Site icon Vistara News

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

7th Pay Commission

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತವಾಗಿದೆ. ನವೆಂಬರ್‌ ಮೊದಲ ವಾರದಲ್ಲಿಯೇ ಸರ್ಕಾರ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಲಿದೆ.

ಈ ಸಂಬಂಧ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. “ನಿಗದಿತ ಕಾಲ ಮಿತಿಯಲ್ಲಿಯೇ ಆಯೋಗ ರಚನೆಯಾಗಲಿದೆ. ಇದರಲ್ಲಿ ಅನುಮಾನವೇ ಬೇಡ. ಸದ್ಯವೇ ಈ ಸಂಬಂಧ ಆದೇಶ ಹೊರಡಿಸಲಾಗುವುದುʼʼ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಅಕ್ಟೋಬರ್‌ ತಿಂಗಳು ಮುಗಿದರೂ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರಲಿಲ್ಲ.

ಅಲ್ಲದೆ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಂಬಂಧ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಿಎಂ “ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಯ ವಿಷಯವು ಸರ್ಕಾರದ ನೀತಿ ನಿರ್ಣಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿರಿಸಿ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಲಾ ಗುವುದುʼʼ ಎಂದಷ್ಟೇ ಹೇಳಿದ್ದರು. ಹೀಗಾಗಿ ಆಯೋಗ ರಚನೆಯು ಕಾಲಮಿತಿಯಲ್ಲಿ ಆಗುವ ಕುರಿತು ಅನುಮಾನ ವ್ಯಕ್ತವಾಗಿತ್ತು.

ಆದರೆ ಈ ಬಗ್ಗೆ ಇದ್ದ ಅನುಮಾನಗಳನ್ನು ಈಗ ಮುಖ್ಯಮಂತ್ರಿಗಳೇ ದೂರ ಮಾಡಿದ್ದು, ಆಯೋಗ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ. ಸದ್ಯವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. “ಮುಖ್ಯಮಂತ್ರಿಗಳು ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದು, ಇನ್ನೊಂದೆರಡು ದಿನಗಳ ಒಳಗೆ ಆದೇಶ ಹೊರಬೀಳಬಹುದುʼʼ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ “ವಿಸ್ತಾರ ನ್ಯೂಸ್‌ʼʼಗೆ ತಿಳಿಸಿದ್ದಾರೆ.

ವೇತನ ಆಯೋಗಕ್ಕೆ ವೇತನ ಪರಿಷ್ಕರಿಸಿ ಶಿಫಾರಸಲು ಮಾಡಲು ನಾಲ್ಕು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನವೆಂಬರ್‌ನಲ್ಲಿ ಆಯೋಗ ರಚನೆಯಾದರೆ 2023ರ ಮಾರ್ಚ್‌ ಒಳಗೆ ಆಯೋಗ ವರದಿ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. 6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು.

ಇದನ್ನೂ ಓದಿ | 8th Pay Commission| ಎಂಟನೇ ವೇತನ ಆಯೋಗ ಈ ವರ್ಷ ಇಲ್ಲ, 2026ಕ್ಕೆ ಮುಂದಿನ ಆಯೋಗ ಸಾಧ್ಯತೆ

Exit mobile version