Site icon Vistara News

UPSC Result 2024: 12 ಪ್ರಯತ್ನದ ಹೊರತಾಗಿಯೂ ಸಿಗದ ಯಶಸ್ಸು; ಯುಪಿಎಸ್‌ಸಿ ಆಕಾಂಕ್ಷಿಯ ಪೋಸ್ಟ್‌ ವೈರಲ್‌

UPSC Result 2024

Kunal R Virulkar

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯ (UPSC Results 2023) ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್‌ (Aditya Srivastava) ಅವರು ದೇಶದಲ್ಲೇ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಆ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಇನ್ನು ಅನಿಮೇಶ್ ಪ್ರಧಾನ್ ಮತ್ತು ಡೊನೂರು ಅನನ್ಯಾ ರೆಡ್ಡಿ ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ಈ ಮಧ್ಯೆ ಯುಪಿಎಸ್‌ಸಿ ಆಕಾಂಕ್ಷಿ ಕುನಾಲ್ ಆರ್. ವಿರುಲ್ಕರ್ (Kunal R Virulkar) ಎನ್ನುವವರು ತಮ್ಮ 12ನೇ ಪ್ರಯತ್ನದಲ್ಲಿಯೂ ಆಯ್ಕೆಯಾಗದ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಹೋರಾಟವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ (Viral News).

“12 ಪ್ರಯತ್ನಗಳು, 7 ಮುಖ್ಯ ಪರೀಕ್ಷೆ, 5 ಸಂದರ್ಶನ. ಆದರೂ ಆಯ್ಕೆಯಾಗಲಿಲ್ಲ” ಎಂದು ಬರೆದುಕೊಂಡಿರುವ ವಿರುಲ್ಕರ್ ದೆಹಲಿಯ ಯುಪಿಎಸ್‌ಸಿ ಪ್ರಧಾನ ಕಚೇರಿಯ ಹೊರಗೆ ನಿಂತುಕೊಂಡಿರುವ ತಮ್ಮ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಪೋಸ್ಟ್‌ ವೈರಲ್‌

ಸದ್ಯ ವಿರುಲ್ಕರ್ ಅವರ ಪೋಸ್ಟ್‌ ಅನ್ನು 5 ಲಕ್ಷಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿ ಸಾಂತ್ವನ ಹೇಳಿದ್ದಾರೆ. ಹಲವು ಮಂದಿ ಇತರರ ಉದಾಹರಣೆ ನೀಡಿ ಸಮಾಧಾನ ಪಡಿಸಿದರೆ, ಇನ್ನು ಕೆಲವರು ಸ್ಫೂರ್ತಿದಾಯಕ ಕಥೆ ಹೇಳಿದ್ದಾರೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಕಮೆಂಟ್‌ ಮಾಡಿ, ʼʼನಿಮ್ಮ ಬೆಂಬಲಕ್ಕೆ ನಾವೆಲ್ಲ ಇದ್ದೇವೆ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಒಂದಲ್ಲ ಒಂದು ದಿನ ನಿಮ್ಮ ಪ್ರಯತ್ನದಲ್ಲಿ ಜಯ ಗಳಿಸುತ್ತೀರಿʼʼ ಎಂದು ಹೇಳಿದ್ದಾರೆ. “ಚಿಂತಿಸಬೇಡಿ. ಪ್ರಯತ್ನಿಸುತ್ತಲೇ ಇರಿ. ಮುಂದೊಂದು ದಿನ ನೀವು ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಇದು ನಿಮ್ಮ ಪ್ರಯತ್ನವನ್ನು, ಕಠಿಣ ಪ್ರರಿಶ್ರಮವನ್ನು ಎತ್ತಿ ಹಿಡಿಯುತ್ತದೆ. ನಿಮ್ಮ ವೃತ್ತಿ ಜೀವನಕ್ಕೆ ಶುಭ ಹಾರೈಕೆಗಳು” ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಬಹುತೇಕರು ವಿರುಲ್ಕರ್ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.

ಏತನ್ಮಧ್ಯೆ ಒಟ್ಟು 1,016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಅವರನ್ನು ವಿವಿಧ ಕೇಂದ್ರ ಸರ್ಕಾರಿ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ. ಆದಾಗ್ಯೂ, ಶಿಫಾರಸು ಮಾಡಲಾದ 355 ಅಭ್ಯರ್ಥಿಗಳ ಉಮೇದುವಾರಿಕೆ ಹೆಚ್ಚಿನ ಪರಿಶೀಲನೆಗೆ ಬಾಕಿ ಉಳಿದಿದೆ. ಪ್ರತಿಷ್ಠಿತ ಪರೀಕ್ಷೆಯನ್ನು 2023ರ ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 24ರವರೆಗೆ ಎರಡು ಪಾಳಿಗಳಲ್ಲಿ ನಡೆಸಲಾಗಿತ್ತು. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು/ನೇಮಕಾತಿಗಳ ಕುರಿತು ಯಾವುದೇ ಮಾಹಿತಿ/ಸ್ಪಷ್ಟೀಕರಣವನ್ನು ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಖುದ್ದಾಗಿ ಭೇಟಿ ನೀಡಿ ಪಡೆಯಬಹುದು ಅಥವಾ ದೂರವಾಣಿ ಸಂಖ್ಯೆ 23385271/23381125/23098543ಕ್ಕೆ ಕರೆ ಮಾಡಬಹುದು.

ಇದನ್ನೂ ಓದಿ: UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

ಫಲಿತಾಂಶವನ್ನು ಹೀಗೆ ಪರಿಶೀಲಿಸಿ

Exit mobile version