ನೌಕರರ ಕಾರ್ನರ್
Teacher Transfer : ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಚಾಲನೆ; ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಕಡತ ಸಲ್ಲಿಕೆ
ರಾಜ್ಯದ ಶಿಕ್ಷಕರ ಬಹಳ ದಿನಗಳ ಬೇಡಿಕೆಯಾದ ವರ್ಗಾವಣೆ ಪ್ರಕ್ರಿಯೆಗೆ (Teacher Transfer) ಸಂಬಂಧಿಸಿದ ಕಡತ ಈಗ ಮುಖ್ಯಮಂತ್ರಿಗಳ ಕಾರ್ಯಾಲಯ ಸೇರಿದೆ. ಸದ್ಯವೇ ವರ್ಗಾವಣೆಗೆ ಪ್ರಕ್ರಿಯೆಗೆ ಅನುಮತಿ ದೊರೆಯುವ ಸಾಧ್ಯತೆಗಳಿವೆ.
ಬೆಂಗಳೂರು: ಪದೇ ಪದೇ ಅಡ್ಡಿಗಳಿಂದಾಗಿ ಸ್ಥಗಿತಗೊಳ್ಳುತ್ತಿರುವ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆ ಈ ಶೈಕ್ಷಣಿಕ ಸಾಲಿನಲ್ಲಿಯೇ ಆರಂಭವಾಗಲಿದೆಯೇ? ವರ್ಗಾವಣೆಗೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ತಂದ ಈಗಿನ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿಯೇ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲಿದೆಯೇ? ಈ ಪ್ರಶ್ನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಉತ್ತರ ನೀಡಬೇಕಾಗಿದೆ.
ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವುದರೊಳಗೆ ಮುಖ್ಯಮಂತ್ರಿಗಳು ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಕಳೆದ ತಿಂಗಳು ಆರಂಭವಾಗಿದ್ದ ವರ್ಗಾವಣೆ ಪ್ರಕ್ರಿಯೆಯು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೇ ಸ್ಥಗಿತಗೊಂಡಿತ್ತು. ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆಯಲ್ಲಿನ ಗೊಂದಲದಿಂದಾಗಿ ಆರಂಭವಾಗಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ವರ್ಗಾವಣೆ ಪ್ರಕ್ರಿಯೆ ಮತ್ತೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ, ವರ್ಗಾವಣೆಗೆ ಸಂಬಂಧಿಸಿದ ಗೊಂದಲಗಳಿಗೆ ಪರಿಹಾರ ಸಿಕ್ಕಿದ್ದು, ಮತ್ತೆ ವರ್ಗಾವಣೆ ನಡೆಸುವ ಕುರಿತು ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ವರ್ಗಾವಣೆಯು, ʻಆಗ ನಡೆಯಬಹುದು, ಈಗ ನಡೆಯಬಹುದುʼ ಎಂದು ಕಾದು ಕುಳಿತಿರುವ ಶಿಕ್ಷಕರಿಗೆ ಸದ್ಯವೇ ಸಿಹಿ ಸುದ್ದಿ ದೊರೆಯುವ ನಿರೀಕ್ಷೆ ಇದೆ.
ವರ್ಗಾವಣೆ ನಡೆಯುವಂತೆ ಮಾಡಲೇಬೇಕೆಂದು ಹಟ ತೊಟ್ಟಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಸಂಬಂಧ ಪ್ರಯತ್ನ ನಡೆಸುತ್ತಲೇ ಇದ್ದು, ಬುಧವಾರ ಸಂಘದ ನಿಯೋಗವೊಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಈ ಸಂದರ್ಭದಲ್ಲಿ ವರ್ಗಾವಣಾ ಪ್ರಕ್ರಿಯೆಗಳನ್ನು ಪುನರ್ ಪ್ರಾರಂಭಿಸುವ ಕಡತವನ್ನು ಶಿಕ್ಷಣ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಿದೆ. ಈ ಕುರಿತು ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ಶಿಕ್ಷಕರ ಸಂಘ ಹೇಳಿದೆ.
ಶಿಕ್ಷಕರ ಸಂಘವು ಕೂಡಲೇ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಸದ್ಯವೇ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಗಳಿವೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ಚುನಾವಣೆಯ ಕಾರಣಕ್ಕೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕಾಗಿಲ್ಲ. ಈ ಬಗ್ಗೆ ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ವರ್ಗಾವಣೆ ನಡೆದರೂ ಚುನಾವಣಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿರುವ ಚಂದ್ರಶೇಖರ ನುಗ್ಗಲಿ, ಕೌನ್ಸಿಲಿಂಗ್ ಮೂಲಕ ನಡೆಯುವ ಶಿಕ್ಷಕರ ವರ್ಗಾವಣೆಗೂ ಚುನಾವಣಾ ಪ್ರಕ್ರಿಯೆಗಳಿಗೂ ಯಾವುದೇ ಸಂಬಂಧವಿಲ್ಲ. ಈ ವರ್ಗಾವಣೆ ಪ್ರಕ್ರಿಯೆಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ತೆ ಸಚಿವ ಸಂಪುಟಕ್ಕೆ ಬಡ್ತಿ ವಿಷಯ
ಕಳೆದ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬಂದರೂ ಒಪ್ಪಿಗೆ ದೊರೆಯದ ಸೇವಾ ನಿರತ ಪದವೀಧರ ಶಿಕ್ಷಕರನ್ನು ಪರೀಕ್ಷೆ ನಡೆಸದೇ 6 ರಿಂದ 8 ನೇ ತರಗತಿ ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸುವ ವಿಷಯ ಮತ್ತೆ ಸಚಿವ ಸಂಪುಟದ ಮುಂದೆ ಮಂಡನೆಯಾಗಲಿದೆ. ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡುವ ಈ ಪ್ರಸ್ತಾಪದ ಕುರಿತು ಇನ್ನಷ್ಟು ಮಾಹಿತಿಯನ್ನು ಕೇಳಲಾಗಿತ್ತು. ಮಾಹಿತಿಯ ಕೊರತೆಯಿಂದಾಗಿ ಸಚಿವ ಸಂಪುಟ ಸಭೆಯು ಇದಕ್ಕೆ ಅನುಮತಿ ನೀಡಿರಲಿಲ್ಲ.
ಈಗ ಶಿಕ್ಷಣ ಇಲಾಖೆಯು ಅಗತ್ಯ ಮಾಹಿತಿಯನ್ನು ಕ್ರೋಡೀಕರಿಸಿದ್ದು, ಕ್ಯಾಬಿನೆಟ್ ಶಾಖೆಗೆ ಸಲ್ಲಿಕೆಯಾಗಿದೆ. ಹೀಗಾಗಿ ಮುಂದಿನ ಸಚಿವ ಸಂಪುಟದ ಸಭೆಯಲ್ಲಿಯೇ ಈ ಪ್ರಾಸ್ತಾಪ ಮತ್ತೆ ಚರ್ಚೆಗೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲಾಗುವುದು ಎಂದು ರಿತೇಶ್ ಕುಮಾರ್ ಸಿಂಗ್ ನಿಯೋಗಕ್ಕೆ ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಶಿಕ್ಷಕರ ಸಂಘದ ನಿಯೋಗದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕೂಡಾ ಚರ್ಚಿಸಲಾಯಿತು. ಶಿಕ್ಷಕರು ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ಕೊಡುವ ಕುರಿತು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕೋಶಾಧ್ಯಕ್ಷ ಸುರೇಶ ಶಡಶ್ಯಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗನಗೌಡ ಇದ್ದರು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಾಧ್ಯಾಕ್ಷ ಶಂಭುಲಿಂಗನಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : NPS News : ಕೇಂದ್ರದಂತೆ ರಾಜ್ಯದಲ್ಲಿಯೂ ಶಿಕ್ಷಕರಿಗೆ ಓಪಿಎಸ್ ಜಾರಿಗೆ ತನ್ನಿ; ಶಿಕ್ಷಕರ ಸಂಘ ಒತ್ತಾಯ
ನೌಕರರ ಕಾರ್ನರ್
Teacher Transfer : ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಶಿಕ್ಷಣ ಇಲಾಖೆ ಮನವಿ
ರಾಜ್ಯದ ಶಿಕ್ಷಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಶಿಕ್ಷಕರ ವರ್ಗಾವಣೆಯ ಚೆಂಡು (Teacher Transfer) ಈಗ ಚುನಾವಣಾ ಆಯೋಗದ ಅಂಗಳದಲ್ಲಿದೆ. ವರ್ಗಾವಣೆಗೆ ಅನುಮತಿ ನೀಡುವಂತೆ ಶಿಕ್ಷಣ ಇಲಾಖೆಯು ಆಯೋಗಕ್ಕೆ ಮನವಿ ಮಾಡಿದೆ.
ಬೆಂಗಳೂರು: ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದಕ್ಕೆ ಅನುಮತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ವರ್ಗಾವಣೆಗೆ ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಳೆದ ಶುಕ್ರವಾರ ಅನುಮೋದನೆ ನೀಡಿದ್ದು, ಚುನಾವಣಾ ಆಯೋಗದ ಅನುಮತಿಯನ್ನು ಪಡೆದು ಈ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರಾಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸೋಮವಾರದಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದು, ಶಿಕ್ಷಕರ ವರ್ಗಾವಣೆಗೆ ಸಹಮತಿ ನೀಡುವಂತೆ ಕೋರಿದ್ದಾರೆ.
ಯಾವುದೇ ವರ್ಗಾವಣೆ ಮಾಡಬೇಕಾಗಿದ್ದಲ್ಲಿ ಆಯೋಗದ ಅನುಮತಿ ಪಡೆಯುವಂತೆ ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ಸುತ್ತೋಲೆ ಹೊರಡಿಸಿರುವುದರಿಂದ ಶಿಕ್ಷಕರ ಸಾಮಾನ್ಯ ವರ್ಗಾವಣೆಗೂ ಆಯೋಗದ ಅನುಮತಿ ಅವಶ್ಯವಾಗಿದೆ. ಶಿಕ್ಷಕರು ಕೂಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ಅವರ ವರ್ಗಾವಣೆಗೆ ಆಯೋಗ ಅನುಮತಿ ನೀಡುತ್ತದೆಯೇ, ಇಲ್ಲವೇ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್‌ನಲ್ಲಿ ನಿಗದಿಯಾದ ಹಾಗೂ ಶಿಕ್ಷಕರು ವರ್ಗಾವಣೆಗೊಂಡ ಸ್ಥಳಕ್ಕೆ ನೂತನ ಶೈಕ್ಷಣಿಕ ವರ್ಷದ ಆರಂಭದಿಂದ ಅಂದರೆ ಜೂನ್ 1 ರ ನಂತರ ಕರ್ತವ್ಯಕ್ಕೆ ಹಾಜರಾಗುವ ಷರತ್ತಿಗೊಳಪಟ್ಟು ಈ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ಹೆಚ್ಚುವರಿ ಶಿಕ್ಷಕರ ನಿಯೋಜನೆ, ಸರ್ಕಾರಿ ಪ್ರಾಥಮಿ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಈಗಾಗಲೇ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಇಲಾಖೆಯು ಪತ್ರದಲ್ಲಿ ವಿವರಿಸಿದೆ.
ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಗಳಡಿ ವರ್ಗಾವಣೆಗಾಗಿ 88,324 ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿದ್ದ ಈ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು ಎಂದು ರಿತೇಶ್ ಕುಮಾರ್ ಸಿಂಗ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಪ್ರಯತ್ನ ನಡೆಸಿಕೊಂಡು ಬಂದಿತ್ತು. ಇದೀಗ ಈ ವರ್ಗಾವಣೆ ಪ್ರಕ್ರಿಯೆ ಮತ್ತೆ ಆರಂಭವಾಗುವ ಹೊಸ ಭರವಸೆ ಮೂಡಿದೆ.
ಇದನ್ನೂ ಓದಿ : Teacher Transfer : ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ
ದೇಶ
EPFO: ಇಪಿಎಫ್ ಬಡ್ಡಿ ದರ 8.15%ಕ್ಕೆ ಏರಿಕೆ
ಮಂಗಳವಾರ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸೆಂಟ್ರಲ್ ಬೋರ್ಡ್ ಸಭೆಯಲ್ಲಿ 2022-23ಕ್ಕೆ ಇಪಿಎಫ್‌ಗೆ ಶೇಕಡಾ 8.15 ಬಡ್ಡಿದರವನ್ನು ನಿಗದಿಪಡಿಸಲು ನಿರ್ಧರಿಸಿದೆ
ನವ ದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ 8.15% ಬಡ್ಡಿ ದರವನ್ನು ನಿಗದಿಪಡಿಸಿದೆ.
“ಮಂಗಳವಾರ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸೆಂಟ್ರಲ್ ಬೋರ್ಡ್ ಸಭೆಯಲ್ಲಿ 2022-23ಕ್ಕೆ ಇಪಿಎಫ್‌ಗೆ ಶೇಕಡಾ 8.15 ಬಡ್ಡಿದರವನ್ನು ನಿಗದಿಪಡಿಸಲು ನಿರ್ಧರಿಸಿದೆ” ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿಮಾಡಿದೆ.
2021-22ರಲ್ಲಿ EPF ಮೇಲಿನ ಬಡ್ಡಿದರವನ್ನು ಶೇಕಡಾ 8.1 ಕ್ಕೆ ಇಳಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷ ಅದು ಶೇಕಡಾ 8.5ರಷ್ಟಿತ್ತು. ಇದು ನಾಲ್ಕು ದಶಕಗಳ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. 1977-78ರಲ್ಲಿ ಇಪಿಎಫ್ ಬಡ್ಡಿ ದರ ಶೇ 8ರಷ್ಟಿತ್ತು. ಅದರ ನಂತರ ಎಂದೂ ಇಷ್ಟು ಇಳಿದಿರಲಿಲ್ಲ. ಮಾರ್ಚ್ 2021ರ ಮಾರ್ಚ್‌ನಲ್ಲಿ ಇದನ್ನು ಪರಿಷ್ಕರಿಸಿ 8.5 ಶೇಕಡಾ ಬಡ್ಡಿ ದರಕ್ಕೆ ತರಲಾಗಿತ್ತು.
ಸುಮಾರು ಐದು ಕೋಟಿ ಇಪಿಎಫ್ ಚಂದಾದಾರರಿದ್ದಾರೆ. CBTಯ ನಿರ್ಧಾರದ ನಂತರ, 2022-23ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ 2022-23ರ ಬಡ್ಡಿ ದರವನ್ನು EPFOನ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರ ಅನುಮೋದಿಸಿದ ನಂತರವೇ EPFO ಬಡ್ಡಿದರವನ್ನು ಒದಗಿಸುತ್ತದೆ.
2015-16ರಲ್ಲಿ ಇಪಿಎಫ್ ಬಡ್ಡಿ ದರ ಅತ್ಯಧಿಕ, ಅಂದರೆ 8.8 ಶೇಕಡದ ಆಸುಪಾಸಿನಲ್ಲಿತ್ತು.
ಇದನ್ನೂ ಓದಿ: EPFO : ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಗೆ ಮೇ 3ರ ಗಡುವು ನಿಗದಿ
ಉದ್ಯೋಗ
DR Calculation : ಡಿಎ ಲೆಕ್ಕಾಚಾರ, ಕೇಂದ್ರ ಸರ್ಕಾರಿ ಉದ್ಯೋಗಿಗಳ ಸಂಬಳ, ಪಿಂಚಣಿ ಎಷ್ಟು ಹೆಚ್ಚಲಿದೆ?
ಕೇಂದ್ರ ಸರ್ಕಾರಿ (DR Calculation) ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಇತ್ತೀಚೆಗೆ 4% ಏರಿಕೆ ಮಾಡಿರುವುದರಿಂದ ಅವರ ಸಂಬಳ ಮತ್ತು ಪಿಂಚಣಿಯಲ್ಲಿ ಎಷ್ಟು ಏರಿಕೆಯಾಗಲಿದೆ? ಇಲ್ಲಿದೆ ಲೆಕ್ಕಾಚಾರದ ವಿವರ.
7th Pay Commission Dearness allowance/DR Calculation: ಡಿಯರ್‌ನೆಸ್ ಅಲೊವೆನ್ಸ್ ಅನ್ನು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕಳೆದ ವಾರ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (Dearness allowance) ಮೂಲವೇತನದ ಶೇ.4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ DA/DR ದರವು ಮೂಲ ವೇತನ/ಪಿಂಚಣಿಯ 42%ಕ್ಕೆ ಏರಿಕೆಯಾದಂತಾಗಿದೆ. 7ನೇ ವೇತನ ಆಯೋಗದ ಫಾರ್ಮ್ಯುಲಾದ ಆಧಾರದಲ್ಲಿ ಸರ್ಕಾರವು ಡಿಎ/ಡಿಆರ್ ಏರಿಕೆಯನ್ನು ಮಾಡುತ್ತದೆ. ಇತ್ತೀಚಿನ ಏರಿಕೆಯಿಂದ 47.58 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು 69.76 ಲಕ್ಷ ಪಿಂಚಣಿದಾರರು ಅನುಕೂಲ ಪಡೆಯಲಿದ್ದಾರೆ.
ಡಿಎ ಏರಿಕೆಯ ಲೆಕ್ಕಾಚಾರ ಹೇಗೆ? (DA Hike calculation):
ಇತ್ತೀಚಿನ 4% ಏರಿಕೆಯ ಪರಿಣಾಮ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯ ಪ್ರಮಾಣವು ಮೂಲವೇತನದ 42%ಕ್ಕೆ ಏರಿಕೆಯಾಗಿದೆ. ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲವೇತನ 31,400 ರೂ. ಆಗಿದ್ದರೆ, 11,932 ರೂ. ಡಿಎ ಇರುತ್ತದೆ. ಅಂದರೆ 38% ಆಗಿರುತ್ತದೆ. ಪರಿಷ್ಕೃತ ಡಿಎ 42% ಆಗಿರುವುದರಿಂದ 13,188 ರೂ.ಗೆ ಏರಿಕೆಯಾಗಲಿದೆ. ಅಂದರೆ 1256 ರೂ. ಏರಿಕೆಯಾಗುತ್ತದೆ.
ಡಿಆರ್ ಏರಿಕೆಯ ಲೆಕ್ಕಾಚಾರ ಹೇಗೆ? (DA Hike Calculation):
ಡಿಯರ್‌ನೆಸ್ ರಿಲೀಫ್ (dearness relief) ಅನ್ನು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ನೀಡಲಾಗುತ್ತದೆ. ಅದು ಈಗ ಮೂಲ ಪಿಂಚಣಿಯ 38%ರಿಂದ 42%ಕ್ಕೆ ಏರಿಕೆಯಾಗಿದೆ. ಉದಾಹರಣೆಗೆ ಪಿಂಚಣಿದಾರರ ಮೂಲ ಪಿಂಚಣಿಯು 25,200 ರೂ. ಆಗಿದ್ದರೆ, 38%ರ ಹಳೆಯ ದರದಲ್ಲಿ 9576 ರೂ.ಗಳಾಗುತ್ತದೆ. ಈಗ 42%ಕ್ಕೆ ಏರಿಕೆಯಾಗಿರುವುದರಿಂದ ಪಿಂಚಣಿದಾರ 10,584 ರೂ. ಡಿಆರ್ ಪಡೆಯುತ್ತಾನೆ. ಅಂದರೆ 1008 ರೂ. ಹೆಚ್ಚಳವಾಗುತ್ತದೆ.
ಡಿಎ ಹೆಚ್ಚಳ ಜಾರಿ ದಿನಾಂಕ: ಡಿಎ/ಡಿಆರ್ ಹೆಚ್ಚಳವು 2023ರ ಜನವರಿ 1ರಿಂದ ಅನ್ವಯವಾಗುತ್ತದೆ.
ನೌಕರರ ಕಾರ್ನರ್
Teacher Transfer : ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ
ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗದ ಅನುಮತಿಗಾಗಿ ಕಾಯಲಾಗುತ್ತಿದೆ. ಈ ನಡುವೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಸಗಿ ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆಗೆ (Teacher Transfer) ವೇಳಾಪಟ್ಟಿ ಪ್ರಕಟಿಸಿದೆ.
ಬೆಂಗಳೂರು: ಖಾಸಗಿ ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಅದೇ ಆಡಳಿತ ಮಂಡಳಿಯಿಂದ ನಡೆಯುತ್ತಿರುವಂತಹ ಮತ್ತೊಂದು ಅನುದಾನಿತ ಶಾಲೆಗೆ ಅಥವಾ ಒಂದು ಆಡಳಿತ ಮಂಡಳಿಯ ಶಾಲೆಯಿಂದ ಮತ್ತೊಂದು ಆಡಳಿತ ಮಂಡಳಿಯ ಶಾಲೆಯಲ್ಲಿನ ಖಾಲಿ ಹುದ್ದೆಗಳಿಗೆ ಅನುದಾನಿತ ಶಿಕ್ಷಕರನ್ನು ಕೋರಿಕೆ ಅಥವಾ ಪರಸ್ಪರ ವರ್ಗಾಯಿಸಲು (Teacher Transfer) ಕೋರಿ ಆಡಳಿತ ಮಂಡಳಿಗಳು ಪ್ರಸ್ತಾವನೆಯನ್ನು ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಅವಕಾಶ ನೀಡಿದೆ.
2023-24ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನಿತ ಶಾಲಾ ಆಡಳಿತ ಮಂಡಳಿಗಳು ತಮ್ಮ ಅಧೀನದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿನ ಶಿಕ್ಷಕರುಗಳ ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸಲು ಹಾಗೂ ಪ್ರಕ್ರಿಯೆ ಕೈಗೊಳ್ಳಲು ಇಲಾಖೆಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಮೇ 31 ಕೊನೆಯ ದಿನವಾಗಿರುತ್ತದೆ.
ವರ್ಗಾವಣೆ ಬಯಸಿರುವ ಶಾಲೆಯಲ್ಲಿ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ಅವಶ್ಯಕತೆಯ ಕುರಿತು ಖಚಿತಪಡಿಸಿಕೊಂಡು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರುಗಳು ನಿಯಮಾನುಸಾರ ಪ್ರಸ್ತಾವನೆಯನ್ನು ಪರಿಶೀಲಿಸಿ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಆಯುಕ್ತಾಲಯಕ್ಕೆ ಸಲ್ಲಿಸಬೇಕೆಂದು ಇಲಾಖೆಯು ಸೂಚಿಸಿದೆ.
ವರ್ಗಾವಣೆಯ ವೇಳಾಪಟ್ಟಿ ಇಂತಿದೆ;
* ಆಡಳಿತ ಮಂಡಳಿಗಳು ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಅ೦ತಿಮ ದಿನಾಂಕ : 31-5-2023
* ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವನೆ ಪರಿಶೀಲಿಸಿ ಉಪ ನಿರ್ದೇಶಕರಿಗೆ ಸಲ್ಲಿಸಲು ಅಂತಿಮ ದಿನಾಂಕ: 8-6-2023
* ಉಪ ನಿರ್ದೇಶಕರು ಸೂಕ್ತ ಶಿಫಾರಸಿನೊಂಧಿಗೆ ಆಯಾ ವಿಭಾಗದ ಅಪರ ಆಯುಕ್ತರ ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 20-6-2023
* ಅಂತರ ವಿಭಾಗದ ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಗಳನ್ನು ಸ೦ಬ೦ಧಿಸಿದ ಅಪರ ಆಯುಕ್ತರ ಶಿಫಾರಸ್ಸಿನೊ೦ದಿಗೆ ಆಯುಕ್ತರು ಇಲಾಖೆಗೆ ಸಲ್ಲಿಸಲು ಕೊನೆಯ ದಿನಾಂಕ: 22-06-2023
* ವರ್ಗಾವಣೆ ಕೋರಿ ಬ೦ದ ಪುಸ್ತಾವನೆಯನ್ನು ಇತ್ಯರ್ಥಪಡಿಸಲು ಕೊನೆಯ ದಿನಾಂಕ: 31-07-2023
ವರ್ಗಾವಣೆ ಬಯಸುವ ಶಿಕ್ಷಕರು ಈಗ ಸೇವೆ ಸಲ್ಲಿಸುತ್ತಿರುವ ಶಾಲೆಯಲ್ಲಿ ಕನಿಷ್ಠ ಸೇವಾವಧಿ ಮೂರು ವರ್ಷಗಳನ್ನು ಪೂರೈಸಿರಬೇಕು. ಇದನ್ನು ಖಚಿತಪಡಿಸಿಕೊಂಡೇ ವರ್ಗಾವಣೆಗೆ ಶಿಫಾರಸು ಮಾಡಲಾಗುತ್ತದೆ. ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಮುಖ್ಯವಾಗಿ ಸಲ್ಲಿಸಬೇಕಾಗಿರುವ ದಾಖಲೆಗಳೆಂದರೆ;
- ಅನುದಾನಸಹಿತವಾಗಿ ಮಂಜೂರಾದ ಹುದ್ದೆಯ ಪ್ರತಿ. ಕರ್ತವ್ಯ ನಿರ್ವಹಿಸುತ್ತಿರುವ ವಿವರ, ಖಾಲಿ ಹುದ್ದೆ ವಿವರ.
- ಎರಡೂ ಶಾಲೆಗಳಲ್ಲಿ ಎಸ್.ಎ.ಟಿ.ಎಸ್ ಪ್ರಕಾರ ಇರುವಂತಹ 2022-23ನೇ ಸಾಲಿನ ಫೆಬ್ರವರಿ-2023ರ ಅಂತ್ಯಕ್ಕೆ ಇದ್ದಂತೆ ಮಕ್ಕಳ ದಾಖಲಾತಿ-ಹಾಜರಾತಿ ಪ್ರತಿ.೩.
- ಪ್ರಸ್ತುತ ಹೆಚ್.ಆರ್.ಎಂ.ಎಸ್ ಬಿಲ್ಲಿನ ಪ್ರತಿ.
- ಶಿಕ್ಷಕರ/ಅಂತರ್ ಆಡಳಿತ ಮ೦ಡಳಿ ವರ್ಗಾವಣೆಗಾಗಿ ಎರಡೂ ಆಡಳಿತ ಮಂಡಳಿಯವರು ನೀಡಿರುವ ಒಪ್ಪಿಗೆ ಪತ್ರ.
- ಶಿಕ್ಷಕರನ್ನು ವರ್ಗಾಯಿಸಲು ಶಿಕ್ಷಕರ ಒಪ್ಪಿಗೆ ಪತ್ರ.
ಶಿಕ್ಷಕರ ನೇಮಕಾತಿಯನ್ನು ಅನುಮೋದಿಸಿರುವ ಪ್ರತಿ. - ಶಿಕ್ಷಕರನ್ನು ಶಾಲೆಯಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸುತ್ತಿದ್ದಲ್ಲಿ ಹುದ್ದೆ ತೆರವಾಗಿರುವ ಬಗ್ಗೆ ಅಗತ್ಯ ಪೂರಕ ದಾಖಲೆಯ ಪ್ರತಿ.
- ಅಂತರ ಜಿಲ್ಲಾ/ಅಂತರ್ ಆಡಳಿತ ಮಂಡಳಿ ವರ್ಗಾವಣೆ ಬಯಸುವಂತಹ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವನೆಯಲ್ಲಿ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಶಿಕ್ಷಕರ ಅಗತ್ಯತೆಯ ಬಗ್ಗೆ ಸ್ಪಷ್ಟಪಡಿಸಿ ಶಿಕ್ಷಕರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನಿರ್ದೇಶಕರಿಗೆ ಸೃಷ್ಟ ಅಭಿಪ್ರಾಯದೊಂದಿಗೆ ಸಲ್ಲಿಸುವುದು.
- ಎರಡೂ ಶಾಲೆಗಳ ಶಿಕ್ಷಕರ/ಸಿಬ್ಬಂದಿಗಳ ಸೇವಾ ವಿವರ.
ಇದನ್ನೂ ಓದಿ : Teacher Transfer : ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಗ್ರೀನ್ ಸಿಗ್ನಲ್; ಚುನಾವಣಾ ಆಯೋಗದ ಅನುಮತಿ ನಂತರ ಶುರು
-
ಕರ್ನಾಟಕ12 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ13 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ16 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕ್ರಿಕೆಟ್24 hours ago
Priyanka Chopra : ಬಾಲಿವುಡ್ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
-
ಕರ್ನಾಟಕ11 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ7 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್8 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ10 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ