-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ಕಲರ್‌ಫುಲ್ ಕಾಟನ್ ಸೀರೆಗಳು ಟ್ರೆಂಡಿಯಾಗಿವೆ. ನಾನಾ ವರ್ಣಗಳ ಈ ಕಾಟನ್ ಸೀರೆಗಳು ಕೇವಲ ವಿವಾಹಿತರಿಗಷ್ಟೇ ಅಲ್ಲ, ಯುವತಿಯರನ್ನು ಆಕರ್ಷಿಸಿವೆ. ಸಿಂಪಲ್ ಲುಕ್ ಜೊತೆಗೆ ಪರಿಸರ ಸ್ನೇಹಿಯಾಗಿರುವ ಈ ಕಾಟನ್ ಸೀರೆಗಳು ಸಾಕಷ್ಟು ಬ್ರಾಂಡ್‌ಗಳಲ್ಲಿ ಲಭ್ಯವಿದೆ.
ವೈವಿಧ್ಯಮಯ ಕಲರ್‌ಫುಲ್ ಕಾಟನ್ ಸೀರೆಗಳ ಪ್ರಪಂಚ
ಇಳಕಲ್, ಉಡುಪಿ, ಗುಳೇದಗುಡ್ಡ ಖಾನಾ ಸೀರೆ, ಪಟ್ಟದ ಅಂಚು, ಇಕ್ಕಟ್, ಸಾಂಬಲ್‌ಪುರಿ, ವೆಂಕಟಗಿರಿ, ಚೆಟ್ಟಿನಾಡು, ಮಂಗಲಗಿರಿ, ಕಂಚಿ ಕಾಟನ್, ಜಮ್‌ದಾನಿಯ ಕಾಟನ್ ಸೀರೆಗಳು ಸೇರಿದಂತೆ ನಾನಾ ಬ್ರಾಂಡ್‌ಗಳವು ದೇಸಿ ಲುಕ್‌ನಲ್ಲಿ ಬಿಡುಗಡೆಗೊಂಡಿದ್ದು, ಬಗೆಬಗೆಯ ಬಣ್ಣಗಳಲ್ಲಿ ದೊರೆಯುತ್ತಿವೆ. ಈ ಮೊದಲು ಪಾಸ್ಟೆಲ್ ಶೇಡ್‌ನವು ಚಾಲ್ತಿಯಲ್ಲಿದ್ದವು. ಇದೀಗ ಪಿಂಕ್, ವೈನ್, ಮಜೆಂತಾ, ಗ್ರೀನ್, ಆರೆಂಜ್ ಹೀಗೆ ಎದ್ದು ಕಾಣುವಂತಹ ಬಣ್ಣಗಳ ಕಾಟನ್ ಸೀರೆಗಳು ಚಾಲ್ತಿಯಲ್ಲಿವೆ.
ಸಾಫ್ಟ್ ಕಲರ್ ಕಾಟನ್ ಸೀರೆಗಳಿಗೆ ಹೆಚ್ಚಾದ ಬೇಡಿಕೆ
ಮೊದಲಿನಂತೆ ಸ್ಟಾರ್ಚ್ ಹಾಕಿ ಧರಿಸಬಹುದಾದ ರಟ್ಟಿನಂತಹ ಟೆಕ್ಸ್ಚರ್ ಹೊಂದಿರುವಂತಹ ಕಾಟನ್ ಸೀರೆಗಳು ಇದೀಗ ಸೈಡಿಗೆ ಸರಿದಿವೆ. ಈಗೇನಿದ್ದರೂ ಸಾಫ್ಟ್ ಫ್ಯಾಬ್ರಿಕ್ ಹೊಂದಿರುವ ಕಾಟನ್ ಸೀರೆಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇದಕ್ಕೆ ಕಾರಣ ಸುಲಭ ನಿರ್ವಹಣೆ ಹಾಗೂ ಧರಿಸಿದಾಗ ನೋಡಲು ಚೆನ್ನಾಗಿ ಕಾಣುವುದು. ಇವುಗಳಲ್ಲಿ ಈ ಹಿಂದೆ ಕೇವಲ ಲೈಟ್ ಶೇಡ್‌ನವು ಲಭ್ಯವಿದ್ದವು. ಇದೀಗ ಇವುಗಳಲ್ಲಿ ನಾನಾ ಶೇಡ್‌ನವು ಅದರಲ್ಲೂ ಪ್ರಿಂಟ್‌ನ ವಿನ್ಯಾಸದವು ದೊರೆಯುತ್ತಿವೆ. ಕಾರ್ಪೋರೇಟ್ ಕ್ಷೇತ್ರ ಹಾಗೂ ಯುವತಿಯರನ್ನು ಇವು ಸೆಳೆದಿವೆ. ಇಂತಹ ಸೀರೆಗಳು ಕೊಂಚ ದುಬಾರಿಯಾದರೂ ಬೇಡಿಕೆ ಮಾತ್ರ ಕುಂದಿಲ್ಲ ಎನ್ನುತ್ತಾರೆ ಕಾಟನ್ ಸೀರೆಯ ಮಾರಾಟಗಾರರು. ಅವರ ಪ್ರಕಾರ, ಇಂದು ಬ್ರಾಂಡ್‌ಗಳಿಗಿಂತ ಹೆಚ್ಚಾಗಿ ಕಾಟನ್ ಸೀರೆಗಳ ಫ್ಯಾಬ್ರಿಕ್ ನೋಡಿ ಖರೀದಿಸುತ್ತಾರೆ. ಇನ್ನು ಕಲರ್‌ಗಳನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ.
ಇದನ್ನೂ ಓದಿ: Summer Fashion: ವೀಕೆಂಡ್‌ನಲ್ಲಿ ಔಟಿಂಗ್ ಪ್ರಿಯರ ಉಲ್ಲಾಸ ಹೆಚ್ಚಿಸುತ್ತಿರುವ ವೈವಿಧ್ಯಮಯ ವೈಟ್ ಫ್ರಾಕ್ಸ್
ಕಲರ್ ಕಾಟನ್ ಸೀರೆ ಪ್ರಿಯರು ತಿಳಿದಿರಬೇಕಾದ್ದು
- ನಿರ್ವಹಣೆ ಮೊದಲೇ ತಿಳಿದುಕೊಳ್ಳಿ.
- ಕಲರ್ ಕಾಟನ್ ಸೀರೆ ನ್ಯಾಚುರಲ್ ಕಲರ್ನದ್ದೋ ಅಥವಾ ಯಾವುದು ಎಂಬುದು ತಿಳಿದಿರಲಿ.
- ಸಾಫ್ಟ್ ಕಾಟನ್ ಸೀರೆಗಳು ಅಗಲವಾಗಿ ಹರಡಿಕೊಳ್ಳುವುದಿಲ್ಲ.
- ಬಾರ್ಡರ್ಗಿಂತ ಬಾರ್ಡರ್ಲೆಸ್ ಇರುವಂಥವು ಟ್ರೆಂಡ್ನಲ್ಲಿವೆ.
- ಫ್ಲೋರಲ್ಗಿಂತ ಜೆಮೆಟ್ರಿಕಲ್ ಹಾಗೂ ಅಬ್ಸ್ಟ್ರಾಕ್ಟ್ ಡಿಸೈನ್ನವು ಚಾಲ್ತಿಯಲ್ಲಿವೆ.