Site icon Vistara News

INS Jatayu: ಮಾಲ್ಡೀವ್ಸ್‌ ಬಳಿಯೇ ನೌಕಾ ನೆಲೆ ನಿರ್ಮಿಸಿದ ಭಾರತ; ಇದು ಹೇಗೆ ಗೇಮ್‌ ಚೇಂಜರ್?

INS Jatayu

Why INS Jatayu, India’s new naval base in Lakshadweep, matters

ನವದೆಹಲಿ: ಚೀನಾ ಕೊಡುವ ಸಾಲ, ಮೂಲ ಸೌಕರ್ಯ ಯೋಜನೆಗಳು ಹಾಗೂ ಆರ್ಥಿಕ ನೆರವಿನ ಹಿಂದೆ ಬಿದ್ದಿರುವ ಮಾಲ್ಡೀವ್ಸ್‌, ಭವಿಷ್ಯದ ಅಪಾಯವನ್ನೂ ಲೆಕ್ಕಿಸದೆ ಭಾರತದ ಜತೆ ರಾಜತಾಂತ್ರಿಕ ಸಂಘರ್ಷಕ್ಕೆ (India Maldives Row) ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದಕ್ಕೇ ಬಾಯಿಬಡಿದುಕೊಂಡಿದೆ. ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಭಾರತಕ್ಕೇ ಗಡುವು ನೀಡಿದೆ. ಇದರ ಬೆನ್ನಲ್ಲೇ, ಮಾಲ್ಡೀವ್ಸ್‌ನಿಂದ ಕೇವಲ 130 ಕಿಲೋಮೀಟರ್‌ ದೂರದಲ್ಲಿರುವ, ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿಯೇ ಭಾರತೀಯ ನೌಕಾಪಡೆಯು (Indian Navy) ‘ಐಎನ್‌ಎಸ್‌ ಜಟಾಯು’ ಎಂಬ (INS Jatayu) ನೌಕಾನೆಲೆಯನ್ನು ಆರಂಭಿಸುವ ಮೂಲಕ ತಿರುಗೇಟು ನೀಡಿದೆ.

ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್‌ ಬಾಜ್‌ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಲಕ್ಷದ್ವೀಪದಲ್ಲೇ ನೌಕಾಪಡೆಯು ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್.‌ ಹರಿಕುಮಾರ್‌ ಅವರು ಐಎನ್‌ಎಸ್‌ ಜಟಾಯು ನೌಕಾನೆಲೆಯನ್ನು ಉದ್ಘಾಟಿಸಿದರು. ಇದಾದ ಬಳಿಕ ಮಾತನಾಡಿದ ಅವರು, “ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕಾರಣಗಳಿಂದಾಗಿ ಐಎನ್‌ಎಸ್‌ ಜಟಾಯು ಪ್ರಾಮುಖ್ಯತೆ ಪಡೆದಿದೆ” ಎಂದು ತಿಳಿಸಿದರು.

ನೌಕಾನೆಲೆಯಿಂದ ಏನೆಲ್ಲ ಉಪಯೋಗ? ಏಕೆ ಪ್ರಮುಖ?

  1. ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು
  2. ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ, ಅಪರಾಧ ತಡೆಗಟ್ಟಲು ಅನುಕೂಲ
  3. ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ
  4. ಕ್ಷಿಪ್ರವಾಗಿ ಡ್ರೋನ್‌, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಸಹಕಾರಿ
  5. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ, ದಾಳಿ ನಡೆದರೆ ವೇಗವಾಗಿ ತಿರುಗೇಟು
  6. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡುವುದು
  7. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಿ, ಕ್ರಮ ತೆಗೆದುಕೊಳ್ಳುವುದು
  8. ಚೀನಾದ ಕುಮ್ಮಕ್ಕಿನಿಂದ ಸಮುದ್ರ ಪ್ರದೇಶದಲ್ಲಿ ಮಾಲ್ಡೀವ್ಸ್‌ ಆಕ್ರಮಣಕಾರಿ ನೀತಿ ಅನುಸರಿಸಿದರೆ ತಿರುಗೇಟು

ಇದನ್ನೂ ಓದಿ: Maldives: ಚೀನಾ ಜತೆ ಒಪ್ಪಂದದ ಬೆನ್ನಲ್ಲೇ ಮಾಲ್ಡೀವ್ಸ್‌ ಉದ್ಧಟತನ;‌ ಭಾರತ ಸೇನೆಗೆ ಡೆಡ್‌ಲೈನ್

ಜಟಾಯು ಎಂಬ ಹೆಸರೇ ಏಕೆ?

ರಾಮಾಯಣದ ಜಟಾಯು ಹೆಸರನ್ನೇ ಲಕ್ಷದ್ವೀಪದ ನೌಕಾನೆಲೆಗೆ ಇಡಲಾಗಿದೆ. ರಾವಣನು ಸೀತೆಯನ್ನು ಅಪಹರಣ ಮಾಡಲು ಮುಂದಾದಾಗ ಆತನನ್ನು ಮೊದಲು ತಡೆಯಲು ಯತ್ನಿಸಿದ್ದೇ ಜಟಾಯು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೀತೆಯ ರಕ್ಷಣೆಗೆ ಮುಂದಾದ ಜಟಾಯು ನಿಸ್ವಾರ್ಥವು ಮಾದರಿಯಾಗಿದೆ. ಹಾಗಾಗಿ, ದೇಶದ ರಕ್ಷಣೆ, ಸಮುದ್ರ ಪ್ರದೇಶದಲ್ಲಿ ಹೆಚ್ಚಿನ ನಿಗಾ, ಸ್ವಾರ್ಥ ಲೆಕ್ಕಿಸದೆ ಹೋರಾಟ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ನೌಕಾನೆಲೆಗೆ ಜಟಾಯು ಎಂದು ಹೆಸರಿಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version