ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಲು ನಿಗದಿಪಡಿಸಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಈಗ ದಿನಾಂಕ 31-12-2023ರ ಒಳಗೆ ನೌಕರರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿರುತ್ತದೆ.
2022ರ ಮೇ 5ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ನೌಕರರು ದಿನಾಂಕ 31-12-2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹರಾಗುತ್ತಾರೆ ಎಂದು ತಿಳಿಸಲಾಗಿತ್ತು. ಈ ಅಧಿಸೂಚನೆಗೆ ಮತ್ತೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಈಗ ಡಿಸೆಂಬರ್ 31, 2023ರ ವರೆಗೆ ಗಡುವನ್ನು ವಿಸ್ತರಿಸಿದೆ.
ಕಳೆದ ಜನವರಿಯಲ್ಲಿಯೇ ಮಾರ್ಚ್ 31ರ ವರೆಗೆ ಗಡುವನ್ನು ವಿಸ್ತರಿಸಿ ಅಧಿಸೂಚನೆ ಪ್ರಕಟಗೊಂಡಿತ್ತಾದರೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಪರೀಕ್ಷೆಯ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿತ್ತು. ಸಂಘದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿ ಮತ್ತೊಂದು ಅಧಿಸೂಚನೆ ಹೊರಡಿಸಲು ಸೂಚಿಸಿದ್ದರು. ಅದರಂತೆಯೇ ಫೆ.17ರಂದು ಈ ತಿದ್ದುಪಡಿ ಅಧಿಸೂಚನೆ ಪ್ರಕಟವಾಗಿದೆ.
ಗಡುವು ವಿಸ್ತರಿಸಿದ ಸರ್ಕಾರಿ ಆದೇಶ ಇಲ್ಲಿದೆ
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರಲ್ಲಿ “ಈ ನಿಯಮದ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅನರ್ಹರಾಗುತ್ತಾರೆʼʼ ಎಂದು ತಿಳಿಸಲಾಗಿತ್ತು. 2014ರ ಡಿಸೆಂಬರ್‌ನಲ್ಲಿಯೇ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ (ಡಿಪಿಎಆರ್ 104 ಇ-ಆಡಳಿತ 2014) ಹೊರಡಿಸಿತ್ತು. ಇದಕ್ಕೆ ಕಳೆದ ಮೇನಲ್ಲಿ ತಿದ್ದುಪಡಿ ತಂದು, “ಹತ್ತು ವರ್ಷಗಳ ಅವಧಿಯೊಳಗೆʼʼ ಎಂಬುದಕ್ಕೆ ಬದಲಾಗಿ, “ಯಾವುದೇ ಸರ್ಕಾರಿ ನೌಕರನು ದಿನಾಂಕ:31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಗಳಿಸಲು ಅನರ್ಹನಾಗತಕ್ಕದ್ದಲ್ಲʼʼ ಎಂದು ಹೇಳಲಾಗಿತ್ತು. ಈಗ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರಿ ನೌಕರರು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂಬ ಉದ್ದೇಶದಿಂದ ಸರ್ಕಾರ ಈ ಪರೀಕ್ಷೆ ನಡೆಸುತ್ತಿದೆ. ಮೊದಲ ಬಾರಿಗೆ ಉಚಿತವಾಗಿ ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂದೆ ಪರೀಕ್ಷೆ ಬರೆಯಲು 359 ರೂ. ಹಾಗೂ ಬ್ಯಾಂಕ್ ಸೇವಾ ಶುಲ್ಕವನ್ನು ನೌಕರರು ಪಾವತಿಸ ಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ದಿನಾಂಕದಿಂದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ವಿಶೇಷವಾದ ವೆಬ್‌ಸೈಟ್ ಪ್ರಾರಂಭಿಸಲಾಗಿದೆ. ನೌಕರರು ಇದರಲ್ಲಿ ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡವರು, ಮುಂದೆ ಪರೀಕ್ಷೆಯ ಸ್ಲಾಟ್ ಅನ್ನು ಬುಕ್ ಮಾಡಿಕೊಂಡು ನಿಗದಿತ ದಿನದಂದು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಪರೀಕ್ಷೆ ಬರೆಯಲು ವೆಬ್ ವಿಳಾಸ ಇಂತಿದೆ: https://clt.karnataka.gov.in/
ಈಗಾಗಲೇ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಘೋಷಿಸಿತ್ತು. ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು -2012 ಜಾರಿಗೆ ಬಂದ 22-03-2012ರಂದು ಸೇವೆಯಲ್ಲಿದ್ದು, ದಿನಾಂಕ 17-04-2021 ರೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ನೌಕರರಿಗೆ ಈ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಸರ್ಕಾರಿ ನೌಕರರಾಗಿರುವ ಚಾಲಕರಿಗೆ, ಪೊಲೀಸ್ ಕಾನ್ಸ್‌ಟೇಬಲ್, ನರ್ಸ್, ಫಾರೆಸ್ಟ್ ಗಾರ್ಡ್, ಫಾರೆಸ್ಟ್ ವಾಚರ್ಸ್, ಅಬಕಾರಿ ರಕ್ಷಕರಿಗೆ ಮತ್ತು “ಡಿʼʼ ದರ್ಜೆಯ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. 45 ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದೂ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಈ ಕುರಿತು ಇನ್ನಷ್ಟೇ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: CLT Exam : ಕಂಪ್ಯೂಟರ್ ಪರೀಕ್ಷೆಯಲ್ಲಿ ಈಗಾಗಲೇ ಉತ್ತೀರ್ಣರಾಗಿರುವ ನೌಕರರಿಗೆ ಐದು ಸಾವಿರ ಪ್ರೋತ್ಸಾಹ ಧನ