Site icon Vistara News

ವಿಸ್ತಾರ Money Guide : Sovereign Gold Bond : ಸಾವರಿನ್‌ ಗೋಲ್ಡ್ ಬಾಂಡ್‌ ಮಾರಾಟ ಇಂದಿನಿಂದ ಶುರು

gold bond

Sovereign Gold Bond Scheme Day 1: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ತನ್ನ ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ (Sovereign Gold Bond Scheme) 2022-23 ಸೀರೀಸ್‌ IV ಚಂದಾದಾರಿಕೆಯನ್ನು (subscription) ಮಾರ್ಚ್‌ 6ರಂದು ಆರಂಭಿಸಿದೆ. ಮಾರ್ಚ್‌ 10 ತನಕ ಇದು ಲಭಿಸಲಿದೆ. ಆರ್‌ಬಿಐ ಈ ಬಾಂಡ್‌ನ ಬಿಡುಗಡೆಯ ದರವನ್ನು ಪ್ರತಿ ಗ್ರಾಮ್‌ಗೆ 5,409 ರೂ. ಎಂದು ನಿಗದಿಪಡಿಸಿದೆ. ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವವರಿಗೆ 50 ರೂ.ಗಳ ಡಿಸ್ಕೌಂಟ್‌ ದೊರೆಯಲಿದೆ.

ಸಾವರಿನ್‌ ಗೋಲ್ಡ್‌ ಬಾಂಡ್‌ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಸಂಗತಿಗಳು

ಕನಿಷ್ಠ ಮತ್ತು ಗರಿಷ್ಠ ಹೂಡಿಕೆ: ಜನತೆಗೆ ವೈಯಕ್ತಿಕವಾಗಿ ಕನಿಷ್ಠ 1 ಗ್ರಾಮ್‌ ಬಂಗಾರದ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು. ಗರಿಷ್ಠ 4 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಹಿಂದೂ ಅವಿಭಜಿತ ಕುಟುಂಬಕ್ಕೆ 4 ಕೆಜಿ, ಟ್ರಸ್ಟ್‌ ಹಾಗೂ ಅದೇ ರೀತಿಯ ಸಂಸ್ಥೆಗಳಿಗೆ 20 ಕೆಜಿ ತನಕ ಹೂಡಿಕೆ ಮಾಡಬಹುದು. ಈ ಬಾಂಡ್‌ಗಳನ್ನು ಬ್ಯಾಂಕ್‌ಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊಋಷನ್‌, ಅಂಚೆ ಕಚೇರಿಗಳು, ಮಾನ್ಯತೆ ಪಡೆದ ಸ್ಟಾಕ್‌ ಎಕ್ಸ್‌ಚೇಂಜ್‌ಗಳಲ್ಲಿ ಖರೀದಿಸಬಹುದು. ಆನ್‌ಲೈನ್‌ ಮೂಲಕವೂ ಕೊಳ್ಳಬಹುದು.

ಮೆಚ್ಯೂರಿಟಿ ಅವಧಿ: ಚಿನ್ನದ ಬಾಂಡ್‌ ಮೆಚ್ಯೂರಿಟಿ ಅವಧಿ 8 ವರ್ಷಗಳಾಗಿದೆ. 5ನೇ ವರ್ಷದಿಂದ ಎಕ್ಸಿಟ್‌ಗೆ ಅವಕಾಶ ಇದೆ. 5 ವರ್ಷಗಳ ಲಾಕ್‌ ಇನ್‌ ಅವಧಿ ಇದ್ದರೂ, ಸ್ಟಾಕ್ಸ್‌ ಎಕ್ಸ್‌ಚೇಂಜ್‌ನಲ್ಲಿ ಮಾರಾಟ ಮಾಡಬಹುದು.

ಯಾರು ಎಸ್‌ಜಿಬಿಯಲ್ಲಿ ಹೂಡಿಕೆ ಮಾಡಬಹುದು? : ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ(FEMA) ಅಡಿಯಲ್ಲಿ ಬರುವ ಯಾವುದೇ ವ್ಯಕ್ತಿ ಎಸ್‌ಜಿಬಿಯಲ್ಲಿ ಹೂಡಿಕೆ ಮಾಡಬಹುದು. ವೈಯಕ್ತಿಕ ಹೂಡಿಕೆದಾರರು, ಎಚ್‌ಯುಎಫ್‌, ಸಾರ್ವಜನಿಕ-ಖಾಸಗಿ ಟ್ರಸ್ಟ್‌ಗಳು ಹೂಡಬಹುದು. ಅಪ್ರಾಪ್ತರ ಪರ ಪೋಷಕರು ಹೂಡಿಕೆ ಮಾಡಬಹುದು. ಆದರೆ ಅನಿವಾಸಿ ಭಾರತೀಯರು (NRI) ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವಂತಿಲ್ಲ.

ಅನುಕೂಲಗಳೇನು?

ಭೌತಿಕ ಚಿನ್ನದ ಮಾದರಿಯಲ್ಲಿ ಸ್ಟೋರೇಜ್‌ ಮಾಡಬೇಕಾದ ಸವಾಲುಗಳು ಇರುವುದಿಲ್ಲ. ಹೀಗಾಗಿ ಇದು ಹೆಚ್ಚು ಸುರಕ್ಷಿತ.

ಈ ಹೂಡಿಕೆಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಇತರ ಚಿನ್ನದ ಒಡವೆ, ನಾಣ್ಯ ಮತ್ತು ಗಟ್ಟಿಗೆ ಜಿಎಸ್‌ಟಿ ಅನ್ವಯಿಸುತ್ತದೆ. ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ ಅನ್ನು 2015ರಲ್ಲಿ ಸರ್ಕಾರ ಆರಂಭಿಸಿತ್ತು. ಈ ಹೂಡಿಕೆಗೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಇರುವುದಿಲ್ಲ.

ಬಾಂಡ್‌ ಖರೀದಿಗೆ ಬೇಕಾಗುವ ದಾಖಲೆ: ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌.

ಹೂಡಿಕೆ ಯಾಕೆ ಅಗತ್ಯ? ಸಾಂಪ್ರದಾಯಿಕವಾಗಿ ಬಂಗಾರದ ಹೂಡಿಕೆಯನ್ನು ಸುರಕ್ಷಿತ ಎಂದು ಕರೆಯಲಾಗುತ್ತದೆ. ಹೂಡಿಕೆಯ ಭಾಗವಾಗಿ ಎಸ್‌ಜಿಬಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಜತೆಗೆ 2.5% ಹೆಚ್ಚಿನ ಬಡ್ಡಿ ಆದಾಯ ಕೂಡ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಮಾರುಕಟ್ಟೆಯಲ್ಲಿ ಬಂಗಾರದ ದರ ಏರಿಕೆಯಾದಾಗ ಬಾಂಡ್‌ನಲ್ಲಿ ಹೂಡಿಕೆಗೆ ಸಿಗುವ ಆದಾಯ ಕೂಡ ವೃದ್ಧಿಸುತ್ತದೆ.

Exit mobile version