-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನ ಜ್ಯುವೆಲ್ ಫ್ಯಾಷನ್‌ನಲ್ಲಿ ಇದೀಗ ಹೂಪ್ ನೋಸ್ ರಿಂಗ್‌ಗಳ ಜಾದೂ ಹೆಚ್ಚಾಗಿದೆ. ನಾನಾ ಶೈಲಿಯಲ್ಲಿ ದೊರಕುವ ಈ ಹೂಪ್ ನೋಸ್ ರಿಂಗ್‌ಗಳು ಮದುಮಗಳ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಗ್ರ್ಯಾಂಡ್ ಲುಕ್ ನೀಡುತ್ತಿವೆ. ಹಾಗಾಗಿ ಈ ಸೀಸನ್ ಮದುವೆಯ ಆಭರಣಗಳಲ್ಲಿ ಇವು ಒಂದಾಗಿವೆ.
ಏನಿದು ಹೂಪ್ ನೋಸ್ ರಿಂಗ್ ?
ಕಳೆದ ವೆಡ್ಡಿಂಗ್ ಸೀಸನ್‌ನ ಆಭರಣಗಳಲ್ಲಿ ಡಿಸೈನರ್ ಬಿಗ್ ಮೂಗುತಿ ಧರಿಸುವುದು ಟ್ರೆಂಡಿಯಾಗಿತ್ತು. ಇದೀಗ ಈ ಬಿಗ್ ಹೂಪ್ ನೋಸ್ ರಿಂಗ್‌ಗಳು ಆಗಮಿಸಿವೆ. ಮದುವೆಯಲ್ಲಿ ಗ್ರ್ಯಾಂಡ್ ಲುಕ್ ಬಯಸುವ ಹೆಣ್ಣುಮಕ್ಕಳು ಈ ಹೂಪ್ ನೋಸ್ ರಿಂಗ್‌ಗಳನ್ನು ಧರಿಸಲಾರಂಭಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ, ಹಿಂದೆಲ್ಲಾ ಕೇವಲ ರಾಜಸ್ಥಾನದ ಹೆಣ್ಣುಮಕ್ಕಳು ಮಾತ್ರ ಈ ರೀತಿಯ ರಿಂಗ್‌ನಂತಹ ನೋಸ್ ರಿಂಗ್ ಧರಿಸುತ್ತಿದ್ದರು. ರಾಜ-ಮಹಾರಾಜರ ಕಾಲದಿಂದಲೂ ಈ ಮೂಗುತಿ ಚಾಲ್ತಿಯಲ್ಲಿತ್ತು. ಭಾರವಾಗಿರುವ ಕಾರಣದಿಂದಾಗಿ ಜನರೇಷನ್ ಕಳೆದಂತೆ ಅದರ ಆಕಾರ ಹಾಗೂ ಸೈಝ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡಿತು. ಬರಬರುತ್ತಾ ಪುಟ್ಟ ನೋಸ್ ರಿಂಗ್‌ಗಳು ಟ್ರೆಂಡಿಯಾದವು. ಆದರೆ, ಇದೀಗ ಮತ್ತೊಮ್ಮೆ ಈ ಬಿಗ್ ಸೈಝಿನ ಹೂಪ್ ನೋಸ್ ರಿಂಗ್‌ಗಳು ಆಗಮಿಸಿವೆ. ರಿಂಗ್ ಆಕಾರದ ಈ ಮೂಗುತಿಗಳು ಮತ್ತೊಮ್ಮೆ ಮದುವೆಯ ಆಭರಣಗಳೊಂದಿಗೆ ಕಾಣಿಸಿಕೊಳ್ಳಲಾರಂಭಿಸಿವೆ.
ಬಾಲಿವುಡ್ ತಾರೆಯರ ಮೋಹ
ಬಾಲಿವುಡ್‌ನ ಸಾಕಷ್ಟು ತಾರೆಯರ ಮದುವೆಗಳಲ್ಲಿ ತಾರೆಯರು ಈ ಬಿಗ್ ಹೂಪ್ ನೋಸ್ ರಿಂಗ್‌ಗಳ ಬಳಕೆ ಮಾಡಿದ್ದು, ಫೋಟೋಶೂಟ್‌ಗಳಲ್ಲಿ ಅಂದವಾಗಿ ಕಾಣಿಸಿಕೊಂಡಿದ್ದು, ಟ್ರೆಂಡಿಯಾಗಲು ಕಾರಣವಾಯಿತು ಎನ್ನುತ್ತಾರೆ ಡಿಸೈನರ್ ರಾಶಿ. ಅವರ ಪ್ರಕಾರ, ಉತ್ತರ ಭಾರತದಲ್ಲಿದ್ದ ಈ ಟ್ರೆಂಡ್ ಇದೀಗ ದಕ್ಷಿಣ ಭಾರತೀಯ ಮದುವೆಗಳಲ್ಲೂ ಎಂಟ್ರಿ ನೀಡಿದೆ. ಸಾಕಷ್ಟು ಗ್ರ್ಯಾಂಡ್ ಮದುವೆಗಳಲ್ಲಿ ಇವನ್ನು ಮದುಮಗಳು ಧರಿಸಿರುವುದನ್ನು ನೋಡಬಹುದು. ಅಥವಾ ಕನಿಷ್ಠ ಪಕ್ಷ ಫೋಟೋಶೂಟ್‌ಗಾದರೂ ಧರಿಸುವುದನ್ನು ಕಾಣಬಹುದು ಎನ್ನುತ್ತಾರೆ.
ಇದನ್ನೂ ಓದಿ : Viral Video: ಫ್ಯಾಶನ್ ಶೋದಲ್ಲಿ ಮಾಡೆಲ್ ಮೈಮೇಲಿದ್ದ ಜಾಕೆಟ್ ತೆಗೆದುಹಾಕಿದ ರೋಬೋಟ್; ಇಷ್ಟವಾಗಿಲ್ಲವೆಂದ ನೆಟ್ಟಿಗರು
ಲೈಟ್‌ವೈಟ್ ಹೂಪ್ ನೋಸ್ ರಿಂಗ್
ಈ ಬಿಗ್ ಹೂಪ್ ನೋಸ್ ರಿಂಗ್ ಧರಿಸಲು ಮತ್ತೊಂದು ಕಾರಣವೂ ಇದೆ. ನಾನಾ ಡಿಸೈನ್‌ಗಳಲ್ಲಿ ದೊರಕುತ್ತಿರುವುದು ಎಲ್ಲದಕ್ಕಿಂತ ಹೆಚ್ಚಾಗಿ ಲೈಟ್‌ವೈಟ್‌ನಲ್ಲಿ ಸಿಗುತ್ತಿರುವುದು. ಗೋಲ್ಡನ್ ಬೀಡ್ಸ್, ಪರ್ಲ್, ಬ್ಯಾಂಗಲ್ ಶೇಪ್, ಜುಮ್ಕಾ ಡಿಸೈನ್ ಹೀಗೆ ನಾನಾ ಬಗೆಯಲ್ಲಿ ಇವು ಲೈಟ್‌ವೈಟ್‌ನಲ್ಲಿ ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಚಿತಾ.
ಹೂಪ್ ನೋಸ್ ರಿಂಗ್ ಆಯ್ಕೆ ಹೀಗಿರಲಿ
· ಲೈಟ್‌ವೈಟ್ ಡಿಸೈನ್ ಆಯ್ಕೆ ಮಾಡಿ.
· ಟ್ರಯಲ್ ನೋಡಿ ಖರೀದಿಸಿ.
· ಮುಖದ ಆಕಾರಕ್ಕೆ ತಕ್ಕಂತೆ ಹೊಂದಬೇಕು.
· ಕಿವಿಯ ಇಯರಿಂಗ್ ಅಗಲವಾಗಿದ್ದಲ್ಲಿ ಮಾತ್ರ ಇದು ಆಕರ್ಷಕವಾಗಿ ಕಾಣುತ್ತದೆ.