ಬೆಂಗಳೂರು: ಪದೇ ಪದೇ ಅಡ್ಡಿಗಳಿಂದಾಗಿ ಸ್ಥಗಿತಗೊಳ್ಳುತ್ತಿರುವ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆ ಈ ಶೈಕ್ಷಣಿಕ ಸಾಲಿನಲ್ಲಿಯೇ ಆರಂಭವಾಗಲಿದೆಯೇ? ವರ್ಗಾವಣೆಗೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ತಂದ ಈಗಿನ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿಯೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲಿದೆಯೇ? ಈ ಪ್ರಶ್ನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಉತ್ತರ ನೀಡಬೇಕಾಗಿದೆ.
ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವುದರೊಳಗೆ ಮುಖ್ಯಮಂತ್ರಿಗಳು ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಕಳೆದ ತಿಂಗಳು ಆರಂಭವಾಗಿದ್ದ ವರ್ಗಾವಣೆ ಪ್ರಕ್ರಿಯೆಯು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೇ ಸ್ಥಗಿತಗೊಂಡಿತ್ತು. ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆಯಲ್ಲಿನ ಗೊಂದಲದಿಂದಾಗಿ ಆರಂಭವಾಗಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ವರ್ಗಾವಣೆ ಪ್ರಕ್ರಿಯೆ ಮತ್ತೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ, ವರ್ಗಾವಣೆಗೆ ಸಂಬಂಧಿಸಿದ ಗೊಂದಲಗಳಿಗೆ ಪರಿಹಾರ ಸಿಕ್ಕಿದ್ದು, ಮತ್ತೆ ವರ್ಗಾವಣೆ ನಡೆಸುವ ಕುರಿತು ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ವರ್ಗಾವಣೆಯು, ʻಆಗ ನಡೆಯಬಹುದು, ಈಗ ನಡೆಯಬಹುದುʼ ಎಂದು ಕಾದು ಕುಳಿತಿರುವ ಶಿಕ್ಷಕರಿಗೆ ಸದ್ಯವೇ ಸಿಹಿ ಸುದ್ದಿ ದೊರೆಯುವ ನಿರೀಕ್ಷೆ ಇದೆ.
ವರ್ಗಾವಣೆ ನಡೆಯುವಂತೆ ಮಾಡಲೇಬೇಕೆಂದು ಹಟ ತೊಟ್ಟಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಸಂಬಂಧ ಪ್ರಯತ್ನ ನಡೆಸುತ್ತಲೇ ಇದ್ದು, ಬುಧವಾರ ಸಂಘದ ನಿಯೋಗವೊಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಈ ಸಂದರ್ಭದಲ್ಲಿ ವರ್ಗಾವಣಾ ಪ್ರಕ್ರಿಯೆಗಳನ್ನು ಪುನರ್ ಪ್ರಾರಂಭಿಸುವ ಕಡತವನ್ನು ಶಿಕ್ಷಣ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಿದೆ. ಈ ಕುರಿತು ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ಶಿಕ್ಷಕರ ಸಂಘ ಹೇಳಿದೆ.
ಶಿಕ್ಷಕರ ಸಂಘವು ಕೂಡಲೇ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಸದ್ಯವೇ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಗಳಿವೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ಚುನಾವಣೆಯ ಕಾರಣಕ್ಕೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕಾಗಿಲ್ಲ. ಈ ಬಗ್ಗೆ ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ವರ್ಗಾವಣೆ ನಡೆದರೂ ಚುನಾವಣಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿರುವ ಚಂದ್ರಶೇಖರ ನುಗ್ಗಲಿ, ಕೌನ್ಸಿಲಿಂಗ್ ಮೂಲಕ ನಡೆಯುವ ಶಿಕ್ಷಕರ ವರ್ಗಾವಣೆಗೂ ಚುನಾವಣಾ ಪ್ರಕ್ರಿಯೆಗಳಿಗೂ ಯಾವುದೇ ಸಂಬಂಧವಿಲ್ಲ. ಈ ವರ್ಗಾವಣೆ ಪ್ರಕ್ರಿಯೆಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ತೆ ಸಚಿವ ಸಂಪುಟಕ್ಕೆ ಬಡ್ತಿ ವಿಷಯ
ಕಳೆದ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬಂದರೂ ಒಪ್ಪಿಗೆ ದೊರೆಯದ ಸೇವಾ ನಿರತ ಪದವೀಧರ ಶಿಕ್ಷಕರನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ ವಿಷಯ ಮತ್ತೆ ಸಚಿವ ಸಂಪುಟದ ಮುಂದೆ ಮಂಡನೆಯಾಗಲಿದೆ. ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಈ ಪ್ರಸ್ತಾಪದ ಕುರಿತು ಇನ್ನಷ್ಟು ಮಾಹಿತಿಯನ್ನು ಕೇಳಲಾಗಿತ್ತು. ಮಾಹಿತಿಯ ಕೊರತೆಯಿಂದಾಗಿ ಸಚಿವ ಸಂಪುಟ ಸಭೆಯು ಇದಕ್ಕೆ ಅನುಮತಿ ನೀಡಿರಲಿಲ್ಲ.
ಈಗ ಶಿಕ್ಷಣ ಇಲಾಖೆಯು ಅಗತ್ಯ ಮಾಹಿತಿಯನ್ನು ಕ್ರೋಡೀಕರಿಸಿದ್ದು, ಕ್ಯಾಬಿನೆಟ್ ಶಾಖೆಗೆ ಸಲ್ಲಿಕೆಯಾಗಿದೆ. ಹೀಗಾಗಿ ಮುಂದಿನ ಸಚಿವ ಸಂಪುಟದ ಸಭೆಯಲ್ಲಿಯೇ ಈ ಪ್ರಾಸ್ತಾಪ ಮತ್ತೆ ಚರ್ಚೆಗೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗುವುದು ಎಂದು ರಿತೇಶ್ ಕುಮಾರ್ ಸಿಂಗ್ ನಿಯೋಗಕ್ಕೆ ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಶಿಕ್ಷಕರ ಸಂಘದ ನಿಯೋಗದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕೂಡಾ ಚರ್ಚಿಸಲಾಯಿತು. ಶಿಕ್ಷಕರು ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ಕೊಡುವ ಕುರಿತು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕೋಶಾಧ್ಯಕ್ಷ ಸುರೇಶ ಶಡಶ್ಯಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗನಗೌಡ ಇದ್ದರು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಾಧ್ಯಾಕ್ಷ ಶಂಭುಲಿಂಗನಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : NPS News : ಕೇಂದ್ರದಂತೆ ರಾಜ್ಯದಲ್ಲಿಯೂ ಶಿಕ್ಷಕರಿಗೆ ಓಪಿಎಸ್ ಜಾರಿಗೆ ತನ್ನಿ; ಶಿಕ್ಷಕರ ಸಂಘ ಒತ್ತಾಯ