-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್ ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.
ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು
“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್ ಕಂಡೀಷನ್ ಕೋಣೆಗಳಲ್ಲಿ ಹಾಗೂ ಇನ್‌ಡೋರ್ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್ ಹಾಗೂ ಯುವತಿಯರಲ್ಲೂ ಕಾಮನ್ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ನಮಿತಾ. ಅವರ ಪ್ರಕಾರ, ಶಾರ್ಟ್ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್ ಆಗಿವೆ ಎನ್ನುತ್ತಾರೆ.
ಹೈ ಬನ್ ಹೇರ್‌ಸ್ಟೈಲ್
ನೆತ್ತಿಯ ಮೇಲೆ ಹಾಕುವಂತಹ ಹೈ ಬನ್ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!
ಪೋನಿಟೈಲ್ ವಿತ್ ಫ್ರಿಂಝ್ ಹೇರ್‌ಸ್ಟೈಲ್
ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್ ಮಾಡುವ ಫ್ರಿಂಝ್ ಹೇರ್‌ಸ್ಟೈಲ್ ಹಿಂದೆ ಸಿಂಪಲ್ ಪೋನಿಟೈಲ್ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್ ಕಾಂಬಿನೇಷನ್ ಇದಾಗಿರುತ್ತದೆ.
ಹನ್ ಹೇರ್‌ಸ್ಟೈಲ್
ಅರ್ಧ ಫ್ರೀ ಹೇರ್‌ಸ್ಟೈಲ್ ಹಾಗೂ ಅರ್ಧ ಕಟ್ಟಿದ ಬನ್ ಹೇರ್‌ಸ್ಟೈಲ್ ಕಾಂಬೀನೇಷನ್ ಈ ಸೀಸನ್‌ನ ಹನ್ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್ ಹೇರ್‌ಸ್ಟೈಲ್ ಮಿಕ್ಸ್ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್ ಹನ್ ಹೇರ್‌ಸ್ಟೈಲ್. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್ ಲಿಸ್ಟ್‌ನಲ್ಲಿದೆ.
ಬೇಸಿಗೆ ಹೇರ್‌ಸ್ಟೈಲ್ ಫಾಲೋ ಮಾಡಲು ಹೀಗೆ ಮಾಡಿ
- ಹೊರಗಡೆ ಹೋಗುವಾಗ ಮೇಲಿನ ಹೇರ್ಸ್ಟೈಲ್ಗಳನ್ನು ಮಾಡಿ.
- ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
- ಫ್ರಿಂಝ್ ಮಾಡದಿದ್ದವರೂ ಸೈಡ್ಲಾಕ್ಸ್ ಕೂದಲ ವಿನ್ಯಾಸ ಮಾಡಬಹುದು.
- ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
- ಮೇಲಿನ ಹೇರ್‌ಸ್ಟೈಲ್ಸ್ ನಿಮಗೆ ಸ್ಲಿಮ್ ಲುಕ್ ನೀಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್ ರಿಂಗ್!