ನವದೆಹಲಿ: ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ (Kamal Nath) ಅವರು ಶನಿವಾರ (ಫೆಬ್ರವರಿ 17) ದೆಹಲಿಗೆ ತೆರಳಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಅವರು ಕಾಂಗ್ರೆಸ್ (Congress) ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಜತೆಗಿನ ಮುನಿಸಿನಿಂದ ಬೇಸತ್ತಿರುವ ಅವರು ಬಿಜೆಪಿ (BJP) ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಕಮಲ್ ನಾಥ್ ಅವರು ಕಾಂಗ್ರೆಸ್ ಜತೆ ಮುನಿಸಿಕೊಂಡಿರುವುದೇಕೆ? ಪಕ್ಷದ ಜತೆ ಅವರ ನಂಟು ಹೇಗಿತ್ತು? ಯಾವ ಕಾರಣಕ್ಕಾಗಿ ಅವರು ಸಿಟ್ಟಾಗಿದ್ದಾರೆ ಎಂಬ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ರಾಜ್ಯಸಭೆ ಚುನಾವಣೆಗಾಗಿ ಮುನಿಸು?
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಿಂದ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್‌ನಾಥ್ ಅವರು ಪಕ್ಷದ ನಾಯಕರ ಜತೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಆಪ್ತ ಅಶೋಕ್ ಸಿಂಗ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿದ ಕಾರಣ ಕಮಲ್‌ನಾಥ್ ಸಿಂಗ್ ಅವರು ನಾಯಕರ ಜತೆ ಮುನಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
#WATCH | Former Madhya Pradesh CM and Congress leader Kamal Nath arrives at Delhi airport. pic.twitter.com/jbN8huFp4o
— ANI (@ANI) February 17, 2024
ಇಂದಿರಾ ಗಾಂಧಿ ತೃತೀಯ ಪುತ್ರ ಎಂದೇ ಖ್ಯಾತಿ
ಕಮಲ್ ನಾಥ್ ಅವರು ಸುಮಾರು 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಶಾಸಕನಿಂದ ಮುಖ್ಯಮಂತ್ರಿ ಗಾದಿವರೆಗೆ ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲೂ, ಇಂದಿರಾ ಗಾಂಧಿ ಅವರಿಗೆ ಅತ್ಯಾಪ್ತರಾಗಿದ್ದ ಕಮಲ್‌ನಾಥ್ ಅವರು, ಇಂದಿರಾ ಗಾಂಧಿಯವರ ತೃತೀಯ ಸುಪುತ್ರ ಎಂದೇ ಖ್ಯಾತರಾಗಿದ್ದರು. ಹಾಗಾಗಿ, ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯಲಿಕ್ಕಿಲ್ಲ ಎಂಬುದು ಕಾಂಗ್ರೆಸ್ ನಾಯಕರದ್ದೇ ಅಂದಾಜಾಗಿದೆ.
ಬಿಜೆಪಿ ಸೇರ್ಪಡೆ ನಿಶ್ಚಿತ ಎಂಬ ಚರ್ಚೆ ಏಕೆ?
ಕಮಲ್‌ನಾಥ್ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಇದಕ್ಕೂ ಮೊದಲು ವದಂತಿಗಳು ಹರಡಿದ್ದವು. ಈಗ, ಬಿಜೆಪಿ ವಕ್ತಾರ ನರೇಂದ್ರ ಸಲುಜಾ ಅವರು ಕಮಲ್‌ನಾಥ್ ಹಾಗೂ ನಕುಲ್‌ನಾಥ್ ಅವರ ಜತೆಗಿನ ಫೋಟೊವನ್ನು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಜೈ ಶ್ರೀರಾಮ್” ಎಂದು ಬರೆದುಕೊಂಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ 77 ವರ್ಷದ ಕಮಲ್‌ನಾಥ್ ಅವರು ದೆಹಲಿಗೆ ಆಗಮಿಸಿದ್ದು, ಅವರು ಬಿಜೆಪಿ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಕಮಲ್‌ನಾಥ್ ಹೇಳುವುದೇನು?
ದೆಹಲಿಯಲ್ಲಿ ಬೀಡು ಬಿಟ್ಟಿರುವ, ಎರಡು ದಿನದಲ್ಲೇ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕಮಲ್‌ನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. “ನಾನೇನಾದರೂ ಅಂತಹ ತೀರ್ಮಾನ ತೆಗೆದುಕೊಂಡರೆ (ಬಿಜೆಪಿ ಸೇರುವ) ಮೊದಲು ನಿಮಗೇ ಹೇಳುತ್ತೇನೆ” ಎಂದು ಮಾಧ್ಯಮದವರ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: Kamal Nath: ದೆಹಲಿಗೆ ಆಗಮಿಸಿದ ಕಮಲ್‌ನಾಥ್; ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ?
ವಿಧಾನಸಭೆ ಚುನಾವಣೆ ಸೋಲು ಕಾರಣ?
ಭಾರಿ ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ಇದರ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಕಮಲ್‌ನಾಥ್ ಅವರೊಬ್ಬರ ಮೇಲೆಯೇ ಹೊರಿಸಿದೆ. ಇದು ಕೂಡ ಕಮಲ್‌ನಾಥ್ ಅವರು ಮುನಿಸಿಕೊಳ್ಳಲು ಕಾರಣ ಎನ್ನಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ