ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ʻಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆʼಯ (ಕೆಎಎಸ್‌ಎಸ್) (karnataka arogya sanjeevani) ಲಾಭ ಸದ್ಯವೇ ನೌಕರರಿಗೆ (Govt Employees News) ಲಭ್ಯವಾಗಲಿದೆ.
ಈ ಯೋಜನೆಯ ಲಾಭ ಪಡೆಯಲು ಸರ್ಕಾರಿ ನೌಕರರು ʻಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯʼ (HRMS) ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡಿಸಬೇಕೆಂದು ಎಲ್ಲ ಸರ್ಕಾರಿ ನೌಕರರಿಗೆ ಸರ್ಕಾರ ಸೂಚಿಸಿದೆ. ನೌಕರರು ತಮ್ಮ ಮತ್ತು ಅವಲಂಬಿತರ ಮಾಹಿತಿಯನ್ನು HRMS ನಲ್ಲಿ ಅಪಡೇಟ್ ಮಾಡಬೇಕಿರುತ್ತದೆ. ಅಲ್ಲದೆ ಈ ಮಾಹಿತಿಯನ್ನು ಕಚೇರಿಗೆ ಸಹ ಸಲ್ಲಿಸಬೇಸಬೇಕಿರುತ್ತದೆ ಎಂದು ನೌಕರರಿಗೆ ತಿಳಿಸಲಾಗಿದೆ.
ಎಚ್‌ಆರ್‌ಎಂಎಸ್ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಕಳೆದ ಮಾರ್ಚ್‌ನಲ್ಲಿ ಸರ್ಕಾರ ಈ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಪರಿಷ್ಕೃತ ಕಾರ್ಯನೀತಿಯನ್ನು ಪ್ರಕಟಿಸಿಸಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು, ತ್ವರಿತಗತಿಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಈ ಯೋಜನೆಯ ಲಾಭ ಪ್ರತಿ ನೌಕರರಿಗೂ ದೊರೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ʻವಿಸ್ತಾರ ನ್ಯೂಸ್ʼಗೆ ತಿಳಿಸಿದ್ದಾರೆ.
ಸಂಘದ ಮನವಿಗೆ ಸ್ಪಂದಿಸಿರುವ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಂಡಿದೆ. ನೌಕರರ ಮಾಹಿತಿ ಸಂಗ್ರಹ ಸಂಪೂರ್ಣವಾಗುತ್ತಿದ್ದಂತೆಯೇ ಕಾರ್ಡ್ ರೂಪಿಸುವ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟಾರೆ ಈ ಯೋಜನೆ ಜಾರಿಯು ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. 2020-21 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿಯೇ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು.
ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, ʻಆರೋಗ್ಯ ಭಾಗ್ಯ’ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ, ಕರ್ನಾಟಕ ನ್ಯಾಯಾಂಗ ಅಧಿಕಾರಿಗಳು, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ/ ಮಂಡಳಿಗಳು, ಸಹಕಾರ ಸ೦ಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರೆ ಸಸ್ಥೆಗಳ ನೌಕರರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಈ ಯೋಜನೆಯಡಿ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲ ತಾಯಿಯ ನ್ನೊಳಗೊಂಡಂತೆ (ಅವರು ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ- ಕನಿಷ್ಠ ಕುಟುಂಬ ಪಿಂಚಣಿ ರೂ.8500 ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರದಿದ್ದಲ್ಲಿ), ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ವೈದ್ಯಕೀಯ ಸೇವೆ ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ: KSRTC Employees News : ಸಾರಿಗೆ ನೌಕರರರಿಗೆ ಸರ್ಕಾರಿ ನೌಕರರಾಗುವ ಭಾಗ್ಯವಿಲ್ಲ!
ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಾರಿಗೆ ತರುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಳಪಟ್ಟಿದ್ದು, ಈ ಟ್ರಸ್ಟ್ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯನ್ನು ನಿರ್ವಹಿಸುತ್ತಿದೆ. ಸರ್ಕಾರಿ ನೌಕರರಿಗೆ ರೂಪಿಸಲಾಗಿರುವ ಈ ಯೋಜನೆ ಕೂಡ ಇದರ ಅಡಿಯಲ್ಲಿಯೇ ಬರಲಿದೆ.