ಈ ವರ್ಷದ ವಿಶ್ವ ನೀರಿನ ದಿನದ (World Water Day) ಘೋಷಣಾ ವಾಕ್ಯ: “ಶಾಂತಿಗಾಗಿ ನೀರು”. ನೀರು ನಮ್ಮ ಜೀವನದೊಡನೆ ಆಳವಾಗಿ ಸಂಬಂಧಪಟ್ಟಿದೆ. ಸಂಸ್ಕೃತದಲ್ಲಿ ನೀರನ್ನು “ಆಪಃ” ಎಂದು ಕರೆಯುತ್ತಾರೆ. ಪ್ರೀತಿಪಾತ್ರರಾದವರು, ಆಪ್ತರು ಎಂಬ ಅರ್ಥವನ್ನೂ ಈ ಪದ ಹೊಂದಿದೆ. ಎಲ್ಲಾ ಪ್ರಾಚೀನ ನಾಗರಿಕತೆಗಳು ನದಿಗಳ ದಡದಲ್ಲಿ – ಭಾರತದ ಗಂಗಾ ಅಥವಾ ಯಮುನ ದಡದಲ್ಲಿ, ಈಜಿಪ್ಟ್‌ನ ನೈಲ್ ನದಿಯ ದಡದಲ್ಲಿ, ಅಮೆರಿಕದ ಅಮೆಜಾನ್ ನದಿಯ ದಡದಲ್ಲಿ ಸಮೃದ್ಧವಾಗಿದ್ದವು. ಭಾರತದ ನಾಗರಿಕತೆಯು ನದಿಗಳೊಡನೆ ಆಳವಾದ ಸಾಂಸ್ಕೃತಿಕ ಬಂಧವನ್ನು ಹೊಂದಿದೆ. ಭಗವಾನ್ ಶ್ರೀ ರಾಮನು ತನ್ನ ಜೀವನವನ್ನು ಸರಯು ನದಿಯ ದಡದಲ್ಲಿ ಕಳೆದ. ಗಂಗೆಯು ಭಗವಾನ್ ಶಿವನ ಜಟೆಯಿಂದ ಹೊರಹೊಮ್ಮಿದ್ದಾಳೆ ಎಂಬಂತೆ ಚಿತ್ರೀಕರಿಸಲಾಗಿದೆ ಮತ್ತು ಅನೇಕ ಸಾವಿರ ವರ್ಷಗಳಿಂದ ಯೋಗಿಗಳು ಗಂಗಾ ನದಿಯ ತೀರದಲ್ಲಿ ಧ್ಯಾನ ಮಾಡುತಲಿದ್ದಾರೆ. ಗಂಗೆಯು ಜ್ಞಾನದ ಸೂಚಕವಾದರೆ, ಯಮುನೆಯು ಭಕ್ತಿಯ ಸೂಚಕ. ಗೋಪಿಯರಿಗೆ ಭಗವಾನ್ ಕೃಷ್ಣನ ಮೇಲಿನ ಭಕ್ತಿ ಮತ್ತು ಪ್ರೇಮವು ಅರಳಿದ್ದು ಯಮುನ ನದಿಯ ದಡದಲ್ಲಿ. ನಮ್ಮ ನದಿಗಳಿಗೆ ಮರುಜೀವ ನೀಡಲು ನಮ್ಮಿಂದ ಏನೆಲ್ಲಾ ಸಾಧ್ಯವೋ, ಅದನ್ನೆಲ್ಲಾ ಮಾಡಬೇಕು. ಇಲ್ಲಿ ಧರ್ಮವು ಬಲು ಮುಖ್ಯ ಪಾತ್ರವನ್ನು ವಹಿಸಬಲ್ಲದು. ಜನರು ಧಾರ್ಮಿಕವಾಗಿ ನಡೆದುಕೊಂಡು, ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳುವಂತೆ- ನದಿಗಳನ್ನು, ಪರ್ವತಗಳನ್ನು, ಕಾಡುಗಳನ್ನು ಮತ್ತು ಇತರ ಜಲದ ಸಂಪನ್ಮೂಲಗಳನ್ನು ಸಂರಕ್ಷಿಸುವಂತೆ ಧರ್ಮವು ಪ್ರೇರೇಪಣೆಯನ್ನು ನೀಡಬಲ್ಲದು. ಅತೀ ಉತ್ತಮವಾದ ನಿಯಮಗಳನ್ನು ನಾವು ಹೊಂದಬಹುದಾದರೂ, ಆ ನಿಯಮಗಳನ್ನು ಜಾರಿಗೆ ತರಲು, ಮೂಲಭೂತ ಹಂತದ ಜನರಲ್ಲಿ. ಇದರ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಧಾರ್ಮಿಕ ಸಂಸ್ಥೆಗಳು ಇಲ್ಲಿ ಬಲು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಲ್ಲವು.
ಜಲ ಸಮೃದ್ಧಿಯ ಗುರಿ
ಭಾರತವನ್ನು ಜಲದಿಂದ ಸಮೃದ್ಧಿಯಾಗಿಸುವುದು ಮೂಲಭೂತ ಹಂತದಲ್ಲಿನ ಕೆಲಸ. ನೀರಿನ ಲಭ್ಯತೆಯು ಈ ಜಗತ್ತಿನ ಶಾಂತಿ ಹಾಗೂ ಸ್ಥಿರತೆಗಾಗಿ ಅತ್ಯವಶ್ಯಕ. ಭಾರತಲ್ಲಿ ನಾವು ಈ ನಿಟ್ಟಿನಲ್ಲೇ ಕೆಲಸ ಮಾಡಿದ್ದೇವೆ. ಮೂಲಭೂತ ಹಂತದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸುಮಾರು 70 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆವು. ಈ ನದಿಗಳು ಬಹುತೇಕ ಮಟ್ಟಿಗೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಇದ್ದವು. ಒಣಗಿದ ನದಿಪಾತ್ರಗಳ ಶೋಷಣೆ ಮತ್ತು ಅತಿಕ್ರಮಣವು ಸರ್ವೇಸಾಮಾನ್ಯವಾಗಿತ್ತು. ವಿಪರೀತ ನೀರು ಪ್ರವಾಹದ ರೂಪದಲ್ಲಿ ಕೊಚ್ಚಿಹೋಗುತ್ತಿತ್ತು ಅಥವಾ ಅನೇಕ ತಿಂಗಳ ಬರ ಇರುತ್ತಿತ್ತು. ರೈತರಿಗೆ ಬೆಳೆಗಳನ್ನು ಬೆಳೆಯಲಾಗದೆ ಅಪಾರ ನಷ್ಟವನ್ನು ಅನುಭವಿಸುತ್ತಿದ್ದರು. ದಿನೇದಿನೆ ತಮ್ಮ ಪ್ರಾಣಗಳನ್ನು ತೆಗೆದುಕೊಳ್ಳುತ್ತಿದ್ದ ರೈತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಬಾಹ್ಯದಲ್ಲಿ ಬದಲಾವಣೆಗಳನ್ನು ಕಾಣುವ ಮೊದಲು, ಆ ಬದಲಾವಣೆಯು ನಮ್ಮ ಆಂತರ್ಯದಿಂದ ಬರಬೇಕು. ಹೃದಯವು ತೆರೆದಿದ್ದಾಗ ಸೇವೆ ಮಾಡದ ಹೊರತು ಬೇರೆ ಯಾವ ಆಯ್ಕೆಯೂ ಇರುವುದಿಲ್ಲ. ಈ ರೀತಿಯಾಗಿ ನಮ್ಮ ಸ್ವಯಂಸೇವಕರ ಜಾಲವು ಅನೇಕ ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ತಮ್ಮ ಆಂತರ್ಯದಲ್ಲಿ ಅವರು ಅನುಭವಿಸಿದ ಸಂತೋಷದಿಂದ ಸ್ಫೂರ್ತಿ ಪಡೆದ ಅವರೆಲ್ಲರೂ, ಇತರರಲ್ಲೂ ಅದೇ ಸಂತೋಷವನ್ನು ತರಲು ನಿರ್ಧರಿಸಿದರು. ಮೂಲಭೂತ ಹಂತದ ಗ್ರಾಮಸ್ಥರ ಬಳಿಗೆ ತಲುಪಿ, ಅವರಿಗೆಲ್ಲರಿಗೂ ಸ್ಫೂರ್ತಿ ನೀಡಿ, ಅವರಿಗೆ ಧ್ಯಾನ, ಉಸಿರಾಟ, ಯೋಗ ಮತ್ತಿನ್ನಿತರ ಅಭ್ಯಾಸಗಳನ್ನು ಅವರಿಗೆ ಕಲಿಸಿ, ಅವರ ಆಂತರ್ಯದಿಂದ ಅವರು ಸಂತೋಷವಾಗಿ, ಬಲಿಷ್ಠರಾಗಿರುವಂತೆ ಮಾಡಿದರು. ಅವರೊಡನೆ ಕೆಲಸ ಮಾಡಿ ನೂರಾರು ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದರು. ಇದರಿಂದ ಬರುವ ಮಳೆನೀರು ಭೂಮಿಯೊಳಗೆ, ಆ ಬಾವಿಗಳ ಮೂಲಕ ಹೊಕ್ಕುವಂತಾಯಿತು. ಕಾಡುಗಳ ಪುನಸ್ಥಾಪನಾ ಕಾರ್ಯವನ್ನು ಆರಂಭಿಸಿದೆವು. ಭೂಮಿಯಿಂದ ತೀವ್ರವಾಗಿ ನೀರನ್ನು ಹೀರಿಕೊಳ್ಳುವಂತಹ ಮರಗಳಾದ ಅಕೇಷಿಯ ಮರಗಳ ಬದಲಿಗೆ ಸ್ಥಳೀಯ ವೃಕ್ಷಗಳಾದ ಮಾವು, ಆಲದ ಮರ, ಹಾಗೂ ಇತರ ವೃಕ್ಷಗಳನ್ನು ನದಿ ಪಾತ್ರಗಳಲ್ಲಿ ನೆಡಲು ಆರಂಭಿಸಿದೆವು.
ಭೂ ಸಮೀಕ್ಷೆ ನಡೆಸಿದ ನಂತರ, ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದ ನಂತರ, ಸರಿಯಾದ ಜಾತಿಯ ಮರಗಳನ್ನು ನೆಟ್ಟಿದ್ದರಿಂದ, ಅನೇಕ ಸಾವಿರ ನೀರಿನ ಕೊಳವೆಗಳು ಮರುಜೀವ ಪಡೆದುಕೊಂಡದ್ದು ಪವಾಡಸದೃಶವಾಗಿತ್ತು. ಇಂದು 70ಕ್ಕೂ ಹೆಚ್ಚು ನದಿಗಳು, ಐದು ರಾಜ್ಯಗಳಲ್ಲಿ ವರ್ಷವಿಡೀ ಹರಿಯುತ್ತವೆ. ಹಕ್ಕಿಗಳು ಮತ್ತೆ ಬರಲಾರಂಭಿಸಿವೆ, ಮೋಡಗಳೂ ಸಹ.
ವಿದರ್ಭ ರೈತರಿಂದ ಧನ್ಯವಾದ
ಕಳೆದ ಮೇ ತಿಂಗಳಲ್ಲಿ ವಿದರ್ಭ ಪ್ರದೇಶದ ಸುಮಾರು ಸಾವಿರ ರೈತರು ನಮ್ಮ ಬೆಂಗಳೂರಿನ ಆಶ್ರಮಕ್ಕೆ ವಿಮಾನದಲ್ಲಿ ಬಂದು, ನಮ್ಮ ಸ್ವಯಂಸೇವಕರು ತಂದ ಪರಿವರ್ತನೆಗೆ ಧನ್ಯವಾದಗಳನ್ನು ಅರ್ಪಿಸಿದರು. ವಿದರ್ಭ ಪ್ರದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಗಳು ನಡೆಯುತ್ತಿತ್ತು. ಹಿಂದಿಗಿಂತಲೂ ಈಗ ಅವರೆಲ್ಲರೂ ನಾಲ್ಕು ಪಟ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ 19,500 ಗ್ರಾಮಗಳು ಇದರ ಲಾಭವನ್ನು ಪಡೆದುಕೊಂಡಿವೆ.
ಒಬ್ಬರು ಒತ್ತಡದಿಂದ ಮುಕ್ತವಾಗಿ, ಸ್ಪಷ್ಟವಾದಾಗ, ಅವರು ಸೂಕ್ಷ್ಮತೆಯನ್ನುಳ್ಳ ವ್ಯಕ್ತಿಗಳಾಗುತ್ತಾರೆ, ಅಕ್ಕರೆಯನ್ನು, ಆದರವನ್ನು, ಬದ್ಧತೆಯನ್ನು ತೋರುತ್ತಾರೆ. ಜನರ ಮಾನಸಿಕ ಆರೋಗ್ಯ ಬಗ್ಗೆ ಗಮನವನ್ನು ನೀಡಿ, ಅವರಿಗೆ ಸ್ಫೂರ್ತಿ ನೀಡಿ, ಸೇವೆ ಮಾಡಲು ಧಾರ್ಮಿಕ ಸಂಸ್ಥೆಗಳು ಪ್ರೇರೇಪಿಸಿದರೆ, ನಮ್ಮ ನದಿಗಳಿಗೆ ಮತ್ತೆ ಮರುಜೀವ ತರಬಹುದು. ಇದರಿಂದ ಸಹಜವಾಗಿಯೇ ಸಮೃದ್ಧಿ, ಸ್ಥಿರತೆ ಮತ್ತು ಶಾಂತಿಯು ಎಲ್ಲೆಡೆಯೂ ತುಂಬಿ ತುಳುಕುತ್ತಿರುತ್ತದೆ.