ನವ ದೆಹಲಿ: ಬಂಗಾರದ ದರದಲ್ಲಿ ಗುರುವಾರ ದಿಢೀರ್ ೭೧೦ ರೂ. ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ ೧,೨೦೦ ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ೨೪ ಕ್ಯಾರಟ್ ಬಂಗಾರದ ದರದಲ್ಲಿ ಪ್ರತಿ ೧೦ ಗ್ರಾಮ್‌ಗೆ ೫೧,೪೪೦ ರೂ.ಗೆ ಹೆಚ್ಚಳವಾಗಿದೆ. ೨೨ ಕ್ಯಾರಟ್ ಚಿನ್ನದ ದರದಲ್ಲಿ ಪ್ರತಿ ೧೦ ಗ್ರಾಮ್‌ಗೆ ೪೭,೧೫೦ ರೂ.ಗೆ ದರ ಏರಿಕೆಯಾಗಿದೆ. ಅಂದರೆ ೬೫೦ ರೂ. ವೃದ್ಧಿಸಿದೆ. ಬೆಳ್ಳಿಯ ೧ ಕೆ.ಜಿ ದರ ೬೧,೨೦೦ ರೂ.ಗೆ ಹೆಚ್ಚಳವಾಗಿದೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಸಿದ ಬೆನ್ನಲ್ಲೇ ಬಂಗಾರ ಮತ್ತು ಬೆಳ್ಳಿಯ ದರಗಳು ಜಿಗಿಯಿತು. ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಭಾರತದಲ್ಲೂ ದರಗಳು ವ್ಯತ್ಯಾಸವಾಗುತ್ತವೆ. ಚಿನ್ನದ ವಾಯಿದಾ ವಹಿವಾಟಿನಲ್ಲಿ ಕೂಡ ದರ ಏರಿತು. ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ ೧,೭೩೪ ಡಾಲರ್‌ಗೆ ವೃದ್ಧಿಸಿತು.
ಚಿನ್ನದ ದರ ಜಿಗಿತ ಏಕೆ?: ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು ಮತ್ತೊಮ್ಮೆ ಏರಿಸಿದ್ದರೂ, ಮುಂಬರುವ ದಿನಗಳಲ್ಲಿ ಇದೇ ರೀತಿಯ ಬಡ್ಡಿ ದರ ಏರಿಕೆ ಸಾಧ್ಯತೆ ಕ್ಷೀಣಿಸಿದೆ. ಇದರ ಪರಿಣಾಮ ಡಾಲರ್ ಮತ್ತು ಬಾಂಡ್ ಆದಾಯ ದುರ್ಬಲವಾಗುವ ನಿರೀಕ್ಷೆ ಉಂಟಾಗಿದೆ. ಇದರ ಪರಿಣಾಮ ಸುರಕ್ಷಿತ ಹೂಡಿಕೆ ಎನ್ನಿಸಿರುವ ಬಂಗಾರದ ದರ ವೃದ್ಧಿಸಿತು.