ಬೆಂಗಳೂರು: ಮಂಗಳವಾರ ಕಾರ ಹುಣ್ಣಿಮೆ ಹಬ್ಬ. ಉತ್ತರ ಕರ್ನಾಟಕ ಭಾಗದ ರೈತಾಪಿ ಜನರು ಈ ಹಬ್ಬವನ್ನು ಆಚರಿಸಲಿದ್ದಾರೆ. ಅವರ ಈ ಹಬ್ಬದ ಖುಷಿಯನ್ನು ಹೆಚ್ಚಿಸಲು ಆಕಾಶದಲ್ಲಿ ಚಂದ್ರ ಕೂಡ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ!
ಹೌದು, ಮಂಗಳವಾರ ಜ್ಯೇಷ್ಠ ಮಾಸದ ಹುಣ್ಣಿಮೆ. ಈ ದಿನ ʼಸೂಪರ್ ಮೂನ್ʼ ಕೂಡ ಸಂಭವಿಸಲಿದೆ. ಅಂದರೆ ಚಂದ್ರ ಎಂದಿಗಿಂತ ನಾಳೆ ಭೂಮಿಗೆ ಹತ್ತಿರ ಬರುವುದರಿಂದ ದೊಡ್ಡದಾಗಿ ಕಾಣಿಸಲಿದ್ದಾನೆ. ಮಾತ್ರವಲ್ಲದೆ, ಗುಲಾಬಿ ಬಣ್ಣದಲ್ಲಿಯೂ ಕಂಗೊಳಿಸಲಿದ್ದಾನೆ.
ಏನಿದು ಸೂಪರ್ ಮೂನ್?
ಎಲ್ಲರಿಗೂ ತಿಳಿದಿರುವಂತೆ ಚಂದ್ರ ಭೂಮಿಯ ಸುತ್ತ 28 ದಿನಗಳಿಗೊಮ್ಮೆ ಒಂದು ಸುತ್ತು ಬರುತ್ತಾನೆ. ಹೀಗೆ ಸುತ್ತು ಬರುವಾಗ ಮಂಗಳವಾರದಂದು ಆತ ಪೆರಿಜಿ(Perigee)ಯಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುತ್ತಾನೆ. ಲೆಕ್ಕಾಚಾರದ ಪ್ರಕಾರ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿಲೋಮೀಟರ್ ಹತ್ತಿರ ಬರುವುದರಿಂದ ಈ ದಿನದ ಚಂದ್ರ ವಿಶೇಷವಾಗಿ ಕಾಣುತ್ತಾನೆ.
ಇದನ್ನೇ ಬಿಡಿಸಿ ಹೇಳುವುದಾದರೆ ಚಂದ್ರ ಅಂಡಾಕಾರದ ಮಾರ್ಗದಲ್ಲಿ ಭೂಮಿಯ ಪ್ರದಕ್ಷಿಣೆ ಹಾಕುತ್ತಿದ್ದು, ಒಂದು ನಿರ್ದಿಷ್ಟ ಕಾಲದಲ್ಲಿ ಭೂಮಿಗೆ ಅತೀ ಸಮೀಪ ಅಂದರೆ 3.63 ಲಕ್ಷ ಕಿ.ಮೀ ಹತ್ತಿರ ಹಾಗೂ ಒಂದು ನಿರ್ದಿಷ್ಟ ಕಾಲದಲ್ಲಿ ಭೂಮಿಯಿಂದ ಅತೀ ದೂರ ಅಂದರೆ 4.05 ಲಕ್ಷ ಕಿ.ಮೀ ದೂರಕ್ಕೆ ಹೋಗುತ್ತಾನೆ. ಹೀಗೆ ಭೂಮಿಯ ಅತೀ ಸಮೀಪಕ್ಕೆ ಬರುವ ಪೂರ್ಣ ಚಂದ್ರನನ್ನು ʼಸೂಪರ್ ಮೂನ್ʼ (Super Moon) ಎಂದು ಕರೆಯುತ್ತಾರೆ.
ಈ ರೀತಿ ಚಂದ್ರ ಭೂಮಿಗೆ ಹತ್ತಿರ ಬಂದ ದಿನ ಹುಣ್ಣಿಮೆಯಾಗಿರುವುದರಿಂದ ನೋಡಲು ಶೇ. 15 ರಷ್ಟು ದೊಡ್ಡದಾಗಿ ಕಾಣಿಸುತ್ತಾನೆ ಮತ್ತು ಎಂದಿನ ಹುಣ್ಣಿಮೆಗಿಂತ ಶೇ. 25 ರಷ್ಟು ಹೆಚ್ಚು ಬೆಳಕನ್ನು ಸೂಸುತ್ತಾನೆ. ನೀವು ಮಂಗಳವಾರ ಬರಿಯ ಕಣ್ಣಿನಿಂದ ಈ ಚಂದ್ರನನ್ನು ನೋಡಿ ಆನಂದಿಸಬಹುದು. ಭೂಮಿಗೆ ಹತ್ತಿರ ಬಂದ ಚಂದಿರ ಗುಲಾಬಿ ಬಣ್ಣದಲ್ಲಿ ಕಂಗೊಳಿಸುವುದರಿಂದ ಸ್ಟ್ರಾಬೆರಿ ಸೂಪರ್ ಮೂನ್ (strawberry supermoon) ಎಂದೂ ಕರೆಯುತ್ತಾರೆ.
ಇದನ್ನೂ ಓದಿ| ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?