ಬೆಂಗಳೂರು: ರಾಜ್ಯ ಸರ್ಕಾರ ರಚಿಸಿದ 7ನೇ ವೇತನ ಆಯೋಗವು (7th Pay Commission) ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆ, ನೌಕರರು ಹಾಗೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಕರೆದಿದ್ದ ವಿಶೇಷ ಸಭೆಯು ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂದರ್ಭದಲ್ಲಿ ನೌಕರರ ಬೇಡಿಕೆಗಳ ಕುರಿತು ಆಯೋಗದ ಗಮನ ಸೆಳೆದಿದೆ.
ವೇತನ ಆಯೋಗದ ಕಚೇರಿಯ ಸಭಾ ಕೊಠಡಿಯಲ್ಲಿಯೇ ನಡೆದ ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತು ಕೇಂದ್ರ ಸಂಘದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ, ಸಂಘ ಈ ಹಿಂದೆ ಸಲ್ಲಿಸಿದ ಬೇಡಿಕೆ/ಅಭಿಪ್ರಾಯ ಮತ್ತು ಮನವಿಯ ಕುರಿತು ವಿವರಿಸಿದರು. ಅಯೋಗದ ಅಧ್ಯಕ್ಷ ಸುಧಾಕರ್ ರಾವ್, ಕಾರ್ಯದರ್ಶಿ ಹಪ್ಸಿಬಾ ರಾಣಿ ಕೊರ್ಲಪಾಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರಿಂದ ಮಾಹಿತಿಗಳನ್ನು ಸಂಗ್ರಹಿಸಿ 65 ಪುಟಗಳ ವರದಿಯನ್ನು ತಯಾರಿಸಿತ್ತು. ಫೆಬ್ರವರಿ 10 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ, ಸಂಘದ ಹಿರಿಯ ಪದಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರ ನಿಯೋಗವು ಈ ವರದಿಯನ್ನು ವೇತನ ಆಯೋಗಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿನ ಮನವಿಗಳ ಕುರಿತು ಸಂಘದ ಅಧ್ಯಕ್ಷಕರು ಮತ್ತು ಪದಾಧಿಕಾರಿಗಳು ಆಯೋಗಕ್ಕೆ ಮನದಟ್ಟು ಮಾಡಿಸಿದ್ದಾರೆ.
ಇತ್ತೀಚೆಗೆ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದ್ದರಿಂದ ಯಾವುದೇ ಗೊಂದಲಗಳಿಲ್ಲದೆ ವರದಿ ಸಿದ್ಧಪಡಿಸುವ ಉದ್ದೇಶದಿಂದ ಆಯೋಗವು ಈ ಸಭೆ ಕರೆದಿತ್ತು. ಈಗಾಗಲೇ ಪ್ರಶ್ನೋತ್ತರ ಮಾದರಿಯಲ್ಲಿ ತಮ್ಮ ಅಭಿಪ್ರಾಯ, ಬೇಡಿಕೆ ಮಂಡಿಸಿರುವ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಳು, ನೌಕರರು, ಸಾರ್ವಜನಿಕಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಪ್ರಮುಖ ಬೇಡಿಕೆಗಳು ಏನೇನು?
ಹೊಸ ವೇತನ ಶ್ರೇಣಿಗಳ ರಚನೆಗೆ ಅಳವಡಿಸಿಕೊಳ್ಳುವ ಮಾನದಂಡಗಳೇನಿರಬೇಕು?
- ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡಬೇಕು.
ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡುವ ಬಗ್ಗೆ
- ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಿಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ಬದಲಾಯಿಸುವುದು.
- -ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಟ್ರಾಫಿಕ್, ಸರ್ಕಾರಿ ವಾಹನಗಳ ಇಂಧನ ಹಾಗೂ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನಿರ್ವಹಣೆ ನೌಕರರಿಗಿರುವಂತೆ-
- ತಿಂಗಳ ಮೊದಲ ಮತ್ತು ಮೂರನೆ ಶನಿವಾರ ಸಾರ್ವತ್ರಿಕ ರಜೆ ನೀಡುವುದು.
ವೇತನ ಹೆಚ್ಚಳ ಹೊರೆ-ಸರಿದೂಗಿಸುವುದು ಹೇಗೆ?
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು.
- ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು.
- ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಐ ಮಾದರಿ ತರಬೇತಿ ನೀಡುವುದು.
ವೇತನ ಪರಿಷ್ಕರಣೆಗೆ ಕೇಂದ್ರ-ನೆರೆ ರಾಜ್ಯಗಳ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ?
- ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸುವುದು.
ಕೇಂದ್ರಕ್ಕೆ ಸಮಾನ ವೇತನ ನೀಡುವ ಸಾಧ್ಯತೆ ಬಗ್ಗೆ ಸಮಂಜಸವಾದ ಸಮರ್ಥನೆಗಳು
- 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ. 40ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು 01.07.2022ರಿಂದ ಜಾರಿಗೆ ತರುವುದು.
- 2026ರಲ್ಲಿ ಪರಿಷ್ಕರಣೆಯಾಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡುವುದು.
ಹಾಲಿ ಇರುವ ಮುಖ್ಯ ವೇತನ ಶ್ರೇಣಿ ಹಾಗೂ 25 ಪ್ರತ್ಯೇಕ ವೇತನ ಶ್ರೇಣಿಗಳನ್ನು ಮುಂದುವರಿಸಬಹುದೇ?
- ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರಿಸುವುದು.
ನೂತನ ವೇತನ ಶ್ರೇಣಿಗಳನ್ನು ಯಾವ ಆಧಾರ ಮೇಲೆ ರೂಪಿಸಬೇಕು?
- ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸುವುದು.
ಪ್ರಸ್ತುತ ವೇತನ ಮತ್ತು ಭತ್ಯೆಗಳು ಸೇರಿ ಮಾಹೆಯಾನ ಎಷ್ಟಿರಬೇಕು?
- ಕನಿಷ್ಠ 40% ಫಿಟ್ಮೆಂಟ್ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ…
ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ ರೂ. 31,000ಕ್ಕೆ ನಿಗದಿಗೊಳಿಸುವುದು. - ಮುಖ್ಯ ವೇತನ ಶ್ರೇಣಿಯ ಗರಿಷ್ಠ ಹಾಗೂ ಕನಿಷ್ಠ ವೇತನಗಳ ನಡುವಿನ ಅನುಪಾತ ಪುನರ್ ಪರಿಶೀಲನೆ ಆಗಬೇಕೆ?
- -ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5,20 ಬದಲಾಗಿ 1:8.86 ಕ್ಕೆ ನಿಗದಿಪಡಿಸಿ ಶಿಫಾರಸು ಮಾಡುವುದು.
ವೇತನ ಶ್ರೇಣಿಗಳ ನಡುವೆ ಇರುವ ಹೋಲಿಕೆ-ಜವಾಬ್ದಾರಿಗಳಿಗೆ ಅನುಗುಣವಾಗಿದೆಯೇ?
- ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು (Relativity) ಸಾಧ್ಯವಾದಷ್ಟು ಮಟ್ಟಿಗೆ ಹಾಗೆಯೇ ಮುಂದುವರಿಸುವುದು ಸಮಂಜಸವಾಗಿರುತ್ತದೆ.
ಸರ್ಕಾರಿ ನೌಕರರ ಸಂಘದ ಸಂಪೂರ್ಣ ಬೇಡಿಕೆ ಇಲ್ಲಿದೆ ಓದಿ.
ಇದನ್ನೂ ಓದಿ : DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ; ಗುರುವಾರ ಅಧಿಕೃತ ಆದೇಶ