Site icon Vistara News

7th pay commission : ಸರ್ಕಾರಿ ನೌಕರರಿಗೆ ಶನಿವಾರವೂ ರಜೆ; ಸಂಘದ ಬೇಡಿಕೆ ಕುರಿತು ಬಿಸಿಬಿಸಿ ಚರ್ಚೆ

Karnataka govt employees seek five-day week at work

7th pay commission

ಬೆಂಗಳೂರು : ಸರ್ಕಾರಕ್ಕೆ ಮುಷ್ಕರದ ಬಿಸಿ ಮುಟ್ಟಿಸಿ ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ನಡುವೆ ಈಗ ʻಶನಿವಾರ ರಜೆʼಯ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿದೆ. 7ನೇ ವೇತನ ಆಯೋಗವು (7th pay commission) ಈ ಕುರಿತು ಶಿಫಾರಸು ಮಾಡಲಿದೆಯೇ ಎಂಬ ಕುರಿತು ಕುತೂಹಲ ಮೂಡಿದೆ.

ರಾಜ್ಯದ ಸರ್ಕಾರಿ ಕಚೇರಿಗಳ ಕೆಲಸ ಅವಧಿಯನ್ನು ಈಗಿರುವ ಏಳುವರೆ ಗಂಟೆ ಬದಲಾಗಿ ಎಂಟುವರೆ ಗಂಟೆಗೆ ವಿಸ್ತರಿಸಿ, ತಿಂಗಳ ಮೊದಲ ಮತ್ತು ಕೊನೆಯ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ಮುಂದೆ ಮನವಿ ಸಲ್ಲಿಸಿದೆ.

ಹೀಗಾಗಿ ಕೇಂದ್ರ ಸರ್ಕಾರಿ ನೌಕರರಂತೆ ನಮಗೂ ಪ್ರತಿ ಶನಿವಾರ ರಜೆ ಸಿಗುತ್ತದಾ ಎಂಬುದರ ಕುರಿತು ನೌಕರರ ನಡುವೆ ಗಂಭೀರ ಚರ್ಚೆ ನಡೆಯುತ್ತಿದೆ. ಬಹುತೇಕರು ಸಂಘದ ಈ ಮನವಿಯ ಪರವಾಗಿದ್ದರೆ, ಇನ್ನು ಕೆಲವರು ಇದು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಬಹುದು. ಹೀಗಾಗಿ ಕೆಲಸದ ದಿನಗಳಲ್ಲಿ ಬದಲಾವಣೆ ಬೇಡ ಎಂದು ವಾದ ಮಂಡಿಸುತ್ತಿದ್ದಾರೆ.

ಸಂಘ ಹೇಳಿರುವುದೇನು?

7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಉತ್ತರದಲ್ಲಿ, ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ವಾರದ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಇದರ ಜತೆಯಲ್ಲಿ ಒಂದು ಮತ್ತು ಕೊನೆಯ ಶನಿವಾರ ಕೂಡ ರಜೆ ನೀಡಬೇಕು. ಇದಕ್ಕಾಗಿ ಕೆಲಸದ ಅವಧಿಯನ್ನು ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಿಗ್ಗೆ 9.30ರಿಂದ ಅರಂಭಿಸಬೇಕು ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ವಿಸ್ತರಿಸಬೇಕು. ಇದರಿಂದ ಒಟ್ಟಾರೆ ವಾರದ ಕೆಲಸದ ಅವಧಿಯಲ್ಲಿ ಕಡಿತವಾಗದೇ ಶನಿವಾರ ರಜೆ ನೀಡಬಹುದು ಎಂದು ಹೇಳಿದೆ.

ಈಗ ಯಾವ ರಾಜ್ಯದಲ್ಲಿ ಹೇಗಿದೆ ಕೆಲಸದ ಸಮಯ?

ದೆಹಲಿ ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ
ಕೇಂದ್ರ ಸರ್ಕಾರಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ
ಗೋವಾಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ
ತಮಿಳುನಾಡುಬೆಳಗ್ಗೆ 10 ಗಂಟೆಯಿಂದ ಸಂಜೆ 5.45 ಗಂಟೆ
ಬಿಹಾರಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ
ಪಂಜಾಬ್‌ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ
ಉತ್ತರ ಪ್ರದೇಶಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ
ಪಶ್ಚಿಮ ಬಂಗಾಳಬೆಳಗ್ಗೆ 10. 30 ಗಂಟೆಯಿಂದ ಸಂಜೆ 5.30 ಗಂಟೆ

ʻʻನಗರ ಮತ್ತು ಪಟ್ಟಣಗಳಲ್ಲಿ ಅನಿಯಮಿತ ಸಾರಿಗೆ ವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯಿಂದಾಗಿ ಬೆಳಿಗ್ಗೆ ಮತ್ತು ಸಂಜೆ ನೌಕರರು ಕಚೇರಿಗೆ ಬಂದು-ಹೋಗುವಾಗ ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ ಮಾದರಿಯಂತೆ ಕಚೇರಿ ಸಮಯದ ಬದಲಾವಣೆ ಮಾಡುವುದು ಅವಶ್ಯಕತೆ ಇರುತ್ತದೆʼʼ ಎಂದಿರುವ ಸಂಘ, ಇದರಿಂದಾಗಿ ಸರ್ಕಾರಕ್ಕೆ ಸಾರಿಗೆ, ವಿದ್ಯುತ್‌, ನೀರು, ಸರ್ಕಾರಿ ವಾಹನಗಳ ಇಂಧನ ಹಾಗೂ ನಿರ್ವಹಣೆ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಾರದಲ್ಲಿ ಎರಡು ದಿನ ರಜೆ ನೀಡುವುದರಿಂದ ಪ್ರವಾಸೋಧ್ಯಮ ಅಭಿವೃದ್ಧಿಯೂ ಆಗಲಿದ್ದು ಸರ್ಕಾರಕ್ಕೆ ಆದಾಯ ಹೆಚ್ಚಳವಾಗುತ್ತದೆ ಎಂದು ವಿವರಿಸಿದೆ.

ಈಗ ಸರ್ಕಾರದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹೆಚ್ಚಿನ ಕಾರ್ಯಭಾರ ಒತ್ತಡದಿಂದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇವರಿಗೆ ವಾರದಲ್ಲಿ ಎರಡು ರಜೆ ದೊರೆಯುವುದರಿಂದ ವಾರದ ಐದು ದಿನ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಅವರಿಗೆ ಅನುಕೂಲವಾಗಲಿದೆ ಎಂದು ಸಂಘ ಹೇಳಿದೆ.

ರಜಾ ಸೌಲಭ್ಯಗಳ ನೀಡುವಿಕೆಯು ಹಾಗೂ ಸಾರ್ವಜನಿಕ ರಜೆಗಳ ಬಗ್ಗೆ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ನೌಕರರ ಬೇಡಿಕೆಯಾಗಿರುವುದಿಲ್ಲ. ರಜೆಯನ್ನು ರಾಜಕೀಯ, ಧಾರ್ಮಿಕ ಮತ್ತು ಇತರೆ ಉದ್ದೇಶಗಳಿಗಾಗಿ ಸರ್ಕಾರವು ಘೋಷಿಸುತ್ತದೆ ಎಂದು ಸ್ಪಷ್ಟಪಡಿಸಿರುವ ನೌಕರರ ಸಂಘವು ಈ ಸಮಯ ಬದಲಾವಣೆಯಿಂದ ಕೆಲಸದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದೆ.

ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ಸರ್ಕಾರಿ ಕಚೇರಿಯ ವಾರದ ಕರ್ತವ್ಯದ ದಿನಗಳನ್ನು ಶನಿವಾರ, ಭಾನುವಾರ ಹೊರತುಪಡಿಸಿ ವಾರಕ್ಕೆ ಐದು ದಿನಗಳಂತೆ ಕರ್ತವ್ಯದ ದಿನಗಳೆಂದು ನಿಗದಿಪಡಿಸಬೇಕೆಂದು ಸಂಘವು ಆಯೋಗವನ್ನು ಕೋರಿದೆ.

ಏಳನೇ ವೇತನ ಆಯೋಗಕ್ಕೆ ತಮ್ಮ ಮನವಿ ಸಲ್ಲಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು

ಸರ್ಕಾರಕ್ಕೇ ದುಡ್ಡು ಉಳಿಯಲಿದೆ!

ಒಂದು ದಿನ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳನ್ನು ತೆರೆಯಲು, ಸಾರಿಗೆ ಸೌಕರ್ಯ ಒದಗಿಸಲು, ವಿದ್ಯುತ್‌, ಉಪಹಾರ ಇತ್ಯಾದಿ ಎಲ್ಲ ಖರ್ಚುಗಳನ್ನು ಸೇರಿಸಿ ಸರ್ಕಾರಕ್ಕೆ ಒಂದು ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಅಂದಾಜು ಇಟ್ಟುಕೊಂಡರೆ ಹೀಗೆ ವಾರದಲ್ಲಿ ಒಂದು ಕರ್ತವ್ಯದ ದಿನವನ್ನು ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ಏನಿಲ್ಲವೆಂದರೂ 200-300 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಈ ಬೇಡಿಕೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಇದನ್ನು ಜಾರಿಗೆ ತಂದಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ದೇಶದ ನಾಲ್ಕೈದು ರಾಜ್ಯಗಳಲ್ಲಿಯೂ ಇದು ಜಾರಿಗೆ ಬಂದಿದೆ. ನಾವು ನಮ್ಮ ಬೇಡಿಕೆಯನ್ನು ಆಯೋಗದ ಮುಂದೆ ಮತ್ತು ಸರ್ಕಾರ ಮುಂದೆ ಮಂಡಿಸಿದ್ದೇವೆ. ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕೆಲವರು ಸರ್ಕಾರಿ ನೌಕರರಿಗೆ ರಜೆ ಹೆಚ್ಚು ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಇದು ಹೆಚ್ಚುವರಿ ರಜೆ ಅಲ್ಲ, ನಾವು ಐದು ದಿನ ಹೆಚ್ಚು ಹೊತ್ತು ಕೆಲಸ ಮಾಡಿ, ಒಟ್ಟಿಗೆ ಒಂದು ದಿನ ರಜೆಕೊಡಿ ಎಂದು ಕೇಳುತ್ತಿದ್ದೇವೆ. ಸಂಜೆಯ ಕೆಲಸದ ಅವಧಿ ಈಗ 5.30 ಇದೆ. ಇದನ್ನು ಆರು ಗಂಟೆಗೆ ಹೆಚ್ಚಿಸಿ ಎಂದು ಕೇಳಿದ್ದೇವೆ. ಆರು ಗಂಟೆಯಲ್ಲ, ಆರೂವರಗೆ ಹೆಚ್ಚಿಸಿದರೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಷಡಾಕ್ಷರಿ ವಿವರಿಸಿದ್ದಾರೆ. ಹೀಗೆ ಮಾಡುವುದರಿಂದ ಲೆಕ್ಕಾಚಾರದ ಪ್ರಕಾರ ಇನ್ನೂ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡಿದಂತಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದಲ್ಲಿ ಈ ಕ್ರಮ ಯಶಸ್ವಿಯಾಗಿರುವುದನ್ನು ಸರ್ಕಾರ ಪರಿಗಣಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಅವರು ಹೇಳಿದ್ದಾರೆ. 6ನೇ ವೇತನ ಆಯೋಗಕ್ಕೆ ಕೂಡ ಆಗಿನ ನೌಕರರ ಸಂಘ ಇದೇ ರೀತಿಯಾಗಿ ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರಿ ನೌಕರರು ಬಹಳ ಹಿಂದಿನಿಂದಲೂ ಕೇಂದ್ರ ಸರ್ಕಾರದಂತೆ ತಮ್ಮ ವಾರದ ಕರ್ತವ್ಯದ ದಿನವನ್ನು ಕಡಿಮೆ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ.

ಐಟಿ, ಬಿಟಿ ಕಂಪನಿಗಳಲ್ಲಿ ಈಗಾಗಲೇ ವಾರದಲ್ಲಿ ಎರಡು ದಿನ ರಜೆ ನೀಡುವ ಪದ್ಧತಿ ಜಾರಿಯಲ್ಲಿದ್ದು, ಇದರಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ. ಅಲ್ಲೀಗ ಕೆಲಸದ ಅವಧಿಯನ್ನು ನಾಲ್ಕು ದಿನಗಳಿಗೆ ಇಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರಿ ನೌಕರರ ನಡುವೆ ವಾರದಲ್ಲಿ ಐದು ದಿನ ಕೆಲಸದ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಆಯೋಗ ಈ ಕುರಿತು ಏನೆಂದು ಶಿಫಾರಸು ಮಾಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : 7th pay commission: ರಾಜ್ಯ ಸರ್ಕಾರಿ ನೌಕರರ ಹೋರಾಟದ ನಡುವೆಯೇ ಕೇಂದ್ರ ಉದ್ಯೋಗಿಗಳಿಗೆ ಭರ್ಜರಿ ವೇತನ ಏರಿಕೆ ಶೀಘ್ರ

Exit mobile version