Site icon Vistara News

Fact Check: ಮಹಿಳಾ ಮೀಸಲಾತಿ ಅನ್ವಯ ಬಿಜೆಪಿ ಟಿಕೆಟ್‌ ಪಡೆದೆ ಎಂದ ಕಂಗನಾ; ಇದೆಷ್ಟು ನಿಜ?

Kangana Ranaut

Kangana Ranaut's Bring Aadhaar To Meet Me Draws Congress Fire

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದರಲ್ಲೂ, ತೀಕ್ಷ್ಣ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ. ಸುಭಾಷ್‌ ಚಂದ್ರ ಬೋಸ್‌ ಅವರೇ ದೇಶದ ಮೊದಲ ಪ್ರಧಾನಿ ಎಂದು ಅವರು ನೀಡಿದ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಕಂಗನಾ ರಣಾವತ್‌ ಅವರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇನ್ನೂ ಜಾರಿಯೇ ಆಗದ ಮಹಿಳಾ ಮೀಸಲಾತಿ ವಿಧೇಯಕದ (Women’s Reservation Bill) ಅನ್ವಯ ನನಗೆ ಬಿಜೆಪಿ ಟಿಕೆಟ್‌ ಸಿಕ್ಕಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಮಂಡಿ ಲೋಕಸಭೆ ಕ್ಷೇತ್ರದ ಬಾಲ್ಹ್‌ ಎಂಬ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಡೆದ ಸಮಾವೇಶದಲ್ಲಿ ಮಾತನಾಡಿದ ಕಂಗನಾ ರಣಾವತ್‌, “ನಾನು ಇಂದು ನಿಮ್ಮ ಎದುರು ವೇದಿಕೆ ಮೇಲೆ ನಿಂತಿದ್ದೇನೆ ಎಂದರೆ, ನನಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದರೆ ಅದಕ್ಕೆ ರಾಜಕೀಯದಲ್ಲಿ ಶೇ.30ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ವಿಧೇಯಕವೇ ಕಾರಣ. ಅದರಿಂದಾಗಿಯೇ ಮಂಡಿಯ ನಿಮ್ಮ ಮಗಳಿಗೆ ಇಂತಹ ದೊಡ್ಡ ವೇದಿಕೆ ಸಿಕ್ಕಿದೆ” ಎಂದು ಹೇಳಿದ್ದರು.

ಕಂಗನಾ ಹೇಳಿದ್ದು ನಿಜವೇ?

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ್ ವಿಧೇಯಕಕ್ಕೆ ಕಳೆದ ವರ್ಷ ಸಂಸತ್ತು ಅನುಮೋದನೆ ನೀಡಿದೆ. ವಿಧೇಯಕವು 27 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದನ್ನು ಕೇಂದ್ರ ಸರ್ಕಾರವು ಮಂಡಿಸಿ ಅನುಮೋದನೆ ಪಡೆದಿದೆ. ಆದರೆ, ಕಾಯ್ದೆ ಜಾರಿಯಾಗಲು 2029ರವರೆಗೆ ಕಾಯಬೇಕು ಎಂದು ಹೇಳಲಾಗುತ್ತಿದೆ.

ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿಗೆ ಅನ್ವಯವಾಗುವ ರೀತಿಯಲ್ಲೇ ದೇಶದ ಎಲ್ಲ ರಾಜ್ಯ ವಿಧಾನಸಭೆಗಳಿಗೂ ಈ ಮಹಿಳಾ ಮೀಸಲು ವಿಧೇಯಕವು ಅನ್ವಯವಾಗಲಿದೆ. ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿ ನಿಬಂಧನೆಗಳಂತೆಯೇ, ಅನ್ವಯವಾಗುವ ಷರತ್ತಿನ ಅಡಿಯಲ್ಲಿ ಮೀಸಲಾದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲು ಇರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿವೆ.

ಹೀಗೆ, ಇನ್ನೂ ಕಾಯ್ದೆಯಾಗಿಯೇ ಜಾರಿಯಾಗದ ವಿಧೇಯಕದ ಅನ್ವಯ ಮೀಸಲಾತಿ ಪಡೆದೆ ಎಂದು ಹೇಳಿದ ಕಂಗನಾ ರಣಾವತ್‌ ಅವರ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದರೊಂದಿಗೆ ಸುಭಾಷ್‌ ಚಂದ್ರ ಬೋಸ್‌ ಅವರ ಕುರಿತ ಹೇಳಿಕೆಯ ನಂತರ ಕಂಗನಾ ರಣಾವತ್‌ ಅವರು ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾ ಪ್ರಕಾರ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್‌ ಅಂತೆ! ಕಾರಣವೇನು?

Exit mobile version