Site icon Vistara News

Fact Check: ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ?; ವೈರಲ್‌ ವಿಡಿಯೊದ ಅಸಲಿಯತ್ತೇನು?

Fact Check

Fact Check

ನವದೆಹಲಿ: ಆನ್‌ಲೈನ್‌ ಪಬ್ಜಿ (PUBG) ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ (Sachin Meena) ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ (Seema Haiderಕಳೆದ ವರ್ಷ ಸಂಚಲನ ಸೃಷ್ಟಿಸಿದ್ದರು. ಸಚಿನ್‌ ಮೀನಾನನ್ನು ಮದುವೆಯಾಗಿ ಸದ್ಯ ಭಾರತದಲ್ಲೇ ನೆಲೆಸಿರುವ ಸೀಮಾ ಹೈದರ್‌ ಅವರ ಆಘಾತಕಾರಿ ವಿಡಿಯೊವೊಂದು ಹೊರ ಬಿದ್ದಿದೆ. ಸೀಮಾ ಹೈದರ್ ತಮ್ಮ ಮುಖದ ಮೇಲೆ ಗಾಯಗಳನ್ನು ತೋರಿಸುವ ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಜತೆಗೆ ಪತಿ ಸಚಿನ್ ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಾಗಾದರೆ ನಿಜವಾಗಿಯೂ ಸಚಿನ್‌ ಹಲ್ಲೆ ನಡೆಸಿದ್ದಾರಾ? ಈ ಗಾಯದ ಹಿಂದಿನ ಅಸಲಿಯತ್ತೇನು ಎನ್ನುವ ಮಾಹಿತಿ ಇಲ್ಲಿದೆ (Fact Check).

ವಿಡಿಯೊ ವೈರಲ್ ಆದ ಕೂಡಲೇ ಸೀಮಾ ಹೈದರ್ ಮತ್ತು ಅವರ ಪತಿ ಸಚಿನ್ ಮೀನಾ ನಡುವೆ ಜಗಳ ಭುಗಿಲೆದ್ದಿದೆ ಎಂದು ಊಹಿಸಲಾಗಿದೆ. ವಿಡಿಯೊದಲ್ಲಿ ಸೀಮಾ ಹೈದರ್ ಅವರ ಬಲಗಣ್ಣು ತೀವ್ರವಾಗಿ ಊದಿಕೊಂಡಿರುವುದು ಮತ್ತು ಅವರ ಮೇಲಿನ ತುಟಿಗೆ ಗಾಯವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಸೀಮಾ ಹೈದರ್ ವಕೀಲ ಎ.ಪಿ. ಸಿಂಗ್ ಸ್ಪಷ್ಟನೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿ ಎಂದು ಹೇಳಿದ್ದಾರೆ. ʼʼಸೀಮಾ ಅವರ ವಿಡಿಯೊವನ್ನು ಪಾಕಿಸ್ತಾನದ ಯೂ ಟ್ಯೂಬರ್‌ಗಳು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ತಿರುಚಿದ್ದಾರೆʼʼ ಎಂದು ಹೇಳಿದ್ದಾರೆ.

ಡೀಪ್‌ ಫೇಕ್‌ ತಂತ್ರಜ್ಞಾನ ಬಳಕೆ

ಇದು ಡೀಫ್ ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ವಿಡಿಯೊ ಎಂದು ಸೀಮಾ ಹೈದರ್ ಅವರೂ ಸ್ಪಷ್ಟಪಡಿಸಿದ್ದಾರೆ. ತನ್ನ ಪತಿ ಸಚಿನ್ ಮೀನಾ ಥಳಿಸಿದ್ದಾರೆ ಎಂಬ ಹೇಳಿಕೆಗಳನ್ನು ಅವರು ನಿರಾಕರಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ಯೂ ಟ್ಯೂಬರ್‌ಗಳು ಪ್ರಸಾರ ಮಾಡುತ್ತಿರುವ ವೈರಲ್ ವಿಡಿಯೊ ನಕಲಿ ಎಂದು ಹೇಳಿದ್ದಾರೆ. ಪವಿತ್ರ ರಂಜಾನ್ ತಿಂಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಅವರು ಪಾಕಿಸ್ತಾನದ ಸುದ್ದಿ ವಾಹಿನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೀಮಾ ಹೈದರ್ ಹೇಳಿದ್ದೇನು?

“ನನ್ನ ಮತ್ತು ನನ್ನ ಪತಿ ಸಚಿನ್ ನಡುವೆ ಎಲ್ಲವೂ ಸರಿಯಾಗಿದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಇಡೀ ಕುಟುಂಬವು ಸಂತೋಷದಿಂದಿದೆ. ನಾನು ಉತ್ತರ ಪ್ರದೇಶದಲ್ಲಿದ್ದೇನೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಮಹಿಳೆಯ ವಿರುದ್ಧ ಯಾವುದೇ ರೀತಿಯ ದೌರ್ಜನ್ಯಕ್ಕೆ ಅವಕಾಶ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Seema Haider: ತಿರಂಗಾ ಹಾರಿಸಿ ಭಾರತ್‌ ಮಾತಾ ಕಿ ಜೈ ಎಂದ ಪಾಕಿಸ್ತಾನದ ಸೀಮಾ ಹೈದರ್! ವಿಡಿಯೊ ವೈರಲ್

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version