–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಡಿಸೈನ್ ಕೌನ್ಸಿಲ್ ಆಪ್ ಇಂಡಿಯಾ (ಎಫ್‌ಡಿಸಿಐ) ಸಹಯೋಗದೊಂದಿಗೆ ಈಗಾಗಲೇ ಮುಂಬಯಿಯಲ್ಲಿ ಆರಂಭಗೊಂಡಿರುವ ಈ ಸಾಲಿನ ಲ್ಯಾಕ್ಮೆ ಫ್ಯಾಷನ್ ವೀಕ್ (Lakhme Fashion Week), ಮಾರ್ಚ್ 12ರವರೆಗೆ ಮುಂದುವರಿಯಲಿದೆ. ರಾಷ್ಟ್ರಾದ್ಯಂತ ಆಯ್ದ ಕೆಲವು ಟ್ಯಾಲೆಂಟೆಡ್ ಡಿಸೈನರ್‌ಗಳ ನಯಾ ಡಿಸೈನ್‌ಗಳಿಗೆ ವೇದಿಕೆ ಕಲ್ಪಿಸಿದೆ. ಈ ಬಗ್ಗೆ ಇಲ್ಲಿದೆ ವರದಿ.
ಮೊದಲನೇ ದಿನವೇ ಸಸ್ಟೈನಬಲ್ ಫ್ಯಾಷನ್ ವಾಕ್
ಲ್ಯಾಕ್ಮೆ ಫ್ಯಾಷನ್ ವೀಕ್‌ನ ಮೊದಲ ದಿನವೇ ಸಸ್ಟೈನಬಲ್ ಫ್ಯಾಷನ್‌ವೇರ್‌ಗಳು ರ್‍ಯಾಂಪ್ ಮೇಲೆ ಅನಾವರಣಗೊಂಡಿವೆ. ಇತ್ತೀಚೆಗೆ ಈ ಸಸ್ಟೈನಬಲ್ ಫ್ಯಾಷನ್ ಟ್ರೆಂಡಿಯಾಗಿದ್ದು, ಈ ಶೋನಲ್ಲಿ ಮಾಡೆಲ್‌ಗಳು ಡಿಸೈನರ್‌ಗಳ ಈ ಫ್ಯಾಷನ್ ವೇರ್‌ಗಳಲ್ಲಿ ರ್‍ಯಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡರು.
ರ್‍ಯಾಂಪ್ ಮೇಲೆ ಸೀರೆಗಳ ಅನಾವರಣ
ಅನಾವಿಲಾ ಬ್ರ್ಯಾಂಡ್‌ನ ಡಾಬು ಹೆಸರಿನ ಕಾನ್ಸೆಪ್ಟ್‌ನಲ್ಲಿ ದೇಸಿ ಸೀರೆಗಳ ನಾನಾ ರೂಪಗಳನ್ನು ಮಾಡೆಲ್‌ಗಳು ಅನಾವರಣಗೊಳಿಸಿದರು. ಸೀರೆಯನ್ನು ಕೇವಲ ಬೆಲ್ಟ್, ಜಿಪ್, ಬಟನ್‌ನಿಂದ ರೂಪ ಬದಲಿಸುವುದಲ್ಲ. ಬದಲಿಗೆ ಇದ್ಯಾವುದೂ ಬಳಸದೇ ಇತರೇ ಶೈಲಿಯಲ್ಲೂ ಉಡಬಹುದು ಎಂಬುದಕ್ಕೆ ಈ ಫ್ಯಾಷನ್ ಶೋ ಸಾಕ್ಷಿಯಾಗಿತ್ತು. ಗೋಲ್ಡ್, ಬ್ಲ್ಯೂ, ಸಿಲ್ವರ್ ಹೀಗೆ ನಾನಾ ವರ್ಣದ ಸೀರೆಯ ಮೇಲೆ ಪ್ರಿಂಟ್ ಮೋಟಿಫ್ ಡಿಸೈನ್ ಆಕರ್ಷಕವಾಗಿ ಕಾಣುತ್ತಿತ್ತು. ವೆಜಿಟೆಬಲ್ ಡೈಯಿಂಗ್, ಫ್ಲೋರಲ್ ಹಾಗೂ ಮಣ್ಣಿನ ಸೊಗಡು ಹೊಂದಿರುವಂತಹ ಸೀರೆಗಳ ವಿನ್ಯಾಸವಿರುವ ಈ ಶೋವನ್ನು ಭೂತಾಯಿಗೆ ಡೆಡಿಕೇಟ್ ಮಾಡಲಾಯಿತು. ಪರಿಸರ ಸ್ನೇಹಿ ಸೀರೆಗಳು ಎಲ್ಲರನ್ನು ಆಕರ್ಷಿಸಬಲ್ಲವು ಎಂಬುದನ್ನು ತೋರ್ಪಡಿಸಲಾಯಿತು. ಪರಿಸರಸ್ನೇಹಿ ಸೀರೆಗಳನ್ನು ಪ್ರೋತ್ಸಾಹಿಸಿ ಎಂಬುದು ಈ ಶೋನ ಥೀಮ್ ಆಗಿತ್ತು.
ಐಎನ್‌ಐಎಫ್‌ಡಿಯ ಜೆನ್ ನೆಕ್ಟ್ 2023 ಡಿಸೈನರ್‌ವೇರ್ಸ್
ಐಎನ್‌ಎಫ್‌ಡಿಯ ಸಹಯೋಗದಲ್ಲಿ ಕೋಯಿ, ಹೈರೋ, ಕೊಯ್‌ಟಾಯ್, ರುದ್ರಾಕ್ಷ್ ದ್ವಿವೇದಿ ಕಲೆಕ್ಷನ್‌ಗಳು ಪ್ರದರ್ಶನಗೊಂಡವು. ಮೆನ್ಸ್ ಹಾಗೂ ವುಮೆನ್ಸ್ ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್‍ಯಾಂಪ್ ವಾಕ್ ಮಾಡಿದ್ದು, ಜೆನ್ ನೆಕ್ಸ್ಟ್ ಟೀನೇಜ್ ಹೈಕಳಿಗೆ ಸೂಟ್ ಆಗುವಂತಿತ್ತು. ಎಲ್ಲವೂ ವೇರಬಲ್ ಫ್ಯಾಷನ್ ಆಗಿತ್ತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)