-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮ್ಯಾಂಗೋ ನೇಲ್ ಆರ್ಟ್ ಸದ್ಯ ನೇಲ್ ಆರ್ಟ್ (Mango Nail Art) ಲೋಕದಲ್ಲಿ ಟ್ರೆಂಡಿಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಾನಾ ಬಗೆಯ ಮಾವಿನ ಹಣ್ಣಿನ ಚಿತ್ತಾರಗಳು ನೇಲ್ ಆರ್ಟ್ ಡಿಸೈನ್‌ನಲ್ಲಿ ಮೂಡಿ ಬಂದಿದ್ದು, ಬ್ಯೂಟಿ ಪ್ರಿಯರು ತಮ್ಮ ಊಹೆಗೆ ತಕ್ಕಂತೆ ಬಗೆಬಗೆಯ ಡಿಸೈನ್‌ನಲ್ಲಿ ಇವುಗಳ ಚಿತ್ತಾರವನ್ನು ಬೆರಳುಗಳ ಉಗುರುಗಳ ಮೇಲೆ ಮೂಡಿಸತೊಡಗಿದ್ದಾರೆ.
ಸೀಸನ್‌ಗೆ ಬಂತು ಮಾವಿನ ಚಿತ್ತಾರ
“ನೇಲ್ ಆರ್ಟ್ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಯಾ ಸೀಸನ್‌ನಲ್ಲಿ ಪ್ರಚಲಿತದಲ್ಲಿರುವ ಟಾಪಿಕ್ ಆಗಬಹುದು, ಕಲರ್ ಆಗಬಹುದು, ಹಬ್ಬ ಆಗಬಹುದು ಅಥವಾ ಹಣ್ಣು-ತರಕಾರಿಯೂ ಆಗಬಹುದು. ಇನ್ನು ಈ ಸೀಸನ್‌ನಲ್ಲಿ ಎಲ್ಲರಿಗೂ ತಿಳಿದಿರುವಂತೆ ಮಾವಿನ ಹಣ್ಣುಗಳ ಅಬ್ಬರ. ಇದಕ್ಕೆ ಪೂರಕ ಎಂಬಂತೆ, ನಾನಾ ಜಾತಿಯ ಅಂದರೇ, ವೆರೈಟಿ ಮಾವಿನ ಹಣ್ಣಿನ ರೂಪಗಳು ಮಿನಿಯೇಚರ್ ರೂಪದಲ್ಲಿ ಉಗುರುಗಳ ಮೇಲೆ ಸಿಂಗಾರಗೊಳ್ಳುತ್ತಿವೆ. ಕೆಲವರು, ನೇಲ್ ಪಾರ್ಲರ್‌ಗೆ ಹೋಗಿ ಡಿಸೈನ್ ಮಾಡಿಸಿಕೊಂಡರೇ, ಇನ್ನು ಕೆಲವರು ಖುದ್ದು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇಲ್ಲವೇ ತಮ್ಮ ಆಪ್ತರಿಗೆ ಸಹೋದರಿಯರಿಗೆ ತಾವೇ ಬಿಡಿಸುತ್ತಾರೆ ಎನ್ನುವ ನೇಲ್ ಆರ್ಟ್ ಡಿಸೈನರ್ ರಿಂಕಿ ಪ್ರಕಾರ, ಯಾವುದೇ ಡಿಸೈನ್ ಮೂಡಿಸಲು ಕಲಾವಿದರ ಮನಸ್ಸು ಅಗತ್ಯ ಎನ್ನುತ್ತಾರೆ.
ಬ್ಯೂಟಿ ಬ್ಲಾಗ್-ವ್ಲಾಗ್‌ಗಳಲ್ಲಿ ಆರಂಭವಾದ ಟ್ರೆಂಡ್
ಈ ಸಮ್ಮರ್ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಇದೀಗ ನೇಲ್ ಆರ್ಟ್ ಪ್ರಿಯರು ಮ್ಯಾಂಗೋ ನೇಲ್ ಆರ್ಟ್ ಚಿತ್ತಾರಗಳಿಗೆ ಮನ ಸೋತಿದ್ದಾರೆ. ಬ್ಯೂಟಿ ಬ್ಲಾಗ್-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್ ಇನ್ಫೂಯೆನ್ಸರ್ಸ್ ತಮ್ಮ ನೇಲ್ ಆರ್ಟ್‌ಗಳನ್ನು ಪ್ರದರ್ಶಿಸುತ್ತಿರುವುದು ಟ್ರೆಂಡ್‌ಗೆ ಕಾರಣವಾಗಿದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.
ಪ್ರಯೋಗಾತ್ಮಕ ವಿನ್ಯಾಸ
ಇನ್ನು, ಪ್ರಯೋಗಾತ್ಮಕ ಶೇಡ್ ಚಿತ್ತಾರ ಮೂಡಿಸಿರುವ ಕೆಲವು ನೇಲ್ ಆರ್ಟ್ ಪ್ರೇಮಿಗಳು ಸೋಷಿಯಲ್ ಮೀಡಿಯಾದ ತಮ್ಮ ಬ್ಯೂಟಿ ಪೇಜ್‌ಗಳಲ್ಲಿ, ಬೆರಳ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಫ್ರೂಟ್ಸ್ ನೇಲ್ ಆರ್ಟ್ ಡಿಸೈನ್‌ನಲ್ಲಿ ಮಾವಿನ ಹಣ್ಣಿನ ಡಿಸೈನ್ ಟ್ರೆಂಡಿಯಾಗಿದೆ. ಹಾಗೆಂದು ಇಂಟರ್‌ನ್ಯಾಷನಲ್ ಫ್ಯಾಷನ್‌ನಲ್ಲಿ ಸದ್ಯಕ್ಕೆ ಇದು ಇಲ್ಲ. ಈ ಡಿಸೈನ್ ಏನಿದ್ದರೂ ನಮ್ಮ ರಾಷ್ಟ್ರದಲ್ಲಿ ಮಾತ್ರ. ಅದರಲ್ಲೂ ಸೌತ್ ಇಂಡಿಯಾದಲ್ಲಿ ಎಂಬುದು ಗೊತ್ತಿರಲಿ ಎನ್ನುತ್ತಾರೆ ಡಿಸೈನರ್ಸ್.
ಇದನ್ನೂ ಓದಿ: Saree Fashion: ಮಹಿಳೆಯರ ಮನಗೆದ್ದ ಕಟ್ ವರ್ಕ್ ಬಾರ್ಡರ್ ಪಾರ್ಟಿ ಸೀರೆ
ಮ್ಯಾಂಗೋ ನೇಲ್ ಆರ್ಟ್ ಟಿಪ್ಸ್
- ಸನ್ ಕಲರ್ ಹಾಗೂ ಗ್ರೀನ್ ನೇಲ್ ಕಲರ್ ಬಳಸಿ.
- ಒಂದು ಉಗುರಿಗೆ ಮಾತ್ರ ಡಿಸೈನ್ ಮಾಡುವ ಟ್ರೆಂಡ್ ಕೂಡ ಇದೆ.
- ಮ್ಯಾಂಗೋ ಡಿಸೈನ್ ಮಾಡುವುದಿದ್ದಲ್ಲಿ ಮೊದಲೇ ಯಾವ ಬಗೆಯದ್ದನ್ನು ಚಿತ್ರಿಸಬೇಕು ಎಂಬುದನ್ನು ಮೊದಲೇ ಡಿಸೈಡ್ ಮಾಡಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )