ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ
ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.
ರಣಥಂಬೋರ್ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ
ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.
ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ
ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.
ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ
ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್ 30ರಿಂದ ಅಕ್ಟೋಬರ್ 15ರವರೆಗೆ ಇದು ಮುಚ್ಚಿರುತ್ತದೆ.
ಪೆಂಚ್ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ
ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.