ಬೆಂಗಳೂರು: ಹಿಮಾಚಲ ಪ್ರದೇಶದಲ್ಲಿ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸುವ ತೀರ್ಮಾನವನ್ನು ಮೊದಲ ಸಚಿವ ಸಂಪುಟದ ಸಭೆಯಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ಆ ರಾಜ್ಯದ ನೂತನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ (NPS News) ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ಯದಲ್ಲಿಯೂ ಎನ್‌ಪಿಎಸ್ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಎನ್‌ಪಿಎಸ್ ರದ್ದು ಪಡಿಸುವ ಭರವಸೆಯನ್ನು ನೀಡಿತ್ತು. ಇದು ಕೂಡ ಚುನಾವಣಾ ವಿಷಯಾಗಿತ್ತು. ಹೀಗಾಗಿ ಮೊದಲ ಸಚಿವ ಸಂಪುಟದ ಸಭೆಯಲ್ಲಿಯೇ ಈ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ತೀರ್ಮಾನವನ್ನು ಅಲ್ಲಿಯ ಸರ್ಕಾರ ತೆಗೆದುಕೊಳ್ಳಲು ಮುಂದಾಗಿದೆ. ಈ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮುಂದೆ ಚುನಾವಣೆ ನಡೆಯುವ ಎಲ್ಲ ರಾಜ್ಯಗಳಲ್ಲಿಯೂ ಈ ವಿಷಯವನ್ನು ಚುನಾವಣಾ ವಿಷಯವಾಗಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಎನ್‌ಪಿಎಸ್ ನೌಕರರ ಸಂಘ “ವೋಟ್ ಫಾರ್ ಒಪಿಎಸ್ʼʼ ಎಂಬ ಅಭಿಯಾನ ಆರಂಭಿಸಿದ್ದು, ಇದನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಮುಂದೆ ಇದಕ್ಕೆ ರಾಜಕೀಯ ಪಕ್ಷಗಳೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಒಪಿಎಸ್ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
“ಎನ್‌ಪಿಎಸ್ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ನಮ್ಮ ಬೇಡಿಕೆ ಈಡೇರುತ್ತಿದೆ. ಇದೇ ರೀತಿಯಾಗಿ ರಾಜ್ಯದಲ್ಲಿಯೂ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ʼಮಾಡು ಇಲ್ಲವೇ ಮಡಿʼ ಬೃಹತ್ ಹೋರಾಟ ರೂಪಿಸಲಾಗಿದ್ದು, ಇದರಲ್ಲಿ ವಿವಿಧ ರಾಜ್ಯಗಳ ನೌಕರರೂ ಭಾಗವಹಿಸಲಿದ್ದಾರೆʼʼ ಎಂದು ಎನ್‌ಪಿಸಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಉಪಾಧ್ಯಕ್ಷ ಶಾಂತರಾಮು ತಿಳಿಸಿದ್ದಾರೆ.
“2014ರಿಂದ ನಾವು ನೂತನ ಪಿಂಚಣಿ ಯೋಜನೆ ವಿರುದ್ಧ ಹೋರಾಟ ನಡೆಸಿಕೊಂಡೇ ಬರಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ನೀಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇದನ್ನು ವಿಷಯವಾಗಿ ಮಾಡಲಾಗುತ್ತದೆ. ಹೀಗಾಗಿಯೇ “ವೋಟ್ ಫಾರ್ ಒಪಿಎಸ್ʼʼ ಎಂಬ ಅಭಿಯಾನ ಆರಂಭಿಸಲಾಗಿದೆ. ಎನ್‌ಪಿಎಸ್ ರದ್ದು ಪಡಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ 2004ರ ಜನವರಿ1 ರಂದು ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತ್ತು. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ತೆರಿಗೆ ವಿನಾಯಿತಿ ಘೋಷಿಸಿ ಈ ಪಿಂಚಣಿ ಯೋಜನೆಯನ್ನು ಜನಪ್ರಿಯಗೊಳಿಸಲು ಮುಂದಾಗಿತ್ತು. ಆದರೆ ಬಹುತೇಕ ಸರ್ಕಾರಿ ನೌಕರರು ಈ ಎನ್‌ಪಿಎಯನ್ನು ವಿರೋಧಿಸುತ್ತಿದ್ದಾರೆ. ಹಿಂದಿನ ಪಿಂಚಣಿ ಯೋಜನೆಯೇ ತಮಗೆ ಅನುಕೂಲಕರವಾಗಿದೆ, ಅದನ್ನೇ ಜಾರಿಗೆ ತನ್ನಿ ಎಂದು ಒತ್ತಡ ಹೇರುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಅಂದರೆ ರಾಜಸ್ಥಾನ ಮತ್ತು ಚತ್ತೀಸ್‌ಗಢ ರಾಜ್ಯ ಸರ್ಕಾರಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿವೆ. ಆಪ್ ಅಧಿಕಾರದಲ್ಲಿರುವ ಪಂಜಾಬ್ ಕೂಡ ಎನ್‌ಪಿಎಸ್ ರದ್ದು ಪಡಿಸುವುದನ್ನು ಚುನಾವಣಾ ವಿಷಯವಾಗಿಸಿಕೊಂಡಿತ್ತು. ಹಳೆಯ ಪಿಂಚಣಿ ಯೋಜನೆ ಜಾರಿಗೆ ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ಕೂಡ ಆಗಿದೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇತ್ತು. ಈಗ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಕಡಿಮೆ ಅಂತರದಿಂದ ಸೋತಿದೆ. ಈ ಸೋಲಿಗೆ ಎನ್‌ಪಿಎಸ್ ರದ್ದು ಮಾಡುವುದಾಗಿ ಕಾಂಗ್ರೆಸ್ ನೀಡಿದ್ದ ಭರವಸೆಯೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿನ 2.5 ಲಕ್ಷ ಸರ್ಕಾರಿ ನೌಕರರ ಪೈಕಿ ಸುಮಾರು 1.5 ಲಕ್ಷ ನೌಕರರು ಎನ್‌ಪಿಎಸ್ ಅಡಿಯಲ್ಲಿ ಬರುತ್ತಾರೆ. ಅವರು ಮತ್ತು ಅವರ ಕುಟುಂಬದವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಗಿದೆ.
ರಾಜ್ಯ ನೌಕರರ ಸಂಘದಿಂದಲೂ ಹೋರಾಟ
7ನೇ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದಂತೆಯೇ, ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಬೇಕೆಂದು ಒತ್ತಾಯಿಸಿ ನಿರ್ಣಯಕ ಹೋರಾಟ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ ತೀರ್ಮಾನಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎನ್‌ಪಿಎಸ್ ರದ್ದಾಗಲೇ ಬೇಕು, ಒಪಿಎಸ್ ಜಾರಿಗೆ ಬರಲೇಬೇಕು. ಈ ಬೇಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದರು.
ಮಾರ್ಚ್‌ನಲ್ಲಿ ಪೇ ಕಮಿಷನ್ ಜಾರಿಗೆ ಬರುತ್ತಿದ್ದಂತೆಯೇ ಇದಕ್ಕಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಸಂಘವು ಪ್ರತಿಭಟನೆ, ಸರ್ಕಾರದೊಂದಿಗೆ ಮಾತುಕತೆಗಳ ಮೂಲಕ ಈ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಿದೆ. ಇದರಲ್ಲಿ ಅನುಮಾನವೇ ಬೇಡ ಎಂದು ಷಡಾಕ್ಷರಿ ಹೇಳಿದ್ದರು. ಆದರೆ ಬಹುತೇಕ ಸರ್ಕಾರಿ ನೌಕರರು ಚುನಾವಣೆಗಿಂತ ಮೊದಲೇ ಈ ಹೋರಾಟವನ್ನು ಆರಂಭಿಸಿ, ಇದನ್ನೊಂದು ಚುನಾವಣಾ ವಿಷಯವಾಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆಯಾಗಿ ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಂತೆ ಇಲ್ಲಿಯೂ ಎನ್‌ಪಿಎಸ್ ರದ್ದಿನ ವಿಷಯ ಚುನಾವಣೆಯಲ್ಲಿ ಚರ್ಚೆಗೆ ಬರುವುದು ಬಹುತೇಕವಾಗಿ ಖಚಿತ ಪಟ್ಟಿದೆ. ರಾಜ್ಯದ ಸರ್ಕಾರಿ ನೌಕರರಲ್ಲಿ ೨.೬೦ ಲಕ್ಷ ನೇರ ನೌಕರರು ಎನ್‌ಪಿಎಸ್ ಅಡಿ ಬರುತ್ತಾರೆ. ಇವರಲ್ಲದೆ ನಿಗಮ ಮಂಡಳಿಗಳ ನೌಕರರು ಸೇರಿದಂತೆ ಸುಮಾರು ಒಂದು ಲಕ್ಷ ಪರೋಕ್ಷ ನೌಕರರು ಕೂಡ ಎನ್‌ಪಿಎಸ್ ಅಡಿಯಲ್ಲಿದ್ದಾರೆ. ಒಟ್ಟಾರೆ 3.5 ಲಕ್ಷ ನೌಕರರು ಎನ್‌ಪಿಎಸ್‌ನಲ್ಲಿದ್ದು, ಇವರೆಲ್ಲರೂ ಇದನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ವಲಯದಲ್ಲಿ ಎನ್‌ಪಿಎಸ್ ರದ್ದು ಬಹುದೊಡ್ಡ ವಿಷಯವಾಗಿದೆ.
ಇದನ್ನೂ ಓದಿ | ರಾಜ್ಯಾದ್ಯಂತ ಎನ್‌ಪಿಎಸ್ ಸಂಕಲ್ಪ ಯಾತ್ರೆ: “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಸಜ್ಜು