ನೌಕರರ ಕಾರ್ನರ್
7th Pay Commission : ವೇತನ ಆಯೋಗದ ಮಹತ್ವದ ಸಭೆ; ನೌಕರರ ಬೇಡಿಕೆ ಮಂಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ
ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಕುರಿತು ಚರ್ಚಿಸಲು 7ನೇ ವೇತನ ಆಯೋಗವು (7th Pay Commission) ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಕುರಿತು ಆಯೋಗದ ಗಮನ ಸೆಳೆದಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ರಚಿಸಿದ 7ನೇ ವೇತನ ಆಯೋಗವು (7th Pay Commission) ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆ, ನೌಕರರು ಹಾಗೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಕರೆದಿದ್ದ ವಿಶೇಷ ಸಭೆಯು ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂದರ್ಭದಲ್ಲಿ ನೌಕರರ ಬೇಡಿಕೆಗಳ ಕುರಿತು ಆಯೋಗದ ಗಮನ ಸೆಳೆದಿದೆ.
ವೇತನ ಆಯೋಗದ ಕಚೇರಿಯ ಸಭಾ ಕೊಠಡಿಯಲ್ಲಿಯೇ ನಡೆದ ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತು ಕೇಂದ್ರ ಸಂಘದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ, ಸಂಘ ಈ ಹಿಂದೆ ಸಲ್ಲಿಸಿದ ಬೇಡಿಕೆ/ಅಭಿಪ್ರಾಯ ಮತ್ತು ಮನವಿಯ ಕುರಿತು ವಿವರಿಸಿದರು. ಅಯೋಗದ ಅಧ್ಯಕ್ಷ ಸುಧಾಕರ್ ರಾವ್, ಕಾರ್ಯದರ್ಶಿ ಹಪ್ಸಿಬಾ ರಾಣಿ ಕೊರ್ಲಪಾಟಿ ಸಭೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರಿಂದ ಮಾಹಿತಿಗಳನ್ನು ಸಂಗ್ರಹಿಸಿ 65 ಪುಟಗಳ ವರದಿಯನ್ನು ತಯಾರಿಸಿತ್ತು. ಫೆಬ್ರವರಿ 10 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ, ಸಂಘದ ಹಿರಿಯ ಪದಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರ ನಿಯೋಗವು ಈ ವರದಿಯನ್ನು ವೇತನ ಆಯೋಗಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿನ ಮನವಿಗಳ ಕುರಿತು ಸಂಘದ ಅಧ್ಯಕ್ಷಕರು ಮತ್ತು ಪದಾಧಿಕಾರಿಗಳು ಆಯೋಗಕ್ಕೆ ಮನದಟ್ಟು ಮಾಡಿಸಿದ್ದಾರೆ.
ಇತ್ತೀಚೆಗೆ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದ್ದರಿಂದ ಯಾವುದೇ ಗೊಂದಲಗಳಿಲ್ಲದೆ ವರದಿ ಸಿದ್ಧಪಡಿಸುವ ಉದ್ದೇಶದಿಂದ ಆಯೋಗವು ಈ ಸಭೆ ಕರೆದಿತ್ತು. ಈಗಾಗಲೇ ಪ್ರಶ್ನೋತ್ತರ ಮಾದರಿಯಲ್ಲಿ ತಮ್ಮ ಅಭಿಪ್ರಾಯ, ಬೇಡಿಕೆ ಮಂಡಿಸಿರುವ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಳು, ನೌಕರರು, ಸಾರ್ವಜನಿಕಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಪ್ರಮುಖ ಬೇಡಿಕೆಗಳು ಏನೇನು?
ಹೊಸ ವೇತನ ಶ್ರೇಣಿಗಳ ರಚನೆಗೆ ಅಳವಡಿಸಿಕೊಳ್ಳುವ ಮಾನದಂಡಗಳೇನಿರಬೇಕು?
- ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡಬೇಕು.
ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡುವ ಬಗ್ಗೆ
- ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಿಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ಬದಲಾಯಿಸುವುದು.
- -ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಟ್ರಾಫಿಕ್, ಸರ್ಕಾರಿ ವಾಹನಗಳ ಇಂಧನ ಹಾಗೂ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನಿರ್ವಹಣೆ ನೌಕರರಿಗಿರುವಂತೆ-
- ತಿಂಗಳ ಮೊದಲ ಮತ್ತು ಮೂರನೆ ಶನಿವಾರ ಸಾರ್ವತ್ರಿಕ ರಜೆ ನೀಡುವುದು.
ವೇತನ ಹೆಚ್ಚಳ ಹೊರೆ-ಸರಿದೂಗಿಸುವುದು ಹೇಗೆ?
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು.
- ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು.
- ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಐ ಮಾದರಿ ತರಬೇತಿ ನೀಡುವುದು.
ವೇತನ ಪರಿಷ್ಕರಣೆಗೆ ಕೇಂದ್ರ-ನೆರೆ ರಾಜ್ಯಗಳ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ?
- ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸುವುದು.
ಕೇಂದ್ರಕ್ಕೆ ಸಮಾನ ವೇತನ ನೀಡುವ ಸಾಧ್ಯತೆ ಬಗ್ಗೆ ಸಮಂಜಸವಾದ ಸಮರ್ಥನೆಗಳು
- 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ. 40ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು 01.07.2022ರಿಂದ ಜಾರಿಗೆ ತರುವುದು.
- 2026ರಲ್ಲಿ ಪರಿಷ್ಕರಣೆಯಾಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡುವುದು.
ಹಾಲಿ ಇರುವ ಮುಖ್ಯ ವೇತನ ಶ್ರೇಣಿ ಹಾಗೂ 25 ಪ್ರತ್ಯೇಕ ವೇತನ ಶ್ರೇಣಿಗಳನ್ನು ಮುಂದುವರಿಸಬಹುದೇ?
- ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರಿಸುವುದು.
ನೂತನ ವೇತನ ಶ್ರೇಣಿಗಳನ್ನು ಯಾವ ಆಧಾರ ಮೇಲೆ ರೂಪಿಸಬೇಕು?
- ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸುವುದು.
ಪ್ರಸ್ತುತ ವೇತನ ಮತ್ತು ಭತ್ಯೆಗಳು ಸೇರಿ ಮಾಹೆಯಾನ ಎಷ್ಟಿರಬೇಕು?
- ಕನಿಷ್ಠ 40% ಫಿಟ್‌ಮೆಂಟ್‌ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ…
ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ ರೂ. 31,000ಕ್ಕೆ ನಿಗದಿಗೊಳಿಸುವುದು. - ಮುಖ್ಯ ವೇತನ ಶ್ರೇಣಿಯ ಗರಿಷ್ಠ ಹಾಗೂ ಕನಿಷ್ಠ ವೇತನಗಳ ನಡುವಿನ ಅನುಪಾತ ಪುನರ್ ಪರಿಶೀಲನೆ ಆಗಬೇಕೆ?
- -ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5,20 ಬದಲಾಗಿ 1:8.86 ಕ್ಕೆ ನಿಗದಿಪಡಿಸಿ ಶಿಫಾರಸು ಮಾಡುವುದು.
ವೇತನ ಶ್ರೇಣಿಗಳ ನಡುವೆ ಇರುವ ಹೋಲಿಕೆ-ಜವಾಬ್ದಾರಿಗಳಿಗೆ ಅನುಗುಣವಾಗಿದೆಯೇ?
- ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು (Relativity) ಸಾಧ್ಯವಾದಷ್ಟು ಮಟ್ಟಿಗೆ ಹಾಗೆಯೇ ಮುಂದುವರಿಸುವುದು ಸಮಂಜಸವಾಗಿರುತ್ತದೆ.
ಸರ್ಕಾರಿ ನೌಕರರ ಸಂಘದ ಸಂಪೂರ್ಣ ಬೇಡಿಕೆ ಇಲ್ಲಿದೆ ಓದಿ.
ಇದನ್ನೂ ಓದಿ : DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ; ಗುರುವಾರ ಅಧಿಕೃತ ಆದೇಶ
ನೌಕರರ ಕಾರ್ನರ್
DA Hike News : ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ; ಗುರುವಾರ ಅಧಿಕೃತ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ (DA Hike News ) ಮಾಡುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಗುರುವಾರ ಆರ್ಥಿಕ ಇಲಾಖೆಯು ಅಧಿಕೃತವಾಗಿ ಆದೇಶ ಹೊರಡಿಸಲಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನೂತನ ಸರ್ಕಾರ ಮೊದಲ ಸಿಹಿ ಸುದ್ದಿ ನೀಡಿದೆ. ನೌಕರರು ಕಳೆದ ಒಂದು ತಿಂಗಳಿನಿಂದ ನಿರೀಕ್ಷಿಸುತ್ತಿದ್ದ ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಸರ್ಕಾರ (Govt Employees News) ಮುಂದಾಗಿದೆ. ಕೇಂದ್ರ ಸರ್ಕಾರದಂತೆ ಶೇ.4 ರಷ್ಟು (DA Hike News) ತುಟ್ಟಿಭತ್ಯೆ ಹೆಚ್ಚಳ ಮಾಡುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಹಿ ಹಾಕಿದ್ದಾರೆ. ಆರ್ಥಿಕ ಇಲಾಖೆಯು ಗುರುವಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಏ. 3 ರಂದು ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಹೆಚ್ಚಳ ಮಾಡುವುದು ವಾಡಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿಭತ್ಯೆಯನ್ನು (Dearness Allowance) ಹೆಚ್ಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿರಲಿಲ್ಲ.
ಈ ಹಿಂದಿನಿಂದಲೂ ಕೇಂದ್ರ ಸರ್ಕಾರದಂತೆಯೇ ರಾಜ್ಯ ಸರ್ಕಾರವೂ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿಕೊಂಡು ಬಂದಿದೆ. ಅದರಂತೆ ಈಗಲೂ ರಾಜ್ಯ ಸರ್ಕಾರಿ ನೌಕರರಿಗೂ ಸಹ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ. 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕೆಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ ನೂತನ ಸರ್ಕಾರವನ್ನೂ ಕೋರಿದ್ದರು. ಬುಧವಾರ ಈ ಸಂಬಂಧದ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡುವ ಮೂಲಕ ತುಟ್ಟಿಭತ್ಯೆ ಹೆಚ್ಚಳದ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ತುಟ್ಟಿಭತ್ಯ ಹೆಚ್ಚಳದ ಕಡತಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಪ್ರಕಟಣೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಗುರುವಾರವೇ ಶೇ. 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ದಿನಾಂಕ 01-01-2023 ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ಆದೇಶ ಹೊರಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
7ನೇ ವೇತನ ಆಯೋಗದ (7th Pay commission) ಮಧ್ಯಂತರ ಪರಹಾರವಾಗಿ ಶೇ.17 ವೇತನ ಹೆಚ್ಚಳ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಹೆಚ್ಚಳವನ್ನು ಏಪ್ರಿಲ್ ತಿಂಗಳ ವೇತನದಲ್ಲಿಯೇ ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಶೇ. 3.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು. ಇದು 2022ರ ಜುಲೈ1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 1,282.72 ಕೋಟಿ ರೂ. ಭರಿಸಿತ್ತು. ಅದಕ್ಕೂ ಮೊದಲು ಏಪ್ರಿಲ್‌ನಲ್ಲಿ ಶೇ. 2.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಇದು ಜನವರಿ 1 ರಿಂದ ಜಾರಿಗೆ ಬಂದಿತ್ತು. ಇದಕ್ಕಾಗಿ ಸರ್ಕಾರ 1,447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಿತ್ತು.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ ಜಾರಿ
ಏಳನೇ ವೇತನ ಆಯೋಗದ ಶಿಫಾರಸಿನಂತೆ (7th Pay commission) ತುಟ್ಟಿ ಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿ ಏ. 3 ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಒಟ್ಟಾರೆ ತುಟ್ಟಿಭತ್ಯೆಯು ಶೇ. 38 ರಿಂದ 42ಕ್ಕೆ ಏರಿದಂತಾಗಿದೆ. ಈ ಭತ್ಯೆ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರವು 12,815 ಕೋಟಿ ತೆಗೆದಿರಿಸಿದೆ.
ಈ ಹೆಚ್ಚಳವು ಜನವರಿ 1 ರಿಂದಲೇ ಜಾರಿಗೆ ಬಂದಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಸಲ ಏರಿಸುತ್ತದೆ. ಜನವರಿ ಹಾಗೂ ಜುಲೈನಲ್ಲಿ ಇದು ನಡೆಯುತ್ತದೆ. 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಪಿಂಚಣಿದಾರರು ಈ ಹೆಚ್ಚಳದ ಸೌಲಭ್ಯ ಪಡೆಯಲಿದ್ದಾರೆ.
ಇತ್ತೀಚಿನ ಗ್ರಾಹಕ ದರ ಸೂಚ್ಯಂಕ (consumer price index) ಆಧರಿಸಿ ತುಟ್ಟಿಭತ್ಯೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸುತ್ತದೆ. ಡಿಎ ಏರಿಕೆ 2023ರ ಜನವರಿಯಿಂದ ಅನ್ವಯವಾಗಲಿದೆ. ಈ ಹಿಂದೆ 2022ರ ಸೆಪ್ಟೆಂಬರ್ 28ರಂದು ತುಟ್ಟಿಭತ್ಯೆಯ ಪರಿಷ್ಕರಣೆ ನಡೆದಿತ್ತು. ಅದು 2022ರ ಜುಲೈ 1 ರಿಂದ ಜಾರಿಯಾಗಿತ್ತು.
ಇದನ್ನೂ ಓದಿ : 7th Pay Commission : ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮೇ 26ಕ್ಕೆ ಮಹತ್ವದ ಸಭೆ
ನೌಕರರ ಕಾರ್ನರ್
Teacher Transfer : ಸ್ಥಗಿತಗೊಂಡಿರುವ ಶಿಕ್ಷಕರ ವರ್ಗಾವಣೆ; ಕೂಡಲೇ ಆರಂಭಿಸಲು ಶಿಕ್ಷಕರ ಸಂಘದ ಮನವಿ
ಚುನಾವಣೆಯ ಕಾರಣದಿಂದ ಸ್ಥಗಿತಗೊಂಡಿರುವ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕೆಂದು ರಾಜ್ಯದ ಶಿಕ್ಷಕರು ನೂತನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು: ಚುನಾವಣಾ ಆಯೋಗದ ಸೂಚನೆಯಂತೆ ಸ್ಥಗಿತಗೊಂಡಿದ್ದ ರಾಜ್ಯ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆ ಮತ್ತೆ ಆರಂಭವಾಗಬಹುದೆಂಬ ನಿರೀಕ್ಷೆಯಲ್ಲಿ ಈಗ ರಾಜ್ಯದ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೂಡಲೇ ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂದು ಅವರು ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿತ್ತಲ್ಲದೇ, ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರ ಆರಂಭಿಸುವಂತೆ ಹೇಳಿತ್ತು. ಈಗ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ನೂತನ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ವರ್ವಾವಣೆ ಪ್ರಕ್ರಿಯೆ ಕೂಡಲೇ ಆರಂಭಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.
ಈ ನಡುವೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ವರ್ಗಾವಣೆ ನಡೆಯದೆ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈಗಾಗಲೇ ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿ, ಕೌನ್ಸಿಲಿಂಗ್‌ಗಾಗಿ ಕಾಯುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಸ್ಥಗಿತಗೊಂಡಿದ್ದ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಲು ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ.
ಈ ಹಿಂದಿನ ಸರ್ಕಾರ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲು ಚುನಾವಣೆಗಿಂತ ಒಂದು ವಾರ ಮೊದಲಷ್ಟೇ (ಮಾರ್ಚ್ 31 ರಂದು) ಅನುಮತಿ ನೀಡಿತ್ತು. ಚುನಾವಣಾ ನೀತಿ ಸಂಹಿಂತೆ ಜಾರಿಯಲ್ಲಿದ್ದುದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಕರ್ನಾಟಕ ಚುನಾವಣಾ ಆಯುಕ್ತರು ಇದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಿದ್ದು, ಅಲ್ಲಿಂದ ಈ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡುವಂತೆ ಸೂಚನೆ ಬಂದಿತ್ತು. ಹೀಗಾಗಿ ವರ್ವಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಗಳಡಿ ವರ್ಗಾವಣೆಗಾಗಿ 88,324 ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿದ್ದ ಈ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ನಂತರ ಪ್ರಾರಂಭವಾದರೂ ಚುನಾವಣೆಯ ಕಾರಣದಿಂದ ಸ್ಥಗಿತಗೊಂಡಿತ್ತು. ಹೆಚ್ಚುವರಿ ಶಿಕ್ಷಕರ ನಿಯೋಜನೆ, ಸರ್ಕಾರಿ ಪ್ರಾಥಮಿ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಈಗಾಗಲೇ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ.
ನೂತನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಸದ್ಯವೇ ಶಾಲೆಗಳನ್ನು ತೆರೆಯಲಾಗುತ್ತದೆ. ಹೀಗಾಗಿ ಕೂಡಲೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಿ, ಪೂರ್ಣಗೊಳಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ತಪ್ಪುತ್ತದೆ ಎಂಬುದು ಶಿಕ್ಷಕರ ವಾದವಾಗಿದೆ. ಆದರೆ ಈಗಷ್ಟೇ ಅಧಿಕಾರಕ್ಕೆ ಬಂದಿರುವ ಸರ್ಕಾರ ಇತ್ತ ಗಮನ ನೀಡುತ್ತದೆಯೇ, ಇಲ್ಲವೇ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Teacher Transfer : ಶಿಕ್ಷಕರ ವರ್ಗಾವಣೆ ಮುಂದೂಡಿದ ಚುನಾವಣಾ ಆಯೋಗ; ಫಲಿತಾಂಶದ ಬಳಿಕವಷ್ಟೇ ಚಾಲನೆ
ನೌಕರರ ಕಾರ್ನರ್
7th Pay Commission : ನೌಕರರ ಬೇಡಿಕೆ ಕುರಿತು ಚರ್ಚಿಸಲು ಆಯೋಗದಿಂದ ಮೇ 26ಕ್ಕೆ ಮಹತ್ವದ ಸಭೆ
ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಕುರಿತು ಚರ್ಚಿಸಲು 7ನೇ ವೇತನ ಆಯೋಗವು (7th Pay Commission) ಈ ಸಭೆ ನಡೆಸುತ್ತಿದ್ದು, ಆಸಕ್ತರು ಸಂಪೂರ್ಣ ಮಾಹಿತಿಯೊಂದಿಗೆ ಸಭೆಯಲ್ಲಿ ಭಾಗವಹಿಸಬೇಕೆಂದು ಆಯೋಗವು ಸೂಚಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರವು 7ನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳು ವಿಸ್ತರಿಸಿದ ಬೆನ್ನಲ್ಲೇ ಆಯೋಗವು ಯಾವುದೇ ಗೊಂದಲಗಳಿಲ್ಲದೆ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ಪ್ರಶ್ನೋತ್ತರ ಮಾದರಿಯಲ್ಲಿ ತಮ್ಮ ಅಭಿಪ್ರಾಯ, ಬೇಡಿಕೆ ಮಂಡಿಸಿರುವ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಗಳಿಗೆ, ನೌಕರರಿಗೆ, ಸಾರ್ವಜನಿಕರಿಗೆ ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಲು ಅವಕಾಶ ನೀಡಿದೆ.
ಇದಕ್ಕಾಗಿ ಆಯೋಗವು ಮೇ. 26ರ ರಂದು ವಿಶೇಷ ಸಭೆ ಕರೆದಿದ್ದು, ಆಸಕ್ತರು ಬೇಡಿಕೆಗಳ ಸೂಕ್ತ ಪಿಪಿಟಿಯೊಂದಿಗೆ ಸಭೆಗೆ ಆಗಮಿಸಿ ತಮ್ಮ ವಾದವನ್ನು ಮಂಡಿಸಬೇಕೆಂದು ಆಯೋಗವು ಕೋರಿದೆ. ಈ ಸಂದರ್ಭದಲ್ಲಿ ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ. ಪಿಪಿಟಿಯಲ್ಲಿ ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ ಇರಬೇಕು. ಮಾಹಿತಿಯು ವಸ್ತುನಿಷ್ಠ ಹಾಗು ನಿರ್ದಿಷ್ಟವಾಗಿರಬೇಕು ಹಾಗೂ ಹತ್ತು ಸ್ಲೈಡ್‌ಗಳಿಗೆ ಸಮೀತವಾಗಿರಬೇಕು. ಮಾಹಿತಿಯು ಸ್ಲೈಡ್‌ಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ಸೂಚಿಸಲಾಗಿದೆ.
ಈ ಸಭೆಯು ವೇತನ ಆಯೋಗದ ಕಚೇರಿಯ ಸಭಾ ಕೊಠಡಿಯಲ್ಲಿಯೇ ನಡೆಯಲಿದ್ದು, ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಆಯೋಗದ ಕಾರ್ಯದರ್ಶಿ ಹಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಉಮಾ ಕೆ. ಏಳನೇ ವೇತನ ಆಯೋಗಕ್ಕೆ ತನ್ನ ಕಾರ್ಯ ಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ಮೇ 19ರಿಂದ 6 ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಈ ಆಯೋಗವನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19 ರಂದು ರಚಿಸಲಾಗಿತ್ತು. ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯು ಮೇ. 19 ರಂದು ಅಂತ್ಯಗೊಳ್ಳಲಿದ್ದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿತ್ತು.
ರಾಜ್ಯದಲ್ಲಿ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿದ್ದುದ್ದರಿಂದ ಮತ್ತು ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಆಯೋಗಕ್ಕೆ ನಿಗಿದಿತ ಅವಧಿಯಲ್ಲಿ ವರದಿ ಸಿದ್ಧಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೆಚ್ಚಿನ ಕಾಲಾವಕಾಶವನ್ನು ಕೋರಿ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು.
ನೂತನ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಏಳನೇ ವೇತನ ಆಯೋಗವು ಶಿಫಾರಸು ಮಾಡಲಿದ್ದು, ಇದನ್ನು ಸರ್ಕಾರ ಜಾರಿಗೆ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಈ ತೀರ್ಮಾನದಿಂದಾಗಿ ನಿರಾಸೆಯಾಗಿದೆ.
6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಏಳನೇ ವೇತನ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ನೌಕರರ ಸಂಘದ ಒತ್ತಡಕ್ಕೆ ಮಣಿದ ಹಿಂದಿನ ಸರ್ಕಾರ ಆಯೋಗ ರಚಿಸಿ ಆದೇಶ ಹೊರಡಿಸಿತ್ತು. ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17 ರಷ್ಟು ವೇತನ ಹೆಚ್ಚಳವನ್ನು ಕಳೆದ ಏಪ್ರಿಲ್ 1 ರಿಂದಲೇ ಜಾರಿಗೆ ತಂದಿದೆ.
ಇದನ್ನೂ ಓದಿ: Govt Employees Strike: ವೇತನ ಆಯೋಗ ವರದಿ ಜಾರಿಯಿಂದ ರಾಜ್ಯ ಬೊಕ್ಕಸಕ್ಕೆ ಹೊರೆ ಎನ್ನುವುದು ಸುಳ್ಳು: ಷಡಾಕ್ಷರಿ
ಕರ್ನಾಟಕ
7th Pay Commission: ರಾಜ್ಯ 7ನೇ ವೇತನ ಆಯೋಗದ ವರದಿ ಸಲ್ಲಿಕೆ ಅವಧಿ 6 ತಿಂಗಳು ವಿಸ್ತರಣೆ
7th Pay Commission: ರಾಜ್ಯ 7ನೇ ವೇತನ ಆಯೋಗವು ಮೇ 19ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಆದರೆ, ಆಯೋಗದ ಸಮಾಲೋಚನಾ ಕಾರ್ಯ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ವರದಿ ಸಲ್ಲಿಕೆ ಅವಧಿ 6 ತಿಂಗಳ ಕಾಲ ವಿಸ್ತರಿಸಲಾಗಿದೆ.
ಬೆಂಗಳೂರು: ರಾಜ್ಯ 7ನೇ ವೇತನ ಆಯೋಗ (7th Pay Commission) ತನ್ನ ಕಾರ್ಯ ಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ವೇತನ ಆಯೋಗದ ಕಾಲಾವಧಿಯನ್ನು ಮೇ 19ರಿಂದ 6 ತಿಂಗಳ ಕಾಲ ವಿಸ್ತರಿಸಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಉಮಾ. ಕೆ ಅವರು ವೇತನ ಆಯೋಗದ ಕಾಲಾವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆ ಹಾಗೂ ನೂತನ ವೇತನ ರಚನೆಗಾಗಿ 2022ರ ನವೆಂಬರ್ 11ರಂದು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಆದರೆ ಆಯೋಗದ ಸಮಾಲೋಚನಾ ಕಾರ್ಯಗಳು ಇನ್ನೂ ಪ್ರಗತಿಯಲ್ಲಿರುವುದರಿಂದ ವೇತನ ಆಯೋಗದ ವರದಿ ಸಲ್ಲಿಕೆ ಅವಧಿಯನ್ನು ಮೇ 19ರಿಂದ 6 ತಿಂಗಳು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ | Karnataka CM: 50:50 ಎನ್ನುತ್ತಿದ್ದ ಹೈಕಮಾಂಡ್‌ಗೆ 60:60 ಎಂದ ಸಿದ್ದರಾಮಯ್ಯ-ಡಿಕೆಶಿ: ಮತ್ತಷ್ಟು ಕಗ್ಗಂಟಾದ ಸಿಎಂ ಆಯ್ಕೆ
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ5 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ20 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
Live News8 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ20 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕ್ರಿಕೆಟ್21 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ19 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ