-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಂಡ್‌ಲೂಮ್ ಸೀರೆಗಳತ್ತ (National Handloom Day) ಯುವತಿಯರ ಒಲವು ಮೊದಲಿಗಿಂತ ಹೆಚ್ಚಾಗಿದೆ. ಹೌದು, ಇದುವರೆಗೂ ಒಂದು ವರ್ಗದ ಮಹಿಳೆಯರಿಗೆ ಹಾಗೂ ದೇಸಿ ಸೀರೆ ಪ್ರಿಯರಿಗೆ ಮಾತ್ರ ಸೀಮಿತವಾಗಿದ್ದ, ಹ್ಯಾಂಡ್‌ಲೂಮ್ ಸೀರೆಗಳು ಇದೀಗ ಈ ಜನರೇಷನ್‌ನ ಯುವತಿಯರನ್ನು ಸೆಳೆಯುತ್ತಿವೆ.
ಯುವತಿಯರ ಚಾಯ್ಸ್‌ನಲ್ಲಿ ಹ್ಯಾಂಡ್‌ಲೂಮ್ ಸೀರೆಗಳು
ಸಿಂಪಲ್ ಲುಕ್, ಪರಿಸರ ಸ್ನೇಹಿ ಹಾಗೂ ದೇಸಿ ಸೀರೆಗಳ ಪ್ರೇಮಿಗಳ ವಾರ್ಡ್ರೋಬ್‌ನಲ್ಲಿ ಮಾತ್ರ ಸ್ಥಾನಗಳಿಸಿದ್ದ ಈ ಬಗೆಬಗೆಯ ಹ್ಯಾಂಡ್‌ಲೂಮ್ ಸೀರೆಗಳು ಇದೀಗ ನಿಧಾನಗತಿಯಲ್ಲಿ ಜೆನ್ ಜಿ ಹಾಗೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್ ಸೀರೆಗಳ ಲಿಸ್ಟ್ನಲ್ಲೂ ಇಣುಕುತ್ತಿವೆ. ಪರಿಣಾಮ, ಸೀರೆಯು ಹ್ಯಾಂಡ್‌ಲೂಮ್ ದ್ದಾದರೂ, ಇಂಡೋ-ವೆಸ್ಟರ್ನ್ ಡ್ರೇಪಿಂಗ್ ಸ್ಟೈಲ್‌ಸೇರಿದಂತೆ ನಾನಾ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಸೀರೆಗಳನ್ನು ಹೀಗೂ ಸ್ಟೈಲಿಂಗ್ ಮಾಡಬಹುದು ಎಂಬುದನ್ನು ಸಾಬೀತು ಪಡಿಸಿವೆ. ಜೊತೆಗೆ ದೇಸಿ ಪ್ಲಸ್ ವೆಸ್ಟರ್ನ್ ಸ್ಟೈಲ್‌ಗೆ ಸಾಥ್ ನೀಡುತ್ತಿವೆ.
ಹ್ಯಾಂಡ್‌ಲೂಮ್ ಸೀರೆಗಳ ಹೊಸ ಸ್ಟೈಲಿಂಗ್
ಸಮೀಕ್ಷೆಯೊಂದರ ಪ್ರಕಾರ, ಹ್ಯಾಂಡ್‌ಲೂಮ್ ಸೀರೆಗಳು ಇತ್ತೀಚಿನ ದಿನಗಳಲ್ಲಿ ಹೊಸ ಸ್ಟೈಲಿಂಗ್‌ನಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಇಂಡೋ-ವೆಸ್ಟರ್ನ್ ಶೈಲಿಯ ಮಿಕ್ಸ್ ಮ್ಯಾಚ್ ಡ್ರೇಪಿಂಗ್‌ನಲ್ಲಿ ಪಾಪುಲರ್ ಆಗಿವೆ. ಅಲ್ಲದೇ, ಹುಡುಗಿಯರ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಹೊಂದಿಕೊಂಡಿವೆ. ಇದು ನಿಜ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹ್ಯಾಂಡ್‌ಲೂಮ್ ಸೀರೆ ಪ್ರೇಮಿಗಳ ಅಭಿಪ್ರಾಯ
ಹ್ಯಾಂಡ್‌ಲೂಮ್ ಸೀರೆ ಪ್ರೇಮಿ ಹಾಗೂ ಡಿಸೈನರ್ ರೇಣುಕಾ ಹೇಳುವಂತೆ, ಮೊದಲೆಲ್ಲಾ ಹ್ಯಾಂಡ್‌ಲೂಮ್ ಸೀರೆಗಳನ್ನು ಕೇವಲ ಮಹಿಳಾವಾದಿಗಳು, ದೇಸಿ ಲುಕ್ ಬಯಸುವವರು ಹಾಗೂ ರಾಜಕೀಯ ಕ್ಷೇತ್ರದ ಮಹಿಳೆಯರು ಮಾತ್ರ ಉಡುತ್ತಿದ್ದರು. ಇದೀಗ ಯುವತಿಯರೂ ಉಡಲಾರಂಭಿಸಿದ್ದಾರೆ ಎನ್ನುತ್ತಾರೆ. ಇನ್ನು, ಸೀರೆ ಡಿಸೈನರ್ ರಾಜಿ ಹೇಳುವಂತೆ, ಹ್ಯಾಂಡ್‌ಲೂಮ್ ಸೀರೆಗಳ ಪ್ರದರ್ಶನಕ್ಕೆ ಸರಕಾರ ಕೂಡ ಸಹಕಾರ ನೀಡುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಉಚಿತ ಸೌಲಭ್ಯಗಳನ್ನು ನೀಡಿ, ಅವುಗಳನ್ನು ನೇಯುವವರಿಗೆ ನೇರ ಮಾರುಕಟ್ಟೆ ಕಲ್ಪಿಸುವಲ್ಲಿ ನೆರವಾಗುತ್ತಿದೆ. ಇದಕ್ಕೆಂದೇ ಪ್ರತಿ ವರ್ಷ ಉದ್ಯಾನನಗರಿಯಲ್ಲಿ ಪ್ರದರ್ಶನ ಹಾಗೂ ಮಾರಾಟ ಮೇಳಗಳು ನಡೆಯುತ್ತವೆ ಎನ್ನುತ್ತಾರೆ.
ಖರೀದಿ ಸುಲಭ
ಮೊದಲೆಲ್ಲ ಕೇವಲ ಹ್ಯಾಂಡ್‌ಲೂಮ್ ಸೀರೆ ಖರೀದಿಸುವುದು ಸುಲಭವಾಗಿರಲಿಲ್ಲ! ಇದೀಗ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೇ ಸಾಕು, ಮನೆ ಬಾಗಿಲಿಗೆ ಇವು ತಲುಪುತ್ತವೆ. ಹಾಗಾಗಿ ಖರೀದಿಸಿ, ಉಡುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)