜಿಲ್ಲೆ, ತಾಲೂಕು, ಹೋಬಳಿ ಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನವೀಕರಿಸಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಏನೇನು ಬದಲಾವಣೆ?
- ಭಾರತಕ್ಕೆ ಐರೋಪ್ಯರ ಆಗಮನ ಮತ್ತು ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಪಾಠದ ವಿವರಣೆಯಲ್ಲಿ ಸ್ಪಷ್ಟತೆಯನ್ನು ತರಲು 2017-18ರ ಪರಿಷ್ಕರಣ ಪಠ್ಯಪುಸ್ತಕದಲ್ಲಿನ ಮಾಹಿತಿಗಳನ್ನು ಪಡೆದು ಮರು ನಿರೂಪಿಸಲಾಗಿದೆ.
- ತಿದ್ದೋಲೆಯಂತೆ ‘ಮೈಸೂರು ಮತ್ತು ಇತರ ಸಂಸ್ಥಾನಗಳು’ ಅಧ್ಯಾಯವನ್ನು ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡುವುದರೊಂದಿಗೆ ಸ್ವಾತಂತ್ರ್ಯ ಚಳವಳಿಯ ನಿರೂಪಣೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ಸೇರಿಸಲಾಗಿದೆ.
- ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ದಾಖಲಿಸಲಾಗಿದೆ.
- ರಿಲಿಜಿಯನ್ಗಳು ಎಂಬ ಶೀರ್ಷಿಕೆಯನ್ನು ‘ಧರ್ಮಗಳು’ ಎಂದು ಬದಲಾಯಿಸಲಾಗಿದೆ..
- ಪೌರನೀತಿಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪರಿಚಯಿಸುವ ಅಧ್ಯಾಯ
ಇತಿಹಾಸ : 8ನೇ ತರಗತಿಯ ಪಠ್ಯದಲ್ಲಿ ಏನೇನು ಬದಲಾವಣೆ?
- ಆಧಾರಗಳು ಎಂಬ ಅಧ್ಯಾಯವನ್ನು ಪರಿಷ್ಕರಿಸಿ, ಪ್ರಾಕ್ತನ ಆಧಾರಗಳ ಅರ್ಥ ಮತ್ತು ಪ್ರಾಮುಖ್ಯತೆಯೊಂದಿಗೆ ವಿಷಯಾಂಶವನ್ನು ಸೇರ್ಪಡೆ ಮಾಡಲಾಗಿದೆ.
- ಭರತವರ್ಷ ಎಂಬ ಅಧ್ಯಾಯ ಶೀರ್ಷಿಕೆಯನ್ನು ಭರತ ವರ್ಷ ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ ಎಂದು ನಿರ್ದಿಷ್ಟ ಪಡಿಸಲಾಗಿದೆ.
- ಸಿಂಧು-ಸರಸ್ವತಿ ನಾಗರಿಕತೆ ಎಂಬ ಅಧ್ಯಾಯ ಶೀರ್ಷಿಕೆಯನ್ನು ಪ್ರಾಚೀನ ಭಾರತದ ನಾಗರಿಕತೆಗಳು: ಸಿಂಧು-ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲ ಎಂದು ಬದಲಾಯಿಸಿದೆ.
- ಸನಾತನ ಧರ್ಮ/ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ, ವ್ಯವಸ್ಥಿತವಾದ ನಿರೂಪಣೆಯನ್ನು ನೀಡಲಾಗಿದೆ.
- ಜೈನ ಮತ್ತು ಬೌದ್ಧ ಮತಗಳು ಶೀರ್ಷಿಕೆಯನ್ನು ಜೈನ ಮತ್ತು ಬೌದ್ಧ ಧರ್ಮಗಳು ಎಂದು ಬದಲಾಯಿಸಿ, ಈ ಧರ್ಮಗಳ ಉದಯದ ಹಿನ್ನೆಲೆಯನ್ನು ಸೇರ್ಪಡೆ ಮಾಡಲಾಗಿದೆ.
- ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು ಅಧ್ಯಾಯದಲ್ಲಿ ‘ವೀರಶೈವ ಪಂಥದ ಮೌಲ್ಯಗಳು ಬದಲಾಗಿ ಬಸವಾದಿ ಶಿವಶರಣ ಮೌಲ್ಯಗಳು ಪದವನ್ನು ಬಳಸಲಾಗಿದೆ. ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ದಾಖಲಿಸಲಾಗಿದೆ.
ಇತಿಹಾಸ : 9ನೇ ತರಗತಿಯ ಪಠ್ಯದಲ್ಲಿ ಏನೇನು ಬದಲಾವಣೆ?
- ಪಾಶ್ಚಾತ್ಯ ರಿಲಿಜಿಯನ್ಗಳು ಎಂబ ಶೀರ್ಷಿಕೆಯನ್ನು ಪಾಶ್ಚಾತ್ಯ ಧರ್ಮಗಳು ಎಂದು ಬದಲಾಯಿಸಲಾಗಿದೆ.
- ಕಾಶ್ಮೀರದ ಕಾರ್ಕೋಟರು ಮನೆತನ ಮತ್ತು ಅಹೋಮ್ ರಾಜನಮನೆತನದ ಸಂಕೀರ್ಣ ವಿವರಣೆಯನ್ನು ಸಂಕ್ಷಿಪ್ತಗೊಳಿಸಲಾಗಿದೆ.
- ಭಕ್ತಿಪಂಥ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಸಂತ ಶಿಶುನಾಳ ಶರೀಫರ ಕುರಿತ ಮಾಹಿತಿಯನ್ನು ಸೇರಿಸಲಾಗಿದೆ.
ಇತಿಹಾಸ : 10ನೇ ತರಗತಿ ಪಠ್ಯದಲ್ಲಿ ಬದಲಾಗುವುದು ಏನು?
- ಭಾರತಕ್ಕೆ ಯೂರೋಪಿಯನ್ನರ ಆಗಮನ ಅಧ್ಯಾಯದಲ್ಲಿ ಮಾರ್ತಾಂಡ ವರ್ಮನ ಕುರಿತು ವಿವರಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ.
- ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಅಧ್ಯಾಯದಲ್ಲಿ ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲಿಸಲಾಗಿದೆ.
- ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಅಧ್ಯಾಯದಲ್ಲಿ ಸಾವಿತ್ರಿಬಾಯಿ ಫುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ಅವರ ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.
ರಾಜ್ಯಶಾಸ್ತ್ರ : 8ನೇ ತರಗತಿ ಪಠ್ಯ ಪುಸ್ತಕದಲ್ಲಿ ಏನೇನು ಬದಲಾಗಲಿದೆ?
- ಸ್ಥಳೀಯ ಸ್ವಯಂ ಸರ್ಕಾರ ಎಂಬ ಅಧ್ಯಾಯದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾಯಿದೆ ಸೇರಿಸಿ, ನಕಾಶೆ ಮತ್ತು ಸ್ಥಳೀಯ ಸಂಸ್ಥೆಗಳ ಮಾಹಿತಿಯನ್ನು ನವೀಕರಿಸಲಾಗಿದೆ.
ರಾಜ್ಯ ಶಾಸ್ತ್ರ: 9ನೇ ತರಗತಿ ಪಠ್ಯದಲ್ಲಿ ಏನು ಹೊಸದು?
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಎಂಬ ಅಧ್ಯಾಯಗಳಲ್ಲಿ ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಿವರಗಳನ್ನು ನವೀಕರಿಸಲಾಗಿದೆ.
- ನೂತನ ಸಂಸತ್ ಭವನದ ಚಿತ್ರ, ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಅವರ ಕಾಲಾವಧಿಯ ಯಾದಿಯನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ನಕ್ಷೆಯನ್ನು ಸೇರಿಸಲಾಗಿದೆ.
- ಚುನಾವಣಾ ವ್ಯವಸ್ಥೆ ಅಧ್ಯಾಯದಲ್ಲಿ ವಿವರಗಳನ್ನು ನವೀಕರಿಸಿರುವುದರೊಂದಿಗೆ, SVEEP ಮಾಹಿತಿಯನ್ನು ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ.
- ದೇಶದ ರಕ್ಷಣೆ ಅಧ್ಯಾಯದಲ್ಲಿ ಮಾಹಿತಿಯನ್ನು ನವೀಕರಿಸುವುದರೊಂದಿಗೆ ಸೇನಾ ತರಬೇತಿ ಕೇಂದ್ರಗಳು ಹಾಗೂ ಹಡಗು ನಿರ್ಮಾಣ ಕೇಂದ್ರಗಳ ಮಾಹಿತಿ ನೀಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕುರಿತ ಮಾಹಿತಿ ಹೆಚ್ಚುವರಿಯಾಗಿ ನೀಡಲಾಗಿದೆ.
- ಅಂತಾರಾಷ್ಟ್ರೀಯ ಸಂಬಂಧಗಳನ್ನು ಪರಿಚಯಿಸುವ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
ರಾಜ್ಯ ಶಾಸ್ತ್ರ : 10ನೇ ತರಗತಿಗೆ ಏನೇನು ಚೇಂಜ್?
- 10ನೇ ತರಗತಿಯಲ್ಲಿ ಸಾರ್ವಜನಿಕ ಆಡಳಿತ ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಇದ್ದ ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಎಂಬ ಅಧ್ಯಾಯವು ಹಿಂದಿನ ತರಗತಿಗಳಲ್ಲಿ ಪುನರಾವರ್ತನೆ ಆಗಿರುವುದರಿಂದ ಕೈಬಿಡಲಾಗಿದೆ
- ಭಾರತದ ವಿದೇಶಾಂಗ ನೀತಿ ಕಿರು ಶೀರ್ಷಿಕೆಯನ್ನು ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಸೇರ್ಪಡೆ ಮಾಡಲಾಗಿದೆ. ಮಹಿಳಾ ಮೀಸಲಾತಿಯ ಬಗ್ಗೆ ಇತ್ತೀಚಿನ ಮಸೂದೆಯ ನಾರೀ ಶಕ್ತಿ ವಂದನಾ ಅಧಿನಿಯಮ, ಲಿಂಗತ್ವ ಅಲ್ಪ ಸಂಖ್ಯಾತರ ಕ್ಷೇಮ ಕುರಿತ ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ.
ವಿಷಯವಾರು ಬದಲಾವಣೆಯ ಪ್ರಮುಖಾಂಶಗಳು ಇಲ್ಲಿವೆ
1.ಸಮಾಜ ಶಾಸ್ತ್ರ: ಸಮಾಜ ಶಾಸ್ತ್ರದ ಅರ್ಥ ಮಹತ್ವ ಮತ್ತು ಪ್ರಕಾರಗಳನ್ನು ಪರಿಷ್ಕರಿಸುವುದರೊಂದಿಗೆ, ಸಾಮಾಜಿಕ ಚಳವಳಿಗಳು ಹಾಗೂ ಸಾಮಾಜಿಕ ಸ್ತರ ವಿನ್ಯಾಸ’ದಲ್ಲಿ ಕೆಲವೊಂದು ಅಗತ್ಯ ವಿಷಯಾಂಶಗಳನ್ನು ಸೇರ್ಪಡೆ ಮಾಡುವುದರೊಂದಿಗೆ ಪೋಕ್ಸೋ ಕಾಯಿದೆಯನ್ನು ಅಳವಡಿಸಲಾಗಿದೆ
2.ಅರ್ಥಶಾಸ್ತ್ರ
1. ಅರ್ಥಶಾಸ್ತ್ರದ ಪರಿಚಯ ಮತ್ತು ವ್ಯಾಖ್ಯಾನ ಹೊಸದಾಗಿ ನೀಡಲಾಗಿದೆ.
2.ರಾಷ್ಟ್ರೀಯ ವರಮಾನ’ದ ಅರ್ಥವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
3.ಪಂಚವಾರ್ಷಿಕ ಯೋಜನೆ, ನೀತಿ ಆಯೋಗ, ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ ಕುರಿತ ವಿವರಗಳನ್ನು ನವೀಕರಿಸಲಾಗಿದೆ.
4.ಹಸಿರು ಕ್ರಾಂತಿಯ ಹರಿಕಾರ ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಗೌರವಾರ್ಥಕವಾಗಿ ನೀಡಿರುವ ಭಾರತ ರತ್ನ ಪ್ರಶಸ್ತಿಯ ಮಾಹಿತಿಯನ್ನು ಸೇರಿಸಲಾಗಿದೆ.
3.ವ್ಯವಹಾರ ಅಧ್ಯಯನ
1.ಸಹಕಾರ ಸಂಘಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾರುಕಟ್ಟೆ ವಿಧಗಳು ಇವುಗಳಿಗೆ ವಿವರಣೆ/ ಉದಾಹರಣೆ ನವೀಕರಿಸಲಾಗಿದೆ.
2.ಬ್ಯಾಂಕ್ಗಳ ವಿಲೀನೀಕರಣ ಮಾಹಿತಿಯನ್ನು ನೀಡಲಾಗಿದೆ
ಇದನ್ನೂ ಓದಿ: PM Narendra Modi: ಮೋದಿ ಜನಪ್ರಿಯತೆ ಮತ್ತೂ 10% ಹೆಚ್ಚಳ; ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲಿಗ
4.ಭೂಗೋಳ
1.ಭೂಪಟಗಳು, ತಾಲ್ಲೂಕು, ಜಿಲ್ಲೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ವಿಷಯಾಂಶಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.
2.ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಮೆಟ್ರೋ ರೈಲು ಮಾಹಿತಿಗಳನ್ನು ಸೇರ್ಪಡೆ ಮಾಡಲಾಗಿದೆ..
3. ಪಕ್ಷಿಧಾಮ, ವನ್ಯ ಜೀವಿ ಧಾಮ, ರಾಷ್ಟ್ರೀಯ ಉದ್ಯಾನವನ ಹಾಗೂ ವಿಶ್ವ ಪರಂಪರೆ ತಾಣ ಇವುಗಳ ಕುರಿತ ಇತ್ತೀಚಿನ ಮಾಹಿತಿ ನೀಡಲಾಗಿದೆ.
4.ಇಸ್ರೋ ಕುರಿತು ಮಾಹಿತಿಯನ್ನು ಅಳವಡಿಸಲಾಗಿದೆ