ನವ ದೆಹಲಿ: ಭಾರತಕ್ಕೆ ನವೀಕರಿಸಬಹುದಾದ ಇಂಧನ ಬಳಕೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ತನ್ನ ಗುರಿಯನ್ನು ಮುಟ್ಟಲು ಇನ್ನೂ 17,45,733 ಲಕ್ಷ ಕೋಟಿ ರೂ. ಹೂಡಿಕೆಯ ಅಗತ್ಯವಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
೨೦೩೦ರ ವೇಳೆಗೆ, ಪವನಶಕ್ತಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ೫೦೦ ಗಿಗಾವ್ಯಾಟ್‌ಗಳಿಗೆ ಹೆಚ್ಚಿಸಿಕೊಳ್ಳಬೇಕೆಂಬುದು ಭಾರತದ ಗುರಿ. ಆದರೆ ಈ ಗುರಿ ಸಾಧನೆಗೆ ಇನ್ನೂ ಬೃಹತ್ ಪ್ರಮಾಣದಲ್ಲಿ, ಸುಮಾರು 17,45,733 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಅಗತ್ಯವಿದೆ ಎಂದು ಸಂಶೋಧನಾ ಸಂಸ್ಥೆ ಬ್ಲೂಮ್‌ಬರ್ಗ್ ಎನ್‌ಇಎಫ್‌ನ ವರದಿ ವಿವರಿಸಿದೆ.
ಕಳೆದ ನವೆಂಬರ್‌ನಲ್ಲಿ ನಡೆದ ಗ್ಲಾಸ್ಗೋ ಹವಾಮಾನ ಶೃಂಗದಲ್ಲಿ, ೨೦೩೦ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳ ಕುರಿತಾದ ಭಾರತದ ಬದ್ಧತೆಯೇನು ಎಂಬುದನ್ನು ಪ್ರಧಾನಮಂತ್ರಿ ಮೋದಿ ಅವರು ಸ್ಪಷ್ಟ ಮಾತುಗಳಲ್ಲಿ ಉಚ್ಚರಿಸಿದ್ದರು.
ಭಾರತ ಈಗ ಹೊರಸೂಸುತ್ತಿರುವ ಇಂಗಾಲದ ಪ್ರಮಾಣದಲ್ಲಿ ೧೦ ಕೋಟಿ ಟನ್‌ಗಳಷ್ಟನ್ನು ೨೦೩೦ರ ವೇಳೆಗೆ ಕಡಿಮೆ ಮಾಡಲಿದೆ. ಮಾತ್ರವಲ್ಲ, ದೇಶದ ಆರ್ಥಿಕತೆಯಲ್ಲಿರುವ, ಇಂಗಾಲ ಹೊರಸೂಸುವಂಥ ಅನಿವಾರ್ಯತೆಯನ್ನು ಶೇ. ೪೫ರಷ್ಟು ಕಡಿತ ಮಾಡಿ, ೨೦೦೫ಕ್ಕಿಂತ ಹಿಂದಿನ ಮಟ್ಟ ತಲುಪಲಿದೆ ಹಾಗೂ ೨೦೭೦ರ ವೇಳೆಗೆ ಭಾರತ ಹೊರಸೂಸುವ ಇಂಗಾಲದ ಪ್ರಮಾಣ ಶೂನ್ಯಕ್ಕಿಳಿಯಲಿದೆ ಎಂದು ಪ್ರಧಾನಿ ಮೋದಿ ಈ ಶೃಂಗಸಭೆಯಲ್ಲಿ ಹೇಳಿದ್ದರು. ಈ ಮಹತ್ವಾಕಾಂಕ್ಷೆಯ ಯೋಜನೆಗೆ ನಿಧಿ ಒದಗಿಸುವಂತೆಯೂ ಅವರು ಮುಂದುವರಿದ ರಾಷ್ಟ್ರಗಳನ್ನು ಕೋರಿದ್ದರು.
ಭಾರತ ಈಗಾಗಲೇ ೧೬೫ ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯಕ್ಕೆ ಅವಕಾಶ ಮಾಡಿಕೊಂಡಿದೆ. ೨೦೩೦ರ ವೇಳೆಗೆ ಈಗಾಗಲೇ ಇರುವ ಬೇಡಿಕೆಯ ಶೇ. ೫೩ರಷ್ಟು ಕಲ್ಲಿದ್ದಲು ಬೇಡಿಕೆಯನ್ನು ಕಡಿತ ಮಾಡುವ, ಜತೆಗೆ ಪವನ ಮತ್ತು ಸೌರ ಶಕ್ತಿಯ ಬಳಕೆಯನ್ನು ಶೇ.೫೧ಕ್ಕೇರಿಸುವ ಮುನ್ನೋಟವನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರ ನೀಡಿದೆ. ಆದರೆ ಇದಕ್ಕಾಗಿ ಕಾರ್ಪೊರೇಟ್ ವಲಯದಿಂದ ಬೃಹತ್ ಪ್ರಮಾಣದಲ್ಲಿ ಹೂಡಿಕೆಯ ಅಗತ್ಯವಿದೆ.
“ಈವರೆಗೆ ಭಾರತದಲ್ಲಿನ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ನಾನಾ ಹೂಡಿಕೆದಾರರಿಂದ ಹಣ ಹರಿದು ಬರುತ್ತಿತ್ತು. ಆದರೆ ಈ ಮಾರುಕಟ್ಟೆ ವಿಸ್ತಾರವಾಗುತ್ತಿರುವಂತೆಯೇ, ಇದರ ಅಗತ್ಯ ಮತ್ತು ಅಪಾಯಗಳೂ ನಾನಾ ರೀತಿಯಲ್ಲಿ ಎದುರಾಗುತ್ತಿವೆ. ಹಾಗಾಗಿ ವಿಶ್ವದ ಇತರ ಮಾರುಕಟ್ಟೆಗಳಿಂದಲೂ ಹಣ ಹರಿದುಬರುವುದು ಅಗತ್ಯವಾಗಿದೆʼʼ ಎಂದು ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಶಂತನು ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಕ್ಷೇತ್ರದಲ್ಲಿ ಹಣ ಹೂಡಿಕೆಗೆ ಇರುವ ತೊಡಕುಗಳು ಹಲವು ರೀತಿಯವು. ಶಾಸನಾತ್ಮಕ ಅಡೆ-ತಡೆಗಳು, ಭೂಮಿ ಸ್ವಾಧೀನ ಪ್ರಕ್ರಿಯೆಯ ತೊಡಕುಗಳು, ಹಣದುಬ್ಬರ, ಬಡ್ಡಿದರದ ಏರಿಳಿತ, ಡಾಲರ್ ಎದುರಿಗೆ ಕುಸಿಯುತ್ತಿರುವ ರೂಪಾಯಿ, ಬ್ಯಾಂಕಿಂಗ್ ಕಾನೂನುಗಳಂಥ ಹಲವಾರು ವಿಷಯಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ೨೦೧೪ರಿಂದ ಈವರೆಗೆ ನವೀಕೃತ ಇಂಧನ ಮೂಲದ ಯೋಜನೆಗಳಲ್ಲಿ ೭೫ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ.
ಇದನ್ನೂ ಓದಿ | ರಾಜ್ಯದಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ₹52,000 ಕೋಟಿ ಹೂಡಿಕೆ