ಸಂಖ್ಯಾ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗ. ಇಲ್ಲಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ತಿಳಿಯಬಹುದಾಗಿದೆ. ಇದೀಗ ನೂತನ ಕ್ಯಾಲೆಂಡರ್ ವರ್ಷ ಆರಂಭವಾಗುತ್ತಲಿದ್ದು, ಈ ವರ್ಷದಲ್ಲಿ ಸಂಖ್ಯಾ ಶಾಸ್ತ್ರದ ಪ್ರಕಾರ ವಾರ್ಷಿಕ ಭವಿಷ್ಯವನ್ನು (Numerology Predictions 2023) ಜೊತೆಗೆ ಈ ವರ್ಷದ ಆರ್ಥಿಕ ಸ್ಥಿತಿ, ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಮತ್ತು ಅದೃಷ್ಟ ಹೀಗೆ ನಾನಾ ವಿಚಾರಗಳ ಬಗ್ಗೆ ಸಂಖ್ಯಾ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ನೋಡೋಣ.
2023ರಲ್ಲಿ ಕೇತು ಗ್ರಹದ ಅಧಿಪತ್ಯ
ಸಂಖ್ಯಾ ಶಾಸ್ತ್ರದ ಪ್ರಕಾರ 2023ರನ್ನು (2+0+2+3) ಕೂಡಿದಾಗ ಬರುವ ಸಂಖ್ಯೆ 7. ಇದನ್ನು ಪಾದಂಕ ಎನ್ನುತ್ತಾರೆ. ಏಳು ಕೇತು ಗ್ರಹದ ಸಂಖ್ಯೆಯಾಗಿರುವ ಕಾರಣ. 2023ರಲ್ಲಿ ಕೇತು ಗ್ರಹದ ಅಧಿಪತ್ಯವಿರುತ್ತದೆ.
ನಿಮ್ಮ ಪಾದಾಂಕ ತಿಳಿಯುವುದು ಹೇಗೆ?
ಉದಾಹರಣೆಗೆ 2+0+2+3=7 ಹೀಗೆ ವರ್ಷದ ಪಾದಂಕ ಏಳು. ಹಾಗೆಯೇ ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕ, ಜನ್ಮಾಂಕ ಅಥವಾ ಮೂಲಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 25 ಆಗಿದ್ದರೆ ಎರಡು ಮತ್ತು ಐದನ್ನು ಕೂಡಿದಾಗ ಬರುವ ಸಂಖ್ಯೆ ಏಳು (2 +5 =7) ಇದು ಪಾದಾಂಕವಾಗಿರುತ್ತದೆ. ಬರುವ ಮೂಲಾಂಕದಿಂದ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ಸಂಖ್ಯಾಶಾಸ್ತ್ರ (Numerology)ದಲ್ಲಿ ಹೇಳಲಾಗುತ್ತದೆ. ಅದೇ ವ್ಯಕ್ತಿಯ ಹುಟ್ಟಿದ ತಾರೀಖು, ತಿಂಗಳು ಮತ್ತು ವರ್ಷವನ್ನು ಕೂಡಿದಾಗ ಬರುವ ಸಂಖ್ಯೆಯನ್ನು ಭಾಗ್ಯಾಂಕ ಎಂದು ಕರೆಯುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ 2023ರಲ್ಲಿ ಭಾರತವು ಶೀಘ್ರದಲ್ಲೇ ಜಗತ್ತಿನ ಮುಂಚೂಣಿ ಅಥವಾ ಸೂಪರ್ ಪವರ್ ಹೊಂದಿರುವ ದೇಶವಾಗಿ ಗುರುತಿಸಿಕೊಳ್ಳಲಿದೆ. ಇನ್ನು ಗಡಿ ವಿವಾದವು ಭಾರತಕ್ಕೆ ಹೊಸತಲ್ಲ. ಹಾಗೇ ಜುಲೈ ನಂತರ ಭಾರತ ಮತ್ತು ನೆರೆಹೊರೆಯ ಒಂದೆರಡು ದೇಶಗಳ ನಡುವಿನ ಸಂಬಂಧ ಕೆಡುವ ಸಾಧ್ಯತೆ ಇದೆ ಎಂದು ಸಂಖ್ಯಾಶಾಸ್ತ್ರ ಭವಿಷ್ಯ ನುಡಿದಿದೆ.
ಅದೇನೇ ಇದ್ದರೂ, ಭಾರತ ತನ್ನ ಗಟ್ಟಿ ನಿಲುವಿನೊಂದಿಗೆ ಇವೆಲ್ಲವನ್ನೂ ಮೆಟ್ಟಿ ನಿಲ್ಲಲಿದೆ ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ. ಜತೆಗೆ ಜಗತ್ತಿನಲ್ಲಿ ಶಾಂತಿ ನೆಲೆಸಲೂ ಸಹಾಯಕವಾಗುತ್ತದೆ. ಕೆಲವು ದೇಶಗಳಲ್ಲಿ ಯುದ್ಧ ಭೀತಿ ಉಂಟಾದರೂ ಸಹ ಮೂರನೇ ಮಹಾಯುದ್ಧದ ಸಾಧ್ಯತೆ ಇಲ್ಲ ಎಂದು ಸಂಖ್ಯಾ ಶಾಸ್ತ್ರದ ಲೆಕ್ಕಾಚಾರಗಳು ಹೇಳುತ್ತಿವೆ.
ಆರೋಗ್ಯದ ಸ್ಥಿತಿ ಹೇಗಿರಲಿದೆ?
ಸಂಖ್ಯಾ ಶಾಸ್ತ್ರದ ಪ್ರಕಾರ 2023ರಲ್ಲಿ ಕೇತು ಗ್ರಹದ ಅಧಿಪತ್ಯವಿರುವ ಕಾರಣ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ ಮತ್ತು ನವೆಂಬರ್ ತಿಂಗಳಿನಲ್ಲಿ ಪಾದಾಂಕ ಮೂರರ ವ್ಯಕ್ತಿಗಳಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಅದೇ ಪಾದಾಂಕ ಒಂಭತ್ತರ ವ್ಯಕ್ತಿಗಳಿಗೆ ಫೆಬ್ರವರಿಯಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಮಾರ್ಚ್ ಮತ್ತು ನವೆಂಬರ್‌ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಕಾಡುವ ಸಂಭವವಿದೆ.
ಪಾದಾಂಕ ಒಂದರ ವ್ಯಕ್ತಿಗಳು ಈ ವರ್ಷ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ಮಧುಮೇಹ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ರಕ್ತದೊತ್ತಡದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುವುದು ಉತ್ತಮ.
ಉದ್ಯೋಗ, ವ್ಯಾಪಾರ ಹೇಗಿರಲಿದೆ?
ಐಟಿ, ಬ್ಯಾಂಕಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿರುವ ಪಾದಾಂಕ 5 ಮತ್ತು 8ರ ವ್ಯಕ್ತಿಗಳಿಗೆ 2023 ಯಶಸ್ಸಿನ ವರ್ಷವಾಗಲಿದೆ. ಆಗಸ್ಟ್ 2023ರ ನಂತರ ವಿದೇಶಕ್ಕೆ ಹೋಗುವ ಅವಕಾಶ ಸಹ ಈ ಪಾದಾಂಕದ ವ್ಯಕ್ತಿಗಳಿಗೆ ಲಭಿಸಲಿದೆ.
ಮಾಧ್ಯಮ, ಐಟಿ ಮತ್ತು ಸಿನಿಮಾ ಕ್ಷೇತ್ರಗಳಿಗೂ ಈ ವರ್ಷ ಅತ್ಯಂತ ಉತ್ತಮವಾಗಿರಲಿದೆ. ಜೊತೆಗೆ ಈ ವ್ಯಕ್ತಿಗಳು ಬೇರೆಡೆ ಉದ್ಯೋಗವನ್ನು ಅರಸಿ ಹೋಗುವ ಸಾಧ್ಯತೆಯು ಇರುತ್ತದೆ. ಪಾದಾಂಕ ನಾಲ್ಕು ಮತ್ತು ಆರರ ವ್ಯಕ್ತಿಗಳು ವೃತ್ತಿಯಿಂದಲೇ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೂ 2023 ಅತ್ಯಂತ ಉತ್ತಮವಾಗಿರಲಿದೆ ಎಂದು ಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಾದಾಂಕ 5, 7 ಮತ್ತು 9ರ ವ್ಯಕ್ತಿಗಳ ಪ್ರೇಮ ಜೀವನ ಈ ವರ್ಷ ಉತ್ತಮವಾಗಿರಲಿದೆ. ಜೊತೆಗೆ ವಿವಾಹಿತರಿಗೂ ಸಹ ಈ ವರ್ಷ ಸಂತೋಷವನ್ನು ತರಲಿದೆ. ಪಾದಾಂಕ 3 ಮತ್ತು 9ರ ವ್ಯಕ್ತಿಗಳ ಸಂಗಾಂತಿಗೆ ಮಾರ್ಚ್ ತಿಂಗಳ ವರೆಗೂ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಫೆಬ್ರವರಿಯ ನಂತರ ಪ್ರೇಮ ವಿವಾಹಕ್ಕೆ ಮತ್ತು ಪ್ರೇಮಿಗಳಿಗೆ ಅತ್ಯಂತ ಉತ್ತಮವಾಗಿರಲಿದೆ.
ಹಣಕಾಸು ಸ್ಥಿತಿ ಹೇಗಿರುತ್ತದೆ?
ಪಾದಾಂಕ 3, 6 ಮತ್ತು 7ರ ವ್ಯಕ್ತಿಗಳು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಮಾರ್ಚ್ 15ರ ನಂತರ ಸಾಮಾನ್ಯವಾಗಿ ಎಲ್ಲರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಪಾದಾಂಕ 2 ಮತ್ತು 3ರ ವ್ಯಕ್ತಿಗಳು ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ಜಮೀನು ಅಥವಾ ವಾಹನ ಖರೀದಿಸುವ ಯೋಗವಿದೆ.
ನಕಾರಾತ್ಮಕ ಪರಿಣಾಮಗಳಿಗೆ ಪರಿಹಾರ ಹೇಗೆ?
ಕೇತುವಿನ ಪ್ರಭಾವ ಹೆಚ್ಚಿರುವ ಕಾರಣ ಭೈರವನನ್ನು ಆರಾಧಿಸುವುದು, ಕಾಳಿಯನ್ನು ಸ್ತುತಿಸುವುದು ಮ್ತತು ಗಣೇಶನ ಪೂಜೆ ಮಾಡುವುದು ಉತ್ತಮ. ಜೊತೆಗೆ ಬುಧ ಗ್ರಹ ಮತ್ತು ಕೇತು ಗ್ರಹದ ಬೀಜ ಮಂತ್ರಗಳನ್ನು ಪಠಿಸುವುದು ಒಳ್ಳೆಯದು. ಬುಧವಾರದಂದು ಹಸುವಿಗೆ ಮೇವನ್ನು ಕೊಡುವುದು ಮತ್ತು ಶುಭ ಮುಹೂರ್ತಗಳಂದು ರುದ್ರಾಭಿಷೇಕವನ್ನು ಮಾಡುವುದರಿಂದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ.
ಇದನ್ನೂ ಓದಿ | Venus Transit 2022 | ಮಕರ ರಾಶಿ ಪ್ರವೇಶಿಸಿದ ಶುಕ್ರ; ಈ ನಾಲ್ಕು ರಾಶಿಯವರಿಗೆ ಧನ ಲಾಭ