ಕೆಲವು ಪ್ರಾಣಿಗಳು (World Sparrow Day) ಮಾನವರ ಜೊತೆಜೊತೆಗೇ ವಿಕಾಸ ಹೊಂದುತ್ತ ಬಂದಂಥವು. ಸೃಷ್ಟಿ ಪಥದಲ್ಲಿ ಅವುಗಳ ಉಗಮ, ವಿಕಾಸಗಳ ಹಾದಿ ಬೇರೆಯಾದರೂ ಮಾನವನೊಂದಿಗೆ ಅತ್ಯಂತ ನಿಕಟ ಸಂಬಂಧ ಇರಿಸಿಕೊಂಡಂಥವು. ಸಾವಿರಾರು ವರ್ಷಗಳಿಂದ ಎಷ್ಟು ಮನೆಯ ಮಕ್ಕಳು ಹಿಡಿಯುವುದಕ್ಕೆಂದು ಗುಬ್ಬಚ್ಚಿಗಳನ್ನು ಅಟ್ಟಿಸಿಕೊಂಡು ಹೋಗಿಲ್ಲ? ಮನೆಯ ಜಗುಲಿಯಲ್ಲಿ ನೇತಾಡಿಸಿದ್ದ ಫೋಟೋಗಳ ಹಿಂದೆ ಎಷ್ಟು ಮನೆಗಳಲ್ಲಿ ಗುಬ್ಬಿಗಳು ಮನೆ ಕಟ್ಟಿಕೊಂಡಿದ್ದಿಲ್ಲ? ಆದರೆ ಅವೆಲ್ಲ ಒಂದಾನೊಂದು ಕಾಲದ ಮಾತಾಯಿತು. ಈಗ ಮಕ್ಕಳಿಗೆ ಹಿಡಿಯುವುದಕ್ಕೆ, ಫೋಟೋಗಳ ಹಿಂದೆ ಗೂಡು ಕಟ್ಟುವುದಕ್ಕೆ ಗುಬ್ಬಿಗಳೇ ಕಾಣೆಯಾಗುತ್ತಿವೆ. ಹೀಗೆ ಕಾಣೆಯಾಗುತ್ತಿರುವ ಗುಬ್ಬಿಗಳನ್ನು ಉಳಿಸಬೇಕೆಂಬ ಅರಿವು ಮೂಡಿಸುವ ಉದ್ದೇಶ ಮಾರ್ಚ್ 20ರಂದು ಹಮ್ಮಿಕೊಂಡಿರುವ (World Sparrow Day) ʻವಿಶ್ವ ಗುಬ್ಬಚ್ಚಿಗಳ ದಿನʼದ್ದು.
ಪರಿಸರದಲ್ಲಿ ಗುಬ್ಬಿ ಪಾತ್ರ
ಇಡೀ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಿಗಳ ಪಾತ್ರವೇನು ಎಂಬುದರಿಂದ ಹಿಡಿದು, ಈ ಮುದ್ದು ಹಕ್ಕಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳ ಉಳಿವಿಗಾಗಿ ಶ್ರಮಿಸುವ ಅಗತ್ಯದ ಬಗ್ಗೆಯೂ ಅರಿತುಕೊಳ್ಳುವ ದಿನವಿದು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ. ಇಷ್ಟೊಂದು ತೀವ್ರ ಪ್ರಮಾಣ ಕುಸಿಯುತ್ತಿರುವ ಈ ಗುಬ್ಬಿಗಳ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳು ಇಲ್ಲಿವೆ.
ತೂಕ ಎಷ್ಟು?
ಚಿಂವ್ ಚಿಂವ್ ಗುಬ್ಬಿ ಎಂದೇ ಕರೆಸಿಕೊಳ್ಳುವ ಈ ಹಕ್ಕಿಗಳ ತೂಕ 26-32 ಗ್ರಾಂಗಳಷ್ಟೆ. 14-16 ಸೆಂ.ಮೀ.ಗಳಷ್ಟು ದೊಡ್ಡದಿರುವ ಇವು, ತಮ್ಮ ರೆಕ್ಕೆಗಳನ್ನು 25 ಸೆಂ.ಮೀ.ವರೆಗೂ ಬಿಡಿಸಬಲ್ಲವು. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಈ ಗುಬ್ಬಚ್ಚಿಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಕೆಲವು ಮಹಾನಗರಗಳಲ್ಲಿ ಇವುಗಳ ಸಂಖ್ಯೆ ಶೇ. 99ರಷ್ಟು ಕಾಣೆಯಾಗಿದೆ.
ಏಷ್ಯಾದ ಮೂಲ ನಿವಾಸಿ
ಏಷ್ಯಾ ಮತ್ತು ಯುರೋಪ್ ಖಂಡಗಳ ಮೂಲನಿವಾಸಿಗಳಿವು. ಅಲ್ಲಿಂದ ವಿಶ್ವದ ಬಹಳಷ್ಟು ದೇಶಗಳಿಗೆ ವಲಸೆ ಹೋದಂಥವು. ಏಷ್ಯಾ ಖಂಡದ ಭಾರತ, ನೇಪಾಳ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತವೆ. ಆದರೆ ಅಂಟಾರ್ಟಿಕಾದಂಥ ಅತೀವ ಚಳಿಯ ಭಾಗಗಳಲ್ಲಿ, ಜಪಾನ್, ಚೀನಾಗಳಲ್ಲೂ ಗುಬ್ಬಚ್ಚಿಗಳಿಲ್ಲ. ಹಾಗೆ ನೋಡಿದರೆ ಅಮೆರಿಕಾದ ವಲಸಿಗರ ಪೈಕಿ ಗುಬ್ಬಚ್ಚಿಗಳನ್ನೂ ಲೆಕ್ಕಕ್ಕೆ ಹಿಡಿಯಬಹುದು. ಬ್ರಿಟನ್‌ನಿಂದ ಉತ್ತರ ಅಮೆರಿಕಕ್ಕೆ 1851ರ ಹೊತ್ತಿಗೆ ವಲಸೆ ಹೋದಂಥವು ಇವು ಎಂದು ಹೇಳಲಾಗುತ್ತದೆ.
ಇವು ಈಜಬಲ್ಲವು
ಈ ಹಕ್ಕಿಗಳು ತಮ್ಮ ಉಳಿವಿನ ಪ್ರಶ್ನೆ ಬಂದಾಗ ನೀರಲ್ಲಿ ಈಜಬಲ್ಲವು. ಅದರಲ್ಲೂ ಸಾವು-ಉಳಿವಿನ ಹೊತ್ತಿನಲ್ಲಿ, ನೀರಿನಾಳದಲ್ಲೂ ಸ್ವಲ್ಪ ದೂರದವರೆಗೆ ಈಜಲು ಸಾಧ್ಯವಾಗುವಂತೆ ಇವುಗಳ ದೇಹ ರಚನೆಗೊಂಡಿದೆ. ವಯಸ್ಕ ಹಕ್ಕಿಗಳು ಬಹುಪಾಲು ಸಸ್ಯಾಹಾರಿಗಳು. ಆದರೆ ಮರಿ ಗುಬ್ಬಚ್ಚಿಗಳು ಹುಳುಹುಪ್ಪಡಿಗಳನ್ನು ತಿನ್ನುತ್ತವೆ. ಬೆಳವಣಿಗೆಯ ಹಂತದಲ್ಲಿ ಅವುಗಳ ದೇಹಕ್ಕೆ ಅಗತ್ಯವಾದ ಸತ್ವಗಳಿಗಾಗಿ ಪಾಲಕ ಹಕ್ಕಿಗಳು ಮೊಟ್ಟೆಯೊಡೆದು ಬಂದ ಮರಿಗಳಿಗೆ ಕೀಟಗಳನ್ನು ತಿನ್ನಿಸುತ್ತವೆ. ಗುಬ್ಬಚ್ಚಿ ಮರಿಗಳನ್ನು ಅತಿ ಹೆಚ್ಚು ಬೇಟೆಯಾಡಿ ಸ್ವಾಹಾ ಮಾಡುವುದು ಬೆಕ್ಕುಗಳು. ಹಾಗಾಗಿ ಬೆಕ್ಕುಗಳು ತಲುಪಲಾರದಂಥ ಸಂದಿಗಳನ್ನೇ ಗುಬ್ಬಿಗಳು ಗೂಡು ಕಟ್ಟಲು ಹುಡುಕುತ್ತವೆ.
10,000 ವರ್ಷಗಳ ಹಿಂದಿನದು
ನಿಸರ್ಗದ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳದ್ದು ಸುಮಾರು 10,000 ವರ್ಷಗಳ ದೀರ್ಘ ಅನುಭವ. ಇದರದ್ದು ಮಾನವನ ಜೊತೆಗಿನ ಸಂಬಂಧವೂ ಪ್ರಾಚೀನ ಕಾಲದ್ದು. ಆದರೆ ಕಳೆದ ಮೂರು ದಶಕಗಳಿಂದ ಇವುಗಳ ಸಂತತಿ ಅಳಿಯುತ್ತಿದೆ. ನಗರ ಪ್ರದೇಶಗಳಲ್ಲಂತೂ ಬಹುತೇಕ ಕಣ್ಮರೆಯೇ ಆಗಿಹೋಗಿವೆ. ಇದಕ್ಕೆ ಕಾರಣಗಳು ಹಲವಾರಿವೆ.
ಮೊಬೈಲ್ ಟವರ್‌ನಿಂದ ಅಪಾಯ
ಆಧುನಿಕ ಮೂಲಸೌಕರ್ಯಗಳು ಹೆಚ್ಚೆಚ್ಚು ಅಭಿವೃದ್ಧಿ ಹೊಂದುತ್ತ ಹೋದಂತೆ ಮರಗಿಡಗಳು ನಾಶವಾದವು; ಮನೆಯ ಸುತ್ತ-ಮುತ್ತ ಗುಬ್ಬಚ್ಚಿಗಳ ನೆಲೆಗಳು ನಶಿಸಿದವು. ಮೊಬೈಲ್ ಟವರ್‌ಗಳ ತರಂಗಗಳು ಸಹ ಗುಬ್ಬಿಗಳ ನಾಶಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕೀಟನಾಶಕಗಳ ಮಿತಿಮೀರಿದ ಬಳಕೆಯಿಂದಲೂ ಗುಬ್ಬಿಗಳು ಸಾಯುತ್ತಿವೆ.