-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳಾ ಹಕ್ಕು ಹೋರಾಟಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚಾರಣೆ (Fashion Show News) ಕಾರ್ಯಕ್ರಮದಲ್ಲಿ ನಡೆದ ವಿಶೇಷ ಫ್ಯಾಷನ್ ಶೋನಲ್ಲಿ ಸಾಮಾನ್ಯ ಮಹಿಳೆಯರು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು, ಪೋಸ್ ನೀಡಿದ್ದು ವಿಶೇಷವಾಗಿತ್ತು. ಈ ಶೋನಲ್ಲಿ ಪಾಲ್ಗೊಂಡ ಬಹುತೇಕರು ಮೊದಲ ಬಾರಿ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದು, ಕೊಂಚ ಅಂಜಿಕೆಯಿಂದಲೇ ಹೆಜ್ಜೆ ಹಾಕಿದರು. ಕೆಲವರು ಮುಜುಗರಪಟ್ಟುಕ್ಕೊಳ್ಳುತ್ತಾ ಕ್ಯಾಟ್ ವಾಕ್ ಮಾಡಿದರೆ, ಇನ್ನು ಕೆಲವರು ಯಾವುದೇ ಅಂಜಿಕೆಯಿಲ್ಲದೆ ಧೈರ್ಯದಿಂದ ವಾಕ್ ಮಾಡಿದರು. ಈ ಕಾರ್ಯಕ್ರಮ ಮಲ್ಲೇಶ್ವರಂನ ಸೇವಾ ಸದನದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ರ್‍ಯಾಂಪ್ ವಾಕ್ ಮಾಡಿದ್ದು, ನೆರೆದಿದ್ದವರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಯಿತು.
ಫ್ಯಾಷನ್ ವಾಕ್ ಮಾಡಿದ ಮಹಿಳೆಯರಿಗೆ ಅಭಿನಂದನೆ
ರ್‍ಯಾಂಪ್ ಮೇಲೆ ಮೊದಲ ಬಾರಿ ತುಸು ಅಂಜಿಕೆಯಿಂದಲೇ ರ್‍ಯಾಂಪ್ ವಾಕ್ ಮಾಡಿದ ಮಹಿಳೆಯರನ್ನು ಗೌರವಿಸಿ ಅಭಿನಂದಿಸಲಾಯಿತು. ಶೋ ಸ್ಟಾಪರ್ ಆಗಿ ವಾಕ್ ಮಾಡಿದ ಮಾಡೆಲ್ ಹಾಗೂ ಮೇಕಪ್ ಆರ್ಟಿಸ್ಟ್ ಅಹಲ್ಯಾ ಅವರಿಗೆ ಡೈಮಂಡ್ ಕ್ವೀನ್ ಟೈಟಲ್ ನೀಡಲಾಯಿತು.
ಅಹಲ್ಯಾಗೆ ಡೈಮಂಡ್ ಕ್ವೀನ್ ಟೈಟಲ್
ಟೈಟಲ್ ವಿಜೇತೆ ಅಹಲ್ಯಾ ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಮಧ್ಯಮ ವರ್ಗದ ಮಹಿಳೆಯರಿಗೆ ನೀಡಲಾಗುವ ಬ್ಯೂಟಿ ಕೋರ್ಸ್‌ಗಳ ಬಗ್ಗೆ ವಿವರ ನೀಡಿದರು. ಹೇಗೆಲ್ಲ ಮಹಿಳೆಯರು ಸ್ವಾವಲಂಬಿಗಳಾಗಬಹುದು. ತಮ್ಮದೇ ಆದ ಬ್ಯೂಟಿ ಪಾರ್ಲರ್ ಆರಂಭಿಸಬಹುದು ಎಂಬುದರ ಬಗ್ಗೆ ವಿವರಿಸಿದರು.
ಇದನ್ನೂ ಓದಿ: Plus Size Fashion : ಪ್ಲಂಪಿಯಾಗಿದ್ದರೇನಂತೆ!ಇದೆ ಪ್ಲಸ್ ಸೈಜ್ ಫ್ಯಾಷನ್!
ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಕಿವಿಮಾತು
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಸುಶೀಲಮ್ಮ ಅವರು ಮಾತನಾಡಿದರು. ಮಹಿಳೆಯರು ಸ್ವಾವಲಂಬಿಗಳಾಗುವುದು ಮುಖ್ಯ. ಸಮಾಜದಲ್ಲಿ ತಮ್ಮದೇ ಆದ ಐಡೆಂಟಿಟಿ ರೂಪಿಸಿಕೊಳ್ಳಬೇಕು. ಅದರೊಂದಿಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಫ್ಯಾಷನ್ ಶೋನ ಜ್ಯೂರಿ ಪ್ಯಾನೆಲ್‌ನಲ್ಲಿ ಮಿಸೆಸ್ ಅರ್ತ್ ಇಂಡಿಯಾ ಯೂನಿವರ್ಸ್ ಜಯಲಕ್ಷ್ಮಿ ಬಾಯಿ ಹಾಗೂ ಫ್ಯಾಷನ್ ಪತ್ರಕರ್ತೆ ಶೀಲಾ ಸಿ. ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಎಸ್ ಮ್ಯಾಕ್ಸ್ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ದಯಾನಂದ್, ರಾಜ್ಯ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ನಾಗಲಕ್ಷ್ಮಿ ಬಾಯಿ, ಡಾ. ಅಂಬರೀಶ್, ಹಿರಿಯ ವಕೀಲರಾದ ಸತ್ಯಭಾಮ, ಸಾಮಾಜಿಕ ಕಾರ್ಯಕರ್ತೆ ಉಮಾದೇವಿ, ಮಹಿಳಾ ಹಕ್ಕುಗಳ ಹೋರಾಟ ಸಮಿತಿಯ ಮೋನಾ ಸಿಂಗ್, ಪ್ರಿಯಾಂಕಾ, ಪ್ರಮೀಳಾ ಭಾಗವಹಿಸಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)