Site icon Vistara News

Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!

Fact Check

Fact Check: Dainik Bhaskar DID NOT predict INDIA bloc lead in 10 states, viral survey is FAKE

ನವದೆಹಲಿ: ಸಾಮಾಜಿಕ ಜಾಲತಾಣಗಳು ನಮಗೆ ಎಷ್ಟು ಮಾಹಿತಿ ನೀಡುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ನಕಲಿ ಸುದ್ದಿಗಳನ್ನು ಹರಡುವ ತಾಣಗಳಾಗಿಯೂ ಬದಲಾಗಿವೆ. ಅದರಲ್ಲೂ, ಚುನಾವಣೆ ಸಂದರ್ಭದಲ್ಲಂತೂ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಇಂಡಿಯಾ ಒಕ್ಕೂಟಕ್ಕೆ (India Bloc) 10 ರಾಜ್ಯಗಳಲ್ಲಿ ಭಾರಿ ಮುನ್ನಡೆ ಸಿಗಲಿದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ (Dainik Bhaskar) ಹಿಂದಿ ಪತ್ರಿಕೆಯ ಸಮೀಕ್ಷೆ ತಿಳಿಸಿದೆ ಎಂಬ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹಾಗಾದರೆ, ಏನಿದು ವರದಿ? ಸಮೀಕ್ಷೆಯ ಅಂಕಿ-ಅಂಶಗಳು ನಿಜವೇ (Fact Check) ಎಂಬುದರ ಫ್ಯಾಕ್ಟ್‌ ಚೆಕ್‌ ಇಲ್ಲಿದೆ.

ಏನಿದು ವೈರಲ್‌ ಆದ ವರದಿ?

ಲೋಕಸಭೆ ಚುನಾವಣೆಗೂ ಮುನ್ನ ದೈನಿಕ ಭಾಸ್ಕರ್‌ ಹಿಂದಿ ಪತ್ರಿಕೆಯು ಸಮೀಕ್ಷೆಯೊಂದನ್ನು ನಡೆಸಿದೆ. ಸಮೀಕ್ಷೆಯ ವರದಿ ಪ್ರಕಾರ, ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಭಾರಿ ಮುನ್ನಡೆ ಪಡೆಯಲಿದೆ. ಅದರಲ್ಲೂ, 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟವು 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟವು ವಾಶ್‌ಔಟ್‌ ಆಗಲಿದೆ. ನರೇಂದ್ರ ಮೋದಿ ಅವರ ವರ್ಚಸ್ಸು ಈ ಬಾರಿ ಬಿಜೆಪಿಗೆ ವೋಟುಗಳನ್ನು ತಂದುಕೊಡಲ್ಲ” ಎಂಬ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೆಲವು ಕಾಂಗ್ರೆಸ್‌ ನಾಯಕರು ಕೂಡ ಇದನ್ನು ಹಂಚಿಕೊಂಡಿದ್ದಾರೆ.

ವಾಸ್ತವಾಂಶ ಏನು?

ಇಂಡಿಯಾ ಒಕ್ಕೂಟವು ಭಾರಿ ಮುನ್ನಡೆ ಸಾಧಿಸಲಿದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ ಪತ್ರಿಕೆಯು ಏಪ್ರಿಲ್‌ 13ರಂದು ವರದಿ ಪ್ರಕಟಿಸಿದೆ ಎಂಬುದರ ಕುರಿತು ಪಿಟಿಐ ಸೇರಿ ಹಲವು ಸಂಸ್ಥೆಗಳು ಫ್ಯಾಕ್ಟ್‌ಚೆಕ್‌ ಮಾಡಿವೆ. ಇಂಡಿಯಾ ಒಕ್ಕೂಟಕ್ಕೆ ಭಾರಿ ಮುನ್ನಡೆ ಸಿಗುತ್ತದೆ ಎಂಬುದರ ಕುರಿತು ಏಪ್ರಿಲ್‌ 13ರಂದು ದೈನಿಕ್‌ ಭಾಸ್ಕರ್‌ ಯಾವುದೇ ವರದಿ ಪ್ರಕಟಿಸಿಲ್ಲ. ದೈನಿಕ್‌ ಭಾಸ್ಕರ್‌ ಪತ್ರಿಕೆಯ ಪ್ರತಿಗಳನ್ನು ಗಮನಿಸಿದಾಗ, ಅದರಲ್ಲಿ ಸಮೀಕ್ಷೆಯ ವರದಿಯನ್ನೇ ಪ್ರಕಟಿಸಿಲ್ಲ. ಹಾಗಾಗಿ, ದೈನಿಕ್‌ ಭಾಸ್ಕರ್‌ ಹೆಸರಿನಲ್ಲಿ ವೈರಲ್‌ ಆದ ವರದಿಯು ನಕಲಿ ಎಂಬುದಾಗಿ ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಕರ್ನಾಟಕದಲ್ಲೂ ಇಂತಹ ವರದಿಯ ಫೋಟೊವೊಂದು ವೈರಲ್‌ ಆಗಿತ್ತು. “ನಮಗೆ ಹಿಂದುಗಳ ಮತಗಳು ಬೇಡ. ಮುಸ್ಲಿಮರು ಮತ ಹಾಕಿದರೆ ಸಾಕು” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂಬುದಾಗಿ ನಕಲಿ ವರದಿ ಸಿದ್ಧಪಡಿಸಿ ಹರಿಬಿಡಲಾಗಿತ್ತು.

ಇದನ್ನೂ ಓದಿ: Fact Check : ಹಿಂದುಗಳ ಮತ ಕಾಂಗ್ರೆಸ್‌ಗೆ ಬೇಡ; ಮುಸ್ಲಿಂ ಮತ ಮಾತ್ರವೇ ಸಾಕೆಂದರೇ ಸಿಎಂ ಸಿದ್ದರಾಮಯ್ಯ?

Exit mobile version