-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಡೀಸೆಲ್ ಬ್ರ್ಯಾಂಡ್ ಫಾಲ್ ವಿಂಟರ್ ರನ್‌ವೇ (Diesel Belt Skirt Trolling ) ಕಲೆಕ್ಷನ್‌ನಲ್ಲಿ ಬಿಡುಗಡೆಗೊಳಿಸಿದ ಮಿನಿ ಬೆಲ್ಟ್ ಸ್ಕರ್ಟ್ ಇದೀಗ ಎಲ್ಲೆಡೆ ಹಂಗಾಮಾ ಎಬ್ಬಿಸಿದೆ. ಕೆಲವರು ಈ ಬೆಲ್ಟ್ ಸ್ಕರ್ಟ್ ನೋಡಲು ಡಬ್ಲ್ಯೂ ಡಬ್ಲ್ಯೂ ಇ ( WWE) ಬೆಲ್ಟ್‌ನಂತಿದೆ ಎಂದು ಅಣಕಿಸಿದರೇ, ನೆಟ್ಟಿಗರು ದುಬಾರಿ ಬೆಲೆ ತೆತ್ತು ಕಂಫರ್ಟಬಲ್ ಇಲ್ಲ, ರಬ್ಬರ್‌ನದ್ದಾಗಿದೆ ಎಂದೆಲ್ಲಾ ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ.
ಏನಿದು ಬೆಲ್ಟ್ ಸ್ಕರ್ಟ್?
ಮೂಲತಃ ಇಟಾಲಿಯನ್ ಲಕ್ಷುರಿ ಬ್ರ್ಯಾಂಡ್ ಎಂದೆನಿಸಿಕೊಂಡ ಡೀಸೆಲ್ ಕಂಪನಿಯು ಎಂದಿನಂತೆ ಈ ಬಾರಿಯೂ ಫಾಲ್ ವಿಂಟರ್ ಕಲೆಕ್ಷನ್‌ನಲ್ಲಿ ಹೊಸ ಫ್ಯಾಷನ್‌ವೇರ್ ಲಿಸ್ಟ್‌ನಲ್ಲಿ ಮಿನಿ ಬೆಲ್ಟ್ ಸ್ಕರ್ಟ್ ಬಿಡುಗಡೆಗೊಳಿಸಿತು. ಈ ಕಲೆಕ್ಷನ್‌ನಲ್ಲಿ ಬಿಡುಗಡೆಗೊಂಡ ಒಂದು ಮಿನಿ ಬೆಲ್ಟ್ ಸ್ಕರ್ಟ್ ಬೆಲೆ ಒಂದು ಸಾವಿರ ಡಾಲರ್‌ಗಳಾಗಿದ್ದು, ರೂಪಾಯಿಗಳಲ್ಲಿ ೮೧, ೩೦೬ ರೂ.ಗಳೆಂದು ಅಂದಾಜಿಸಲಾಗಿದೆ. ಲೆದರ್‌ನಿಂದ ರೂಪಿಸಲಾದ ಬ್ರ್ಯಾಂಡೆಡ್ ಡಿಸೈನ್‌ನ ಮಿನಿ ಬೆಲ್ಟ್ ಮಾದರಿಯ ಸ್ಕರ್ಟ್ ಲಿಮಿಟೆಡ್ ಅಡಿಷನ್‌ನಲ್ಲಿ ಒಂದೆರೆಡು ಶೇಡ್‌ಗಳಲ್ಲಿ ಮಾತ್ರ ರೂಪಿಸಲಾಗಿದೆ. ಬಿಡುಗಡೆಗೊಂಡ ಕೆಲವೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಸಾಕಷ್ಟು ಮಂದಿ ಬುಕ್ ಮಾಡಿ ತರಿಸಿಕೊಂಡಿದ್ದರೆನ್ನಲಾಗಿದೆ ಕೂಡ. ಆ ಮಟ್ಟಿಗೆ ಪಾಪ್ಯುಲರ್ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಹರ್ಷ್. ಇನ್ನು ಇಂಟರ್‌ನ್ಯಾಷನಲ್ ಬ್ರ್ಯಾಂಡ್‌ಗಳ ಬೆಲೆ ಯಾವತ್ತಿಗೂ ದುಬಾರಿಯೇ! ಅದರಲ್ಲೂ ಡೀಸೆಲ್ ಬ್ರ್ಯಾಂಡ್‌ನ ಫ್ಯಾಷನ್‌ವೇರ್‌ಗಳಿಗಂತೂ ಮೊದಲಿನಿಂದಲೂ ಬೇಡಿಕೆ ಹೆಚ್ಚಾಗಿಯೇ ಇದೆ ಎನ್ನುತ್ತಾರೆ ಅವರು.
ಇದನ್ನೂ ಓದಿ | Invest Karnataka Saree Exhibition | ಫ್ಯಾಷನ್ ಪ್ರಿಯರನ್ನು ಸೆಳೆದ ಇನ್ವೆಸ್ಟ್ ಕರ್ನಾಟಕದ ಟ್ರೆಡಿಷನಲ್ ಸೀರೆಗಳ ಪ್ರದರ್ಶನ
ಟ್ರೋಲ್‌ಗೆ ಕಾರಣವೇನು?
ಅಂದಹಾಗೆ, ಟಿಕ್‌ಟಾಕ್ ಬಳಕೆ ಮಾಡುವ ಯುವತಿಯೊಬ್ಬಳು ಆನ್‌ಲೈನ್ ಮೂಲಕ ಬುಕ್ ಮಾಡಿ ಮಿನಿ ಬೆಲ್ಟ್ ಸ್ಕರ್ಟ್ ತರಿಸಿಕೊಂಡಿದ್ದಾರೆ. ಧರಿಸಿದಾಗ ಅದು ಕಂಫರ್ಟಬಲ್ ಫೀಲ್ ನೀಡಿಲ್ಲ. ಲೆದರ್ ಬದಲು ರಬ್ಬರ್‌ನಂತಹ ಮೆಟೀರಿಯಲ್‌ನಿಂದ ಈ ಬೆಲ್ಟ್ ಸ್ಕರ್ಟ್ ಸಿದ್ಧಪಡಿಸಿರುವಂತೆ ಭಾಸವಾಗಿದೆ. ಬಟನ್ ಅಥವಾ ಝಿಪ್ ಬದಲಿಗೆ ವೆಲ್‌ಕ್ರಾನ್ ಬಳಕೆ ಮಾಡಲಾಗಿದೆ. ಅಷ್ಟಾದರೇ ಪರವಾಗಿಲ್ಲ! ಅದನ್ನು ಧರಿಸಿ ಹೊರಹೋದಾಗ ಧರಿಸಿದವರಿಗೆ ನಿಲ್ಲಲು ಹಾಗೂ ಕೂರಲೂ ಸಾಧ್ಯವಾಗಿಲ್ಲ, ಹೊರಗೆ ಹೋದ ೨೦ ನಿಮಿಷಕ್ಕೆ ಮನೆಗೆ ಬಂದು ಬದಲಿಸುವ ತನಕ ಸಮಾಧಾನವಾಗಿಲ್ಲ! ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ, ಇಷ್ಟೊಂದು ದುಬಾರಿ ಬೆಲೆ ತೆತ್ತು ಖರೀದಿಸಿದ್ದಕ್ಕೆ, ಬೇಸರವಾಗಿದೆ ಎಂದು ನೆಗೆಟೀವ್ ಫೀಡ್‌ಬ್ಯಾಕ್ ನೀಡುವ ವಿಡಿಯೊ ಮಾಡಿ ಹರಿಯಬಿಟ್ಟಿದ್ದಾರೆ. ಇದೀಗ ಇದು ಎಲ್ಲೆಡೆ ವೈರಲ್ ಆಗಿದೆ. ನಂತರ ಕೇಳಬೇಕೇ! ಇದನ್ನು ನೋಡಿದ ಪ್ರಪಂಚದೆಲ್ಲೆಡೆ ಇರುವ ಫ್ಯಾಷನ್ ಪ್ರಿಯರು ಹಾಗೂ ನೆಟ್ಟಿಗರು ಕೂಡ ಬ್ರಾಂಡ್‌ನ ವಿರುದ್ದ ಗರಂ ಆಗಿದ್ದಾರೆ. ಸೋ, ಟ್ರೋಲ್ ಮಾಡಲಾರಂಭಿಸಿದ್ದಾರೆ.ಇನ್ನು, ಟ್ವಿಟರ್‌ನಲ್ಲಿಯೂ ಈ ಬಗ್ಗೆ ಈಗಾಗಲೇ ಸಾಕಷ್ಟು ಟ್ವೀಟ್ ಹರಿದಾಡುತ್ತಿವೆ.
ಬೆಲ್ಟ್ ಸ್ಕರ್ಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ನಿಕೋಲ್
ಅಂದಹಾಗೆ, ಈ ಹಿಂದೆ ಹಾಲಿವುಡ್ ನಟಿ ನಿಕೋಲ್ ಕಿಡ್ಮನ್ ಮ್ಯಾಗ್‌ಝೀನ್‌ವೊಂದರ ಕವರ್‌ಪೇಜ್‌ನಲ್ಲಿ ಹಾಲ್ಟರ್‌ನೆಕ್ ಟಾಪ್‌ನೊಂದಿಗೆ ಮೈಕ್ರೋ ಮಿನಿ ಬೆಲ್ಟ್ ಸ್ಕರ್ಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿದ್ದರು. ನಂತರ ಈ ಫ್ಯಾಷನ್ ಟ್ರೆಂಡಿಯಾಗಿ ಬೆಲ್ಟ್ ಸ್ಕರ್ಟ್ ಬಿಡುಗಡೆಗೊಂಡಿತ್ತು ಎಂಬುದನ್ನು ಇಲ್ಲಿ ಮರೆಯುವ ಹಾಗಿಲ್ಲ!
ಆದರೆ, ಸೆಲೆಬ್ರಿಟಿಗಳ ಸ್ಟೈಲಿಶ್ ಉಡುಪುಗಳು ಎಂದಿಗೂ ಸಾಮಾನ್ಯ ಮಹಿಳೆಯರ ಕಂಫರ್ಟಬಲ್ ಉಡುಪಾಗಲು ಸಾಧ್ಯವಿಲ್ಲ! ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಸ್ಟೈಲಿಸ್ಟ್‌ಗಳಾದ ಶ್ರಾಫ್ ಹಾಗೂ ಕರಣ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend style | ಸೂಪರ್ ಮಾಡೆಲ್ ಐಶಾನ್ಯಾ ಶಾನ್ ಫ್ಯಾಷನ್ ಪ್ರೇಮ