ಬೆಂಗಳೂರು: ನೂತನ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೇ, ಇಲ್ಲವೇ ಎಂಬುದರ ಕುರಿತು ರಾಜ್ಯದ ಜನತೆ ಚರ್ಚಿಸುತ್ತಿದ್ದರೆ, ಸರ್ಕಾರಿ ನೌಕರರು ʻಹಳೆಯ ಪಿಂಚಣಿ ಯೋಜನೆʼ (ಓಪಿಎಸ್) ಜಾರಿ (NPS News ) ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವು ರಚಿಸಿದ ಟಿ.ವಿ. ಸೋಮನಾಥನ್ ಸಮಿತಿಯ ವರದಿ ನೋಡಿಕೊಂಡು ಈ ಕುರಿತು ತೀರ್ಮಾನಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ʻʻ2006 ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ತೆಗೆದುಕೊಳ್ಳಲಾಗುವುದುʼʼ ಎಂದು ಪ್ರಕಟಿಸಲಾಗಿತ್ತು. ಈ ಸಹಾನುಭೂತಿಯ ನಿರ್ಧಾರವನ್ನು ಸರ್ಕಾರ ಕೂಡಲೇ ತೆಗೆದುಕೊಳ್ಳಬೇಕೆಂದೂ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ, ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು ಪಡಿಸಿ, ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ತರಬೇಕೆಂದು ಒತ್ತಾಯಿಸಿ ʻವೋಟ್ ಫಾರ್ ಓಪಿಎಸ್ʼ (vote for ops) ಆಂದೋಲನವನ್ನು ಸಹ ನಡೆಸಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೇ ಓಪಿಎಸ್ ಜಾರಿಯ ಕುರಿತು ಪ್ರಕಟಿಸಿದ್ದರಿಂದ ಬಹುತೇಕ ನೌಕರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಹೀಗಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕೂಡಲೇ ಕಾಂಗ್ರೆಸ್ ಸರ್ಕಾರವು ಈ ಭರವಸೆಯನ್ನು ಈಡೇರಿಸಬೇಕೆಂದು ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: NPS News : ಹಳೆ ಪಿಂಚಣಿ ಯೋಜನೆ ಜಾರಿಗಾಗಿ ʻವೋಟ್ ಫಾರ್ ಓಪಿಎಸ್ʼ ಆಂದೋಲನ; ಸರ್ಕಾರಿ ನೌಕರರ ನಿರ್ಧಾರ
ಹಿಮಾಚಲ ಪ್ರದೇಶದಂತೆ ಇಲ್ಲಿಯೂ ತನ್ನಿ!
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿಯ ಕಾಂಗ್ರೆಸ್ ಪಕ್ಷವು ಓಪಿಎಸ್ ಜಾರಿಯ ಭರವಸೆ ನೀಡಿತ್ತು. ಅದರಂತೆಯೇ ಪಕ್ಷ ಕಳೆದ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಓಪಿಎಸ್ ಜಾರಿಗೆ ತಂದಿದೆ. ನೂತನ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುವುದರ ಒಳಗೆ ನಿಗಮ-ಮಂಡಳಿಗಳ ನೌಕರರನ್ನೂ ಓಪಿಎಸ್ ಅಡಿ ತರುವುದಾಗಿ ಹಿಮಾಚಲ ಪ್ರದೇಶ ಸರ್ಕಾರ ಪ್ರಕಟಿಸಿದೆ. ಅಲ್ಲಿಯಂತೆಯೇ ನಮ್ಮ ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಸಭೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಕೋರಿದೆ. ಸಭೆ ಕರೆದಲ್ಲಿ ಮುಖ್ಯವಾಗಿ ಏಳನೇ ವೇತನ ಆಯೋಗ (7th Pay commission) ಜಾರಿ ಮತ್ತು ಓಪಿಎಸ್ ಜಾರಿಯ ಕುರಿತು ಚರ್ಚೆ ನಡೆಸುತೇವೆ ಎಂದು ಸಂಘದ ಪದಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ʻʻಓಪಿಎಸ್ ಜಾರಿಯ ಕುರಿತು ʻಸಹಾನುಭೂತಿಯಿಂದ ನಿರ್ಧರಿಸಲಾಗುತ್ತದೆʼ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಹಿಮಾಚಲ ಪ್ರದೇಶದಂತೆ ನಮ್ಮ ರಾಜ್ಯದಲ್ಲಿ ಇದೇನು ಪ್ರಮುಖ ಚುನಾವಣೆಯ ವಿಷಯವಾಗಿರಲಿಲ್ಲ. ಹೀಗಾಗಿ ಕೂಡಲೇ ಈ ಬಗ್ಗೆ ಸರ್ಕಾರ ಗಮನ ಹರಿಸುವುದು ಕಷ್ಟ. ಈಗಾಗಲೇ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪರಿಶೀಲನೆಗೆ ಸಮಿತಿ (NPS Committee) ರಚಿಸಿದೆ. ಈ ಸಮಿತಿಯ ವರದಿಯು ಓಪಿಎಸ್ ಪರವಾಗಿರಲೆಂದು ನಿರೀಕ್ಷಿಸಲಾಗುತ್ತಿದ್ದು, ಇದನ್ನು ನೋಡಿಕೊಂಡು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬಹುದುʼʼ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯ ರಚಿಸಿರುವ ನಾಲ್ವರು ಸದಸ್ಯರ ಪರಿಶೀಲನಾ ಸಮಿತಿಗೆ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಾಡಬೇಕಾದ ಬದಲಾವಣೆಗಳು, ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಸೌಲಭ್ಯಗಳ ಸುಧಾರಣೆ ಸೇರಿ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು ಕಾರ್ಯ ನಿರ್ವಹಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಯನ್ನು ಅಳವಡಿಸಿಕೊಳ್ಳಲು ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ಓಪಿಎಸ್ ಜಾರಿಯ ಕುರಿತು ಸದ್ಯವೇ ರಾಜ್ಯ ಸರ್ಕಾರ ತೀರ್ಮಾನಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಆದರೆ ರಾಜ್ಯ ಸರ್ಕಾರಿ ನೌಕರರು ಮಾತ್ರ ಕೂಡಲೇ ಓಪಿಎಸ್ ಜಾರಿಗೆ ತರಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ, ಛತ್ತೀಸ್ಗಢ, ರಾಜಸ್ಥಾನ ಸರ್ಕಾರಗಳು ಓಪಿಎಸ್ ಜಾರಿಗೆ ತಂದಿವೆ. ಅದರಂತೆಯೇ ಇಲ್ಲಿಯೂ ಜಾರಿಗೆ ತರಬೇಕು. ಮುಂದೆ ಕೇಂದ್ರ ಸರ್ಕಾರ ರೂಪಿಸುವ ಹೊಸ ಯೋಜನೆ ಸೂಕ್ತವಾಗಿದ್ದರೆ ಅದನ್ನು ಅಳವಡಿಸಿಕೊಳ್ಳೋಣ ಎಂದು ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿಯಂತೆಯೇ ಓಪಿಎಸ್ ಜಾರಿ ಕೂಡ ಸರ್ಕಾರಕ್ಕೆ ಸವಾಲಾಗಲಿದ್ದು, ಇದನ್ನು ಜಾರಿಗೆ ತಂದರೆ ಬಜೆಟ್‌ನ ಮೇಲೆ ದೊಡ್ಡ ಹೊರೆ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : NPS Committee: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ, ಒಪಿಎಸ್ ಸೌಲಭ್ಯ ಸೇರ್ಪಡೆ?