Site icon Vistara News

NPS News : ಓಪಿಎಸ್‌ ಜಾರಿಗೆ ಒತ್ತಡ; ಡಿಕೆಶಿ ಭೇಟಿಯಾದ ಎನ್‌ಪಿಎಸ್‌ ನೌಕರರು

NPS Employees Association

#image_title

ಬೆಂಗಳೂರು: ರಾಜ್ಯ ಸರ್ಕಾರವು ಒಂದರ ಹಿಂದೊಂದರಂತೆ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗುತ್ತಿದ್ದಂತೆಯೇ ರಾಜ್ಯ ಸರ್ಕಾರಿ ನೌಕರರು, ʻಹಳೆಯ ಪಿಂಚಣಿ ಯೋಜನೆʼ (ಓಪಿಎಸ್‌)ಯನ್ನು ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ (NPS News) ಹೇರಲಾರಂಭಿಸಿದ್ದಾರೆ.

ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಮುಖಂಡರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದ್ದು, ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆಯೇ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದು ಪಡಿಸಿ, ಹಳೆಯ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ʻʻ2006 ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ತೆಗೆದುಕೊಳ್ಳಲಾಗುವುದುʼʼ ಎಂದು ಪ್ರಕಟಿಸಲಾಗಿತ್ತು.

ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ, ಹಳೆಯ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕೆಂದು ಒತ್ತಾಯಿಸಿ ʻವೋಟ್‌ ಫಾರ್‌ ಓಪಿಎಸ್‌ʼ (vote for ops) ಆಂದೋಲನವನ್ನು ಸಹ ನಡೆಸಿತ್ತು. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿಯೇ ಓಪಿಎಸ್‌ ಜಾರಿಯ ಕುರಿತು ಪ್ರಕಟಿಸಿದ್ದರಿಂದ ಬಹುತೇಕ ನೌಕರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಹೀಗಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕೂಡಲೇ ಕಾಂಗ್ರೆಸ್‌ ಸರ್ಕಾರವು ಈ ಭರವಸೆಯನ್ನು ಈಡೇರಿಸಬೇಕೆಂದು ನೌಕರರ ಸಂಘದ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಸಮಯ ಕೇಳಿರುವ ಡಿಕೆಶಿ
ಓಪಿಎಸ್‌ ಜಾರಿಗೆ ನಾವು ಬದ್ಧರಾಗಿದ್ದೇವೆ. ಆದರೆ ಇದಕ್ಕೆ ಒಂದಿಷ್ಟು ಸಮಯಾವಕಾಶ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎನ್‌ಪಿಎಸ್‌ ನೌಕರರ ಸಂಘದ ಪದಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಕೊಟ್ಟ ಮಾತಿನಂತೆ ಓಪಿಎಸ್‌ ಜಾರಿಗೆ ತನ್ನಿ ಎಂದು ನೌಕರರ ಸಂಘದ ನಾಯಕರು ಒತ್ತಾಯಿಸಿದಾಗ, ಸರ್ಕಾರ ಸದ್ಯ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತು ನೀಡುತ್ತಿದೆ. ಈ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಕೂಡಲೇ ಓಪಿಎಸ್‌ ಜಾರಿಗೆ ಮುಂದಾಗಲಿದೆ. ಈ ಬಗ್ಗೆ ಅನುಮಾನವೇ ಬೇಡ ಎಂದು ಹೇಳಿದ್ದಾರೆ. ಓಪಿಎಸ್‌ ಜಾರಿಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಾವು ಚರ್ಚಿಸುವುದಾಗಿ ತಿಳಿಸಿದ ಡಿ ಕೆ ಶಿವಕುಮಾರ್‌, ಸಂಘದ ಪದಾಧಿಕಾರಿಗಳೊಂದಿಗೂ ಇನ್ನೊಮ್ಮೆ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

ಚುನಾವಣೆಗಿಂತ ಮೊದಲು ಎನ್‌ಪಿಎಸ್‌ ನೌಕರರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ನಾಯಕರು ನೀಡಿದ ಭರವಸೆಗಳನ್ನು ಹಾಗೂ ಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ನಡೆದ ಹಲವಾರು ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಡಿ. ಕೆ. ಶಿವಕುಮಾರ್‌ ಅವರ ಗಮನಕ್ಕೆ ತರಲಾಗಿದೆ. ಅವರೂ ಈ ಸಭೆಗಳಲ್ಲಿ ಭಾಗವಹಿಸಿದ್ದರಿಂದ, ತಮ್ಮ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ನೌಕರರಿಗೆ ಸ್ಪಷ್ಟಪಡಿಸಿದ್ದಾರೆಂದು ತಿಳಿದು ಬಂದಿದೆ.

ಚುನಾವಣೆಗೂ ಮೊದಲು ಕಾಂಗ್ರೆಸ್‌ನ ಹಿರಿಯ ನಾಯಕರು ಮೂರು ಬಾರಿ ಎನ್‌ಪಿಎಸ್‌ ನೌಕರರ ಸಂಘಟನೆಗಳ ನಾಯಕರೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಓಪಿಎಸ್‌ ಜಾರಿಗೆ ತರುವುದಾಗಿ ಸ್ಪಷ್ಟ ಭರವಸೆ ನೀಡಿದ್ದರು. ಈಗಾಗಲೇ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎನ್‌ಪಿಎಸ್‌ ರದ್ದು ಪಡಿಸಿ, ಓಪಿಎಸ್‌ ಜಾರಿಗೆ ತರಲಾಗಿದೆ. ರಾಜ್ಯದಲ್ಲಿಯೂ ಜಾರಿಗೆ ತರುವ ಕುರಿತು ಪಕ್ಷ ಈಗಾಗಲೇ ತೀರ್ಮಾನಿಸಿದೆ.

ಆದಷ್ಟು ಬೇಗ ಈ ಕುರಿತು ತೀರ್ಮಾನ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಸದ್ಯವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಈ ಕುರಿತು ಮನವಿ ಮಾಡಿಕೊಳ್ಳಲಿದೆ ಎಂದು ಸಂಘದ ಮೂಲಗಳು ತಿಳಿಸಿವೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ನಿಯೋಗದಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ಪ್ರಧಾನ ಕಾರ್ಯದರ್ಶಿ ರಂಗನಾಥ್‌ ಜಿ. ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಶಿವರುದ್ರಯ್ಯ, ಕೆಪಿಟಿಸಿಎಲ್‌ನ ಉಪಾಧ್ಯಕ್ಷ ರವಿ ಅಸೂಟಿ, ಎಂಜಿನಿಯರಿಂಗ್‌ ಸಂಘದ ಸದಾಶಿವ ಕಾಂಬ್ಳೆ, ಆರೋಗ್ಯ ಇಲಾಖೆಯ ಸಂತೋಷ್‌, ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಷನಿಗೌಡ, ಉಪಾಧ್ಯಕ್ಷ ಶಶಿಕಲಾ, ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ಮತ್ತಿತರರಿದ್ದರು.

ಇದನ್ನೂ ಓದಿ : NPS Committee: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ, ಒಪಿಎಸ್‌ ಸೌಲಭ್ಯ ಸೇರ್ಪಡೆ?

Exit mobile version