Site icon Vistara News

Global Warming: 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಜಾಗತಿಕ ತಾಪಮಾನ; ಇದೆಷ್ಟು ಅಪಾಯ?

globle warming

globle warming

ನವದೆಹಲಿ: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ (Global Warming) ಹೆಚ್ಚಾಗುತ್ತಿರುವುದು ಕಳವಳ ಮೂಡಿಸುತ್ತಿದೆ. ಈ ಮಧ್ಯೆ ಹಸಿರುಮನೆ ಅನಿಲ ಹೊರಸೂಸುವಿಕೆಯು (Global greenhouse gas emissions) 2022ರಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದರಿಂದ ಈ ವರ್ಷದ 86 ದಿನಗಳು ಈಗಾಗಲೇ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಿತಿಯನ್ನು ಮೀರಿದೆ ಎಂದು ವಿಶ್ವಸಂಸ್ಥೆಯ (UN) ಹೊಸ ವರದಿ ತಿಳಿಸಿದೆ.

ಈ ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ತಾಪಮಾನ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 2022ರಲ್ಲಿ ಜಾಗತಿಕವಾಗಿ 57.4 ಶತಕೋಟಿ ಟನ್ ಕಾರ್ಬನ್‌ ಡೈ ಆಕ್ಸೈಡ್ ಹೊರಸೂಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.2ರಷ್ಟು ಹೆಚ್ಚಾಗಿದೆ ಮತ್ತು 2019ರಲ್ಲಿ ಕಂಡು ಬಂದ ಹಿಂದಿನ ದಾಖಲೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂದು ವರ್ಷಾಂತ್ಯದ ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಮುಂಚಿತವಾಗಿ ಯುಎನ್ ಎನ್ವಿರಾನ್‌ಮೆಂಟ್‌ ಪ್ರೋಗ್ರಾಂ(UN Environment Programme-UNEP)ನ ವಾರ್ಷಿಕ ಪ್ರಕಟಣೆಯಾದ ಎಮಿಷನ್ ಗ್ಯಾಪ್ ರಿಪೋರ್ಟ್ ತಿಳಿಸಿದೆ.

ಕೋವಿಡ್‌ ಕಾಲಘಟ್ಟದಲ್ಲಿ ನಿಯಂತ್ರಣ

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ ಮಹಾಮಾರಿ ವಾತಾವರಣಕ್ಕೆ ಒಂದಷ್ಟು ನೆಮ್ಮದಿಯನ್ನು ಕಲ್ಪಿಸಿತ್ತು. ಅಂದರೆ 2020ರಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಪರಿಣಾಮ ವಿಷಾನಿಲ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ 2021ರಲ್ಲಿ ಮತ್ತೆ ಚಟುವಟಿಕೆಗಳಿಗೆ ಮತ್ತೆ ವೇಗ ದೊರೆತ ಪರಿಣಾಮ ಅನಿಲ ಹೊರಸೂಸುವಿಕೆಯು ಬಹುತೇಕ 2019ರ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಟಾಪ್‌ 3 ದೇಶಗಳು

ಚೀನಾ ಮತ್ತು ಅಮೆರಿಕ ಅನಿಲ ಹೊರಸೂಸುವಿಕೆಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. 2022ರಲ್ಲಿಯೂ ಈ ದೇಶಗಳು ಅತ್ಯಧಿಕ ಪ್ರಮಾಣದಲ್ಲಿ ಹಸಿರುಮನೆ ಅನಿಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿವೆ. ಹಾಗೆಯೇ ಮೂರನೇ ಅತಿದೊಡ್ಡ ಅನಿಲ ಹೊರಸೂಸುವ ರಾಷ್ಟ್ರವಾಗಿ ಭಾರತ ಇದೆ. ಯುರೋಪಿಯನ್ ಯೂನಿಯನ್, ರಷ್ಯಾ ಮತ್ತು ಬ್ರೆಜಿಲ್ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2030ರ ವೇಳೆಗೆ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ನಿಯಂತ್ರಿಸಲು ಹಸಿರುಮನೆ ಅನಿಲ ಹೊರಸೂಸುವಿಕೆ ಶೇ. 42ರಷ್ಟು ಕಡಿಮೆಯಾಗಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. 2024ರಿಂದ ಜಾಗತಿಕವಾಗಿ ಅನಿಲ ಹೊರಸೂಸುವಿಕೆ ಪ್ರಮಾಣವು ಪ್ರತಿವರ್ಷ ಕನಿಷ್ಠ 8.7 ಪ್ರತಿಶತದಷ್ಟು ಕಡಿಮೆಯಾಗಬೇಕಾಗುತ್ತದೆ. ಕೋವಿಡ್ 19ರ ಕಾರಣದಿಂದ 2019 ಮತ್ತು 2020ರ ನಡುವೆ ಹಸಿರುಮನೆ ಅನಿಲ ಪ್ರಮಾಣ 4.7 ಪ್ರತಿಶತದಷ್ಟು ಕುಸಿದಿತ್ತು.

2023ರ ವರ್ಷವು 2016ರ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಹಿಂದೆಂದಿಗಿಂತಲೂ ಹೆಚ್ಚು ಬಿಸಿಯಾದ ವರ್ಷವಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ವರ್ಷದ ಬಹುತೇಕ ಪ್ರತಿ ತಿಂಗಳು ಒಂದಲ್ಲ ಒಂದು ತಾಪಮಾನದ ದಾಖಲೆಯನ್ನು ನಿರ್ಮಿಸಿದೆ. ಸೆಪ್ಟೆಂಬರ್ ಅತ್ಯಂತ ಬಿಸಿಯಾದ ತಿಂಗಳಾಗಿ ಹೊರಹೊಮ್ಮಿದೆ. ಈ ವರ್ಷ 86 ದಿನಗಳ ದೈನಂದಿನ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಸರಾಸರಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚೇ ದಾಖಲಾಗಿರುವುದು ಕಳವಳಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

2015ರ ಪ್ಯಾರಿಸ್ ಒಪ್ಪಂದವು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಪ್ರಸ್ತುತ ನೀತಿಗಳು ಸರಿಸುಮಾರು 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version