Site icon Vistara News

NPS News | ಎರಡನೇ ದಿನಕ್ಕೆ ಕಾಲಿಟ್ಟ ಎನ್‌ಪಿಎಸ್‌ ನೌಕರರ ಪ್ರತಿಭಟನೆ

NPS News

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆ (NPS News) ಎರಡನೇ ದಿನವೂ ಮುಂದುವರಿದಿದೆ.

ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಎನ್‌ಪಿಎಸ್‌ ರದ್ದು ಪಡಿಸಿ, ಒಪಿಎಸ್‌ ಜಾರಿಗೊಳಿಸಬೇಕು. ಇದು “ಮಾಡು ಇಲ್ಲವೇ ಮಡಿ” ಹೋರಾಟವಾಗಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಘೋಷಿಸಿದ್ದಾರೆ.

ಸೋಮವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಕೊರೆಯುವ ಚಳಿ ಇದ್ದರೂ ನೌಕರರು ಜಾಗ ಬಿಡದೇ ಪ್ರತಿಭಟನಾ ಸ್ಥಳದಲ್ಲಿಯೇ ಮಲಗಿದ್ದರು. ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು ವೇದಿಕೆಯಲ್ಲಿಯೆ ಮಲಗಿದ್ದರೆ, ನೌಕರರು ತಾವು ಕುಳಿತಲ್ಲಿಯೇ ಮಲಗಿ ಪ್ರತಿಭಟನೆ ಮುಂದುವರಿಸಿದ್ದರು. ರಾಜ್ಯದ ಬೇರೆ ಬೇರೆ ಭಾಗದಿಂದ ಬಂದಿರುವ ಪ್ರತಿಭಟನಾಗಾರರು, ಸರ್ಕಾರ ಸ್ಪಷ್ಟ ಭರವಸೆ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ.

ಪ್ರತಿಭಟನೆಯಲ್ಲಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ರಾಜ್ಯ ಉಪಾಧ್ಯಕ್ಷ ಎಸ್‌.ಪಿ. ಸಂಗಣ್ಣ, ಗೌರವ ಸಲಹೆಗಾರ ಎಸ್‌.ಎಸ್.‌ ಹದ್ಲಿ, ರಾಜ್ಯ ಖಜಾಂಚಿ ಕೇಶವ ಪ್ರಸಾದ್‌, ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ಪಿ.ತಳವಾರ, ಮಂಜುನಾಥ್‌ ಕೆ.ಜೆ., ಕರಾಸ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಂ.ಎ., ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಅನೇಕ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಎನ್‌ಪಿಎಸ್‌ ನೌಕರರ ಅಹೋರಾತ್ರಿ ಧರಣಿ

ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಮಂಗಳವಾರ ಚರ್ಚೆಗೆ ಬರಬಹುದು. ಈ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕೃತ ನಿಲುವು ಪ್ರಕಟಿಸಬಹುದೆಂಬ ಭರವಸೆಯಲ್ಲಿ ನೌಕರರಿದ್ದಾರೆ.

ಇದನ್ನೂ ಓದಿ | NPS News | ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಬೇಡ, ಒಪಿಎಸ್‌ ಬೇಕು ಎನ್ನಲು ಕಾರಣವಾದರೂ ಏನು?

Exit mobile version