-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್ ವೆಡ್ಡಿಂಗ್ ಸೀಸನ್‌ಗೆ ಯುವತಿಯರಿಗೆ ಪ್ರಿಯವಾಗುವಂತಹ ಲೈಟ್‌ವೈಟ್ ಲೆಹೆಂಗಾಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್ ಹಾಗೂ ಶೋಲ್ಡರ್ ಲೆಸ್ ಸ್ಟ್ರಾಪ್ ಇರುವಂತಹ ಕ್ರಾಪ್ ಬ್ಲೌಸ್ ಇರುವಂತಹ ಲೆಹೆಂಗಾಗಳು ಲಗ್ಗೆ ಇಟ್ಟಿವೆ. ಈ ಮೂರು ಬಗೆಯ ಬ್ಲೌಸ್ ಹೊಂದಿರುವ ಲೆಹೆಂಗಾಗಳು ಈಗಾಗಲೇ ಭಾರಿ ಮೆಚ್ಚುಗೆ ಗಳಿಸಿದ್ದು, ಬಾಲಿವುಡ್ ತಾರೆಯರು ಧರಿಸಿರುವ ಸಾಕಷ್ಟು ಡಿಸೈನ್‌ಗಳು ಈಗಾಗಲೇ ವೆಡ್ಡಿಂಗ್ ಕಲೆಕ್ಷನ್‌ಗಳಲ್ಲಿ (wedding Fashion) ಬಿಡುಗಡೆಗೊಂಡಿದೆ. ಅದರಲ್ಲೂ ನಟಿ ವಿನಾಲಿ ಭಟ್ನಾಗರ್ ಧರಿಸಿರುವ ಲೆಹೆಂಗಾಗಳು ಯುವತಿಯರನ್ನು ಸೆಳೆದಿವೆ. ಹೆವ್ವಿ ವಿನ್ಯಾಸದ ಲೆಹೆಂಗಾ ಬ್ಲೌಸ್‌ಗಳು ಇದೀಗ ಸೈಡಿಗೆ ಸರಿದಿವೆ. ಬಿಸಿಲಿನ ಝಳಕ್ಕೆ ಸೆಕೆಯಾದರೂ ತಡೆಯಬಹುದಾದ ವಿನ್ಯಾಸಗಳನ್ನು ಒಳಗೊಂಡಿರುವಂತಹ ಲೈಟ್‌ವೈಟ್ ಡಿಸೈನ್‌ನವು ಲೆಹೆಂಗಾ ಬ್ಲೌಸ್‌ಗಳನ್ನು ಸಿಂಗರಿಸಿವೆ.
ಕೋಲ್ಡ್ ಶೋಲ್ಡರ್ ಬ್ಲೌಸ್‌ನ ಲೆಹೆಂಗಾ ಸೆಟ್
ಕೋಲ್ಡ್ ಶೋಲ್ಡರ್ ಬ್ಲೌಸ್ ಲೆಹೆಂಗಾಗಳು ನೆಕ್‌ಲೈನನ್ನು ಅಗಲವಾಗಿ ಬಿಂಬಿಸುವುದು ಮಾತ್ರವಲ್ಲ, ಬಿಸಿಲಲ್ಲಿ ಸೆಕೆಯಾಗುವುದಿಲ್ಲ. ಗಾಳಿಯಾಡಲು ಅನುವು ಮಾಡಿಕೊಡುತ್ತದೆ. ಟೀನೇಜ್ ಹುಡುಗಿಯರು ಮಾತ್ರವಲ್ಲ ಇದೀಗ ಸಾಕಷ್ಟು ಮಾನಿನಿಯರು ಈ ಶೈಲಿಯ ಲೆಹೆಂಗಾ ಸೆಟ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಆಫ್ ಶೋಲ್ಡರ್ ಬ್ಲೌಸ್ ಲೆಹೆಂಗಾ:
ಆಫ್ ಶೋಲ್ಡರ್ ಕ್ರಾಪ್ ಟಾಪ್‌ಗಳಂತೆಯೇ ಕಾಣುವ ಇವು ಭುಜದಿಂದ ಕೆಳಗೆ ಇಳಿದಿರುವಂತೆ ಕಾಣುತ್ತವೆ. ಇವು ಆದಷ್ಟು ಸ್ಟ್ರೆಚಬಲ್ ಅಥವಾ ಎಲಾಸ್ಟಿಕ್ ಹೊಂದಿರುತ್ತವೆ. ಇವುಗಳಲ್ಲಿ ಮಾನೋಕ್ರೋಮ್ ಹಾಗೂ ಪ್ರಿಂಟೆಡ್ ಡಿಸೈನ್‌ನವು ಲಭ್ಯ. ಫಿಟ್ ಆಗಿರುವ ಬ್ಲೌಸ್‌ಗಳನ್ನು ಈ ಶೈಲಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇವು ಗ್ಲಾಮರಸ್ ಔಟ್‌ಲುಕ್ ನೀಡುತ್ತವೆ. ಜೊತೆಗೆ ಬೇಸಿಗೆಗೆ ಹೇಳಿ ಮಾಡಿಸಿದ ಲೆಹೆಂಗಾ ಸೆಟ್ ಎನ್ನಬಹುದು. ಈ ಲೆಹೆಂಗಾಗಳು ಬಾಲಿವುಡ್ ತಾರೆಯರ ಫೇವರೇಟ್ ಔಟ್‌ಫಿಟ್ ಕೂಡ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸ್ಟ್ರಾಪ್ ಕ್ರಾಪ್ ಬ್ಲೌಸ್ ಲೆಹೆಂಗಾ
ಕ್ರಾಪ್ ಟಾಪ್‌ಗಳಿಗೆ ಸಿಂಪಲ್ ಸ್ಟ್ರಾಪ್ ಇರುವಂತೆ ಕಾಣುವ ಈ ಬ್ಲೌಸ್ ಲೆಹೆಂಗಾ ಕಂಪ್ಲೀಟ್ ಗ್ಲಾಮರಸ್ ಲುಕ್ ನೀಡುತ್ತವೆ. ಇಂಡೋ-ವೆಸ್ಟರ್ನ್ ವಿನ್ಯಾಸ ಒಳಗೊಂಡಿರುತ್ತವೆ. ಕ್ರಿಸ್ಟಲ್ ಅಥವಾ ಇನ್ಯಾವುದೇ ಆಕರ್ಷಕ ವಿನ್ಯಾಸ ಈ ಸ್ಟ್ರಾಪ್‌ಗಳಿಗೆ ಮಾಡಲಾಗಿರುತ್ತದೆ. ಈ ಸೀಸನ್‌ನ ಬೇಸಿಗೆಯ ವೆಡ್ಡಿಂಗ್‌ಗಳಲ್ಲಿ ಇವು ಸಖತ್ ಪಾಪ್ಯುಲರ್ ಆಗಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಚಿತ್ರಗಳು : ವಿನಾಲಿ ಭಟ್ನಾಗರ್, ನಟಿ