ನವದೆಹಲಿ: ಸುಮಾರು 2 ತಿಂಗಳ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಳೆ (ಜೂನ್ 4) ಫಲಿತಾಂಶ ಹೊರ ಬೀಳಲಿದೆ. ಜತೆಗೆ ಜೂನ್ 1ರಂದು ಚುನಾವಣೋತ್ತರ ಸಮೀಕ್ಷೆ (Exit Poll) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಬಾರಿಯೂ ಕಾಂಗ್ರೆಸ್ ನಾಯಕತ್ವದ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟಕ್ಕೆ ಅಧಿಕಾರ ಲಭಿಸಲಾರದು ಎಂದೇ ಬಹುತೇಕ ಸಮೀಕ್ಷೆಗಳು ಊಹಿಸಿವೆ. ಈ ಮಧ್ಯೆ ತೀವ್ರ ಮುಖಭಂಗ ಅನುಭವಿಸುವ ಭೀತಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಯಾಂಕಾಕ್‌ಗೆ ತೆರಳಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಾಹುಲ್ ಗಾಂಧಿ (Rahul Gandhi) ಅವರ ಹೆಸರಿನಲ್ಲಿ ಜೂನ್ 5ರಂದು ಬ್ಯಾಂಕಾಕ್‌ಗೆ ಬುಕ್ ಮಾಡಲಾಗಿದೆ ಎನ್ನಲಾದ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಅಸಲಿಯತ್ತೇನು (Fact Check) ಎನ್ನುವ ವಿವರ ಇಲ್ಲಿದೆ.
ಈ ಬೋರ್ಡಿಂಗ್ ಪಾಸ್ ಅನ್ನು ಪರಿಶೀಲಿಸಿದ ವೇಳೆ ಅಸಲಿಯತ್ತು ಬೆಳಕಿಗೆ ಬಂದಿದೆ. ಇದು ಹಳೆ ಫೋಟೊ ಆಗಿದ್ದು, ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬೋರ್ಡಿಂಗ್ ಪಾಸ್ ಸುಮಾರು 5 ವರ್ಷಗಳ ಹಿಂದಿನದ್ದು ಎಂದು ತಿಳಿದು ಬಂದಿದೆ. 2019ರಲ್ಲಿ ಅಜಯ್ ಅವ್ತಾನೆ ಅವರ ಹೆಸರಿನಲ್ಲಿ ಬುಕ್ ಮಾಡಲಾದ ಪಾಸ್ ಇದಾಗಿದ್ದು, ರಾಹುಲ್ ಗಾಂಧಿ ಹೆಸರನ್ನು ಎಡಿಟ್ ಮಾಡಿ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಜೂನ್ 5ರಂದು ಬ್ಯಾಂಕಾಕ್‌ಗೆ ಪಲಾಯನ ಮಾಡಲಿದ್ದಾರೆ ಎನ್ನುವ ಕ್ಯಾಪ್ಶನ್‌ನೊಂದಿಗೆ ಎಡಿಟ್ ಮಾಡಿದ ಪಾಸ್ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ತಪ್ಪಾದ ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಎಕ್ಸಿಟ್ ಪೋಲ್ ಹೇಳಿದ್ದೇನು?
ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371, ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಇನ್ನು ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ. ಇಂಡಿಯಾ ಟುಡೇ, ಎಬಿಪಿ ನ್ಯೂಸ್ ಎರಡೂ ಸಮೀಕ್ಷೆಗಳುಎನ್‌ಡಿಗೆ 23-25, ಕಾಂಗ್ರೆಸ್‌ಗೆ 3-5 ಸ್ಥಾನ ನೀಡಿವೆ.