-ಶೀಲಾ ಸಿ, ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ಗೆ (Monsoon Beauty Tips) ತಕ್ಕಂತೆ ಕಾಲೇಜು ಹುಡುಗಿಯರ ಬ್ಯೂಟಿ ಕೇರ್ ವಿಧಾನಗಳು ಕೂಡ ಬದಲಾಗುತ್ತವೆ. ಇನ್ನು, ಈ ಟಿನೇಜ್ ಹುಡುಗಿಯರು ತ್ವಚೆಗೆ ಸೂಕ್ತ ಬ್ಯೂಟಿ ಆರೈಕೆ ಮಾಡುವುದರೊಂದಿಗೆ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಮಳೆಗಾಲದಲ್ಲೂ ಸುಂದರವಾಗಿ ಕಾಣಬಹುದು ಎಂಬುದು ಸೌಂದರ್ಯ ತಜ್ಞರ ಸಲಹೆ.
ಸೌಂದರ್ಯ ತಜ್ಞೆ ಅಸ್ಮಿತಾ ಹೇಳುವಂತೆ, ಈ ಸೀಸನ್‌ನಲ್ಲಿ ಜೆನ್ ಜಿ ಹುಡುಗಿಯರು ಬ್ಯೂಟಿ ಆರೈಕೆಯೊಂದಿಗೆ, ತಮ್ಮ ಪ್ರತಿದಿನದ ಮೇಕಪ್ ರೂಟಿನ್‌ಗಳಲ್ಲೂ ಬದಲಾವಣೆ ತರುವುದು ಅಗತ್ಯ ಎನ್ನುತ್ತಾರೆ. ಈ ಬಗ್ಗೆ ಒಂದಿಷ್ಟು ಕೂಡ ಟಿಪ್ಸ್ ನೀಡಿದ್ದಾರೆ.
ಬೇಸಿಕ್ ಆರೈಕೆ ಹೀಗಿರಲಿ
ಪ್ರತಿಬಾರಿ ಮುಖ ವಾಶ್ ಮಾಡಿದ ನಂತರ ಮಾಯಿಶ್ಚರೈಸ್ ಮಾಡಿ. ಹೊರಗಡೆ ಹೋಗುವಾಗ ಮಾತ್ರ ಮೇಕಪ್ ಮಾಡಿ. ಮೇಕಪ್‌ಗೆ ಹೆಚ್ಚು ಅಡಿಕ್ಟ್ ಆಗಬೇಡಿ. ಮೇಕಪ್ ಇಲ್ಲದ ತ್ವಚೆಯ ಆರೋಗ್ಯ ಚೆನ್ನಾಗಿರುವುದು. ಚರ್ಮಕ್ಕೆ ಉಸಿರಾಡಲು ಅನುವಾಗುವುದು.
ನೋ ಮೇಕಪ್‌ಗೆ ಜೈ ಎನ್ನಿ
ಸಮಾರಂಭಗಳಿಗೆ ಮಾತ್ರ ಮೇಕಪ್ ಮಾಡಿ. ಇಲ್ಲವಾದಲ್ಲಿ ಸಿಂಪಲ್‌ಆಗಿ ಟಿಂಟೆಡ್ ಮಾಯಿಶ್ಚರೈಸರ್ ಬಳಸಿ ಅಥವಾ ಕ್ರೀಮ್ ಹಚ್ಚಿ. ಕಾಜೋಲ್ ಇಲ್ಲವೇ ಐ ಲೈನರ್ ಹಾಕಿ. ಲಿಪ್ ಬಾಮ್ ಅಥವಾ ವಾಟರ್ ಪ್ರೂಫ್ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಆದಷ್ಟೂ, ನೋ ಮೇಕಪ್‌ಗೆ ಯೆಸ್ ಹೇಳಿ.
ಮಿನಿಮಲ್ ಮೇಕಪ್ ಇರಲಿ
ಪ್ರತಿದಿನ ಕಾಲೇಜು ಹೋಗುವಂತಹ ಹುಡುಗಿಯರು ಆದಷ್ಟೂ ಹೆವ್ವಿ ಮೇಕಪ್‌ನಿಂದ ದೂರವಿರಬೇಕು. ಇಡೀ ದಿನ ಮೇಕಪ್‌ನಲ್ಲಿಯೇ ಇದ್ದಲ್ಲಿ ತ್ವಚೆಯ ರಂಧ್ರಗಳು ಮುಚ್ಚಿಹೋಗಿ, ಚರ್ಮದ ಸಮಸ್ಯೆ ಇಲ್ಲವೇ ಮೊಡವೆಗಳು ಮೂಡಬಹುದು. ಮಿನಿಮಲ್ ಮೇಕಪ್ ನಿಮ್ಮದಾಗಲಿ.
ಮಳೆಯಿಂದ ತ್ವಚೆಯನ್ನು ಸಂರಕ್ಷಿಸಿ
ಮಳೆಯಲ್ಲಿ ತೊಯ್ದ ನಂತರ ಅಥವಾ ಮುಖ ಒದ್ದೆಯಾಗಿದ್ದಲ್ಲಿ ಹೆಚ್ಚು ಗಂಟೆಗಳ ಕಾಲ ಹಾಗೆಯೇ ಬಿಡಬೇಡಿ. ಮುಖಕ್ಕೆ ಹಚ್ಚಿದ ಕ್ರೀಮ್, ಐ ಕಲರ್, ಲಿಪ್‌ಸ್ಟಿಕ್ ಎಲ್ಲವೂ ಮಿಕ್ಸ್ ಆಗುವ ಸಾಧ್ಯತೆಗಳಿರುತ್ತವೆ. ಮೈಲ್ಡ್ ಫೇಸ್‌ವಾಶ್‌ನಲ್ಲಿ ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ.
ಇದನ್ನೂ ಓದಿ: Monsoon Beauty Care: ಮಳೆಗಾಲದ ಸೌಂದರ್ಯಕ್ಕೆ 5 ಮ್ಯಾಜಿಕ್ ಬ್ಯೂಟಿ ಮಂತ್ರ
ಕ್ಲೆನ್ಸಿಂಗ್ ಮಾಡುವುದನ್ನು ರೂಢಿಸಿಕೊಳ್ಳಿ
ಆಗಾಗ್ಗೆ ಫೇಸ್ ವಾಶ್ ಮಾಡುವುದರಿಂದ ತ್ವಚೆಯು ಒಣಗಿದಂತಾಗಬಹುದು ಎನ್ನುವವರು ಕ್ಲೆನ್ಸಿಂಗ್ ಮಾಡುವುದನ್ನು ರೂಢಿಸಿಕೊಳ್ಳಬಹುದು. ಇದರಿಂದ ಸುಕೋಮಲ ತ್ವಚೆಗೆ ಯಾವುದೇ ರೀತಿಯ ಎಫೆಕ್ಟ್ ಆಗುವುದಿಲ್ಲ! ಹರ್ಬಲ್ ಕ್ಲೆನ್ಸಿಂಗ್ ಕ್ರೀಮ್ ಬಳಸಬಹುದು. ಇಲ್ಲವೇ ಮನೆಯಲ್ಲೆ ದೊರೆಯುವ ಹಾಲಿನಲ್ಲಿ ಹತ್ತಿ ಅದ್ದಿ, ಮುಖವನ್ನು ಒರೆಸಿ.
ಆರೋಗ್ಯಕರ ಡಯಟ್
ಕಂಡಕಂಡದ್ದನ್ನೆಲ್ಲಾ ತಿನ್ನುವುದು ಹಾಗೂ ಫಾಸ್ಟ್ ಫುಡ್ ಅತಿ ಹೆಚ್ಚಾಗಿ ತಿನ್ನುವುದರಿಂದಲೂ ತ್ವಚೆ ಹಾಳಾಗಬಹುದು. ಆದಷ್ಟೂ ಆರೋಗ್ಯಕರ ಮನೆ ತಿಂಡಿ-ಊಟ ಸೇವಿಸಿ. ವಿಟಮಿನ್ ಸಿ ವುಳ್ಳ ಆಹಾರ ಸೇವನೆ ಉತ್ತಮ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)