ರಾಮಸ್ವಾಮಿ ಹುಲಕೋಡು
ಬೆಂಗಳೂರು: ಕಸ್ತೂರಿ ರಂಗನ್ ವರದಿ (Kasturirangan Report) ಜಾರಿಯ ವಿಷಯದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಇನ್ನು ಮುಂದೆ ಈ ವರದಿ ಜಾರಿಯ ಆತಂಕವಿಲ್ಲ. ನಮ್ಮ ಅಭಿಪ್ರಾಯ ಕೇಳಿಯೇ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದರೆ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವ ವಿಷಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮುಂದಿರುವುದರಿಂದ ಕೋರ್ಟ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಕಸ್ತೂರಿ ರಂಗನ್ ವರದಿಯ ಭವಿಷ್ಯ ನಿಂತಿದೆ.
ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿಯೇ ಇದುವರೆಗೆ ಕೇಂದ್ರ ಸರ್ಕಾರ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯಗಳು ವಿರೋಧಿಸುತ್ತಿದ್ದರೂ 2014 ರಿಂದ ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ʼಸರ್ಕಸ್ʼ ಮಾಡುತ್ತಲೇ ಬಂದಿದೆ. ಕಳೆದ ಜನವರಿಯಲ್ಲಿ ನೀಡಿದ ಸೂಚನೆಯಂತೆಯೇ ಈಗಲೂ ಕೂಡ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಾರಿಯೂ ಅಧಿಸೂಚನೆಯನ್ನು ಅಂತಿಮಗೊಳಿಸದಿದ್ದಲ್ಲಿ ನ್ಯಾಯಾಲಯ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದೆ ಎಂಬ ಆತಂಕ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಕಾರಗಳನ್ನು ಕಾಡುತ್ತಿದೆ.
ಪ್ರತಿ ಬಾರಿಯೂ ಎನ್‌ಜಿಟಿ ಚಾಟಿ ಬೀಸುತ್ತಿರುವುದರಿಂದ ಈ ಬಾರಿ ಹೇಗಾದರೂ ಮಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದುಕೊಂಡು ಇದಕ್ಕೆ ಇರುವ ಆಕ್ಷೇಪಣೆಗಳ ಬಗ್ಗೆ ಪುನರ್ ಪರಿಶೀಲಿಸಲು ಕಳೆದ ಏಪ್ರಿಲ್‌ನಲ್ಲಿಯೇ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಸಂಜಯ್ ಕುಮಾರ್ ನೇತೃತ್ವದ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಿ, ಹೆಚ್ಚು ವಿರೋಧ ವ್ಯಕ್ತವಾಗದಂತೆ ಅಧಿಸೂಚನೆಯನ್ನು ಹೊರಡಿಸಲು ಸಚಿವಾಲಯ ಕ್ರಮ ತೆಗೆದುಕೊಂಡಿತ್ತು.
ಮೇ 30ರ ಒಳಗೆ ವರದಿ ನೀಡುವಂತೆ ಈ ಹೊಸ ಸಮಿತಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಎರಡು ತಿಂಗಳಿನಲ್ಲಿ ಈ ಸಮಿತಿಯಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂಬುದು ಅಧಿಕಾರಗಳ ಗಮನಕ್ಕೆ ಬಂದಿತ್ತು. ಹೀಗಾಗಿ ಮೇ ಅಂತ್ಯದಲ್ಲಿ ಈ ಸಮಿತಿಯ ಕಾಲಾವಧಿಯನ್ನು ಒಂದು ವರ್ಷಗಳಿಗೆ ವಿಸ್ತರಿಸಿ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ, ಅಗತ್ಯ ಇರುವ ಕಡೆಗೆ ಭೇಟಿ ನೀಡಿ, ಮುಂದೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳನ್ನು ಶಿಫಾರಸು ಮಾಡುವಂತೆ ಸೂಚಿಸಲಾಗಿತ್ತು. ಈ ಸಮಿತಿ ಏಪ್ರಿಲ್‌ನಲ್ಲಿ ಆರಂಭಿಸಿದ್ದ ಕೆಲಸವನ್ನು ಈಗ ಮುಂದುವರಿಸಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿರುವ ಪಶ್ಚಿಮಘಟ್ಟದ ಅತಿ ಹೆಚ್ಚು ಭಾಗ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದ 56,825 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಆಶ್ಚರ್ಯವೆಂದರೆ, ಆದರೂ ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಸರ ಸಚಿವಾಲಯ ಈ ಹೊಸ ಸಮಿತಿ ರಚಿಸಿರುವ ವಿಷಯ ಗೊತ್ತೇ ಇರಲಿಲ್ಲ!
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾದ ಮೇಲೆಯೇ ಗೊತ್ತಾಗಿದ್ದು! ಈ ಸಮಿತಿ ರಚನೆಯಾಗಿರುವ ವಿಷಯ ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಿಂದೆಯೇ ಪ್ರಕಟವಾಗಿತ್ತು. ಅಲ್ಲದೆ ಸಮಿತಿಯ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿರುವ ವರದಿ ರಾಜ್ಯದ ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು. ಜು.12ರಂದೇ ಈ ಸಮಿತಿ ಕೇರಳಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವು ತಾಂತ್ರಿಕ ಕಾರಣಗಳಿಂದಾಗಿ ಕರಡು ಅಧಿಸೂಚನೆ ಹೊರಡಿಸಿದ ಮೇಲೇಯೇ ಈ ವಿಷಯದ ಕುರಿತು ಎಚ್ಚೆತ್ತುಕೊಂಡಿದ್ದು!
ಕಸ್ತೂರಿ ರಂಗನ್ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಕೇಂದ್ರದ ಮುಂದೆ ಧೈರ್ಯವಾಗಿ ಹೇಳಲು ಬಂದಿದ್ದ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯದ ನಿಯೋಗಕ್ಕೆ ನಾಲ್ಕು ತಿಂಗಳ ಹಿಂದೆ ಸಮಿತಿ ರಚಿಸಿದ್ದ ಮಾಹಿತಿಯನ್ನು ನೀಡಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಾಗಹಾಕಿದ್ದಾರೆ. ಇನ್ನು ಈ ವರದಿಯ ಭಯವಿಲ್ಲ ಎಂದು ನಿಯೋಗ ʼದೊಡ್ಡ ಸಾಧನೆ ಮಾಡಿದಂತೆʼ ರಾಜ್ಯಕ್ಕೆ ಹಿಂದಿರುಗಿದೆ.
ಎನ್‌ಜಿಟಿ ತೀರ್ಪಿನ ಮೇಲೆ ಕಣ್ಣು
ರಾಜ್ಯಗಳು ವಿರೋಧಿಸುತ್ತಿದ್ದರೂ ಕೇಂದ್ರ ಸರ್ಕಾರ ಈ ವರದಿಯ ಜಾರಿಗೆ ಒಂದರ ಹಿಂದೊಂದರಂತೆ ಕರಡು ಅಧಿಸೂಚನೆ ಹೊರಡಿಸುತ್ತಲೇ ಇರುವುದಕ್ಕೆ ಕಾರಣ ನ್ಯಾಯಾಲಯ. ನಿಯೋಗದಲ್ಲಿದ್ದ ಮುಖ್ಯಮಂತ್ರಿ ಮತ್ತು ಇತರ ನಾಯಕರಿಗೆ ಈ ವಿಷಯ ಸ್ಪಷ್ಟವಾದಂತಿಲ್ಲ. ಕೇಂದ್ರ ಸರ್ಕಾರ ಹೆಚ್ಚು ಸುದ್ದಿಯಾಗದಂತೆ ತಜ್ಞ ಅಧಿಕಾರಿಗಳ ಸಮಿತಿ ರಚಿಸಿದ್ದು, ಈ ಅಧಿಸೂಚನೆಯನ್ನು ಅಂತಿಮಗೊಳಿಸಲೇ ಹೊರತು ಕಸ್ತೂರಿ ರಂಗನ್ ವರದಿಯನ್ನು ಕೈ ಬಿಡಲಲ್ಲ.
ಕೇಂದ್ರ ಸರ್ಕಾರವೇ ಈ ಹಿಂದೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿರುವುದರಿಂದ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದು, ಹೊರ ಬರುವ ದಾರಿ ಹುಡುಕುತ್ತಿದೆ. ಹೀಗಾಗಿಯೇ ಈ ಸಮಿತಿ ರಚನೆಯಾದ ಮೇಲೂ ಕರಡು ಅಧಿಸೂಚನೆಯನ್ನು ಹೊರಡಿಸಿ, ನ್ಯಾಯಾಲಯದ ಚಾಟಿ ಏಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ.
ಪ್ರಕರಣ ನ್ಯಾಯಾಲದ ಮೆಟ್ಟಿಲೇರಿದ್ದೇಕೆ?
ಬಾಹ್ಯಕಾಶ ವಿಜ್ಞಾನಿ ಕಸ್ತೂರಿ ರಂಗನ್ ಪಶ್ಚಿಮಘಟ್ಟ ಪರಿಸರ ಉಳಿಸಲು ಈ ವರದಿ ನೀಡಿದ್ದಾದರೂ ಏಕೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. (ಈ ಕುರಿತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ) ವರದಿ ಜಾರಿಯಾಗಲು ಕಾರಣವಾಗಿದ್ದ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಈ ವಿಷಯವನ್ನು ನ್ಯಾಯಾಲಯದಕ್ಕೂ ಕೊಂಡೋಗಿವೆ.
ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು 2011 ಆ.31 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಈ ವರದಿಗೆ ಸರ್ಕಾರದ ಕಡೆಯಿಂದ ಸರಿಯಾದ ಮನ್ನಣೆ ದೊರೆತಿರಲಿಲ್ಲ. ಇದಕ್ಕೆ ಮುಖ್ಯ ಆಗ ಅರಣ್ಯ ಸಚಿವರು ಬದಲಾಗಿದ್ದು. ಬಹಳ ಆಸಕ್ತಿಯಿಂದ ಗಾಡ್ಗೀಳ್ ಸಮಿತಿ ರಚಿಸಿದ್ದ ಜಯರಾಮ್ ರಮೇಶ್ ಖಾತೆ ಕಳೆದುಕೊಂಡು, ಆ ಸ್ಥಾನಕ್ಕೆ ಜಯಂತಿ ನಟರಾಜ್ ಬಂದಿದ್ದರು.
ಅವರಿಗೆ ಈ ಬಗ್ಗೆ ಹೆಚ್ಚೇನು ಆಸಕ್ತಿ ಇರಲಿಲ್ಲ. ಆದರೆ ವರದಿಯ ಕುರಿತು ಪರಿಸರವಾದಿಗಳ ನಡುವೆ ಚರ್ಚೆ ನಡೆದೇ ಇತ್ತು. ವರದಿಯಲ್ಲಿ ಏನಿರಬಹುದೆಂಬ ಕುತೂಹಲ ಪಶ್ಚಿಮಘಟ್ಟದ ತಪ್ಪಲಿನ ಜನತೆಯದ್ದು. ಈ ಸಂದರ್ಭದಲ್ಲಿ ಈ ವರದಿಯನ್ನು ಬಹಿರಂಗ ಪಡಿಸಲು ಸರ್ಕಾರ ಹಿಂಜರಿದಿದ್ದು, ಎಲ್ಲಿಲ್ಲದ ಅನುಮಾನಗಳಿಗೆ ಕಾರಣವಾಗಿತ್ತು. ಇದರಲ್ಲೇನೋ ಜನವಿರೋಧಿ ವಿಷಯವಿದೆ ಅದಕ್ಕಾಗಿಯೇ ಮುಚ್ಚಿಡಲಾಗುತ್ತಿದೆ ಎಂಬುದು ಖಚಿತವಾಗುತ್ತಿದ್ದಂತೆಯೇ ಕೆಲವರು ಮಾಹಿತಿ ಹಕ್ಕು ಆಯೋಗದ ಮೊರೆ ಹೋದರು. ಕೊನೆಗೆ ಆಯೋಗ ಸೂಚನೆ ನೀಡಿದ ಮೇಲಷ್ಟೇ (ಮಾರ್ಚ್, 2012) ಈ ವರದಿ ಬಹಿರಂಗ ಗೊಂಡಿದ್ದು.
ನಿರೀಕ್ಷೆಯಂತೆಯೇ, ಕೆಲ ಪರಿಸರವಾದಿಗಳ ದೃಷ್ಟಿಯಲ್ಲಿ ಕ್ರಾಂತಿಕಾರಕವೆನಿಸುವ ತೀರ್ಮಾನಗಳನ್ನು ಈ ವರದಿ ಹೊಂದಿತ್ತು. ಆದರೆ ವಿಷಯವನ್ನು ಓದಿ ಪಶ್ಚಿಮಘಟ್ಟದ ತಪ್ಪಲಿನ ಜನತೆ ಬಿಚ್ಚಿ ಬಿದ್ದಿದ್ದರು. ವರದಿ ವಿರೋಧಿಸಿ ಹೋರಾಟ ಆರಂಭವಾಯಿತು. ಕೇರಳದ ಜನತೆ ಒಂದು ಹೆಜ್ಜೆ ಮುಂದೆ ಹೋಗಿ (ಧಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಹೋರಾಟ ತೀವ್ರವಾಗಿತ್ತು) ವರದಿಯನ್ನು ಕೇಂದ್ರ ತಿರಸ್ಕರಿಸಲೇ ಬೇಕೆಂದು ಪಟ್ಟು ಹಿಡಿದು ಕುಳಿತರು.
ಈ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೇ ಕೇಂದ್ರ ಸರ್ಕಾರ ವರದಿಯನ್ನು ಕಪಾಟಿನಲ್ಲಿಟ್ಟು ಸುಮ್ಮನೆ ಕುಳಿತಿತು. ಆದರೆ ಜನತೆ ಸುಮ್ಮನಿರಲಿಲ್ಲ, 1750ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದರು.
ಕಷ್ಟಪಟ್ಟು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವಂತೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವಲ್ಲ ಎಂದು ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗುವ ತೀರ್ಮಾನಕ್ಕೆ ಬಂದರು. ಆಗಲೇ ಅಂದರೆ 2010ರಲ್ಲಿಯೇ, ಎನ್‌ಜಿಒಗಳ ಹೋರಾಟದ ಪ್ರತಿಫಲವಾಗಿಯೇ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಪೀಠ) ಸ್ಥಾಪಿಸಿತ್ತು. ಇದರ ಮುಂದೆ ಗೋವಾದಲ್ಲಿನ ಗಣಿಗಾರಿಕೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಗೋವಾ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ,(Application No 26/2012 (NGT at New Delhi) (Regarding Western Ghats Conservation) ಗಾಡ್ಗೀಳ್ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಗಮನ ಸೆಳೆಯಿತು.
ಗಾಡ್ಗೀಳ್ ವರದಿಯಲ್ಲಿನ ವಿಚಾರ ತಿಳಿದ ಹಸಿರು ನ್ಯಾಯ ಪೀಠ ಈ ಬಗ್ಗೆ ಕೇಂದ್ರ ಸರ್ಕಾರವನ್ನು ವಿಚಾರಿಸಿತು. ಆಗ ಎಚ್ಚೆತ್ತ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಗಾಡ್ಗೀಳ್ ವರದಿಯನ್ನು ಬದಿಗಿಟ್ಟು 2012 ಆ. 17ರಂದು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಕಾರ್ಯತಂಡ ರಚಿಸಿತು.
Western Ghats Ecology Expert Panel (WGEEP) ಎಂದರೆ ಮಾಧವ ಗಾಡ್ಗೀಳ್ ಸಮಿತಿ ನೀಡದ ವರದಿಯ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವರುಗಳು ನೀಡಿದ ಅಭಿಪ್ರಾಯನ್ನು ಗಣನೆಗೆ ತೆಗೆದುಕೊಂಡು ಪಶ್ಚಿಮ ಘಟ್ಟಗಳಲ್ಲಿನ ನೈಸರ್ಗಿಕ ಪರಿಸರ ವ್ಯವಸ್ಥೆಯ ಸಂರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಸರ್ವಾಂಗೀಣ ಮತ್ತು ಸುಸ್ಥಿರ ಅಭಿವೃದ್ಧಿ ಕಾರ್ಯಗಳನ್ನು ಶಿಫಾರಸು ಗೊಳಿಸುವ ಉದ್ದೇಶದಿಂದ ಉನ್ನತ ಮಟ್ಟದ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತನ್ನ ಈ ತೀರ್ಮಾನಕ್ಕೆ ವಿವರಣೆಯನ್ನೂ ನೀಡಿತು.
ಈ ವಿವರಣೆಯನ್ನೇ ನ್ಯಾಯಾಲಯಕ್ಕೂ ಸಲ್ಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತು. ಆದರೆ ಹೆಚ್ಚು ಸಮಯ ಸುಮ್ಮನಿರಲಾಗಲಿಲ್ಲ. ಏಕೆಂದರೆ ಕೇವಲ 10 ಸಭೆ, 4 ವೀಕ್ಷಣೆ, ನಾಲ್ಕು ರಾಜ್ಯಗಳ ಭೇಟಿ ನೀಡಿದ ಕಸ್ತೂರಿ ರಂಗನ್ ನೇತೃತ್ವದ ಸಮಿತಿ 8 ತಿಂಗಳಲ್ಲೇ ಅಂದರೆ ಏಪ್ರಿಲ್ ೧೫, ೨೦೧೩ರಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿಬಿಟ್ಟಿತು! ಈ ವರದಿಯಲ್ಲಿನ ಶಿಫಾರಸುಗಳ ಬಗ್ಗೆಯೂ ತೀವ್ರತರದ ಆಕ್ಷೇಪಣೆಗಳು ಕೇಳಿಬಂದವು. ಮತ್ತೆ ಕರ್ನಾಟಕ ಸೇರಿದಂತೆ ಪಶ್ಚಿಮಘಟ್ಟಗಳನ್ನು ಹೊಂದಿರುವ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭವಾಯಿತು. ಆದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಎನ್‌ಜಿಒಗಳು ಸುಮ್ಮನಿರಲಿಲ್ಲ. ಮತ್ತೆ ನ್ಯಾಯಾಪೀಠದ ಗಮನ ಸೆಳೆದವು.
ಆಗ ನ್ಯಾಯಾಲಯ ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಎರಡು ವರದಿಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಕೇಂದ್ರ ಸರಕಾರ ಸಿಕ್ಕಿಬಿದ್ದಿತು. ಕೊನೆಗೆ ಕಸ್ತೂರಿ ರಂಗನ್ ವರದಿಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ ಆಗಸ್ಟ್ ೨೭, ೨೦೧೪ ರಂದು ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಒಪ್ಪಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತು.
ಇದರ ಬೆನ್ನಲ್ಲೇ ಕಸ್ತೂರಿ ರಂಗನ್ ವರದಿಯಲ್ಲಿ ಹೇಳಿರುವಂತೆ ಅಧಿಸೂಚನೆ ಹೊರಡಿಸಲು ಕರಡು ಸಿದ್ಧಪಡಿಸಿದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಟ್ಟು, ಇದಕ್ಕೆ ಡಿಸೆಂಬರ್ ೧೫, ೨೦೧೪ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿತ್ತು. ಅಲ್ಲಿಂದ ಆರಂಭವಾದ ಈ ಕರಡು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ! ಜುಲೈ ೬ರಂದು ಸದ್ದಿಲ್ಲದೆ ಐದನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದೆ.
ಇಲ್ಲಿ ಒಂದಂತೂ ಸ್ಪಷ್ಟವಾಗಿದೆ. ಯಾವ ಕಾರಣದಿಂದಾಗಿಯಾದರೂ ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾಗಿರಲಿ, ಅದರಲ್ಲಿ ಎಷ್ಟೇ ಊನಗಳಿರಲಿ, ಅದರಲ್ಲಿಯೇ ಮಾರ್ಪಾಡುಗಳನ್ನು ಮಾಡಿ ಕೇಂದ್ರ ಸರ್ಕಾರ ಈ ವರದಿಯನ್ನು ಜಾರಿಗೆ ತರಲೇಬೇಕಿದೆ. ಏಕೆಂದರೆ ಈಗಾಗಲೇ ಈ ವರದಿಯನ್ನು ಒಪ್ಪಿಕೊಂಡು ಜಾರಿಗೆ ಕ್ರಮ ತೆಗೆದುಕೊಳ್ಳುತ್ತಿರು ವುದಾಗಿ ಅದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿಯಾಗಿದೆ!
ಇದನ್ನೂ ಓದಿ| ಒಂದು ವರ್ಷ ಕಸ್ತೂರಿ ರಂಗನ್ ವರದಿಗೆ ಬ್ರೇಕ್: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು