ಕೋಲ್ಕೊತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್ಪ್ರೆಸ್ (Kanchanjunga Express) ರೈಲಿಗೆ ಗೂಡ್ಸ್ ರೈಲು ಡಿಕ್ಕಿಯಾಗಿ (Train Accident) 15 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಈ ಮಾರ್ಗದಲ್ಲಿ ರೈಲುಗಳ ಸುರಕ್ಷತೆಗಾಗಿ ಅಳವಡಿಸಿಕೊಳ್ಳಲಾಗಿರುವ ಕವಚ (Kavach) ಸುರಕ್ಷಾ ವ್ಯವಸ್ಥೆ ಇಲ್ಲದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹಾಗಾದರೆ, ಏನಿದು ಕವಚ ಸುರಕ್ಷಾ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.
ಏನಿದು ಕವಚ?
ಆತ್ಮನಿರ್ಭರ ಭಾರತದ ಭಾಗವಾಗಿ 2022-23ರಲ್ಲಿ ರೈಲುಗಳ ಸುರಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಳಕ್ಕಾಗಿ ಸುಮಾರು 2,000 ಕಿ.ಮೀ. ಮಾರ್ಗವನ್ನು ಕವಚ ಸುರಕ್ಷತಾ ವಿಧಾನದ ಅಡಿಯಲ್ಲಿ ತರಲಾಗುವುದು ಎಂದು ಸಚಿವಾಲಯ ಹೇಳಿತ್ತು. ಕವಚ ಎಂಬುದು ಸೇಫ್ಟಿ ಇಂಟೆಗ್ರಿಟಿ ಲೆವೆಲ್ 4 ಮಾನದಂಡಗಳಾಗಿವೆ. ಇದನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್ಡಿಎಸ್ಒ) ಅಭಿವೃದ್ಧಿಪಡಿಸಿದೆ. ಕವಚ ವ್ಯವಸ್ಥೆಯು ರೈಲುಗಳು ಕೆಂಪು ಸಿಗ್ನಲ್ ದಾಟಿ ಮುಂದಕ್ಕೆ ಹೋಗುವುದನ್ನು ತಡೆಯುತ್ತದೆ. ಒಂದು ವೇಳೆ ದಾಟಿದರೆ ಸ್ವಯಂಚಾಲಿತ ಬ್ರೇಕಿಂಗ್ ವ್ಯವಸ್ಥೆ ಆ್ಯಕ್ವಿವೇಟ್ ಆಗುತ್ತದೆ. ಹೀಗಾಗಿ ಎರಡು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯ ಸಂಭವ ಕಡಿಮೆ.
रील मंत्री जी सिर्फ रील ही बनाओगे, साधारण ट्रेन चला नहीं पा रहे हो और सपना बुलेट ट्रेन का दिखा रहे हो। अपने kavach कुंडल किसे दे आए हो ??#TrainAccident #WestBengal#अश्विनी_वैष्णव_इस्तीफा_दो pic.twitter.com/3wNfaHqXmY
— Paran Murmu (@ParanMurmu1) June 17, 2024
ಕವಚ ಕಾರ್ಯನಿರ್ವಹಿಸುವುದು ಹೇಗೆ?
ಯಾವುದೇ ತುರ್ತು ಸಂದರ್ಭದಲ್ಲಿ ರೈಲು ಅಪಘಾತ ತಡೆಯುವುದೇ ಕವಚದ ಉದ್ದೇಶವಾಗಿದೆ. ರೈಲು ಹಳಿಗಳು, ಸ್ಟೇಷನ್ ಯಾರ್ಡ್ ಹಾಗೂ ಸಿಗ್ನಲ್‌ಗಳಿಗೆ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಟ್ಯಾಗ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲುಗಳು ಎದುರು ಬದಿರಾಗಿ ಒಂದೇ ಹಳಿಯ ಮೇಲೆ ಚಲಿಸಿದರೂ ಎರಡೂ ಡಿಕ್ಕಿಯಾಗುವ ಮುನ್ನ ಸ್ವಯಂಚಾಲಿತವಾಗಿಯೇ ರೈಲುಗಳು ಬ್ರೇಕ್ ಹಾಕಿಕೊಳ್ಳುತ್ತವೆ. ಲೋಕೊ ಪೈಲಟ್ ಬ್ರೇಕ್ ಹಾಕುವುದನ್ನು ಮರೆತರೂ, ಸಿಗ್ನಲ್‌ನಿಂದಾಗಿಯೇ ಸ್ವಯಂಚಾಲಿತವಾಗಿ ಬ್ರೇಕ್ ಹಾಕಿಕೊಳ್ಳುತ್ತವೆ.
ಅಷ್ಟೇ ಅಲ್ಲ, ಒಂದು ರೈಲಿನ ಹಿಂದೆ ಮತ್ತೊಂದು ರೈಲು ಚಲಿಸುವಾಗ ಹಿಂದಿನ ರೈಲು ನಿಧಾನಗತಿಯಲ್ಲಿ ಸಾಗುವುದು, ರೈಲಿನ ಸಮೀಪ ಹೋದಾಗ ಬ್ರೇಕ್ ಹಾಕುವುದು, ಹವಾಮಾನ ವೈಪರೀತ್ಯದಿಂದ ಮಂದ ಬೆಳಕು ಇದ್ದಾಗ ಬ್ರೇಕ್ ಹಾಕುವುದು, ಗೇಟ್‌ಗಳು ಅಡ್ಡ ಬಂದಾಗ ಬ್ರೇಕ್ ಹಾಕುವುದು ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಲೋಕೊಮೋಟಿವ್ ಪೈಲಟ್ ಬ್ರೇಕ್ ಹಾಕುವುದನ್ನು ಮರೆತರೂ, ಸ್ವಯಂಚಾಲಿತವಾಗಿ ಕವಚ ವ್ಯವಸ್ಥೆಯ ಅಡಿಯಲ್ಲಿ ಬ್ರೇಕ್ ಹಾಕಿಕೊಳ್ಳುತ್ತವೆ.
ದೇಶಾದ್ಯಂತ ವಿಸ್ತರಣೆ ಯಾವಾಗ?
ಕವಚ ಸುರಕ್ಷಾ ವಿಧಾನದ ಅಳವಡಿಕೆಯಿಂದ ರೈಲುಗಳ ಅಪಘಾತವು ಗಣನೀಯವಾಗಿ ಕುಸಿದಿದೆ. ಆದರೆ, ಇದುವರೆಗೆ 1,500 ಕಿಲೋಮೀಟರ್ ರೈಲು ಮಾರ್ಗಕ್ಕೆ ಮಾತ್ರ ಕವಚ ಅಳವಡಿಸಲಾಗಿದೆ. ಆರಂಭಿಕ ಹಂತದಲ್ಲಿ 2 ಸಾವಿರ ಕಿಲೋಮೀಟರ್ ಹಾಗೂ ಹಂತ ಹಂತವಾಗಿ 34 ಸಾವಿರ ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ ಕವಚ ಅಳವಡಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಭಾರತೀಯ ರೈಲ್ವೆಯು ಸುಮಾರು 1 ಲಕ್ಷ ಕಿಲೋಮೀಟರ್ ಮಾರ್ಗವನ್ನು ಹೊಂದಿರುವ ಕಾರಣ ಎಲ್ಲ ಮಾರ್ಗಗಳಲ್ಲೂ ಕವಚ ಅಳವಡಿಸಲು ಸಮಯ ಬೇಕಾಗುತ್ತದೆ.
ಇದನ್ನೂ ಓದಿ: Train Accident: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ; ಕನಿಷ್ಠ 15 ಮಂದಿ ಸಾವು