ನೌಕರರ ಕಾರ್ನರ್
7th pay commission : ಸರ್ಕಾರಿ ನೌಕರರಿಗೆ ಶನಿವಾರವೂ ರಜೆ; ಸಂಘದ ಬೇಡಿಕೆ ಕುರಿತು ಬಿಸಿಬಿಸಿ ಚರ್ಚೆ
ಏಳನೇ ವೇತನ ಆಯೋಗಕ್ಕೆ (7th pay commission) ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘ ವಾರದ ಕರ್ತವ್ಯದ ದಿನವನ್ನು ಐದು ದಿನಕ್ಕೆ ಇಳಿಸುವಂತೆ ಕೋರಿದೆ. ಈ ಕುರಿತು ಈಗ ಸರ್ಕಾರಿ ನೌಕರರ ನಡುವೆ ಚರ್ಚೆ ನಡೆಯುತ್ತಿದೆ.
ಬೆಂಗಳೂರು : ಸರ್ಕಾರಕ್ಕೆ ಮುಷ್ಕರದ ಬಿಸಿ ಮುಟ್ಟಿಸಿ ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ನಡುವೆ ಈಗ ʻಶನಿವಾರ ರಜೆʼಯ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿದೆ. 7ನೇ ವೇತನ ಆಯೋಗವು (7th pay commission) ಈ ಕುರಿತು ಶಿಫಾರಸು ಮಾಡಲಿದೆಯೇ ಎಂಬ ಕುರಿತು ಕುತೂಹಲ ಮೂಡಿದೆ.
ರಾಜ್ಯದ ಸರ್ಕಾರಿ ಕಚೇರಿಗಳ ಕೆಲಸ ಅವಧಿಯನ್ನು ಈಗಿರುವ ಏಳುವರೆ ಗಂಟೆ ಬದಲಾಗಿ ಎಂಟುವರೆ ಗಂಟೆಗೆ ವಿಸ್ತರಿಸಿ, ತಿಂಗಳ ಮೊದಲ ಮತ್ತು ಕೊನೆಯ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ಮುಂದೆ ಮನವಿ ಸಲ್ಲಿಸಿದೆ.
ಹೀಗಾಗಿ ಕೇಂದ್ರ ಸರ್ಕಾರಿ ನೌಕರರಂತೆ ನಮಗೂ ಪ್ರತಿ ಶನಿವಾರ ರಜೆ ಸಿಗುತ್ತದಾ ಎಂಬುದರ ಕುರಿತು ನೌಕರರ ನಡುವೆ ಗಂಭೀರ ಚರ್ಚೆ ನಡೆಯುತ್ತಿದೆ. ಬಹುತೇಕರು ಸಂಘದ ಈ ಮನವಿಯ ಪರವಾಗಿದ್ದರೆ, ಇನ್ನು ಕೆಲವರು ಇದು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗಬಹುದು. ಹೀಗಾಗಿ ಕೆಲಸದ ದಿನಗಳಲ್ಲಿ ಬದಲಾವಣೆ ಬೇಡ ಎಂದು ವಾದ ಮಂಡಿಸುತ್ತಿದ್ದಾರೆ.
ಸಂಘ ಹೇಳಿರುವುದೇನು?
7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಉತ್ತರದಲ್ಲಿ, ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ವಾರದ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದೆ. ಇದರ ಜತೆಯಲ್ಲಿ ಒಂದು ಮತ್ತು ಕೊನೆಯ ಶನಿವಾರ ಕೂಡ ರಜೆ ನೀಡಬೇಕು. ಇದಕ್ಕಾಗಿ ಕೆಲಸದ ಅವಧಿಯನ್ನು ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಿಗ್ಗೆ 9.30ರಿಂದ ಅರಂಭಿಸಬೇಕು ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ವಿಸ್ತರಿಸಬೇಕು. ಇದರಿಂದ ಒಟ್ಟಾರೆ ವಾರದ ಕೆಲಸದ ಅವಧಿಯಲ್ಲಿ ಕಡಿತವಾಗದೇ ಶನಿವಾರ ರಜೆ ನೀಡಬಹುದು ಎಂದು ಹೇಳಿದೆ.
ಈಗ ಯಾವ ರಾಜ್ಯದಲ್ಲಿ ಹೇಗಿದೆ ಕೆಲಸದ ಸಮಯ?
ದೆಹಲಿ | ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ |
ಕೇಂದ್ರ ಸರ್ಕಾರ | ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ |
ಗೋವಾ | ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ |
ತಮಿಳುನಾಡು | ಬೆಳಗ್ಗೆ 10 ಗಂಟೆಯಿಂದ ಸಂಜೆ 5.45 ಗಂಟೆ |
ಬಿಹಾರ | ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ |
ಪಂಜಾಬ್ | ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ |
ಉತ್ತರ ಪ್ರದೇಶ | ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆ |
ಪಶ್ಚಿಮ ಬಂಗಾಳ | ಬೆಳಗ್ಗೆ 10. 30 ಗಂಟೆಯಿಂದ ಸಂಜೆ 5.30 ಗಂಟೆ |
ʻʻನಗರ ಮತ್ತು ಪಟ್ಟಣಗಳಲ್ಲಿ ಅನಿಯಮಿತ ಸಾರಿಗೆ ವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯಿಂದಾಗಿ ಬೆಳಿಗ್ಗೆ ಮತ್ತು ಸಂಜೆ ನೌಕರರು ಕಚೇರಿಗೆ ಬಂದು-ಹೋಗುವಾಗ ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ ಮಾದರಿಯಂತೆ ಕಚೇರಿ ಸಮಯದ ಬದಲಾವಣೆ ಮಾಡುವುದು ಅವಶ್ಯಕತೆ ಇರುತ್ತದೆʼʼ ಎಂದಿರುವ ಸಂಘ, ಇದರಿಂದಾಗಿ ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಸರ್ಕಾರಿ ವಾಹನಗಳ ಇಂಧನ ಹಾಗೂ ನಿರ್ವಹಣೆ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಾರದಲ್ಲಿ ಎರಡು ದಿನ ರಜೆ ನೀಡುವುದರಿಂದ ಪ್ರವಾಸೋಧ್ಯಮ ಅಭಿವೃದ್ಧಿಯೂ ಆಗಲಿದ್ದು ಸರ್ಕಾರಕ್ಕೆ ಆದಾಯ ಹೆಚ್ಚಳವಾಗುತ್ತದೆ ಎಂದು ವಿವರಿಸಿದೆ.
ಈಗ ಸರ್ಕಾರದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹೆಚ್ಚಿನ ಕಾರ್ಯಭಾರ ಒತ್ತಡದಿಂದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇವರಿಗೆ ವಾರದಲ್ಲಿ ಎರಡು ರಜೆ ದೊರೆಯುವುದರಿಂದ ವಾರದ ಐದು ದಿನ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಅವರಿಗೆ ಅನುಕೂಲವಾಗಲಿದೆ ಎಂದು ಸಂಘ ಹೇಳಿದೆ.
ರಜಾ ಸೌಲಭ್ಯಗಳ ನೀಡುವಿಕೆಯು ಹಾಗೂ ಸಾರ್ವಜನಿಕ ರಜೆಗಳ ಬಗ್ಗೆ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ನೌಕರರ ಬೇಡಿಕೆಯಾಗಿರುವುದಿಲ್ಲ. ರಜೆಯನ್ನು ರಾಜಕೀಯ, ಧಾರ್ಮಿಕ ಮತ್ತು ಇತರೆ ಉದ್ದೇಶಗಳಿಗಾಗಿ ಸರ್ಕಾರವು ಘೋಷಿಸುತ್ತದೆ ಎಂದು ಸ್ಪಷ್ಟಪಡಿಸಿರುವ ನೌಕರರ ಸಂಘವು ಈ ಸಮಯ ಬದಲಾವಣೆಯಿಂದ ಕೆಲಸದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದೆ.
ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ಸರ್ಕಾರಿ ಕಚೇರಿಯ ವಾರದ ಕರ್ತವ್ಯದ ದಿನಗಳನ್ನು ಶನಿವಾರ, ಭಾನುವಾರ ಹೊರತುಪಡಿಸಿ ವಾರಕ್ಕೆ ಐದು ದಿನಗಳಂತೆ ಕರ್ತವ್ಯದ ದಿನಗಳೆಂದು ನಿಗದಿಪಡಿಸಬೇಕೆಂದು ಸಂಘವು ಆಯೋಗವನ್ನು ಕೋರಿದೆ.
ಸರ್ಕಾರಕ್ಕೇ ದುಡ್ಡು ಉಳಿಯಲಿದೆ!
ಒಂದು ದಿನ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳನ್ನು ತೆರೆಯಲು, ಸಾರಿಗೆ ಸೌಕರ್ಯ ಒದಗಿಸಲು, ವಿದ್ಯುತ್, ಉಪಹಾರ ಇತ್ಯಾದಿ ಎಲ್ಲ ಖರ್ಚುಗಳನ್ನು ಸೇರಿಸಿ ಸರ್ಕಾರಕ್ಕೆ ಒಂದು ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಅಂದಾಜು ಇಟ್ಟುಕೊಂಡರೆ ಹೀಗೆ ವಾರದಲ್ಲಿ ಒಂದು ಕರ್ತವ್ಯದ ದಿನವನ್ನು ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ಏನಿಲ್ಲವೆಂದರೂ 200-300 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಈ ಬೇಡಿಕೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಇದನ್ನು ಜಾರಿಗೆ ತಂದಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ದೇಶದ ನಾಲ್ಕೈದು ರಾಜ್ಯಗಳಲ್ಲಿಯೂ ಇದು ಜಾರಿಗೆ ಬಂದಿದೆ. ನಾವು ನಮ್ಮ ಬೇಡಿಕೆಯನ್ನು ಆಯೋಗದ ಮುಂದೆ ಮತ್ತು ಸರ್ಕಾರ ಮುಂದೆ ಮಂಡಿಸಿದ್ದೇವೆ. ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕೆಲವರು ಸರ್ಕಾರಿ ನೌಕರರಿಗೆ ರಜೆ ಹೆಚ್ಚು ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಇದು ಹೆಚ್ಚುವರಿ ರಜೆ ಅಲ್ಲ, ನಾವು ಐದು ದಿನ ಹೆಚ್ಚು ಹೊತ್ತು ಕೆಲಸ ಮಾಡಿ, ಒಟ್ಟಿಗೆ ಒಂದು ದಿನ ರಜೆಕೊಡಿ ಎಂದು ಕೇಳುತ್ತಿದ್ದೇವೆ. ಸಂಜೆಯ ಕೆಲಸದ ಅವಧಿ ಈಗ 5.30 ಇದೆ. ಇದನ್ನು ಆರು ಗಂಟೆಗೆ ಹೆಚ್ಚಿಸಿ ಎಂದು ಕೇಳಿದ್ದೇವೆ. ಆರು ಗಂಟೆಯಲ್ಲ, ಆರೂವರಗೆ ಹೆಚ್ಚಿಸಿದರೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಷಡಾಕ್ಷರಿ ವಿವರಿಸಿದ್ದಾರೆ. ಹೀಗೆ ಮಾಡುವುದರಿಂದ ಲೆಕ್ಕಾಚಾರದ ಪ್ರಕಾರ ಇನ್ನೂ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡಿದಂತಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರೂ ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದಲ್ಲಿ ಈ ಕ್ರಮ ಯಶಸ್ವಿಯಾಗಿರುವುದನ್ನು ಸರ್ಕಾರ ಪರಿಗಣಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಅವರು ಹೇಳಿದ್ದಾರೆ. 6ನೇ ವೇತನ ಆಯೋಗಕ್ಕೆ ಕೂಡ ಆಗಿನ ನೌಕರರ ಸಂಘ ಇದೇ ರೀತಿಯಾಗಿ ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರಿ ನೌಕರರು ಬಹಳ ಹಿಂದಿನಿಂದಲೂ ಕೇಂದ್ರ ಸರ್ಕಾರದಂತೆ ತಮ್ಮ ವಾರದ ಕರ್ತವ್ಯದ ದಿನವನ್ನು ಕಡಿಮೆ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ.
ಐಟಿ, ಬಿಟಿ ಕಂಪನಿಗಳಲ್ಲಿ ಈಗಾಗಲೇ ವಾರದಲ್ಲಿ ಎರಡು ದಿನ ರಜೆ ನೀಡುವ ಪದ್ಧತಿ ಜಾರಿಯಲ್ಲಿದ್ದು, ಇದರಿಂದ ಉತ್ಪಾದಕತೆಯಲ್ಲಿ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ. ಅಲ್ಲೀಗ ಕೆಲಸದ ಅವಧಿಯನ್ನು ನಾಲ್ಕು ದಿನಗಳಿಗೆ ಇಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರಿ ನೌಕರರ ನಡುವೆ ವಾರದಲ್ಲಿ ಐದು ದಿನ ಕೆಲಸದ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಆಯೋಗ ಈ ಕುರಿತು ಏನೆಂದು ಶಿಫಾರಸು ಮಾಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : 7th pay commission: ರಾಜ್ಯ ಸರ್ಕಾರಿ ನೌಕರರ ಹೋರಾಟದ ನಡುವೆಯೇ ಕೇಂದ್ರ ಉದ್ಯೋಗಿಗಳಿಗೆ ಭರ್ಜರಿ ವೇತನ ಏರಿಕೆ ಶೀಘ್ರ
ಕರ್ನಾಟಕ
Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ
Old Pension Scheme : ರಾಜ್ಯದಲ್ಲೇ ಸದ್ಯವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಮೈಸೂರು: ರಾಜ್ಯದಲ್ಲಿ ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ (Old Pension Scheme) ಜಾರಿಯಾಗಲಿದೆ. ಈ ಮೂಲಕ ಸದ್ಯವೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ (Good News for Govt Employees) ಸಿಗಲಿದೆ ಎಂದು ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress manifesto) ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡುವುದಾಗಿ ಹೇಳಿತ್ತು. ಅದರಂತೆ ನಡೆದುಕೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಪಿಂಚಣಿ ವ್ಯವಸ್ಥೆಯ (New Pension Scheme) ವಿರುದ್ಧ ದೊಡ್ಡ ಮಟ್ಟದ ಆಕ್ರೋಶವಿದೆ. ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಆಗಾಗ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲೇ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ ಮಂಡಿಸಿದ್ದರು. ಬಿಜೆಪಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವನ್ನು ತಳೆದಿರಲಿಲ್ಲ. ಆದರೆ, ಕಾಂಗ್ರೆಸ್ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಪ್ರಕಟಿಸಿತ್ತು. ಇದೀಗ ಪಕ್ಷ ಗೆಲುವು ಸಾಧಿಸಿದ್ದರಿಂದ ಅದು ಆ ಬೇಡಿಕೆಯನ್ನು ಈಡೇರಿಸಲಿದೆ ಎಂದು ಮಧು ಬಂಗಾರಪ್ಪ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ.
ಮುಂದಿನ ವರ್ಷದಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್
ರಾಜ್ಯದಲ್ಲಿ ಮುಂದಿನ ವರ್ಷದಿಂದ 600 ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ತೆರೆಯಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ಸೋಮವಾರ ವಿಶ್ವನಾಥಪುರದಲ್ಲಿ ಹೇಳಿದರು. ಜಿಲ್ಲಾಡಳಿತ ಮತ್ತು ಜಿಪಂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಯ ಆವರಣದಲ್ಲಿ ʻನನ್ನ ಶಾಲೆ ನನ್ನ ಕೊಡುಗೆʼಯಡಿಯಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಮಾದರಿ ಸರಕಾರಿ ಶಾಲೆ ಯೋಜನೆ ಉದ್ಘಾಟನೆ ಮತ್ತು ನೂತನ ಶಾಲಾ ಕೊಠಡಿಗಳು ಹಾಗೂ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಸ್‌ಆರ್ ಅನುದಾನದಡಿಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರದ ಪ್ರಯತ್ನಗಳು ಕಾರ್ಯರೂಪದಲ್ಲಿದೆ. 1 ರಿಂದ 12 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲು ಹಾಗೂ ಮೂಲ ಸೌಲಭ್ಯಗಳನ್ನು ಒಳಗೊಂಡ 600 ಕೆ.ಪಿ.ಎಸ್ ಶಾಲೆಗಳನ್ನು ಮುಂದಿನ ವರ್ಷದ ವೇಳೆಗೆ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿಎರಡು ಗ್ರಾಮಗಳಿಗೆ ಒಂದರಂತೆ 2000 ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಿಸಲು ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ: Shivamogga Violence : ನಾವು ತ್ರಿಶೂಲ ಹಿಡ್ಕೊಳಲ್ವಾ? ಹಾಗೆ ಅವರು ತಲ್ವಾರ್ ಹಿಡಿದಿದ್ದಾರೆ ಅಷ್ಟೆ; ಮಧು ಬಂಗಾರಪ್ಪ
ಸರ್ಕಾರಿ ಶಾಲೆಗಳಲ್ಲಿಮೂಲಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ . ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ 2 ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಈ ವರ್ಷ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ 2 ಪೂರಕ ಪರೀಕ್ಷೆಗಳನ್ನು ನಡೆಸಿದ್ದೆವು. ಇದರ ಪ್ರತಿಫಲವಾಗಿ 4200 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ವಿವರಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ 13,500 ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ದೇಶ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ, ಮುಂದಿನ ತಿಂಗಳು ಘೋಷಣೆ?
7th Pay Commission: ಕೇಂದ್ರ ಸರ್ಕಾರಿ ನೌಕರರು ಖುಷಿಪಡುವ ಸುದ್ದಿಯೊಂದು ಹೊರಬಿದ್ದಿದ್ದು, ಮುಂದಿನ ತಿಂಗಳು ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ.
ನವದೆಹಲಿ: ಕೇಂದ್ರ ಸರ್ಕಾರದ ನೌಕರರಿಗೆ (Central Government Employees) ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. ನೌಕರರ ತುಟ್ಟಿ ಭತ್ಯೆ (dearness allowance – DA) ಹೆಚ್ಚಳ ಕುರಿತು ಸೆಪ್ಟೆಂಬರ್ ತಿಂಗಳಲ್ಲಿ (September Month) ಕೇಂದ್ರ ಸರ್ಕಾರವು ಘೋಷಣೆ ಮಾಡುವ ಸಾಧ್ಯತೆಗಳಿವೆ. ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ಮಾಧ್ಯಮಗಳ ವರದಿಗಳ ಪ್ರಕಾರ, ಮುಂದಿನ ತಿಂಗಳು ಘೋಷಣೆಯಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ(7th Pay Commission).
ದೇಶದಲ್ಲಿ ಹಣದುಬ್ಬರ ಏರಿಕೆಯು 15 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಈ ಹೆಚ್ಚಳವು ಪೂರ್ವಾನ್ವಯ ಅಂದರೆ ಜುಲೈ ತಿಂಗಳಿನಿಂದಲೇ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕದ (CPI-IW) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ಈ ಸುದ್ದಿಯನ್ನೂ ಓದಿ: DA Hike News : ಕಳೆದ ಐದು ತಿಂಗಳ ಬಾಕಿ ತುಟ್ಟಿ ಭತ್ಯೆ; ಯಾವ ವೇತನ ಶ್ರೇಣಿಯವರಿಗೆ ಎಷ್ಟು ಹಣ ಲಭ್ಯ?
2023ರ ಜೂನ್ ತಿಂಗಳ CPI-IW ಅನ್ನು 2023ರ ಜುಲೈ 31ರಂದು ಬಿಡುಗಡೆ ಮಾಡಲಾಗಿದೆ. ನಾವು ತುಟ್ಟಿಭತ್ಯೆಯಲ್ಲಿ ನಾಲ್ಕು ಶೇಕಡಾವಾರು ಪಾಯಿಂಟ್‌ಗಳ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ತುಟ್ಟಿಭತ್ಯೆ ಹೆಚ್ಚಳವು ಮೂರು ಶೇಕಡಾವಾರು ಅಂಕಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಹೀಗಾಗಿ ಡಿಎ ಮೂರು ಶೇಕಡಾ ಪಾಯಿಂಟ್‌ಗಳಿಂದ ಶೇಕಡಾ 45 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಇತ್ತೀಚೆಗೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನೌಕರರ ಕಾರ್ನರ್
Shadakshari CS : ನನ್ನ ಟಾರ್ಗೆಟ್ ಮಾಡಿದ್ರೆ ಚರ್ಚೆಗೆ ಸಿದ್ಧ: ಎನ್‌ಪಿಎಸ್ ಅಧ್ಯಕ್ಷರ ಆರೋಪಕ್ಕೆ ಷಡಾಕ್ಷರಿ ಸವಾಲು
Shadakshari CS ಎನ್‌ಪಿಎಸ್ ನೌಕರರ ಶಿವಮೊಗ್ಗ ಶಾಖೆಯ ಅಧ್ಯಕ್ಷ ಪ್ರಭಾಕರ್ ನಾಪತ್ತೆ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದ್ದಾರೆ.
ಶಿವಮೊಗ್ಗ: ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷ ಪ್ರಭಾಕರ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಸಿ ಎಸ್ ಷಡಾಕ್ಷರಿ (Shadakshari CS )ಹೇಳಿಕೆ ನೀಡಿದ್ದು, ಇತ್ತೀಚೆಗೆ ಕೆಲ ಕಾಲ ನಡೆದ ಪ್ರಭಾಕರ್ ಅವರ ನಾಪತ್ತೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ನನ್ನ ಮತ್ತು ಇತರ ಐದು ಅಧಿಕಾರಿಗಳ ವಿರುದ್ಧ ಕೆಲ ಆರೋಪಗಳನ್ನು ಪ್ರಭಾಕರ್ ಮಾಡಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದೇನೆ. ಅವರು ಈಗ ಏನು ಹೇಳಿಕೆ ಕೊಟ್ಟಿದ್ದಾರೆ ಅಂತ ನನಗೆ ಗೊತ್ತಿಲ್ಲ. ಆದರೆ ಒಂದು ವೇಳೆ ಈಗಲೂ ನನ್ನನ್ನು ಟಾರ್ಗೆಟ್ ಮಾಡಿದ್ರೆ ಚರ್ಚೆಗೆ ಸಿದ್ದನಿದ್ದೇನೆ ಎಂದು ಷಡಾಕ್ಷರಿ ಸವಾಲು ಹಾಕಿದ್ದಾರೆ.
ಪ್ರಭಾಕರ್ ಅವರು ಇತ್ತೀಚೆಗೆ ಮಿಸ್ಸಿಂಗ್ ಆದ ನಂತರ ನಾನು ಕೂಡ ವಿಧಾನಸೌಧದ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟಿದ್ದೇನೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದೇನೆ. ನನಗೂ, ಅವರಿಗೂ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ನನ್ನ ಹತ್ತಿರಾನೂ ಇಲ್ಲ ಅವರ ಬಳಿಯು ಇರಲು ಸಾಧ್ಯವಿಲ್ಲ. ಆದಾಗ್ಯೂ ನನ್ನ ವಿರುದ್ಧ ಆರೋಪ ಮಾಡಿದ್ದರೆ ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಷಡಾಕ್ಷರಿ ಹೇಳಿದರು.
ಪ್ರಭಾಕರ್ ಶಿವಮೊಗ್ಗದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಸಿಆರ್ ಪಿ ಆಗಿಯೂ ಕೆಲಸ ಮಾಡಿದ್ದರು. ನಂತರದಲ್ಲಿ ಉಪನೋಂದಣಾಧಿಕಾರಿ ಕಚೇರಿಗೆ ಆರೋಗ್ಯ ಸಮಸ್ಯೆ ನಿಮಿತ್ತ ವರ್ಗಾವಣೆ ಬಯಸಿದ್ದರು. ಅದರ ಪ್ರಸ್ತಾವನೆಗೆ ಅನುಮತಿ ಕೂಡ ಸಿಕ್ಕಿರುತ್ತೆ. ಒಂದು ವರ್ಷ ಕಾಲ ಅದರ ಲಾಭ ಪಡೆದು ಹೊನ್ನಾಳಿಯಲ್ಲೂ ಕೆಲಸ ಮಾಡಿರುತ್ತಾರೆ. ನಿಯಮಾವಳಿ ಪ್ರಕಾರ ಅವರಿಗೆ ಡಿಮೋಷನ್ ಮಾಡಿರಬೇಕು. ಇದರ ನಡುವೆ ಕೋರ್ಟಿಗೆ ಕೂಡ ಹೋಗಿರುವ ಮಾಹಿತಿ ಲಭ್ಯ ಆಗಿದೆ. ಅದರ ಸಂಪೂರ್ಣ ದಾಖಲಾತಿ ನನಗೆ ಸಿಕ್ಕಿಲ್ಲ. ಸಿಕ್ಕ ನಂತರ ಸಂಪೂರ್ಣ ವಿವರ ನೀಡುತ್ತೇನೆ ಅವರಿಗೆ ಯಾವುದೇ ತೊಂದರೆ ಕೊಡುವಂತಹ ಶಿಫಾರಸು ಪತ್ರ ಕೊಟ್ಟಿಲ್ಲ. ಯಾರಿಗೂ ಫೋನ್ ಮಾಡಿ ಇವರಿಗೆ ಮಾಡಿಕೊಡಬೇಡಿ ಅಂತ ಹೇಳಿಲ್ಲ. ಹೊನ್ನಾಳಿಯಲ್ಲಿ ಅವರಿಗೆ ಸಂಬಳ ಆಗಿಲ್ಲ ಅಂದ್ರೆ ಅದಕ್ಕೆ ನಾನು ಹೇಗೆ ಕಾರಣ?
ಏಳು ತಿಂಗಳು ಸಂಬಳ ಆಗಿಲ್ಲ ಅಂದರೆ ನನ್ನ ಗಮನಕ್ಕೆ ತಂದಿದ್ರೆ ನಾನು ತಕ್ಷಣ ಸಂಬಳ ಮಾಡಿಕೊಡಲು ಹೇಳುತ್ತಿದ್ದೆ. ನನಗೆ ಗೊತ್ತಿಲ್ಲದ ವಿಷಯ ಹೇಳದೆ ಇದ್ದರೆ ಅದಕ್ಕೆ ನಾನು ಕಾರಣನಲ್ಲ. ಯಾವುದೇ ಸಂಬಳ ಬಾಕಿ ಇಲ್ಲ ಅಂತ ಹೊನ್ನಾಳಿ ಬಿಇಓ ಹೇಳಿಕೆ ಕೊಟ್ಟಿದ್ದಾರೆ. ಸಂಬಳ ಕೊಡುವುದು ಅಧಿಕಾರಿಗಳು ನಾನಲ್ಲ. ಅವರು ಸಮಸ್ಯೆ ಹೇಳಿಕೊಂಡರೆ ನಾನು ಸ್ಪಂದಿಸಬಹುದು ಅಷ್ಟೇ. ಡಿಮೋಷನ್ ಮಾಡುವುದು ಸರ್ಕಾರದ ಮಟ್ಟದಲ್ಲಿ. ಅದಕ್ಕೆ ಕಾನೂನುಗಳಿವೆ, ಅದರ ಅಡಿಯಲ್ಲಿ ಅವರು ಮಾಡಿರುತ್ತಾರೆ. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹೇಳಿದರೆ ಅಧಿಕಾರಿಗಳು ಮಾಡುವುದಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೆ ಮಾತ್ರ ಮಾಡ್ತಾರೆ.
ಇದನ್ನೂ ಓದಿ: Govt Employees Strike : ಯಶಸ್ಸು ಪಡೆದ ಮುಷ್ಕರ; ಷಡಾಕ್ಷರಿಗೆ ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ
ಪ್ರಭಾಕರ್ ಅವರ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಅವರಿಗೆ ತೊಂದರೆ ಕೊಡಿ ಅಂತ ನಾನೇನಾದರೂ ಹೇಳಿದ್ದರೆ, ಶಿಫಾರಸು ಪತ್ರ ಕೊಟ್ಟಿದ್ದರೆ ದಾಖಲಾತಿ ತೋರಿಸಲಿ. ಅವರಿಗೆ ಮಾನಸಿಕ ಕಿರಿಕಿರಿ ಆಗಿರಬೇಕು. ಅವರಿಗೆ ಶಿವಮೊಗ್ಗದಲ್ಲಿ, ಬೆಂಗಳೂರಿನಲ್ಲಿ ನಮ್ಮ ಸಹಕಾರಿ ಸಂಘದಿಂದ ತಲಾ 5 ಲಕ್ಷ ಸಾಲ ನಾವೇ ಕೊಟ್ಟಿದ್ದೇವೆ. ಅವರು ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬರಲು ನಾನು ಶಿಫಾರಸು ಪತ್ರ ಕೂಡ ಕೊಟ್ಟಿದ್ದೆ ನಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿದ್ದೇವೆ ಎಂದು ಷಡಾಕ್ಷರಿ ವಿವರಿಸಿದ್ದಾರೆ.
ನೌಕರರ ಕಾರ್ನರ್
Govt Employees News : ಸರ್ಕಾರಿ ನೌಕರರಿಗೆ ಸದ್ಯವೇ ಕ್ಯಾಶ್‌ಲೆಸ್ ಇನ್ಷೂರೆನ್ಸ್ ಕಾರ್ಡ್
Govt Employees News : ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (karnataka arogya sanjeevani ) ಕಾರ್ಡ್ ರೂಪಿಸಲು ಈಗ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ʻಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼಯ (ಕೆಎಎಸ್‌ಎಸ್) (karnataka arogya sanjeevani) ಲಾಭ ಸದ್ಯವೇ ನೌಕರರಿಗೆ (Govt Employees News) ಲಭ್ಯವಾಗಲಿದೆ.
ಈ ಯೋಜನೆಯ ಲಾಭ ಪಡೆಯಲು ಸರ್ಕಾರಿ ನೌಕರರು ʻಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯʼ (HRMS) ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡಿಸಬೇಕೆಂದು ಎಲ್ಲ ಸರ್ಕಾರಿ ನೌಕರರಿಗೆ ಸರ್ಕಾರ ಸೂಚಿಸಿದೆ. ನೌಕರರು ತಮ್ಮ ಮತ್ತು ಅವಲಂಬಿತರ ಮಾಹಿತಿಯನ್ನು HRMS ನಲ್ಲಿ ಅಪಡೇಟ್ ಮಾಡಬೇಕಿರುತ್ತದೆ. ಅಲ್ಲದೆ ಈ ಮಾಹಿತಿಯನ್ನು ಕಚೇರಿಗೆ ಸಹ ಸಲ್ಲಿಸಬೇಸಬೇಕಿರುತ್ತದೆ ಎಂದು ನೌಕರರಿಗೆ ತಿಳಿಸಲಾಗಿದೆ.
ಎಚ್‌ಆರ್‌ಎಂಎಸ್ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಕಳೆದ ಮಾರ್ಚ್‌ನಲ್ಲಿ ಸರ್ಕಾರ ಈ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಪರಿಷ್ಕೃತ ಕಾರ್ಯನೀತಿಯನ್ನು ಪ್ರಕಟಿಸಿಸಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು, ತ್ವರಿತಗತಿಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಈ ಯೋಜನೆಯ ಲಾಭ ಪ್ರತಿ ನೌಕರರಿಗೂ ದೊರೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ʻವಿಸ್ತಾರ ನ್ಯೂಸ್ʼಗೆ ತಿಳಿಸಿದ್ದಾರೆ.
ಸಂಘದ ಮನವಿಗೆ ಸ್ಪಂದಿಸಿರುವ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಂಡಿದೆ. ನೌಕರರ ಮಾಹಿತಿ ಸಂಗ್ರಹ ಸಂಪೂರ್ಣವಾಗುತ್ತಿದ್ದಂತೆಯೇ ಕಾರ್ಡ್ ರೂಪಿಸುವ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟಾರೆ ಈ ಯೋಜನೆ ಜಾರಿಯು ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. 2020-21 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿಯೇ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು.
ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, ʻಆರೋಗ್ಯ ಭಾಗ್ಯ’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ, ಕರ್ನಾಟಕ ನ್ಯಾಯಾಂಗ ಅಧಿಕಾರಿಗಳು, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ/ ಮಂಡಳಿಗಳು, ಸಹಕಾರ ಸ೦ಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರೆ ಸಸ್ಥೆಗಳ ನೌಕರರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಈ ಯೋಜನೆಯಡಿ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲ ತಾಯಿಯ ನ್ನೊಳಗೊಂಡಂತೆ (ಅವರು ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ- ಕನಿಷ್ಠ ಕುಟುಂಬ ಪಿಂಚಣಿ ರೂ.8500 ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರದಿದ್ದಲ್ಲಿ), ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ವೈದ್ಯಕೀಯ ಸೇವೆ ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ: KSRTC Employees News : ಸಾರಿಗೆ ನೌಕರರರಿಗೆ ಸರ್ಕಾರಿ ನೌಕರರಾಗುವ ಭಾಗ್ಯವಿಲ್ಲ!
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಾರಿಗೆ ತರುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಳಪಟ್ಟಿದ್ದು, ಈ ಟ್ರಸ್ಟ್ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯನ್ನು ನಿರ್ವಹಿಸುತ್ತಿದೆ. ಸರ್ಕಾರಿ ನೌಕರರಿಗೆ ರೂಪಿಸಲಾಗಿರುವ ಈ ಯೋಜನೆ ಕೂಡ ಇದರ ಅಡಿಯಲ್ಲಿಯೇ ಬರಲಿದೆ.
-
ದೇಶ19 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ14 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ದೇಶ23 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ಟಾಪ್ 10 ನ್ಯೂಸ್21 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ20 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್22 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ10 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕ್ರೈಂ11 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?