Site icon Vistara News

Makeup Brush Tips: ಮೇಕಪ್‌ ಪ್ರಿಯರೇ ಎಚ್ಚರ! ಸ್ವಚ್ಛವಿಲ್ಲದ ಹಳೆಯ ಮೇಕಪ್‌ ಬ್ರಶ್‌ಗಳಿಂದ ತ್ವಚೆಗೆ ಹಾನಿ ಗ್ಯಾರಂಟಿ

Makeup Brush

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮೇಕಪ್‌ ಪ್ರಿಯರ ಪ್ರೀತಿಗೆ ಪಾತ್ರವಾದ ಮೇಕಪ್‌ ಬ್ರಶ್‌ಗಳನ್ನು ಸೂಕ್ತ ನಿರ್ವಹಣೆ ಮಾಡದಿದ್ದಲ್ಲಿ, ನಿಧಾನಗತಿಯಲ್ಲಿ, ನಾನಾ ಬಗೆಯ ತ್ವಚೆಯ ಸಮಸ್ಯೆ ಎದುರಿಸಬೇಕಾದೀತು ಎನ್ನುತ್ತಾರೆ ಸೌಂದರ್ಯ ತಜ್ಞರು.

ಕೆಲವರು ಬಹಳಷ್ಟು ವರ್ಷಗಳಿಂದ ಮೇಕಪ್‌ಗೆ ಬಳಸುವ ಬ್ರಶ್‌ಗಳನ್ನು ಬದಲಿಸುವುದು ಇಲ್ಲ! ಇತ್ತ, ಅವುಗಳನ್ನು ಕ್ಲೀನ್‌ ಮಾಡುವುದು ಇಲ್ಲ. ಅಷ್ಟು ಮಾತ್ರವಲ್ಲದೇ, ಅತಿಯಾದ ಆತ್ಮವಿಶ್ವಾಸದಿಂದ ಇತರರು ಬಳಸಿದವನ್ನು ಬಳಸುತ್ತಾರೆ. ಆ ತಕ್ಷಣಕ್ಕೆ ಇದು ಸಮಸ್ಯೆ ಎಂದನಿಸದಿದ್ದರೂ ಮುಂದೊಮ್ಮೆ ಚರ್ಮದ ಸಮಸ್ಯೆ ಎದುರಾಗಬಹುದು. ಹಾಗಾಗಿ, ನಾವು ತ್ವಚೆಯನ್ನು ಆರೈಕೆ ಮಾಡುವಂತೆಯೇ, ಬಳಸುವ ಮೇಕಪ್‌ ಬ್ರಶ್‌ಗಳನ್ನು ಆರೈಕೆ ಮಾಡಬೇಕು! ಆಗಾಗ್ಗೆ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಸೌಂದರ್ಯ ತಜ್ಞೆ ಜೂಹಿ. ಅವರ ಪ್ರಕಾರ, ಅತಿ ಹೆಚ್ಚಾಗಿ ಮೇಕಪ್‌ ಬ್ರ‍ಷ್‌ ಬಳಸಿದಲ್ಲಿ ಮಾತ್ರ, ಆಗಾಗ್ಗೆ ಕ್ಲೀನ್‌ ಮಾಡುವುದು ಉತ್ತಮ. ಅಪರೂಪಕ್ಕೆ ಬಳಸಿದಲ್ಲಿ ಪದೇ ಪದೇ ಸ್ವಚ್ಛಗೊಳಿಸುವ ಅಗತ್ಯವಿರುವುದಿಲ್ಲ ಎಂದು ಸಲಹೆ ನೀಡುತ್ತಾರೆ. ಈ ಕುರಿತಂತೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

ಬ್ರಶ್‌ಗಳನ್ನು ವರ್ಗೀಕರಿಸಿ

ಮೇಕಪ್‌ ಬ್ರಷ್‌ಗಳನ್ನು ವರ್ಗಿಕರಿಸಿ. ಪ್ರತ್ಯೇಕವಾಗಿ ವಾಶ್‌ ಮಾಡಿ. ಇಲ್ಲವಾದಲ್ಲಿ ಕೊಳೆ ಒಂದಕ್ಕೊಂದು ಅಂಟುವ ಸಾಧ್ಯತೆ ಇರುತ್ತದೆ. ಬ್ರಶ್‌ಗಳನ್ನು ಒಂದರ ಮೇಲೊಂದು ಇರಿಸಬೇಡಿ. ಪಕ್ಕ ಪಕ್ಕಕ್ಕೆ ಜೋಡಿಸಿ, ಸ್ವಚ್ಛಗೊಳಿಸಿ.

ಬ್ರಶ್‌ ವಾಶ್‌ ಹೀಗೆ

ಮೇಕಪ್‌ ಬ್ರಶ್‌ಗಳನ್ನು ಆದಷ್ಟೂ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಉತ್ತಮ. ಬೇಬಿ ಶ್ಯಾಂಪೂ ಇಲ್ಲವೇ ಯಾವುದಾರೂ ಮೈಲ್ಡ್‌ ಶ್ಯಾಂಪೂ ಕೂಡ ಬಳಸಬಹುದು. ಬ್ರಶ್ ಗಳನ್ನು ವಾಶ್‌ ಮಾಡಲು ಮಾರುಕಟ್ಟೆಯಲ್ಲೂ ನಾನಾ ಬಗೆಯ ಲಿಕ್ವಿಡ್‌ ಕೂಡ ದೊರೆಯುತ್ತದೆ.

ಇದನ್ನೂ ಓದಿ: Monsoon Makeup Care: ಮಳೆಗಾಲಕ್ಕೆ ವಾಟರ್‌ಪ್ರೂಫ್‌ ಕಾಸ್ಮೆಟಿಕ್ಸ್‌ ಬಳಸುತ್ತೀರಾ! ಹಾಗಾದಲ್ಲಿ ಎಚ್ಚರ ವಹಿಸಿ!

ನೆನೆ ಹಾಕಬೇಡಿ

ಅತಿ ಹೆಚ್ಚಾಗಿ ಬಳಸಲ್ಪಡುವ ಬ್ರಶ್‌ಗಳಾದ ಸ್ಟಿಪ್ಲಿಂಗ್‌ ಬ್ರಶ್‌, ಕನ್ಸೀಲರ್‌ ಬ್ರಶ್‌, ಪೌಡರ್‌ನ್ರಶ್‌, ಕಾಂಟೌರ್‌, ಬ್ರಾಂಝಾರ್‌, ಹೈಲೈಟ್‌ ಬ್ರಶ್‌ಗಳನ್ನು ಯಾವುದೇ ಕಾರಣಕ್ಕೂ ಸಾಬೂನು ಅಥವಾ ಶ್ಯಾಂಪೂ ನೀರಿನಲ್ಲಿ ಹೆಚ್ಚು ಹೊತ್ತು ನೆನೆ ಹಾಕಬೇಡಿ. ಬ್ರಶ್‌ ಕಿತ್ತು ಬರುವ ಸಾಧ್ಯತೆ ಇರುತ್ತದೆ.

ಧೂಳಿನ ಜಾಗದಿಂದ ದೂರವಿಡಿ

ಮೇಕಪ್‌ ಬ್ರಶ್‌ಗಳನ್ನು ತೊಳೆದ ತಕ್ಷಣ ಬಳಸಬಾರದು. ಫ್ಯಾನ್‌ ಗಾಳಿಯಲ್ಲಿ ಒಣಗಿಸಿ. ಯಾವುದೇ ಬ್ರಶ್‌ಗಳನ್ನು ಎಕ್ಸ್‌ಪೋಸ್‌ ಮಾಡಿ ಇರಿಸಬೇಡಿ. ಬಳಸಿದ ನಂತರ ಒಂದು ಬಾಕ್ಸ್‌ನಲ್ಲಿಡುವುದು ಉತ್ತಮ. ಯಾವುದೇ ಧೂಳು ಸೇರುವುದಿಲ್ಲ

ತ್ವಚೆಯ ಸಮಸ್ಯೆ ಇರುವವರು ಬಳಸುವ ಬ್ರಶ್‌ ಬಳಕೆ ಬೇಡ

ನೀವು ಬಳಸುವ ಬ್ರಶ್‌ಗಳನ್ನು ಆದಷ್ಟೂ ಬೇರೆಯವರು ಬಳಸಲು ನೀಡಕೂಡದು. ಮುಖದ ಮೇಲೆ ಅಲರ್ಜಿ ಅಥವಾ ಮೊಡವೆಗಳು ಮೂಡಲು ತ್ವಚೆಯ ಸಮಸ್ಯೆ ಇರುವವರು ಬಳಸಿದ ಬ್ರಶ್‌ಗಳನ್ನು ಬಳಸುವುದು ಒಂದು ಕಾರಣ ಎಂಬುದು ತಿಳಿದಿರಲಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version