ನಮ್ಮ ಹಬ್ಬಗಳಲ್ಲಿಯೇ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ದಿನವೇ ಸಂಕ್ರಾಂತಿಯಾಗಿದೆ. ಇದು ಉತ್ತರಾಯಣದ ಪುಣ್ಯಕಾಲದ ಆರಂಭವು ಸಹ ಆಗಿರುತ್ತದೆ. ಈ ಸಮಯದಲ್ಲಿ ಸೂರ್ಯನ ಉಪಾಸನೆಯ ಜೊತೆಗೆ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಆರಾಧಿಸಿದರೆ ವಿಶೇಷ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಈ ಬಾರಿ ಜನವರಿ 15ರ ಭಾನುವಾರದಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಎಳ್ಳು ಬೆಲ್ಲದ ಹಬ್ಬ
ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ಈ ದಿನವೇ ಉತ್ತರಾಯಣದ ಪುಣ್ಯಕಾಲವಾಗಿದೆ. ಕರ್ನಾಟಕದಲ್ಲಿ ಇದು ಸುಗ್ಗಿಯ ಸಂಭ್ರಮದ ಕಾಲವು ಸಹ ಆಗಿದೆ, ಹಾಗಾಗಿ ಈ ಹಬ್ಬವನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವೆಂದರೆ ಎಳ್ಳುಬೆಲ್ಲದ ಮಿಶ್ರಣವನ್ನು ವಿತರಿಸುವುದು. ಇದಕ್ಕೆ ಎಳ್ಳು ಬೀರುವುದು ಎಂದು ಸಹ ಕರೆಯುತ್ತಾರೆ.
ಸಂಕ್ರಾಂತಿಯಂದು ಮಾವಿನ ತೋರಣಗಳ ಜೊತೆಗೆ ಬಣ್ಣದ ರಂಗೋಲಿಗಳಿಂದ ಮನೆಯನ್ನು ಅಲಂಕರಿಸುವುದು ವಿಶೇಷವಾಗಿದೆ. “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು” ಎಂದು ಎಳ್ಳು ಬೆಲ್ಲವನ್ನು ಹಂಚುತ್ತಾ ಸಿಹಿ ಸಿಹಿಯ ಮಾತನಾಡುವುದು ಈ ಹಬ್ಬದ ವಿಶೇಷ. ಈ ದಿನದಂದು ಎಳ್ಳು ಬೆಲ್ಲ ತಿನ್ನುವುದರ ಹಿಂದೆ ವಿಶೇಷ ಕಾರಣವಿದೆ. ಎಳ್ಳು, ಶೇಂಗಾ ಮತ್ತು ಬೆಲ್ಲ ಚಳಿಗಾಲದಲ್ಲಿ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಸಂಕ್ರಾಂತಿಯ ದಿನ ಮಹಿಳೆಯರು ಮತ್ತು ಮಕ್ಕಳು ನೆರೆಹೊರೆಯವರಿಗೆ ಎಳ್ಳು ಬೆಲ್ಲದ ಮಿಶ್ರಣವನ್ನು ಮತ್ತು ಕಬ್ಬನ್ನು ಹಂಚುತ್ತಾರೆ. ಅಷ್ಟೇ ಅಲ್ಲದೇ ವಿಶೇಷವಾದ ಸಿಹಿ ತಿನಿಸುಗಳು, ಸಿಹಿ ಮತ್ತು ಖಾರದ ಕಿಚಡಿಯನ್ನು ಈ ದಿನ ತಯಾರಿಸಲಾಗುತ್ತದೆ.
ವಿಶೇಷವಾಗಿ ಸಂಕ್ರಾಂತಿಯಂದು ಅನೇಕ ವಸ್ತುಗಳನ್ನು ದಾನ ಮಾಡುವುದು ಪುಣ್ಯ ಪಡೆದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಉಳಿದ ದಿನಗಳಿಗಿಂತ ಮಕರ ಸಂಕ್ರಾಂತಿಯಂದು ಮಾಡುವ ದಾನಕ್ಕೆ ವಿಶೇಷ ಫಲವಿದೆ ಎಂದು ಶಾಸ್ತ್ರ ಹೇಳುತ್ತದೆ. ಈ ದಿನ ದಾನ ಮಾಡುವುದರಿಂದ ಸುಖ ಮತ್ತು ಸೌಭಾಗ್ಯವು ಸಹ ಪ್ರಾಪ್ತಿಯಾಗುತ್ತದೆ. ಹಾಗಾದರೆ ರಾಶಿಗೆ ಅನುಗುಣವಾಗಿ ಯಾವ್ಯಾವ ವಸ್ತುಗಳನ್ನು ದಾನ ಮಾಡಿದರೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿಯೋಣ.
ಯಾವ ರಾಶಿಯವರು ಏನು ದಾನ ಮಾಡಬೇಕು?
ಮೇಷ : ಈ ರಾಶಿಯ ವ್ಯಕ್ತಿಗಳು ಬೆಲ್ಲದ ಸಿಹಿ ತಿನಿಸುಗಳು, ಶೇಂಗಾ, ಎಳ್ಳು ಮತ್ತು ಬೆಲ್ಲವನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
ವೃಷಭ: ರಾಶಿಯ ವ್ಯಕ್ತಿಗಳು ಅಕ್ಕಿ, ಮೊಸರು, ಶ್ವೇತ ವಸ್ತ್ರ, ಎಳ್ಳಿನಿಂದ ಮಾಡಿದ ಸಿಹಿ ತಿನಿಸುಗಳನ್ನು ಈ ದಿನ ದಾನವಾಗಿ ನೀಡಿದರೆ ಶುಭ.
ಮಿಥುನ: ಮಿಥುನ ರಾಶಿಯ ವ್ಯಕ್ತಿಗಳು ಅಕ್ಕಿ, ಬಿಳಿ ಮತ್ತು ಹಸಿರು ಬಣ್ಣದ ಹೊದಿಕೆಗಳು ಮತ್ತು ಹೆಸರು ಬೇಳೆಯನ್ನು ದಾನವಾಗಿ ನೀಡಿದರೆ ಉತ್ತಮ.
ಕರ್ಕಾಟಕ: ರಾಶಿಯ ವ್ಯಕ್ತಿಗಳು ಬಿಳಿ ಎಳ್ಳು ಅಥವಾ ಕರ್ಪೂರವನ್ನು ದಾನ ಮಾಡಿದರೆ ಉತ್ತಮ. ಅನುಕೂಲವಿರುವವರು ಬೆಳ್ಳಿಯ ವಸ್ತುಗಳನ್ನು ದಾನ ಮಾಡಿದರೆ ಶುಭ.
ಸಿಂಹ: ಈ ರಾಶಿಯ ವ್ಯಕ್ತಿಗಳು ತಾಮ್ರದ ವಸ್ತುಗಳನ್ನು, ಬಿಳಿ ಎಳ್ಳಿನಿಂದ ಮಾಡಿದ ಸಿಹಿ ತಿನಿಸುಗಳನ್ನು ದಾನ ಮಾಡಿದರೆ ಒಳಿತಾಗುತ್ತದೆ.
ಕನ್ಯಾ: ರಾಶಿಯ ವ್ಯಕ್ತಿಗಳು ಹಸಿರು ಬಣ್ಣದ ಹೊದಿಕೆ, ಅಕ್ಕಿ ಮತ್ತು ಬೇಳೆಯಿಂದ ತಯಾರಿಸಿದ ಕಿಚಡಿಯನ್ನು ದಾನ ಮಾಡುವುದು ಒಳ್ಳೆಯದು.
ತುಲಾ: ಈ ರಾಶಿಯ ವ್ಯಕ್ತಿಗಳು ಸಕ್ಕರೆ, ಬಿಳಿ ವಸ್ತ್ರ, ಕೀರು ಅಥವಾ ಕರ್ಪೂರವನ್ನು ದಾನವಾಗಿ ನೀಡಬೇಕು.
ವೃಶ್ಚಿಕ: ಈ ರಾಶಿಯ ವ್ಯಕ್ತಿಗಳು ಕೆಂಪು ಬಣ್ಣದ ಬಟ್ಟೆ ಅಥವಾ ಎಳ್ಳನ್ನು ದಾನವಾಗಿ ನೀಡಬೇಕು.
ಧನು: ರಾಶಿಯ ವ್ಯಕ್ತಿಗಳು ಹಳದಿ ಬಣ್ಣದ ಬಟ್ಟೆ ಅಥವಾ ಬಂಗಾರದ ವಸ್ತುಗಳನ್ನು ದಾನ ಮಾಡಿದರೆ ಶುಭವಾಗುತ್ತದೆ.
ಮಕರ: ಈ ರಾಶಿಯ ವ್ಯಕ್ತಿಗಳು ಶನಿಗೆ ಪ್ರಿಯವಾಗಿರುವ ಕಪ್ಪು ಬಣ್ಣದ ಹೊದಿಕೆ ಮತ್ತು ಕಪ್ಪು ಎಳ್ಳನ್ನು ದಾನವಾಗಿ ನೀಡುವುದರಿಂದ ಒಳಿತಾಗುತ್ತದೆ.
ಕುಂಭ: ಈ ರಾಶಿಯ ವ್ಯಕ್ತಿಗಳು ಕಿಚಡಿ ಮತ್ತು ಎಳ್ಳನ್ನು ದಾನವಾಗಿ ನೀಡಬೇಕು.
ಮೀನ: ರೇಷ್ಮೇ ವಸ್ತ್ರಗಳು, ಕಡಲೆ, ಬೇಳೆ ಕಾಳುಗಳು ಮತ್ತು ಎಳ್ಳನ್ನು ದಾನವಾಗಿ ನೀಡಿದರೆ ಉತ್ತಮ.
ಇದನ್ನೂ ಓದಿ| Makar Sankranti 2023 | ಕರುನಾಡಿನ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ