ರಾಯಚೂರಿನಲ್ಲಿ ಊಹೆಗೂ ಮೀರಿದ ಘಟನೆ ನಡೆದಿದೆ. ರಾಯಚೂರು ನಗರದ ಜ್ಯೋತಿ ಕಾಲೋನಿಯ ರಿಖಬ್‌ಚಂದ್ ಸುಖಾಣಿ ಪ್ರೌಢಶಾಲೆಯ (Highs School in Raichur) ಬಳಿ ನಡೆದ ಈ ಘಟನೆ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇಂದು ಮನೆ ಮಾಡಿರುವ ಕ್ರೌರ್ಯವನ್ನು ಮನಗಾಣಿಸುವಂಥದ್ದು. ಇಲ್ಲಿನ ಮಕ್ಕಳು ಹೊಸ ವರ್ಷ ಆಚರಣೆ ಹೆಸರಿನಲ್ಲಿ ಯಾರದೋ ಕೈಕಾಲು ಮುರಿಯಲು ಸಿದ್ಧರಾಗಿ ಮಾರಕಾಯುಧಗಳೊಂದಿಗೆ ಶಾಲೆಗೆ ಬಂದಿದ್ದಾರೆ. ಇವರು ತಂದ ಆಯುಧಗಳಲ್ಲಿ ಏರ್‌ಗನ್, ಚಾಕು, ಡ್ಯಾಗರ್, ಬಟನ್ ಚಾಕು ಇತ್ಯಾದಿಗಳಿದ್ದವು. 9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳು ತೋರಿಸಿದ ಈ ಕ್ರೌರ್ಯದ ಮನೋಸ್ಥಿತಿ ಬೆಚ್ಚಿ ಬೀಳಿಸುವಂತಿದೆ. ಯಾವುದೋ ಒಬ್ಬ ವಿದ್ಯಾರ್ಥಿಯ ಮೇಲೆ ಇನ್ನೊಬ್ಬ ವಿದ್ಯಾರ್ಥಿ ಹಲ್ಲೆ ಮಾಡಿದನೆಂದು ಆಕ್ರೋಶದಿಂದ ಈ ಗ್ಯಾಂಗ್‌ವಾರ್ ಸನ್ನಿವೇಶ ಸೃಷ್ಟಿಯಾಗಿದ್ದು, ಏಳು ಹಾಗೂ ಒಂಬತ್ತನೇ ತರಗತಿಯ ಹುಡುಗರ ನಡುವಿನ ಈ ಜಗಳ ಹೆತ್ತವರನ್ನೂ ಊರವರನ್ನೂ ಬೆಚ್ಚಿ ಬೀಳಿಸಿದೆ. ಪೊಲೀಸರು ಸಕಾಲದಲ್ಲಿ ಬಂದ ಪರಿಣಾಮ ಹಲ್ಲೆ, ಗಾಯ ಅಥವಾ ಕೊಲೆ ತಪ್ಪಿದೆ. ಇಲ್ಲದಿದ್ದರೆ ಏನಾಗುತ್ತಿತ್ತೋ ಹೇಳಲು ಸಾಧ್ಯವಿರಲಿಲ್ಲ. ಇಂಥ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಮೂಡಿರುವ ಬಗ್ಗೆ ನಾವು ತುಂಬಾ ಗಂಭೀರವಾಗಿ ಚಿಂತಿಸಬೇಕಿದೆ(Vistara Editorial).
ಮಕ್ಕಳ ಗ್ಯಾಂಗ್‌ವಾರ್ ಸನ್ನಿವೇಶ ಇದೇ ಹೊಸತೇನೂ ಅಲ್ಲ. ಕಾಲೇಜು ಮಕ್ಕಳಲ್ಲಿ ಇಂದು ಇದು ಸಾಮಾನ್ಯ ಎನ್ನಿಸುವಷ್ಟರ ಮಟ್ಟಿಗೆ ಬೆಳೆದಿದೆ. ಸ್ಟೂಡೆಂಟ್ ಯೂನಿಯನ್ ಚುನಾವಣೆಗಳು ಇದಕ್ಕೆ ಭಾರಿ ಕುಮ್ಮಕ್ಕು ಕೊಡುತ್ತಿದ್ದವು. ವಿದ್ಯಾರ್ಥಿಗಳಲ್ಲಿ ಹಲವು ಬಣಗಳು ಸೃಷ್ಟಿಯಾಗಿ ಹೊಡೆದಾಟಗಳಾಗುತ್ತಿದ್ದವು. ನಿಧಾನವಾಗಿ ಇದು ಹೈಸ್ಕೂಲುಗಳಿಗೂ ವ್ಯಾಪಿಸಿತು. ಇದು ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ಅರ್ಥ ಮಾಡಿಕೊಂಡ ಸರ್ಕಾರವೂ ಸ್ಕೂಲುಗಳೂ ಈ ಪದ್ಧತಿಯನ್ನೇ ಕೈಬಿಟ್ಟಿವೆ. ಆದರೆ ಶಾಲೆಗೆ ಮಾರಕಾಸ್ತ್ರಗಳ ತರುವಿಕೆ ಇವೆಲ್ಲ ಹೊಸ ಸೇರ್ಪಡೆ. ಮಕ್ಕಳು ನಿಜಕ್ಕೂ ಇಷ್ಟು ಹಿಂಸಾತ್ಮಕರಾದರೇ? ಈ ಪ್ರವೃತ್ತಿ ಇವರಲ್ಲಿ ಮೂಡಲು ಕಾರಣವೇನು? ಗ್ಯಾಂಗ್‌ವಾರ್ ಜೊತೆಗೆ ವೈಯಕ್ತಿಕ ಹಿಂಸೆಗಳು ಪರಾಕಾಷ್ಠೆ ಮುಟ್ಟಿದ್ದನ್ನೂ ನಾವು ಕಂಡಿದ್ದೇವೆ. ಹತ್ತನೇ ತರಗತಿಯ ಹುಡುಗನೊಬ್ಬ ತನ್ನ ಜೂನಿಯರ್ ವಿದ್ಯಾರ್ಥಿಯನ್ನು ಶಾಲಾ ಶೌಚಾಲಯದಲ್ಲೇ ಇರಿದು ಕೊಂದು ಹಾಕಿದ್ದ. ಇದು ಕ್ರೌರ್ಯದ ಪರಾಕಾಷ್ಠೆ. ಮಕ್ಕಳ ನಡುವೆ ಹೊಡೆದಾಟ, ಹಲ್ಲೆ, ಇರಿತಗಳು ಹಿಂದೆಂದೂ ಇಲ್ಲದಷ್ಟು ಇಂದು ಹೆಚ್ಚಿವೆ. ಬೆಂಗಳೂರಿನ ಖಾಸಗಿ ಆಂಗ್ಲ ಶಾಲೆಯೊಂದರ ವಿದ್ಯಾರ್ಥಿನಿಯರೇ ನಡುಬೀದಿಯಲ್ಲಿ ಕೂದಲು ಕಿತ್ತುಕೊಂಡು ರಣಾರಂಪ ಮಾಡಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಮಕ್ಕಳಲ್ಲಿ ಹಿಂಸೆ ಇಲ್ಲವೇ ಇಲ್ಲ ಎಂದು ಹೇಳುವಂತಿಲ್ಲ. ಸ್ವಭಾವತಃ ಮಕ್ಕಳಿಗೆ ಯಾವುದು ಹಿಂಸೆ, ಯಾವುದು ಅಹಿಂಸೆ, ಯಾವುದು ಸಹಾನುಭೂತಿ ಎಂಬುದರ ಅರಿವನ್ನು ಹೆತ್ತವರು, ಶಿಕ್ಷಕರು ಮತ್ತು ಸುತ್ತಲಿನ ಜಗತ್ತು ಮೂಡಿಸುತ್ತಿರಬೇಕಾಗುತ್ತದೆ. ಸತ್ಯ, ಸೌಜನ್ಯ, ಪ್ರಾಮಾಣಿಕತೆ ಇವೆಲ್ಲ ಮಕ್ಕಳಲ್ಲಿ ಬೆಳೆಯುತ್ತ ಹೋದಂತೆ ರೂಢಿಯಾಗುತ್ತ ಹೋಗುವ ಗುಣಗಳು. ಆದರೆ ಬಾಲ್ಯದಿಂದಲೇ ಮಕ್ಕಳ ಕಣ್ಣಿಗೆ ಸದಾ ಹಿಂಸೆಯೇ ಬೀಳುತ್ತಿದ್ದರೆ, ಕುಟುಂಬದಲ್ಲಿಯೂ ಇಂಥ ಹಿಂಸೆ ಇದ್ದರೆ, ಮಕ್ಕಳು ನೋಡುವ ದೃಶ್ಯ ಮಾಧ್ಯಮದ ಕಾರ್ಯಕ್ರಮಗಳಲ್ಲಿಯೂ ಹಿಂಸೆಯೇ ಪ್ರಧಾನವಾಗಿದ್ದರೆ ಮಕ್ಕಳಲ್ಲೂ ಅದೇ ಪ್ರವೃತ್ತಿ ನೆಲೆಯಾಗುತ್ತದೆ. ಹೀಗಾಗಿ ಮಕ್ಕಳ ಈ ಪ್ರವೃತ್ತಿಗೆ ಒಟ್ಟೂ ಸಮಾಜ ಕಾರಣ. ಇಂಥ ಕಂಟೆಂಟ್‌ಗಳು ಮಕ್ಕಳಿಗೆ ಲಭಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಇದೆ. ಜೊತೆಗೆ ಈ ಮಕ್ಕಳಿಗೆ ಸಮಾಜಘಾತುಕ ಶಕ್ತಿಗಳ, ರೌಡಿಶೀಟರ್‌ಗಳ ಸಖ್ಯವೂ ಇದೆಯೇ ಎಂಬುದನ್ನು ಕೂಡ ಪರಿಶೀಲಿಸಬೇಕಿದೆ.
ಹೀಗೆ ಹಿಂಸೆಗೆ ಮನ ತೆತ್ತುಕೊಂಡ ವಿದ್ಯಾರ್ಥಿಗಳನ್ನು ಅವರಿಗೆ ಸೂಕ್ತವಾದ ರೀತಿಯಲ್ಲಿ ಶಿಕ್ಷಿಸಬೇಕು; ಶಿಕ್ಷೆಯೇ ಇಲ್ಲವಾದರೆ ತಾವು ಮಾಡಿದ್ದು ಸರಿ ಎಂಬ ಭಾವ ಇವರಲ್ಲಿ ಮೂಡಿಬಿಡುತ್ತದೆ. ಜೊತೆಗೆ ಶಿಕ್ಷಣವೂ ಬೇಕಿದೆ. ಅಪ್ರಾಪ್ತ ವಯಸ್ಕರಿಗಾಗಿ ಇರುವ ರಿಮ್ಯಾಂಡ್ ಹೋಮ್‌ಗಳು ಈ ವಿಷಯದಲ್ಲಿ ಹೆಚ್ಚು ನೆರವಾಗುತ್ತವೆ ಎನ್ನುವಂತಿಲ್ಲ. ಯಾಕೆಂದರೆ ಈ ರಿಮ್ಯಾಂಡ್ ಹೋಂಗಳ ಪರಿಸ್ಥಿತಿ ಹೇಗಿದೆ ಎಂದರೆ ಇಲ್ಲಿಗೆ ಅರೆಬರೆ ಕ್ರಿಮಿನಲ್ ಆಗಿ ಹೋದ ಹುಡುಗರು ಪೂರ್ತಿ ಕ್ರಿಮಿನಲ್‌ಗಳಾಗಿ ಮರಳಿ ಬರುವ ಸಾಧ್ಯತೆಯೇ ಹೆಚ್ಚಿದೆ. ಪರ್ಯಾಯ ಜೈಲುಗಳೇ ಆಗಿಬಿಟ್ಟಿರುವ ಇವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಆದರೂ ನಮ್ಮ ಮಕ್ಕಳು, ಯುವಜನತೆ ಕರಾಳ ಶಕ್ತಿಗಳಾಗಿ ಬೆಳೆದು ನಿಲ್ಲುವುದನ್ನು ತಪ್ಪಿಸಲು ಸಾಧ್ಯವಿರುವ ಪ್ರಯತ್ನಗಳನ್ನು ನಾವು ಗಂಭೀರವಾಗಿ ಮಾಡಬೇಕಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಳೆಯ ಸಾಧನೆಗಳನ್ನು ಮೆಲುಕು ಹಾಕುತ್ತ ಹೊಸ ವರ್ಷ ಮತ್ತಷ್ಟು ಎತ್ತರಕ್ಕೇರೋಣ