Site icon Vistara News

Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Wayanad Landslide

ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯಲ್ಲಿ ಮಂಗಳವಾರ (ಜುಲೈ 30) ಸಂಭವಿಸಿದ ಭೀಕರ ಭೂಕುಸಿತಗಳಿಗೆ (Wayanad Landslide Explainer) ಜನ ನಲುಗಿ ಹೋಗಿದ್ದಾರೆ. ಸಾವಿನ ಸಂಖ್ಯೆ 100 ದಾಟಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಮೆಪ್ಪಾಡಿ (Meppadi) ವ್ಯಾಪ್ತಿಯ ಪ್ರದೇಶಗಳು ಮಸಣಗಳ ರೀತಿ ಭಾಸವಾಗುತ್ತಿವೆ. ಎಲ್ಲಿ ನೋಡಿದರೂ ನೀರು, ಕೆಸರು, ಭೂಮಿ ಕುಸಿದ ದೃಶ್ಯಗಳೇ ಕಣ್ಣಿಗೆ ರಾಚುತ್ತಿವೆ. ಮಕ್ಕಳು, ಮಹಿಳೆಯರ ಶವಗಳನ್ನು ನೋಡಿದಾಗ ಮನಸ್ಸು ಕಲ್ಲವಿಲಗೊಳ್ಳುತ್ತದೆ. ಆದರೆ, ಕೇರಳದಲ್ಲಿ (Kerala Rains) ಪ್ರತಿ ಭಾರಿ ಮಳೆಯಾದಾಗಲೂ ಭೂಮಿ ಕುಸಿಯುತ್ತದೆ. ಹೀಗೆ ಕುಸಿದಾಗಲೆಲ್ಲ, ದುರಂತ ಸಂಭವಿಸಿದಾಗಲೆಲ್ಲ ಮನುಷ್ಯನೇ, ಆತನ ದುರಾಸೆಯೇ ಇದಕ್ಕೆಲ್ಲ ಕಾರಣ ಎಂಬ ಕಟು ಸತ್ಯವು ಕಾಣಿಸುತ್ತದೆ.

ಹೌದು, ಕೇರಳದ ಭೂಮಿಯ ಕುರಿತು, ಅಲ್ಲಿನ ಪರಿಸರದ ಕುರಿತು, ಭೂಕುಸಿತದ ಸಾಧ್ಯತೆಗಳ ಕುರಿತು ತಜ್ಞರು ದಶಕಕ್ಕಿಂತ ಹೆಚ್ಚು ಅವಧಿಯಿಂದಲೂ ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಪ್ರಕೃತಿ, ನಿಸರ್ಗದ ಮೇಲೆ ಮನುಷ್ಯ ವಿಕೃತಿ, ಕೈಗಾರೀಕರಣ, ಅರಣ್ಯ ನಾಶ, ಬೆಟ್ಟದಲ್ಲಿ ಕಲ್ಲುಗಳನ್ನು ತೆಗೆದು ಕೃಷಿ ಚಟುವಟಿಕೆಗಳನ್ನು ಕೈಗೊಂಡು ಪರಿಸರವನ್ನು, ಭೂಮಿಯನ್ನು ಹಾಳು ಮಾಡಲಾಗಿದೆ. ಇದೆಲ್ಲದರ ಪರಿಣಾಮವೇ, ಕೇರಳದಲ್ಲಿ ಒಂದು ದಿನ ಜೋರು ಮಳೆ ಬಂದರೂ ಭೂಮಿ ಕುಸಿಯುವಂತಾಗಿದೆ, ನೆಮ್ಮದಿ ಕಸಿಯುವಂತಾಗಿದೆ.

ವಯನಾಡು ಭೂಸಿತಕ್ಕೆ ಪ್ರಮುಖ ಕಾರಣಗಳು

13 ವರ್ಷಗಳ ಹಿಂದೆಯೇ ಗಾಡ್ಗೀಳ್‌ ವರದಿ ಎಚ್ಚರಿಕೆ

ಮಾಧವ ಗಾಡ್ಗೀಳ್‌ ವರದಿ 2011ರಲ್ಲಿಯೇ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು (WGEEP) ರಚಿಸಿದ ವರದಿಯಲ್ಲಿ ಕೇರಳದ ಇಡುಕ್ಕಿ ಹಾಗೂ ವಯನಾಡು ಕುರಿತು ಮಹತ್ವವದ ಎಚ್ಚರಿಕೆ ನೀಡಿತ್ತು. ಎರಡೂ ಜಿಲ್ಲೆಗಳು ಪರಿಸರ ಸೂಕ್ಷ್ಮ ವಲಯಗಳು ಎಂದು ಉಲ್ಲೇಖಿಸಿತ್ತು. ಎರಡೂ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಅರಣ್ಯೇತರ ಚಟುವಟಿಕೆಗಳು, ಅರಣ್ಯ ನಾಶ, ಕಂಪನಿ, ಕಚೇರಿಗಳನ್ನು ನಿರ್ಮಾಣ ಮಾಡಬಾರದು ಎಂದು ಎಚ್ಚರಿಸಿತ್ತು.

ಕೇರಳದ ಶೇ.13ರಷ್ಟು ಭೂಮಿ ದುರ್ಬಲ

ಕೇರಳದ ಇಡುಕ್ಕಿ, ಪಾಲಕ್ಕಾಡ್‌, ಮಲಪ್ಪುರಂ, ಪಥಣಂತಿಟ್ಟ ಹಾಗೂ ವಯನಾಡು ಜಿಲ್ಲೆಗಳನ್ನು ಅತಿ ದುರ್ಬಲ ಪ್ರದೇಶಗಳು ಎಂಬುದಾಗಿ ಇತ್ತೀಚಿನ ವರದಿಗಳು ತಿಳಿಸಿವೆ. ಕೇರಳದ ಪಶು ಸಂಗೋಪನೆ ಹಾಗೂ ಸಮುದ್ರ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಕೇರಳದಲ್ಲಿ 2018ರ ಬಳಿಕ ಭೂಕುಸಿತಗಳ ಪ್ರಮಾಣವು ಶೇ.3.46ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹವಾಮಾನ ವೈಪರೀತ್ಯ, ಕೇರಳ ಮತ್ತು ಸಾವು

ಭಾರಿ ಮಳೆ, ಭೂಕುಸಿತ, ಪ್ರವಾಹ, ಸಿಡಿಲು ಸೇರಿ ಹವಾಮಾನ ವೈಪರೀತ್ಯದಿಂದ ಕೇರಳದಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಕೇರಳದಲ್ಲಿ 2018ರಲ್ಲಿ ಉಂಟಾದ ಪ್ರವಾಹದಲ್ಲಿ ಕೇವಲ 3 ದಿನಗಳಲ್ಲಿಯೇ 483 ಜನ ಮೃತಪಟ್ಟಿದ್ದರು. ದೇವರ ನಾಡಿನಲ್ಲಿ 1961ರಿಂದ 2016ರ ಅವಧಿಯಲ್ಲಿ ಭೂಕುಸಿತದಿಂದಾಗಿಯೇ 295 ಮಂದಿ ಮೃತಪಟ್ಟಿದ್ದರು. 2019 ಹಾಗೂ 2020ರಲ್ಲಿಯೇ ಹವಾಮಾನ ವೈಪರೀತ್ಯಕ್ಕೆ 100ಕ್ಕೂ ಅಧಿಕ ಜನ ಬಲಿಯಾಗಿದ್ದರು.

ಇದನ್ನೂ ಓದಿ: Shiradi Landslide: ಕೇರಳದ ಬೆನ್ನಿಗೇ ಶಿರಾಡಿ ಘಾಟಿಯಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ ಸಿಲುಕಿದ ಕಾರುಗಳು, ಟ್ಯಾಂಕರ್‌

Exit mobile version