-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾಗುವ ಜೋಡಿಯ ನಿಶ್ಚಿತಾರ್ಥದ ಸಮಾರಂಭದಲ್ಲಿ ಎಥ್ನಿಕ್‌ವೇರ್ ಫೋಟೊಶೂಟ್ (Fashion Photoshoot) ಟ್ರೆಂಡ್ ಇದೀಗ ಹೆಚ್ಚಾಗಿದೆ. ಕೇವಲ ಮದುವೆ ಹಾಗೂ ಪ್ರಿ-ವೆಡ್ಡಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫೋಟೊಶೂಟ್ ಕಾನ್ಸೆಪ್ಟ್ ಇದೀಗ ನಿಶ್ಚಿತಾರ್ಥ ಅಥವಾ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಧುಮ್ಮಿಕ್ಕಿದೆ. ಅದರಲ್ಲೂ ಟ್ರೆಂಡಿ ಎಥ್ನಿಕ್‌ವೇರ್ ಧರಿಸಿದ ಜೋಡಿಗಳ ಫ್ಯಾಷೆನಬಲ್ ಲವ್ ಪ್ರಪೋಸಿಂಗ್, ಎಂಗೇಜ್‌ಮೆಂಟ್ ರಿಂಗ್ ಹಾಕುವ ಹಾಗೂ ರಿಂಗ್ ತೋರಿಸುವ ಫೋಟೊಶೂಟ್ ಕಾನ್ಸೆಪ್ಟ್ ವೆಡ್ಡಿಂಗ್ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ.
ಎಂಗೇಜ್‌ಮೆಂಟ್ ಫೋಟೊಶೂಟ್
ವೆಡ್ಡಿಂಗ್ ಹಾಗೂ ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ಗಳು ಸಾಮಾನ್ಯ. ಆದರೆ, ಇವೆಲ್ಲದಕ್ಕಿಂತ ಮುನ್ನವೇ ನಡೆಯುವ ನಿಶ್ಚಿತಾರ್ಥ ಅಂದರೆ, ಸಾಮಾನ್ಯರ ಆಡು ಭಾಷೆಯಲ್ಲಿ ಕರೆಯಲ್ಪಡುವ ಎಂಗೇಜ್‌ಮೆಂಟ್ ಸಮಾರಂಭದ ದಿನವೇ ನಡೆಸುವ ಫೋಟೋಶೂಟ್ ಇದೀಗ ಸಾಮಾನ್ಯವಾಗುತ್ತಿದೆ. ಎಥ್ನಿಕ್‌ವೇರ್‌ನಲ್ಲಿಯೇ ಹುಡುಗ-ಹುಡುಗಿಯನ್ನು ಪ್ರಪೋಸ್ ಮಾಡುವ, ಕೈ ಬೆರಳುಗಳಿಗೆ ರಿಂಗ್ ಹಾಕುವ, ಇಲ್ಲವೇ ಉಂಗುರ ತೋರಿಸುವ ಹಾಗೂ ಹೂವು ಮುಡಿಸುವ ಶಾಸ್ತ್ರಗಳನ್ನೊಳಗೊಂಡಂತಹ ಫೋಟೊಶೂಟ್‌ಗೆ ಎಲ್ಲರೂ ಶರಣಾಗಿದ್ದಾರೆ. ಜತೆಗೆ ಇದಕ್ಕಾಗಿ ಸಮಾರಂಭದ ಸನ್ನಿವೇಶಗಳನ್ನು ಥೀಮ್ ಆಗಿ ಬಳಸಿಕೊಳ್ಳುವುದು ಅಧಿಕಗೊಳ್ಳುತ್ತಿದೆ.
“ಮದುವೆ ಹಾಗೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳು ತೀರಾ ಕಾಮನ್. ಇದೀಗ ಮದುವೆಯಾಗುವ ಜೋಡಿಗಳು ಈ ಎಂಗೇಜ್‌ಮೆಂಟ್ ಸಮಾರಂಭಕ್ಕೂ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಖುಷಿಯ ವಿಚಾರ ಎಂದರೇ, ವೆಸ್ಟರ್ನ್ ಉಡುಪುಗಳನ್ನು ಸೈಡಿಗಿರಿಸಿ, ಇದೀಗ ಕಂಪ್ಲೀಟ್ ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗುವಂತಹ ಉಡುಪುಗಳಲ್ಲಿ ಕಾಣಿಸಿಕೊಂಡು ಫೋಟೊಶೂಟ್ ಮಾಡಿಸುತ್ತಿದ್ದಾರೆ. ತಾವು ಎಂಗೇಜ್ ಆಗಿರುವುದನ್ನು ಇಂತಹ ಫೋಟೊಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವುದು ಉದ್ದೇಶವಾಗಿದೆ. ಇದು ಉತ್ತಮ ಬೆಳವಣಿಗೆ” ಎನ್ನುತ್ತಾರೆ ಫ್ಯಾಷನ್ ಫೋಟೊಗ್ರಾಫರ್ ನಕುಲ್ ಹಾಗು ರಾಜನ್.
ಇದನ್ನೂ ಓದಿ: Summer Fashion: ಬೇಸಿಗೆ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಹುಡುಗಿಯರ ಫಂಕಿ ಪ್ರಿಂಟೆಡ್ ಕ್ರಾಪ್ ಶರ್ಟ್ಸ್
ಫೋಟೊಶೂಟ್‌ನಲ್ಲಿ ಎಥ್ನಿಕ್‌ವೇರ್‌ಗಳ ಸಂಭ್ರಮ
ಎಂಗೇಜ್‌ಮೆಂಟ್‌ನಲ್ಲಿ ಕೇವಲ ಹುಡುಗ-ಹುಡುಗಿಯರ ಫೋಟೊಶೂಟ್ ಮಾತ್ರವಲ್ಲ, ನೆರೆದಿರುವ ಕುಟುಂಬದವರನ್ನು ಸೇರಿಸಿ ಫೋಟೊಶೂಟ್ ಮಾಡುವುದು ಇಂದು ಕಾಮನ್ ಆಗಿದೆ. ಸಾಂಪ್ರಾದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿದ ಕುಟುಂಬದವರೊಂದಿಗೆ ಸಂಭ್ರಮಿಸುವಂತಹ ಫೋಟೋಶೂಟ್ ಕೂಡ ಪ್ರಚಲಿತದಲ್ಲಿದೆ. ಇವೆಲ್ಲವನ್ನು ಮದುವೆಯ ದಿನ ಆನ್‌ಸ್ಕ್ರೀನ್‌ನಲ್ಲಿ ತೋರಿಸುವುದು ಇದೀಗ ಚಾಲ್ತಿಯಲ್ಲಿದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)