Site icon Vistara News

ವಿಸ್ತಾರ ಸಂಪಾದಕೀಯ | ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮೌಲ್ಯ ಶಿಕ್ಷಣ ಅಡಿಪಾಯ

Moral education

ಶಾಲೆಗಳಲ್ಲಿ ಮೌಲ್ಯಯುತ ಶಿಕ್ಷಣವನ್ನು ಜಾರಿಗೆ ತರುವ ನಿಟ್ಟಿನಲ್ಲಿ ‘ಮೌಲ್ಯ ಶಿಕ್ಷಣ ಸಮಿತಿ’ಯನ್ನು ರಚಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಂಗ್ರಹಿಸಲು ವಿಧಾನಸೌಧದಲ್ಲಿ ಸೋಮವಾರ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೌಲ್ಯಯುತ ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಈ ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಆಧರಿಸಿ, ವರದಿ ನೀಡಲು ಸಮಿತಿಯನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣವನ್ನು ಜಾರಿಗೊಳಿಸುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣದ ಹಿನ್ನೆಲೆಯಲ್ಲಿ ಈಗ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರವನ್ನು ಸ್ವಾಗತಿಸೋಣ.

ಪ್ರಾಚೀನ ಕಾಲದಲ್ಲಿನ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದರೆ, ನಮ್ಮೆಲ್ಲ ಜ್ಞಾನ ವಾಹಿನಿಗೆ ಈ ಮೌಲ್ಯಗಳ ಆಧಾರದ ಮತ್ತು ನೈತಿಕ ಶಿಕ್ಷಣವೇ ಅಡಿಪಾಯವಾಗಿತ್ತು. ಆದರೆ, ಬ್ರಿಟಿಷರ ಪ್ರಭಾವದಿಂದಾಗಿ ಶಿಕ್ಷಣ ನೀತಿ ಸಂಪೂರ್ಣವಾಗಿ ಬದಲಾದ್ದರಿಂದ, ಮೌಲ್ಯ ಶಿಕ್ಷಣ ಬದಿಗೆ ಸರಿದು, ವ್ಯವಹಾರಿಕ ಶಿಕ್ಷಣವು ಮುನ್ನೆಲೆಗೆ ಬಂತು. ಈ ಶಿಕ್ಷಣ ವ್ಯವಸ್ಥೆಯು ಆಧುನಿಕ ಕಾಲದ ಅಗತ್ಯವೂ ಹೌದು. ಆದರೆ, ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಬೇಕಿದ್ದರೆ, ಶಾಲಾ ಹಂತದಲ್ಲೇ ಅವರಿಗೆ ಮೌಲ್ಯ ಶಿಕ್ಷಣ ನೀಡಲೇಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಈ ಮೌಲ್ಯ ಶಿಕ್ಷಣವನ್ನು ಯಾವ ರೀತಿ ರೂಪಿಸಬೇಕು ಎಂಬ ಕುರಿತು, ವಿಷಯ ಪ್ರಸ್ತಾಪವಾದಾಗಿನಿಂದಲೂ ಚರ್ಚೆಗಳಾಗುತ್ತಿವೆ. ಬಹುತ್ವದ ಮೇಲೆ ನಿಂತಿರುವ ಭಾರತದಲ್ಲಿ ಹಲವು ಧರ್ಮಗಳು ಅಸ್ತಿತ್ವದಲ್ಲಿವೆ. ಎಲ್ಲ ಧರ್ಮಗಳ ಉದಾತ್ತ ಚಿಂತನೆಗಳು, ಮೌಲ್ಯಗಳನ್ನು ನಾವು ಎಳೆಯ ಮಕ್ಕಳಲ್ಲಿ ತುಂಬಿದರೆ ಸದ್ಭಾವನೆಯ, ಸುಸಂಸ್ಕೃತ ಮತ್ತು ಮೌಲ್ಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಲಿದೆ. ಹಾಗಾಗಿ, ಈ ವಿಷಯದಲ್ಲಿ ಯಾವುದೇ ಧರ್ಮವನ್ನು ಹೊರಗಿಟ್ಟು ನೋಡುವ ಅಗತ್ಯವಿಲ್ಲ. ಋಗ್ವೇದದ ”ಉದಾತ್ತ ಚಿಂತನೆಗಳು ಎಲ್ಲ ದಿಕ್ಕುಗಳಿಂದಲೂ ಬರಲಿ” ಎಂಬ ನೀತಿಯನ್ನು ನಾವು ಈ ಮೌಲ್ಯ ಶಿಕ್ಷಣವನ್ನು ನೀಡುವುದರಲ್ಲೂ ಅಳವಡಿಸಿಕೊಳ್ಳೋಣ. ಆಗ, ಅದಕ್ಕೊಂದು ಪರಿಪೂರ್ಣತೆ ದಕ್ಕುತ್ತದೆ.

ಮೌಲ್ಯ ಶಿಕ್ಷಣವು ವಿದ್ಯಾರ್ಥಿಗಳ ಒಟ್ಟು ವ್ಯಕ್ತಿತ್ವದ ನಿರ್ಮಾಣದ ಜತೆಗೆ, ಜೀವನದ ದಿಕ್ಕನ್ನು ಕೂಡ ರೂಪಿಸುತ್ತದೆ. ಹಾಗಾಗಿ, ಮೌಲ್ಯರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ. ಮಕ್ಕಳಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ದಯೆ, ಸತ್ಯ, ನ್ಯಾಯ, ಒಳ್ಳೆಯ ನಡತೆ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣತೆ ಇವೇ ಮೊದಲಾದ ಸದ್ಗುಣಗಳನ್ನು ಬಿತ್ತುವುದೇ ಮೌಲ್ಯ ಶಿಕ್ಷಣದ ಗುರಿಯಾಗಿದೆ. ಶಾಲಾ ಹಂತದಲ್ಲಿ ಈ ಸದ್ಗುಣಗಳನ್ನು ಅವರಲ್ಲೇ ತುಂಬದೇ ಹೋದರೆ, ಅವರು ದೊಡ್ಡವರಾದರ ಮೇಲೆ ಈ ಗುಣಗಳು ಅವರನ್ನು ಆಕರ್ಷಿಸುವುದಿಲ್ಲ. ಹಾಗಾಗಿ, ಕಲಿಕೆಯ ಹಂತದಲ್ಲಿ ಮೌಲ್ಯಗಳನ್ನು ಬೆಳೆಸಿದರೆ, ಅವುಗಳ ಮಹತ್ವವನ್ನು ತಿಳಿಸಿಕೊಟ್ಟರೆ ಅವರೊಬ್ಬ ಸಚ್ಚಾರಿತ್ರ್ಯವಂತ, ಪ್ರಜ್ಞಾವಂತ ಪ್ರಜೆಯಾಗುವುದರಲ್ಲಿ ಅನುಮಾವೇ ಇಲ್ಲ. ಈ ಎಲ್ಲ ಕಾರಣಕ್ಕಾಗಿ ಮೌಲ್ಯ ಶಿಕ್ಷಣವು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮೊಳಗೆ ನೈತಿಕ ಪ್ರಜ್ಞೆ ಇಲ್ಲದಿದ್ದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯೇ ಇರುವುದಿಲ್ಲ. ವಿದ್ಯಾರ್ಥಿಗಳ ಮನೋಬಲ ಮತ್ತು ಬೌದ್ಧಿಕ ವಿಕಾಸಕ್ಕೆ ಕಲಿಕೆ ವರವಾಗಿ ಪರಿಣಮಿಸಬೇಕಾದರೆ ಮೌಲ್ಯ ಶಿಕ್ಷಣಕ್ಕೆ ಮಣೆ ಹಾಕಲೇಬೇಕು. ಹಾಗಾಗಿ, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಯಾವುದೇ ಮಹತ್ವದ ನಿರ್ಧಾರಗಳನ್ನು ಜಾರಿಗೆ ತರುವಾಗ, ಒಂದಿಷ್ಟು ಲೋಪಗಳಾಗುವುದು ಸಹಜ. ಅವುಗಳೆನ್ನೆಲ್ಲ ನಿವಾರಿಸಿಕೊಂಡು, ಮೌಲ್ಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅಳವಡಿಸುವ ಕೆಲಸವಾಗಲಿ.
ಶಾಲೆ-ಕಾಲೇಜು ಆವರಣದಲ್ಲಿ ಕೊಲೆ, ಅನೈತಿಕ ಚಟುವಟಿಕೆ, ಹೊಡೆದಾಟ ಬಡಿದಾಟ, ಗುರುಗಳನ್ನು ಅಗೌರವಿಸುವುದು, ಮನೆಯಲ್ಲಿ ಪೋಷಕರನ್ನು ಅವಹೇಳನ ಮಾಡುವುದು ಇತ್ಯಾದಿ ದುರ್ಗುಣಗಳು ಇಂದಿನ ಯುವ ಜನರಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಮೌಲ್ಯ ಶಿಕ್ಷಣ ಆಶಾದಾಯಕ ಎನಿಸಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಉತ್ತರಾಖಂಡದ ಜೋಶಿಮಠ ಪಟ್ಟಣ ಕುಸಿತ ನಮಗೆ ಎಚ್ಚರಿಕೆಯ ಗಂಟೆಯಾಗಲಿ

Exit mobile version