ಬೆಂಗಳೂರು: ಬಂಗಾರದ ದರದಲ್ಲಿ (Gold rate) ಈ ವರ್ಷ ಶುರುವಿನಲ್ಲಿಯೇ ಏರುಗತಿ ದಾಖಲಾಗಿದ್ದರೂ, ಕಳೆದ ಮೂರು ದಿನಗಳಲ್ಲಿ ಒಟ್ಟು 1,300 ರೂ. ಇಳಿಕೆಯಾಗಿದೆ. ಹೀಗಾಗಿ ಚಿನ್ನ ಖರೀದಿಸಲು ಬಯಸುವವರಿಗೆ ಇದು ಸಿಹಿ ಸುದ್ದಿ. ಬೆಂಗಳೂರಿನಲ್ಲಿ ಸೋಮವಾರ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ (Gold price) 57,210 ರೂ. ಇತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್ ಸ್ವರ್ಣದ ದರ 52,450 ರೂ. ಇತ್ತು. 1 ಕೆಜಿ ಬೆಳ್ಳಿಯ ದರ 74,200 ರೂ. ಇತ್ತು.
24 ಕ್ಯಾರಟ್ ಚಿನ್ನದ ದರ ಫೆಬ್ರವರಿ 2 ರಂದು 58,510 ರೂ. ಇತ್ತು. ಫೆಬ್ರವರಿ 3ರಂದು 530 ರೂ. ಇಳಿದು 57,980 ರೂ.ಗೆ ತಗ್ಗಿತ್ತು. ಫೆ.4ರಂದು 770 ರೂ. ತಗ್ಗಿ 57,210 ರೂ.ಗೆ ಇಳಿದಿತ್ತು. ಸೋಮವಾರ ಯಥಾಸ್ಥಿತಿಯಲ್ಲಿದೆ. ಹೀಗಾಗಿ ಒಟ್ಟು 1300 ರೂ. ತಗ್ಗಿದಂತಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳು ಚಿನ್ನದ ಸ್ಥಳೀಯ ದರಗಳ ಮೇಲೆ ಪ್ರಭಾವ ಬೀರುತ್ತವೆ. ಈ ವರ್ಷ ಬಂಗಾರದ ದರ ಏರುಗತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಇಳಿಕೆ ಆಗಿದ್ದಾಗ ಖರೀದಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.
ದರ ಇಳಿಕೆಗೆ ಕಾರಣವೇನು? ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ವಾರಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಚಿನ್ನದ ದರ ಮುಟ್ಟಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಉಳಿದೆಲ್ಲ ಕರೆನ್ಸಿಗಳ ಎದುರು ಡಾಲರ್ ಪ್ರಬಲವಾಗಿರುವುದು ಇದಕ್ಕೆ ಕಾರಣ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬಂಗಾರದ ದರ 1,865 ಡಾಲರ್‌ಗೆ ಇಳಿಕೆಯಾಗಿದೆ. ಡಾಲರ್ ಇಂಡೆಕ್ಸ್ 0.2% ಹೆಚ್ಚಳವಾಗಿತ್ತು. ಅಮೆರಿಕದ ವಾಯಿದಾ ಮಾರುಕಟ್ಟೆಯಲ್ಲಿ ಬಂಗಾರದ ದರ ಏರಿಕೆ ಆಗಿರುವುದನ್ನು ಕೂಡ ಗಮನಿಸಬಹುದು. ಹೀಗಾಗಿ ಬಂಗಾರದ ದರ ತಾತ್ಕಾಲಿಕವಾಗಿ ಇಳಿಕೆಯಾಗಿದ್ದರೂ, ಮುಂಬರುವ ದಿನಗಳಲ್ಲಿ ಮತ್ತೆ ಏರುಗತಿಗೆ ಮರಳುವ ಸಾಧ್ಯತೆ ಇದೆ.
ಜಾಗತಿಕ ಮಟ್ಟದಲ್ಲಿ ಬಡ್ಡಿ ದರಗಳು ಏರುಗತಿಯಲ್ಲಿ ಮುಂದುವರಿದಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತದ ಛಾಯೆ ಕಾಣಿಸಿಕೊಂಡಿದೆ. ಆರ್ಥಿಕ ಹಿಂಜರಿತದ ಸಂದರ್ಭ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ತಾಣವಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಣದುಬ್ಬರ ಎದುರಿಸಲು ಕೂಡ ಬಂಗಾರ ಸಹಕರಿಸುತ್ತಿದೆ. ಹೀಗಾಗಿ ದರ ಏರಿಕೆಯಾಗಬಹುದು ಎಂದು ಭಾವಿಸಲಾಗಿದೆ.
ಹೂಡಿಕೆಯ ದೃಷ್ಟಿಯಿಂದ ಬಂಗಾರವನ್ನು ನೀವು ಖರೀದಿಸುವುದಿದ್ದರೆ ಹಲವಾರು ಆಯ್ಕೆಗಳು ಲಭ್ಯವಿದೆ. ಆಫ್‌ಲೈನ್‌ನಲ್ಲಿ ಜ್ಯುವೆಲ್ಲರಿ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿ, ಚಿನ್ನದ ಪದಕ, ಗಟ್ಟಿ ಖರೀದಿ ಒಂದು ವಿಧವಾದರೆ, ಆನ್‌ಲೈನ್‌ನಲ್ಲಿ ಕೂಡ ಹೂಡಿಕೆ ಮಾಡಬಹುದು. ಫೋನ್ ಪೇ, ಗೂಗಲ್ ಪೇ, ಪೇಟಿಂಎಂ ಇತ್ಯಾದಿಗಳಲ್ಲಿ ಕೂಡ ಸುಲಭವಾಗಿ ಇನ್ವೆಸ್ಟ್ ಮಾಡಬಹುದು. 200, 300, 500, 1000 ರೂ.ಗಳ ಸಣ್ಣ ಮೊತ್ತದಲ್ಲೂ ಹೂಡಿಕೆ ಮಾಡಲು ಈಗ ಅವಕಾಶಗಳು ಲಭ್ಯವಿದೆ.