ದನಗಳ ಕಳ್ಳ ಸಾಗಣೆ (Cattle Smuggle) ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಅನುಬ್ರತ್ ಮಂಡಲ್ ಅವರನ್ನು ಸಿಬಿಐ ಬಂಧಿಸಿದಾಗ ಭಾರೀ ಸುದ್ದಿಯಾಯಿತು. ದನಗಳ ಕಳ್ಳ ಸಾಗಣೆ ಪ್ರಕರಣವನ್ನೂ ಸಿಬಿಐ ನಿರ್ವಹಣೆ ಮಾಡುವಂತಾಯಿತು ಎಂಬ ಮಾತುಗಳು ಕೇಳಿ ಬಂದವು. ಆದರೆ, ಈ ದನಗಳ ಕಳ್ಳ ಸಾಗಣೆ ಆಳ ಮತ್ತು ಅಗಲ ಬಗ್ಗೆ ಗಮನಿಹರಿಸಿದರೆ ಸಿಬಿಐ ಏಕೆ ಪ್ರಕರಣವನ್ನು ತನಿಖೆ ಮಾಡುತ್ತಿದೆ ಎಂಬುದು ಅರಿವಾಗುತ್ತದೆ! ಪಶ್ಚಿಮ ಬಂಗಾಳದ ಗಡಿಯಿಂದ ಬಾಂಗ್ಲಾದೇಶಕ್ಕೆ ದನಗಳನ್ನು ಕಳ್ಳ ಸಾಗಣೆಯೇ ತುಂಬ ಆಸಕ್ತಿಕರವಾಗಿದೆ. ಅನುಬ್ರತ್ ಮಂಡಲ್ ಬಂಧನದೊಂದಿಗೆ ಈ ಸಂಗತಿಗಳು ಈಗ ಬಹಿರಂಗವಾಗುತ್ತಿವೆ.
ಹೇಗೆ ಕಳ್ಳ ಸಾಗಣೆ?
ಈ ಕಳ್ಳ ಸಾಗಣೆಗೆ ನೋಟುಗಳ ನಂಬರೇ ಆಧಾರ! ಗಡಿಯಿಂದ ಬಾಂಗ್ಲಾ ದೇಶಕ್ಕೆ ಕಳುಹಿಸಲಾಗುವ ಪ್ರತಿ ದನಗಳ ಬ್ಯಾಚ್‌ಗೆ “ನೋಟು ಸಂಕೇತ’ಗಳನ್ನು ನೀಡಲಾಗಿರುತ್ತದೆ. ಹೇಗೆ ಎಂದರೆ, ನಿರ್ದಿಷ್ಟ ಮುಖಬೆಲೆಯ ನೋಟುಗಳನ್ನು ಅಂದರೆ 20 ರೂ., 100 ರೂ. ಹೀಗೆ ನೋಟುಗಳನ್ನು ಬ್ಯಾಂಕಿನಿಂದ ಪಡೆದುಕೊಳ್ಳುವ ಜವಾಬ್ದಾರಿಯನ್ನು ಒಂದು ಗುಂಪಿಗೆ ವಹಿಸಲಾಗುತ್ತದೆ. ಆ ಬಳಿಕ ದನಗಳೊಂದಿಗೆ ನೋಟುಗಳನ್ನು ಕೊಂಡೊಯ್ಯುವ ವ್ಯಕ್ತಿಯು ಗ್ರಾಹಕನಿಗೆ ತಾನು ತಂದಿರುವ ನೋಟುಗಳಲ್ಲಿನ ನಂಬರ್ ಅನ್ನು ತಿಳಿಸುತ್ತಾನೆ. ಆ ಬಳಿಕ ದನಗಳು ಮತ್ತು ಹಣದ ವಿನಿಮಯ ನಡೆಯುತ್ತದೆ. ಈ ಬಗ್ಗೆ ಮೊದಲೇ ಗ್ರಾಹಕನಿಗೆ ಮಾಹಿತಿ ನೀಡಲಾಗಿರುತ್ತದೆ. ಹೀಗೆ ನಿರ್ದಿಷ್ಟ ದನಗಳ ಗುಂಪಿನ ವ್ಯಾಪಾರ ನಡೆದು ಹೋಗುತ್ತದೆ.
ಬಿಎಸ್ಎಫ್‌ಗೂ ಹಣ ಸಂದಾಯ?
ಕೆಲವು ಮೂಲಗಳ ಪ್ರಕಾರ, ಈ ವ್ಯವಹಾರದಲ್ಲಿ ಗಡಿಯಲ್ಲಿ ಕಾರ್ಯ ನಿರ್ಹವಹಿಸುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಲ್ಲಿ ಕೆಲಸ ಮಾಡುವ ಕೆಲವರು ಸ್ಮಗ್ಲರ್‌ಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಪಡೆದುಕೊಳ್ಳುತ್ತಾರೆ! ಜತೆಗೆ, ಆ ಪ್ರದೇಶ ವ್ಯಾಪ್ತಿಯ ರಘುನಾಥಗಂಜ್ ಮತ್ತು ಸುತಿ ಪೊಲೀಸ್ ಠಾಣೆಗಳು ಕೂಡ ಇದರಿಂದ ಹೊರತಾಗಿಲ್ಲ. ಹಾಗಾಗಿ, ಸಿಬಿಐ ತನಿಖೆ ವ್ಯಾಪ್ತಿಯಲ್ಲಿ ಈ ಪೊಲೀಸ್ ಸ್ಟೇಷನ್‌ಗಳು ಸೇರಿಸಿಕೊಂಡಿವೆ.
ಎನಾಮುಲ್ ಹಕ್ ಮಾಸ್ಟರ್‌ಮೈಂಡ್?
ದನಗಳ ಕಳ್ಳ ಸಾಗಣೆ(Cattle Smuggle) ಪ್ರಕರಣದಲ್ಲಿ ಟಿಎಂಸಿ ಪ್ರಮುಖ ನಾಯಕ ಅನುಬ್ರತ್ ಬಂಧನ ನಂತರ ಮತ್ತೊಬ್ಬ ಪ್ರಮುಖ ಆರೋಪಿ ಎಂದರೆ, ಅಧು ಎನಾಮುಲ್ ಹಕ್. ಈ ವ್ಯಕ್ತಿಯೇ ದನಗಳ ಕಳ್ಳ ಸಾಗಣೆಯ ಇಡೀ ಜಾಲದ ಮಾಸ್ಟರ್ ಮೈಂಡ್. ಎನಾಮುಲ್ ಹಕ್ ಬಂಧನದ ಬಳಿ ದನಗಳ ಕಳ್ಳ ಸಾಗಣೆ ಪ್ರಮಾಣವು ಸಾಕಷ್ಟು ಕುಸಿತ ಕಂಡಿದ್ದು, ಇಡೀ ಜಾಲದ ಮೇಲೆ ಹಕ್ ಹೊಂದಿದ್ದ ಹಿಡಿತವನ್ನು ಇದು ತೋರಿಸುತ್ತದೆ.
ದನಗಳು ಎಲ್ಲಿಂದ ತರಲಾಗುತ್ತದೆ?
ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆ ಮಾಡಲಾಗುವ ದನಗಳನ್ನು ದೇಶದ ನಾಲ್ಕೂ ನಿಟ್ಟಿನಿಂದ ತರಲಾಗುತ್ತದೆ. ಹೀಗೆ ತರಲಾದ ದನಗಳನ್ನು ಪಶ್ಚಿಮ ಬಂಗಾಳದ ನಿರ್ದಿಷ್ಟ ಸ್ಥಳಗಳ ಮೂಲಕ ಕಳ್ಳ ಸಾಗಣೆ ಮಾಡಲಾಗುತ್ತದೆ. ಮುಖ್ಯವಾಗಿ ಪಶ್ಚಿಮ ಭಾರತದ ಪ್ರದೇಶಗಳಿಂದ ದನಗಳನ್ನು ತರಲಾಗುತ್ತದೆ. ವಿಶೇಷವಾಗಿ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳಿಂದ ತರಲಾಗುವ ದನಗಳನ್ನು ಗಡಿಯಲ್ಲಿ ತಮ್ಮ ಜಾಲದ ಮೂಲಕ ಆಚೆ ಕಳುಹಿಸಲಾಗುತ್ತದೆ. ಈ ರಾಜ್ಯಗಳಿಂದ ಕದ್ದು ತರಲಾಗುವ ದನಗಳನ್ನು ಪಶ್ಚಿಮ ಬಂಗಾಳದ ಬಂಕುರಾ, ಪುರುಲಿಯಾ ಮತ್ತು ಮುರ್ಶಿದಾಬಾದ್ ಜಿಲ್ಲೆಗಳ ಮೂಲಕವೇ ರವಾನಿಸಲಾಗುತ್ತದೆ.
ಹಾಗೆಯೇ, ಬಿಹಾರದ ಗಂಗಾ ಪ್ರದೇಶದಿಂದ ತರಲಾಗುವ ದನಗಳನ್ನು ಇಸ್ಲಾಮಪುರ್-ರಾಯಗಂಜ್ ಮೂಲಕ ರಘುನಾಥಗಂಜ್ ಮತ್ತು ಸುತಿಗೆ ಪ್ರವೇಶ ಪಡೆದುಕೊಳ್ಳುತ್ತವೆ. ಮತ್ತೊಂದೆಡೆ ಇಸ್ಲಾಮಪುರ್‌ದಿಂದ ಅಸ್ಸಾಮ್‌ಗೂ ಕಳುಹಿಸಲಾಗುತ್ತದೆ. ದಕ್ಷಿಣ ಭಾರತದಿಂದ ತರಲಾಗುವ ದನಗಳನ್ನು ಪಶ್ಚಿಮ ಮಿಡ್ನಾಪುರ ಮತ್ತು ಜಾರ್ಗ್ರಾಮ್ ಮೂಲಕ ಉತ್ತರ 24 ಪರಗಣ ಜಿಲ್ಲೆಯನ್ನು ಸೇರುತ್ತವೆ.
ಹೀಗೆ ದೇಶದ ವಿವಿಧ ಭಾಗಗಳಿಂದ ತರಲಾಗುವ ದನಗಳನ್ನು ತುಂಬ ವ್ಯವಸ್ಥಿತವಾಗಿ ಪಶ್ಚಿಮ ಬಂಗಾಳದ ಹಲುವ ಎಂಟ್ರಿ ಪಾಯಿಂಟ್‌ಗಳ ಮೂಲಕ ಕಳ್ಳ ಸಾಗಣೆಯನ್ನು ಮಾಡಲಾಗುತ್ತಿದೆ. ಇಷ್ಟು ವ್ಯವಸ್ಥಿತವಾಗಿ ನಡೆಯುವ ಕಳ್ಳ ಸಾಗಣೆ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತಿತರು ಬೆಂಬಲ ಇದ್ದೇ ಇರುತ್ತದೆ. ಸಿಬಿಐ ಈಗ ನಡೆಸುತ್ತಿರುವ ತನಿಖೆಯಿಂದ ಸಾಕಷ್ಟು ಸಂಗತಿಗಳು ಹೊರಗೆ ಬೀಳುತ್ತಿವೆ. ಮೇಲ್ನೋಟಕ್ಕೆ ತುಂಬ ಸಿಂಪಲ್ ಆಗಿ ಕಾಣುವ ಈ ಕಳ್ಳ ವ್ಯವಹಾರವು ಕೆದಕಿದಷ್ಟು ಸಾಕಷ್ಟು ಆಳಕ್ಕೆ ಇಳಿಯುತ್ತಿರುವ ಅನುಭವವಾಗುತ್ತಿದೆ.
ಇದನ್ನು ಓದಿ| Anubrata Mondal | ಸಿಎಂ ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್ರನ್ನು ಬಂಧಿಸಿದ ಸಿಬಿಐ